ಷೇರುಪೇಟೆಯಲ್ಲಿ ಈಗ ಐ ಪಿ ಒ ಗಳದ್ದೇ ದರ್ಬಾರು. ಇತ್ತೀಚೆಗೆ ಲಿಸ್ಟಿಂಗ್ ಆಗುತ್ತಿರುವ ಹೆಚ್ಚಿನ ಕಂಪನಿಗಳು ಆಕರ್ಷಕ ಬೆಲೆಗಳಲ್ಲಿ ವಹಿವಾಟಾಗುತ್ತಿದ್ದು, ಹೂಡಿಕೆದಾರರಿಗೆ ಉತ್ತಮ ಲಾಭವನ್ನು ಗಳಿಸಿಕೊಡುತ್ತಿವೆ. ಈ ರೀತಿಯ ವಾತಾವರಣವು ಶಾಶ್ವತವಲ್ಲ. ಅದು ಈಗಿನ ದಿನಗಳಲ್ಲಿ ಕೇವಲ ಟೆಕ್ನಿಕಲ್ಸ್ ಆಧಾರಿತ ಪೇಟೆಗಳಲ್ಲಿ ಕಂಪನಿಗಳ ಆಂತರಿಕ ಸಾಮರ್ಥ್ಯವನ್ನವಲಂಭಿಸಿದೆ ಕೇವಲ ಬಾಹ್ಯ ಕಾರಣಗಳಿಂದಾಗಿ, ವರ್ಣರಂಜಿತ, ಕರ್ಣಾಕರ್ಷಕ ಶಬ್ದಗಳಿಂದ ಮೋಹಿತಗೊಳಿಸುವ ವಿಧದ ಮೂಲಕ ವಿಜೃಂಭಿಸುತ್ತಿರುವ ಕಾರಣ ಇದು ಅಲ್ಪಕಾಲೀನ ಶೈಲಿಯಾಗಿದೆ.
ಈಗಿನ ಷೇರುಪೇಟೆಗಳಲ್ಲಿ ಅನೇಕ ಪ್ರಮುಖ ಲಿಸ್ಟೆಡ್ ಐಟಿ ಕಂಪನಿಗಳು ವಿಜೃಂಭಿಸುತ್ತಿರುವ ರೀತಿಯು 1999-2000 ದಲ್ಲಿ ಟೆಕ್ನಾಲಜಿ ಕಂಪನಿಗಳು ಪ್ರದರ್ಶಿಸಿದ ರೀತಿಯ ಪುನರಾವರ್ತನೆಯಾಗುತ್ತಿದೆಯೇ? ಎಂಬ ಶಂಕೆ ಮೂಡಿಸುವಂತಿದೆ. 2020 ರ ಸೆಪ್ಟೆಂಬರ್ ನಲ್ಲಿ 36,495 ಪಾಯಿಂಟುಗಳಲ್ಲಿದ್ದ ಸೆನ್ಸೆಕ್ಸ್ ಈ ತಿಂಗಳ ( ಜುಲೈ) 16 ರಂದು 53,290 ಪಾಯಿಂಟುಗಳಿಗೆ ಜಿಗಿತ ಕಂಡಿರುವುದರಿಂದ ಸೆನ್ಸೆಕ್ಸ್ ನಲ್ಲಿರುವ ಕಂಪನಿಗಳು ದಣಿದಿವೆ. ಹಾಗಾಗಿ ಹೆಚ್ಚಿನ ಏರಿಕೆ ಪ್ರದರ್ಶಿಸಲು ಅಸಮರ್ಥವಾಗಿವೆ. ವಿತ್ತೀಯ ಮತ್ತು ಬ್ಯಾಂಕಿಂಗ್ ವಲಯವನ್ನೇ ಹೆಚ್ಚು ಅವಲಂಬಿತವಾದ ಸೆನ್ಸೆಕ್ಸ್ ಹೊರತು ಪಡಿಸಿದಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳೂ ಸಹ ರಭಸದ ಏರಿಕೆ ಪ್ರದರ್ಶಿಸಿದೆ. ವಾರ್ಷಿಕ ಗರಿಷ್ಠ ತಲುಪಿದ ಕಂಪನಿಗಳ ಪಟ್ಟಿ ಬಹಳ ದೊಡ್ಡದಾಗಿದ್ದು, ವಾರ್ಷಿಕ ಕನಿಷ್ಠಕ್ಕೆ ತಲುಪಿರುವ ಕಂಪನಿಗಳು ಕೇವಲ 23 ಕಂಪನಿಗಳಾಗಿದ್ದು, ಅದರಲ್ಲಿ ನಿನ್ನೆಯ ( 23 ರಂದು) ಲಿಸ್ಟಿಂಗ್ ಆದ ಝೊಮೆಟೋ ಸಹ ಸೇರಿದೆ. ಇವುಗಳಲ್ಲಿ ಅಲ್ಪ ಮೌಲ್ಯದ ಷೇರುಗಳೇ ಹೆಚ್ಚಾಗಿವೆ. ಅಂದರೆ ಈ ಪ್ರಮಾಣದಲ್ಲಿ ಕಂಪನಿಗಳು ಸಾಧನೆಯನ್ನು ತೋರುತ್ತಿವೆಯೇ ಎಂಬ ಅಂಶ ಕಲ್ಪನೆಗೆ ಬಿಟ್ಟದ್ದಾಗಿದೆ. ಸುಮಾರು 3,900 ಕಂಪನಿಗಳು ವಹಿವಾಟಿಗೆ ಅನುಮತಿ ಪಡೆದಿವೆ (ಅಮಾನತುಗೊಂಡಿರುವ 890 ಕಂಪನಿಗಳನ್ನು ಹೊರತುಪಡಿಸಿದ ನಂತರ). ಒಟ್ಟು ಲಿಸ್ಟಿಂಗ್ ಆದ ಸುಮಾರು 5,500 ಕಂಪನಿಗಳ ಪೈಕಿ ಸುಮಾರು 4,300 ಕಂಪನಿಗಳಲ್ಲಿ ಪ್ರವರ್ತಕರು ತಮ್ಮ ಷೇರುಗಳನ್ನು ಒತ್ತೆ ಇಟ್ಟು ಸಾಲ ಪಡೆದಿರುತ್ತಾರೆ. ಹೆಚ್ಚಿನ ಕಂಪನಿಗಳ ಫಲಿತಾಂಶಗಳು ಆಕರ್ಷಣೀಯವಾಗಿದ್ದರೂ ಡಿವಿಡೆಂಡ್ ಘೋಷಣೆ ಮಾಡಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರು ಷೇರುಪೇಟೆಯಲ್ಲಿ ಲಾಭಗಳಿಸಬೇಕೆಂದರೆ ಷೇರುಗಳನ್ನು ಮಾರಾಟಮಾಡಲೇಬೇಕಾಗಿದೆ. ಕಾರಣ ಕಂಪನಿಗಳು ಘೋಷಿಸುವ ಕಾರ್ಪರೇಟ್ ಫಲಗಳು ವಿರಳವಾಗಿವೆ.
