ಇಂದು ಜುಲೈ 28 ವಿಶ್ವ ಪ್ರಕೃತಿ ಸಂರಕ್ಷಣಾ ದಿನ. ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಕೃತಿಯ ಸಂರಕ್ಷಣೆಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡಲು ಈ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕ ತಾಪಮಾನದ ಏರಿಕೆಯು ಪ್ರಕೃತಿ ಮತ್ತು ಮನುಷ್ಯರ ನಡುವೆ ಅಸಮತೋಲನವನ್ನು ಉಂಟುಮಾಡಿದೆ. ಇದು ವಿವಿಧ ಕಾಯಿಲೆಗಳಿಗೆ ಮತ್ತು ಪ್ರವಾಹದಂತಹ ವಿಪತ್ತುಗಳಿಗೆ ಕಾರಣವಾಗುತ್ತದೆ. ಮಾನವ ಪ್ರಕೃತಿಯ ಒಂದು ಅಂಶವಾಗಿ ನಿಸರ್ಗವನ್ನು ಹೇಗೆ ಬಳಸಿಕೊಳ್ಳುತ್ತಿದ್ದಾನೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲು ಹಾಗೂ ಭೂಮಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುವ ಸಂಪನ್ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನವು ಮಹತ್ವವನ್ನು ಪಡೆದುಕೊಳ್ಳುತ್ತದೆ. ‘ಅರಣ್ಯ ಮತ್ತು ಜೀವನೋಪಾಯ: ಜನರನ್ನು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದು’ 2021 ರ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಧ್ಯೇಯ ವಾಕ್ಯ. ಈ ವಿಶೇಷ ದಿನದಂದು ‘ಹಸುರಿನಲ್ಲಿ ಉಸಿರಾಡೋ ಜಗತ್ತು’ ಎಂಬುವುದರ ಬಗ್ಗೆ ಅರಿತುಕೊಳ್ಳೋಣ
ಹಸಿರು, ಗಿಡ-ಮರ, ಬಳ್ಳಿಗಳಿಂದ ತುಂಬಿದಾಗ ಕಾಣುವ ಈ ನೈಸರ್ಗಿಕ ಬಣ್ಣ ನೋಡಲು ಎಷ್ಟೊಂದು ಆಹ್ಲಾದಕರ. ವಸಂತ ಮಾಸದಲ್ಲಿ ಗಿಡ-ಮರಗಳು ತಮ್ಮ ಹಣ್ಣಲೆಗಳನ್ನು ಉದುರಿಸಿಕೊಂಡು ಹೊಸ ಎಲೆಗಳನ್ನು ತುಂಬಿಕೊಂಡಿರುವಾಗ ತಿಳಿಯಾದ ಹಸಿರಿನ ಆ ಬಣ್ಣ ಜೊತೆಗೆ ಬಗೆಬಗೆಯ ಹಕ್ಕಿಗಳ ಕಲರವದ ಆ ಸೊಬಗು ವರ್ಣಿಸಲು ಅಸಾಧ್ಯ. ನಿಸರ್ಗದ ಈ ಹಸಿರು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ. ಮನುಷ್ಯರು ಸೇರಿದಂತೆ ಭೂಮಿಯಲ್ಲಿರುವ ಪ್ರತಿಯೊಂದು ಜೀವಿಯ ಉಸಿರಿಗೂ ಈ ಹಸಿರೇ ಮುಖ್ಯ. ಇನ್ನೊಂದು ರೀತಿಯಲ್ಲಿ ಹೇಳುವುದಿದ್ದರೆ ಜೀವ ಸಂಕುಲದ ಉಸಿರೇ ಈ ಹಸಿರು. ಹುಣ್ಣಿಮೆಯ ದಿನದಂದು ಸುಂದರವಾಗಿ ಕಾಣುವ ಭೂಮಿಯ ಉಪಗ್ರಹ ಚಂದ್ರ. ಆದರೆ, ಅಲ್ಲಿ ಯಾವೊಂದು ಗಿಡ-ಮರಗಳಿಲ್ಲದೆ ಹಸಿರಿನ ಪರಿಕಲ್ಪನೆಯೇ ಇಲ್ಲ. ಹಾಗಾಗಿ ಅಲ್ಲಿ ಯಾವೊಂದು ಉಸಿರು ಇಲ್ಲ. ಅರ್ಥಾತ್ ಅಲ್ಲಿ ಯಾವ ಜೀವಿಯೂ ಇಲ್ಲದ ಬರೇ ಬರಡು ಪ್ರದೇಶವಾಗಿದೆ. ಒಂದೊಮ್ಮೆ ಭೂಮಿಯಲ್ಲಿ ಹಸಿರು ಇಲ್ಲವಾಗಿದ್ದರೆ ಭೂಮಿಯೂ ಕೂಡ ಇತರ ಗ್ರಹಗಳಂತೆ ಒಂದು ನಿರ್ಜೀವ ಗ್ರಹವಾಗಿರುತ್ತಿತ್ತು.
ಪ್ರಕೃತಿಯ ಹಸಿರು ಜೀವಿಗಳ ಉಸಿರಿಗೆ ಏಕೆ ಮುಖ್ಯ? ಹಸಿರಿಲ್ಲದಿದ್ದರೆ ಜೀವಿಗಳು ಬದುಕಲಾರವೇ? ಜಗತ್ತಿನಲ್ಲಿ ಯಾವುದೇ ಕ್ರಿಯೆ ನಡೆಯಬೇಕಿದ್ದರೂ, ಒಂದು ಹುಲುಕಡ್ಡಿ ಅಲುಗಾಡಲೂ ಕೂಡ ಯಾವುದಾದರೊಂದು ರೂಪದ ಶಕ್ತಿಯ ನೆರವು ಬೇಕೇ ಬೇಕು. ಹಾಗೆಯೇ ಜೀವಿಗಳ ಬದುಕಿಗೆ, ಬದುಕಿನ ಪ್ರತಿ ಕ್ರಿಯೆಗೂ ಶಕ್ತಿ ಬೇಕು. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಪ್ರಕ್ರಿಯೆಗೂ ಶಕ್ತಿಯ ಮೂಲ ಸೌರಶಕ್ತಿ. ಸೂರ್ಯನು ನಿರಂತರವಾಗಿ ಅಗಾಧವಾದ ಶಕ್ತಿಯನ್ನು ರವಾನಿಸುತ್ತಿರುತ್ತಾನೆ. ಆದರೆ ಆ ಶಕ್ತಿಯನ್ನು ಪ್ರಾಣಿಗಳು ನೇರವಾಗಿ ಪಡೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ನಮಗೆ ಪ್ರಕೃತಿಯು ಹಸಿರನ್ನು ವರವಾಗಿ ನೀಡಿದೆ.
ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಆಹಾರ ರೂಪವಾಗಿ ಪರಿವರ್ತಿಸುವ ಸಾಮರ್ಥ್ಯ ಈ ಹಸಿರಿಗೆ ಮಾತ್ರ ಇರುವುದು. ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸಿ ಆಹಾರವಾಗಿ ನಮಗೆ ನೀಡುತ್ತದೆ. ಸಸ್ಯದ ಬದಲು ಹಸಿರು ಪದವೇ ಸಮಂಜಸವಾಗಿ ಕಂಡುಬರುವುದಕ್ಕೆ ಪ್ರಾಯಶ: ಎಲೆಗಳ ಹಸಿರು ಬಣ್ಣದ ಕೊಡುಗೆಯೇ ಕಾರಣ ಇರಬೇಕು. ಎಲೆಗಳ ಹಸಿರು ಬಣ್ಣಕ್ಕೆ ಅವುಗಳಲ್ಲಿರುವ ಕ್ಲೋರೋಫಿಲ್ ಎನ್ನುವ ವರ್ಣತಂತುಗಳೇ ಕಾರಣ. ಈ ವರ್ಣತಂತುಗಳು ಸೂರ್ಯಕಿರಣಗಳನ್ನು ಹೀರಿಕೊಂಡು ಶರ್ಕರ ಷಿಷ್ಟವನ್ನು ಉತ್ಪತ್ತಿ ಮಾಡುತ್ತವೆ. ಜೀವ-ಪರಿಸರ ಶಾಸ್ತ್ರದ ಪ್ರಕಾರ ಹೇಳುವುದಿದ್ದರೆ, ಸಸ್ಯಗಳು ಉತ್ಪಾದಕರು ಅಥವಾ ಸ್ವಯಂ ಪೋಷಕರು. ನಾವು ಮನುಷ್ಯರು ಸೇರಿದಂತೆ ಈ ಸಾಮರ್ಥ್ಯ ಹೊಂದಿರದ ಜೀವಿಗಳೆಲ್ಲವೂ ಭಕ್ಷಕರ/ಬಳಕೆದಾರರ ಸ್ಥಾನದಲ್ಲಿ ನಿಲ್ಲುತ್ತವೆ. ಬೇರೆ ಎಲ್ಲ ಪ್ರಾಣಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಆಹಾರಕ್ಕಾಗಿ ಹಸಿರನ್ನು ಅವಲಂಬಿಸಿಕೊಂಡೇ ಉಸಿರನ್ನು ಉಳಿಸಿಕೊಳ್ಳಬೇಕು.
