21.7 C
Karnataka
Thursday, November 14, 2024

    ಪಕ್ಷ ನಿಷ್ಠೆ, ತಾಳ್ಮೆ & ಜ್ಞಾನಕ್ಕೆ ಮನ್ನಣೆ; ಬಸವರಾಜ ಬೊಮ್ಮಾಯಿ ಹೊಸ ಸಿಎಂ

    Must read


    BENGALURU JULY 27

    ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆಗಿದ್ದು ಮುಖ್ಯಮಂತ್ರಿಯಾಗಿ ನಾಳೆಯೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶಿಗ್ಗಾಂವ್ ಮತಕ್ಷೇತ್ರವನ್ನು ಪ್ರತಿನಿಧಿಸುವ ಬೊಮ್ಮಾಯಿ ಎಂಜಿನಿಯರಿಂಗ್ ಪದವೀಧರರು.

    ಬೆಂಗಳೂರಿನ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ನಡೆ ಹೈವೋಲ್ಟೇಜ್‌ ಸಭೆಯಲ್ಲಿ ದಿಲ್ಲಿಯಿಂದ ಬಂದಿದ್ದ ವೀಕ್ಷಕರ ಸಮ್ಮುಖದಲ್ಲಿ ಬೊಮ್ಮಾಯಿ ಅವರ ಆಯ್ಕೆಯನ್ನು ಘೋಷಣೆ ಮಾಡಲಾಯಿತು. ದಿಲ್ಲಿಯಿಂದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಹಾಗೂ ಕಿಶನ್‌ ರೆಡ್ಡಿ ಅವರು ವೀಕ್ಷಕರಾಗಿ ಬಂದಿದ್ದರು. ಜತೆಗೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಕೂಡ ಇದ್ದರು. ಜತೆಗೆ, ಸಹ ಉಸ್ತುವಾರಿ ಡಿ.ಕೆ.ಅರುಣಾ ಅವರು ಇದ್ದರು.

    ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರರಾಗಿರುವ ಬಸವರಾಜ ಬೊಮ್ಮಾಯಿ, ಕಳೆದ ಎರಡು ವರ್ಷಗಳಿಂದ ಗೃಹ ಸಚಿವರಾಗಿ ಕೆಲಸ ಮಾಡಿದ್ದರು. ಕೆಲ ದಿನಗಳ ಹಿಂದೆ ಸಂಪುಟ ವಿಸ್ತರಣೆ ಮಾಡಿದಾಗ ಖಾತೆಗಳ ಮರು ಹಂಚಿಕೆಯಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನೂ ಬೊಮ್ಮಾಯಿ ಅವರಿಗೆ ವಹಿಸಲಾಗಿತ್ತು.

    ಬಿ.ಎಸ್.‌ಯಡಿಯೂರಪ್ಪ ಅವರು ಸೋಮವಾರ ರಾಜೀನಾಮೆ ನೀಡಿದ ಹಿನ್ನೆಲೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕನಿಗೆ ಅದೃಷ್ಟ ಖುಲಾಯಿಸಿದ್ದು, ಅವರು ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ.

    ಬೊಮ್ಮಾಯಿ ಅವರು ಬುಧವಾರ ಮಧ್ಯಾಹ್ನ ಪ್ರಮಾಣ ಸೀಕಾರ ಮಾಡುವ ಸಾಧ್ಯತೆ ಇದ್ದು. ಒಂದು ವರ್ಷ ಹತ್ತು ತಿಂಗಳ ಕಾಲ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

    ಅಂದಹಾಗೆ ಬೊಮ್ಮಾಯಿ ಅವರ ತಂದೆ ಎಸ್.‌ಆರ್.‌ಬೊಮ್ಮಾಯಿ ಅವರು 13 ಆಗಸ್ಟ್ 1988 ರಿಂದ 21 ಏಪ್ರಿಲ್ 1989ರವರೆಗೆ ರಾಜ್ಯದ 11ನೇ ಮುಖ್ಯಮಂತ್ರಿ ಆಗಿದ್ದರು. ಆದರೆ ಅವರ ಸರಕಾರಕ್ಕೆ ಕೆಲ ಶಾಸಕರು ಶಾಸಕರು ಕೈಕೊಟ್ಟರು. ನಂತರ ರಾಜ್ಯಪಾಲರು ಅವರ ಸರಕಾರವನ್ನು ವಜಾ ಮಾಡಿದ್ದರು

    ಬೊಮ್ಮಾಯಿ ಆಯ್ಕೆ ಐತಿಹಾಸಿಕ

    ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದವರೊಬ್ಬರ ಪುತ್ರರು ಸಿಎಂ ಆಗಿದ್ದು ದೇವೇಗೌಡ ಕುಟುಂಬದಲ್ಲಿ ಮಾತ್ರ ನಡೆದಿದೆ. 1994ರಲ್ಲಿ ದೇವೇಗೌಡರು ಮತ್ತು 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಮೂಲಕ ತಂದೆ-ಮಗ ಇಬ್ಬರು ರಾಜ್ಯದ ಸಿಎಂಗಳಾದ ದಾಖಲೆ ಇತ್ತು. ಈಗ ಆ ಸಾಲಿಗೆ ಬಸವರಾಜ ಬೊಮ್ಮಾಯಿ ಅವರು ಸೇರ್ಪಡೆಯಾಗುತ್ತಿದ್ದಾರೆ. ಇದೊಂದು ಐತಿಹಾಸಿಕ ಘಟನೆಯಾಗಿದೆ.

    ಮೆಕಾನಿಕಲ್‌ ಎಂಜಿನಿಯರ್‌, ಲಾ ಎಕ್ಸ್‌ಪರ್ಟ್‌

    ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಅವರ ಪುತ್ರರಾಗಿರುವ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಶಾಸಕರು. ಹುಟ್ಟಿದ್ದು 28 ಜನವರಿ 1960ರಂದು. ಮೂಲತಃ ಮೆಕಾನಿಕಲ್‌ ಎಂಜಿನಿಯರ್‌ ಆಗಿರುವ ಅವರು ಜನತಾದಳ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. 1998 ಮತ್ತು 2004ರಲ್ಲಿ ಎರಡು ಅವಧಿಗಳಿಗೆ ಅವರು ಸಂಯುಕ್ತ ಜನತಾದಳದಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಮಾಜಿ ಮುಖ್ಯಮಂತ್ರಿ ಜೆ.ಎಚ್.‌ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿಯೂ ಅವರು ಕೆಲಸ ಮಾಡಿದ್ದರು. 2008ರಲ್ಲಿ ಬಿಜೆಪಿ ಸೇರಿದ ಅವರು ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. ಬಳಿಕ ಅವರು ಬಿಜೆಪಿ ಸರಕಾರದಲ್ಲಿ ಜಲ ಸಂಪನ್ಮೂಲ ಹಾಗೂ ಸಹಕಾರ ಖಾತೆಗಳನ್ನು ನಿಭಾಯಿಸಿದ್ದರು. ಈವೆರೆಗೆ ಗೃಹ ಸಚಿವರಾಗಿದ್ದ ಅವರು ಹಾವೇರಿ ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವರೂ ಆಗಿದ್ದರು.

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!