ಝೊಮೆಟೋ ಲಿಸ್ಟಿಂಗ್ :
ಪ್ರತಿ ಷೇರಿಗೆ ರೂ.76 ರಂತೆ ವಿತರಣೆ ಮಾಡಿದ ಈ ಕಂಪನಿಯು ಒಟ್ಟು 123.35 ಕೋಟಿ ಷೇರುಗಳನ್ನು ಐಪಿಒ ಮೂಲಕ ವಿತರಿಸಿದೆ. ಇದರಲ್ಲಿ ಕೇವಲ ಶೇ.10 ರಷ್ಟನ್ನು ಮಾತ್ರ ರೀಟೇಲ್ ಹೂಡಿಕೆದಾರರಿಗೆ ಮೀಸಲಿಟ್ಟು ಕೃತಕವಾದ ಡಿಮಾಂಡ್ ಕಲ್ಪಿಸಲಾಗಿದೆ. ಇತ್ತೀಚೆಗೆ ಬರುತ್ತಿರುವ ಕಂಪನಿಗಳು ಅಧಿಕವಾದ ಪ್ರೀಮಿಯಂನಲ್ಲಿರುವುದರಿಂದ, ಒಂದು ಬ್ರಾಂಡೆಡ್ ಕಂಪನಿ ಕೇವಲ 76 ರೂಪಾಯಿಗಳಿಗೆ ವಿತರಿಸುತ್ತಿದೆ ಎಂಬ ಕಾರಣಕ್ಕಾಗಿ ರೀಟೇಲ್ ಹೂಡಿಕೆದಾರರೂ ಹೆಚ್ಚಿನ ಬೇಡಿಕೆ ಇಟ್ಟಿದ್ದರು. ಹಾಗಾಗಿ ದಾಖಲೆಯ ಮಟ್ಟದಲ್ಲಿ ಸಂಗ್ರಹಣೆಯಾಯಿತು.
ಲಿಸ್ಟಿಂಗ್ ದಿನದ ಆರಂಭದಲ್ಲಿ ರೂ.115 ರ ಸಮೀಪದಲ್ಲಿದ್ದ ಷೇರಿನ ಬೆಲೆ ಕ್ರಮೇಣ ಏರಿಕೆ ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಆರಂಭಿಕ ಕ್ಷಣದಲ್ಲೇ ರೂ.123.65 ರಂತೆ 39.34 ಲಕ್ಷ ಷೇರುಗಳು, 10.17 ಕ್ಕೆ ರೂ.131.15 ರಂತೆ 41.82 ಲಕ್ಷ ಷೇರುಗಳು, 10.18ಕ್ಕೆ 21.77 ಲಕ್ಷ ಷೇರುಗಳು, 10.20 ಕ್ಕೆ 2.73 ಲಕ್ಷ ಷೇರುಗಳು ವಹಿವಾಟಾದ ನಂತರದಲ್ಲಿ ಚಟುವಟಿಕೆಯ ಸಂಖ್ಯಾಗಾತ್ರವು ಕರಗಿ ನೀರಸಮಯವಾಗಿತ್ತು.
ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವಹಿವಾಟಾದ ಷೇರುಗಳ ಸಂಖ್ಯೆಯು 4.51 ಕೋಟಿಯಾದರೆ, ಅದರಲ್ಲಿ ವಿಲೇವಾರಿಯಾದ ಪ್ರಮಾಣ ಶೇ.49.9 ಮಾತ್ರ. ಅಂದರೆ ಭಾರಿ ಪ್ರಮಾಣದ ಸ್ಪೆಕ್ಯುಲೇಟಿವ್ ಟ್ರೇಡ್ ಗಳು ನಡೆದಿರುವುದನ್ನು ತಿಳಿಸುತ್ತದೆ. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವಹಿವಾಟಾದ ಷೇರುಗಳ ಗಾತ್ರವು ಸುಮಾರು 69.48 ಕೋಟಿ ಷೇರುಗಳು. ಅಂದರೆ ಒಂದೇ ದಿನ ವಿತರಣೆಯ ಸುಮಾರು ಶೇ.65 ರಷ್ಟು ವಹಿವಾಟಾಗಿವೆ. ಇದಕ್ಕೆ ಪೂರಕವಾಗಿಯೋ ಪ್ರೇರಣೆಯಾಗಿಯೋ ಬೆಂಬಲಿಸಿದ ಅಂಶ ಎಂದರೆ ಕಂಪನಿಯ ಬಂಡವಾಳೀಕರಣ ಮೌಲ್ಯವು ರೂ.1 ಲಕ್ಷ ಕೋಟಿ ಮೀರಿದೆ ಎಂಬ ಪದೇ ಪದೇ ಪ್ರಸಾರವಾದ ಸುದ್ಧಿ. ವಾಸ್ತವವಾಗಿ ಈ ಮೈಲಿಗಲ್ಲನ್ನು ತಲುಪಿದ ಒಂದೇ ಒಂದು ಗಂಟೆಯ ಸಮಯದ ನಂತರ ಬಂಡವಾಳೀಕರಣ ಮೌಲ್ಯವು ಸುಮಾರು ರೂ.96,700 ಕೋಟಿಗೆ ಜಾರಿದರೂ, ಕಂಪನಿಯ ಬಂಡವಾಳೀಕರಣ ಮೌಲ್ಯವು ಒಂದು ಲಕ್ಷಕೋಟಿ ದಾಟಿದೆ ಎಂಬ ಸುದ್ಧಿಯು ಹೆಚ್ಚುಹೆಚ್ಚು ಪ್ರಸಾರವಾಗುತ್ತಿತು. ಇಂತಹ ಸುದ್ಧಿಗಳಿಂದ ಪ್ರೇರಿತರಾಗದೆ ಕಂಪನಿಗಳಲ್ಲಿ ಅಂತರ್ಗತವಾಗಿ ಅಡಕವಾಗಿರುವ ಸಾಧನೆಯಾಧಾರಿತ ಅಂಶಗಳಿಗೆ ಹೆಚ್ಚು ಒತ್ತು ಕೊಟ್ಟು ನಿರ್ಧರಿಸುವುದು ಉತ್ತಮ.
ಆರಂಭಿಕ ಹಂತದಿಂದ ವಿವಿಧ ಅವತಾರಗಳನ್ನು ಪ್ರದರ್ಶಿಸಿದ ಕಂಪನಿಗಳು
ಆರಂಭಿಕ ಹಂತದಲ್ಲಿ ವಿಜೃಂಭಿಸಿ, ನಂತರದಲ್ಲಿ ವಿತ್ತೀಯ ವಿಕಲತೆಯನ್ನು ಸೃಷ್ಠಿಸಿದ ವಿಸರ್ಜನೆಗೊಂಡ ಕಂಪನಿಗಳು ಅನೇಕ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಸಹ ಅನೇಕ ಕಂಪನಿಗಳು ಶ್ರಮಪಡುವಂತಾಗಿರುವುದು ಇದೆ. ಕಂಪನಿಗಳು ಗ್ರಾಹಕರನ್ನು ಶತಾಯ ಗತಾಯ ತನ್ನಲ್ಲಿ ಉಳಿಸಿಕೊಳ್ಳಲು ತನ್ನ ಉತ್ಪನ್ನಗಳ, ಸಾಮಾಗ್ರಿಗಳ, ಸೇವೆಗಳ ಬೆಲೆ, ಶುಲ್ಕವನ್ನು ಭಾರಿ ಕಡಿತಗೊಳಿಸುತ್ತಿದ್ದು, ಲಾಭಗಳಿಕೆಗಿಂತ ತಮ್ಮ ಗ್ರಾಹಕ ಜಾಲದ, ವಹಿವಾಟಿನಗಾತ್ರದ ಹೆಚ್ಚಳಕ್ಕೆ ಆದ್ಯತೆ ನೀಡುತ್ತಿವೆ. ಕಾರಣ ಇವುಗಳಿಗೆ ದೊರೆಯುವ ಫಂಡಿಂಗ್. ಈ ಫಂಡಿಂಗ್ ನೀಡಿ ಷೇರುಗಳನ್ನು ಪಡೆದ ಸಂಸ್ಥೆಗಳಿಗೆ ಈಗಿನ ದಿನಗಳಲ್ಲಿ ಆ ಷೇರುಗಳು ಲೀಸ್ಟಿಂಗ್ ಆಗಿ ದೊರಕಿಸಿಕೊಡಬಲ್ಲ ಹೈ ವ್ಯಾಲ್ಯುಯೇಷನ್ ಮತ್ತು ಲಾಭದ ಅವಕಾಶಗಳೇ ಗುರಿಯಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಐಪಿಒ ಗಳಲ್ಲಿ ಹೂಡಿಕೆ ಮಾಡಿದ ರೀಟೇಲರ್ಸ್ ಗಳು ಉತ್ತಮ ಫಲಿತಾಂಶ ಪಡೆಯಲು ಹೇಗೆ ಸಾಧ್ಯ.