ಇನ್ನು ಉಸಿರಿಗೆ ಬರೋಣ. ನಮಗೆ ಉಸಿರಾಡಲು ಆಮ್ಲಜನಕ ಬೇಕಲ್ಲವೇ? ಗಾಳಿಯಿಲ್ಲದ ನಿರ್ವಾತ ಪ್ರದೇಶದಲ್ಲಿ ನಾವು ಕೆಲವು ಕ್ಷಣಗಳು ಕೂಡ ಜೀವಂತಾಗಿರಲು ಸಾಧ್ಯವಿಲ್ಲ. ಬದುಕಲು ಆಮ್ಲಜನಕ ಎಷ್ಟು ಮಹತ್ವ ಎನ್ನುವುದನ್ನು ಹೊಸ ತಳಿಯ ಕೊರೊನಾ ವೈರಸ್ ಎರಡನೇ ಅಲೆಯಲ್ಲಿ ನಮಗೆ ಇನ್ನಷ್ಟೂ ಮನದಟ್ಟು ಮಾಡಿಸಿದೆ. ಪ್ರಾಣವಾಯು ಆಮ್ಲಜನಕವು ಸಹ ನಮಗೆ ಹಸಿರಿನಿಂದ ದೊರೆಯುತ್ತದೆ ನಿಜ. ಸಸ್ಯಗಳು ಹೀರಿಕೊಂಡ ನೀರು ದ್ಯುತಿ ಸಂಶ್ಲೇಷಣೆಯ ಸಮಯದಲ್ಲಿ ನೀರಿನಲ್ಲಿರುವ ಅಣುಗಳನ್ನು ವಿಭಜಿಸಿ ಜೀವಿಗಳ ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನು ಯಥೇಚ್ಛವಾಗಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಅಂದೆ ಹಾಗೆ, ಜೀವಿಗಳಿಗೆ ಆಮ್ಲಜನಕ ಯಾಕೆ ಬೇಕು? ಜೀವಿಗಳ ಬದುಕಿಗೆ ಶಕ್ತಿಯ ರೂಪವಾಗಿ ಆಹಾರವನ್ನು ತೆಗೆದುಕೊಳ್ಳುತ್ತವೆ ಎನ್ನುವುದನ್ನು ಈಗಾಗಲೇ ಅರಿತುಕೊಂಡೆವು. ಆದರೆ ಆಹಾರದಲ್ಲಿರುವ ಶಕ್ತಿಯು ಸುಲಭವಾಗಿ ಹೊರಬಿಡಲ್ಪಡುವುದಿಲ್ಲ. ಆಹಾರವನ್ನು ಇಂಧನವಾಗಿ ಉರಿಸಿದಾಗ ಮಾತ್ರ ಅದರಲ್ಲಡಕವಾಗಿರುವ ಶಕ್ತಿಯು ಬಿಡುಗಡೆಯಾಗುತ್ತದೆ. ಅಂದರೆ ಆಹಾರವನ್ನು ‘ಉತ್ಕರ್ಷಣ’ ಎನ್ನುವ ರಾಸಾಯನಿಕ ಕ್ರಿಯೆಗೆ ಒಳಪಟ್ಟಾಗ ಶಕ್ತಿಯು ಬಿಡುಗಡೆಯಾಗುತ್ತದೆ. ಈ ಪ್ರಕ್ರಿಯೆಗೆ ಆಮ್ಲಜನಕದ ಅವಶ್ಯಕತೆ ಇದೆ. ಆಹಾರದಲ್ಲಿರುವ ಶಕ್ತಿಯನ್ನು ಉತ್ಕರ್ಷಣ ಕ್ರಿಯೆಯ ಮೂಲಕ ಮುಕ್ತ ಮಾಡುವ ಕ್ರಿಯೆಯೇ ಉಸಿರಾಟ.