2000 ದ ಆರಂಭಿಕ ದಿನಗಳಲ್ಲಿ ರೂ.3,000 ದಲ್ಲಿದ್ದ ಷೇರುಗಳಾದ ಹಿಮಾಚಲ್ ಫ್ಯೂಚರಿಸ್ಟಿಕ್ (ಈಗ ಎಚ್ ಎಫ್ ಸಿ ಎಲ್ ಎಂದಾಗಿದೆ), ಪೇಂಟಾಮೀಡಿಯಾ ಗ್ರಾಫಿಕ್ಸ್, ಡಿ ಎಸ್ ಕ್ಯು ಸಾಫ್ಟ್ ವೇರ್ ಕಂಪನಿಗಳ ಷೇರಿನ ಬೆಲೆ ಕರಗಿದಷ್ಠು ವೇಗವಾಗಿ ಮತ್ತೇನು ಇರಲಾರದು. ಅದೇ ಸಂದರ್ಭದಲ್ಲಿ ಸಿಲ್ವರ್ ಲೈನಿಂಗ್ ನಂತೆ ಸಿಲ್ವರ್ ಲೈನ್ ಎಂಬ ಕಂಪನಿ ನಾಲ್ಕಂಕಿಯ ದರದಲ್ಲಿ ವಹಿವಾಟಾಗುತ್ತಿದ್ದು, ನಂತರ ಸಿಲ್ವರ್ ಮಾಯವಾಗಿರುವ ಲೈನಾಗಿದೆ. ಆಲ್ಪ್ಸ್ ಇನ್ಫೋಸಿಸ್, ಕಂಪ್ಯೂಡೈನ್ ವಿನ್ಫೋಸಿಸ್ಟಮ್ಸ್, ಐಸಿಇಎಸ್ ಸಾಫ್ಟ್ ವೇರ್, ಇನ್ ಫರ್ಮೇಷನ್ ಟೆಕ್ನಾಲಜೀಸ್ ಇಂಡಿಯಾ, ನೆಕ್ಸಸ್ ಸಾಫ್ಟ್ ವೇರ್, ಪದ್ಮಿನಿ ಟೆಕ್ನಾಲಜೀಸ್, ಶಾಲಿಭದ್ರ ಇನ್ಫೋಸೆಕ್, ಸಾಫ್ಟ್ ಟ್ರಾಕ್ ಟೆಕ್ ಎಕ್ಸ್ಪೋರ್ಟ್ಸ್ ಮುಂತಾದ ಅನೇಕ ಕಂಪನಿಗಳು ಇಂದು ಹೂಡಿಕೆದಾರರನ್ನು ನಿಶ್ಪ್ರಯೋಜಕ ಷೇರುಗಳ ಶಾಶ್ವತ ಹೂಡಿಕೆದಾರರನ್ನಾಗಿಸಿವೆ.
2007-08 ರ ರಿಯಲ್ ಎಸ್ಟೇಟ್ ಬೂಂ ಅವಧಿಯಲ್ಲಿ ಪ್ರಮುಖ ಕಂಪನಿಗಳಾದ ಡಿಎಲ್ ಎಫ್, ಶೋಭಾ ಡೆವೆಲಪರ್ಸ್, ಹೌಸಿಂಗ್ ಡೆವೆಲಪ್ ಮೆಂಟ್ ಅಂಡ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಗಳು ನಾಲ್ಕು ಅಂಕಿಗಳಲ್ಲಿದ್ದವು. ಆದರೆ ಕ್ರಮೇಣ ಷೇರಿನ ದರಗಳು ಕರಗಿಹೋದವು.
ಹೌಸಿಂಗ್ ಡೆವೆಲಪ್ ಮೆಂಟ್ ಅಂಡ್ ಇನ್ ಫ್ರಾಸ್ಟ್ರಕ್ಚರ್ ಕಂಪನಿ ಷೇರಿನ ಬೆಲೆ 2008 ರ ಜನವರಿಯಲ್ಲಿ ಸೆನ್ಸೆಕ್ಸ್ ಅಂದಿನ ಸರ್ವಕಾಲೀನ ಗರಿಷ್ಠದ ಸಮೀಪವಿದ್ದಾಗ ರೂ.1,100 ರಲ್ಲಿದ್ದು ಹತ್ತು ವರ್ಷಗಳ ನಂತರ ಅಂದರೆ 2018 ರಲ್ಲಿ ರೂ.17 ರ ಸಮೀಪಕ್ಕೆ ಕುಸಿದು ಈಗ ರೂ.6 ರ ಸಮೀಪವಿದೆ. ಈ ಷೇರಿನ ಮುಖಬೆಲೆಯು ಅಂದಿಗೂ ಇಂದಿಗೂ ರೂ.10 ಆಗಿದೆ.
ಶೋಭಾ ಡೆವೆಲಪರ್ಸ್ ಈಗ ಶೋಭಾ ಲಿ ಎಂದಾಗಿರುವ ಕಂಪನಿ 2008 ರಲ್ಲಿ ರೂ.1,040 ರಲ್ಲಿದ್ದ ಷೇರು 2020 ರಲ್ಲಿ ರೂ.118 ರ ಸಮೀಪಕ್ಕೆ ಜಾರಿತ್ತು. ಈ ವರ್ಷ, ಇದೇ ತಿಂಗಳು ರೂ.687 ಕ್ಕೆ ತಲುಪಿ ಈಗ ರೂ.605 ರ ಸಮೀಪವಿದೆ. ಅದೇ ನಿತೇಶ್ ಎಸ್ಟೇಟ್ಸ್, ಜೆಪಿ ಇನ್ ಫ್ರಾಟೆಕ್ ಯಾವ ಮಟ್ಟದಲ್ಲಿವೆ ಎಂಬುದು ಕಲ್ಪನಾತೀತ. 2010 ರಲ್ಲಿ ರೂ.450 ರಂತೆ ವಿತರಣೆ ಮಾಡಿದ್ದ ರಾಮ್ ಕಿ ಇನ್ ಫ್ರಾಸ್ಟ್ರಕ್ಚರ್ ಕಂಪನಿಯ ಷೇರಿನ ಬೆಲೆ ವಿತರಣೆ ಬೆಲೆ ತಲುಪಲಾಗಲಿಲ್ಲ, 2020 ರಲ್ಲಿ ರೂ.15 ರ ಸಮೀಪಕ್ಕೆ ಕುಸಿದು ನಂತರ ಚೇತರಿಕೆಯಿಂದ ಸಧ್ಯ ರೂ.185 ರ ಸಮೀಪಕ್ಕೆ ಚೇತರಿಕೆ ಕಂಡಿದೆ.
ಇತರೆ ವಲಯದ ಕಂಪನಿ ಹೆಚ್ಚಿನ ಪ್ರಾಚಾರದೊಂದಿಗೆ ಪೇಟೆ ಪ್ರವೇಶಿಸಿದ್ದ ಇರೋಸ್ ಇಂಟರ್ನ್ಯಾಶಲ್ ಕಂಪನಿ ಷೇರಿನ ಬೆಲೆ 2015 ಕ್ಕೆ ರೂ.640 ರ ಸಮೀಪವಿದ್ದು ನಂತರದಲ್ಲಿ 2020 ರಲ್ಲಿ ರೂ.7 ರ ಸಮೀಪಕ್ಕೆ ಕುಸಿದು ಈ ವರ್ಷ ಚೇತರಿಕೆಯಿಂದ ರೂ.24 ರ ಸಮೀಪವಿದೆ. ಆದರೂ ವಿತರಣೆಬೆಲೆ ತಲುಪದಾಗಿದೆ.
2014 ರಲ್ಲಿ ಪ್ರತಿ ಷೇರಿಗೆ ರೂ.645 ರಲ್ಲಿ ಐಪಿಒ ಮೂಲಕ ಪೇಟೆ ಪ್ರವೇಶಿಸಿದ ಮೊಂಟಾಕಾರ್ಲೋ ಫ್ಯಾಷನ್ಸ್ ಕಂಪನಿಯ ಷೇರಿನ ಬೆಲೆ ವಿತರಣೆ ಬೆಲೆ ತಲುಪಲು ಅಸಮರ್ಥವಾಯಿತು. 2020 ರಲ್ಲಿ ರೂ.128 ರವರೆಗೂ ಕುಸಿದು ಸಧ್ಯ ರೂ.353 ರ ಸಮೀಪವಿದೆ. ಇಂತಹ ಅನೇಕ ಕಂಪನಿಗಳು ಹೂಡಿಕೆದಾರರ ಬಂಡವಾಳವನ್ನು ಕರಗಿಸಿವೆ. ಹಾಗಾಗಿ ಆರಂಭಿಕ ದಿನಗಳಲ್ಲಿ ಪ್ರದರ್ಶಿಸಿದ ಮತ್ತು ಪ್ರಸ್ತುತ ಪಡಿಸಿದ ಅಂಶಗಳನ್ನಾಧರಿಸಿ ನಿರ್ಧರಿಸುವುದಕ್ಕಿಂತ ಅವುಗಳ ಯೋಗ್ಯತಾನುಸಾರ, ಬೆಲೆಗಳು ಕುಸಿದ ಸಮಯದಲ್ಲಿ ಉತ್ತಮ ಹೂಡಿಕೆಯಾಗುವ ಸಾಧ್ಯವಿದೆ. ಅವುಗಳಲ್ಲಿ ಆಕರ್ಷಕ ಡಿವಿಡೆಂಡ್ ಗಳನ್ನು ವಿತರಿಸುವ ಕಂಪನಿಗಳಾದರೆ ದೀರ್ಘಕಾಲೀನ ಹೂಡಿಕೆಗೂ ಉತ್ತಮ.
ಇತ್ತೀಚೆಗೆ ಪೇಟೆ ಪ್ರವೇಶಿಸಿದ ರೂ.1 ರ ಮುಖಬೆಲೆಯ ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ, ಇಂಡಿಯಾ ಪೆಸ್ಟಿಸೈಡ್ಸ್, ರೂ.5 ರ ಮುಖಬೆಲೆಯ ಜಿ ಆರ್ ಇನ್ಫ್ರಾ ಪ್ರಾಜೆಕ್ಟ್ಸ್, ರೂ.10 ರ ಮುಖಬೆಲೆಯ ಶ್ಯಾಮ್ ಮೆಟಲಿಕ್ಸ್ ಅಂಡ್ ಎನರ್ಜಿ, ಸೋನಾ ಬಿ ಎಲ್ ಡಬ್ಲು ಪ್ರಿಸಿಶನ್ ಫೋರ್ಜಿಂಗ್ಸ್, ನಂತಹ ಕಂಪನಿಗಳ ಮೇಲೆ ಗಮನವಿಟ್ಟು ಮುಂದಿನ ದಿನಗಳಲ್ಲಿ ಅವು ಪ್ರದರ್ಶಿಸಬಹುದಾದ ಸಾಧನೆಯನ್ನಾಧರಿಸಿ, ಅವುಗಳ ಬೆಲೆ ಕುಸಿತ ಕಂಡಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಈ ಸಂದರ್ಭದಲ್ಲಿ ಗಮನದಲ್ಲಿಡಬೇಕಾದ ಅಂಶ ಎಂದರೆ ಹೂಡಿಕೆಯನ್ನು ಅವಧಿಯಾಧರಿಸಿ ನಿರ್ಧರಿಸದೆ, ಗಳಿಸಿಕೊಟ್ಟ ಲಾಭದ ಮೇಲೆ ನಿರ್ಧರಿಸುವುದು ಕ್ಷೇಮ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.