ಒಂದು ವಿಸ್ಮಯಕಾರಿ ಸಂಗತಿಯೆಂದರೆ ಕೆಲವಾರು ಸೂಕ್ಷಮಾಣು ಜೀವಿಗಳು (ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಜೀವಿಗಳು) ಆಮ್ಲಜನಕವಿಲ್ಲದೆಯೂ ಕೂಡ ಬದುಕಬಲ್ಲವು. ಇವುಗಳು ಅನಏರೊಬಿಕ್ ಜೀವಿಗಳು ಎಂದು ಕರೆಯಲ್ಪಡುತ್ತವೆ. ಒಂದೊಮ್ಮೆ ಅಂದರೆ ಸುಮಾರು 2,800 ಮಿಲಿಯನ್ ವರ್ಷಗಳ ಹಿಂದೆ ವಾತಾವರಣವು ಆಪಕರ್ಷಣ (ಆಮ್ಲಜನಕ ರಹಿತವಾದ) ವಾತಾವರಣವಾಗಿತ್ತು. ಮೊದಲಿಗೆ ಆಮ್ಲಜನಕವಿಲ್ಲದೆ ಬದುಕುವ ಜೀವಿಗಳು ಹುಟ್ಟಿಕೊಂಡವು. ವಿಕಾಸಪಥದಲ್ಲಿ ಕ್ರಮೇಣ ದ್ಯುತಿಸಂಶ್ಲೇಷಣೆ ಕ್ರಿಯೆಯ ಸಾಮರ್ಥ್ಯವಿರುವ ನೀಲಿ ಹಸಿರು ಪಾಚಿಗಳು (ಬ್ಲೂಗ್ರೀನ್ ಆಲ್ಗೆ ) ಹುಟ್ಟಿಕೊಂಡವು. ಈ ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಆಮ್ಲಜನಕ ಉತ್ಪತ್ತಿಯಾಗಿ ವಾತಾವರಣಕ್ಕೆ ಬಿಡುಗಡೆಗೊಂಡು, ಇಂದಿನ ಸ್ನೇಹಮಯ ಉತ್ಕರ್ಷಣೀಯ ವಾತಾವರಣ ಉಂಟಾಯಿತು. ಹೀಗೆ ಸಾವಿರಾರು ಮಿಲಿಯನ್ ವರ್ಷಗಳ ಸಸ್ಯಗಳ ದ್ಯುತಿಸಂಶ್ಲೇಷಣೆಯಿಂದ ನಮ್ಮ ಇಂದಿನ ವಾಯುಮಂಡಲ ಉತ್ಪತ್ತಿಯಾಗಿದೆ.
ಜೀವಿಗಳ ಉಸಿರಾಟ ಕ್ರಿಯೆಯಲ್ಲಿ ವಾತಾವರಣಕ್ಕೆ ಬಿಡುಗಡೆಗೊಂಡ ವಿಷಾನಿಲ ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು ಉಪಯುಕ್ತ ಕಾರ್ಬೋಹೈಡ್ರೇಟ್ (ಶರ್ಕರಪಿಷ್ಠ) ಆಗಿ ಪರಿವರ್ತಿಸಿ ನಮಗೆ, ಎಲ್ಲಾ ಪ್ರಾಣಿಗಳಿಗೆ ಆಹಾರ ರೂಪದಲ್ಲಿ ಸಿಗುತ್ತದೆ. ಒಂದು ಪ್ರಶ್ನೆ ಮೂಡಬಹುದು? “ಹುಲಿ, ಸಿಂಹ, ತೋಳ, ಚಿರತೆಗಳಂತಹ ವನ್ಯಮೃಗಗಳು ತಮ್ಮ ಆಹಾರಕ್ಕಾಗಿ ಸಸ್ಯಗಳನ್ನು ಅವಲಂಬಿಸದೇ ಇತರ ಪ್ರಾಣಿಗಳನ್ನು ಬೇಟೆಯಾಡಿ ತಿಂದು ಬದುಕುವುದಿಲ್ಲವೇ? ಪ್ರಶ್ನೆ ಸರಿಯಾಗಿಯೇ ಇದೆ. ಇದಕ್ಕೆ ಉತ್ತರ ಪ್ರಶ್ನೆಯಲ್ಲಿಯೇ ಇದೆ. ‘ಇತರ ಪ್ರಾಣಿಗಳು’ ಅವುಗಳಿಗೆ ಆಹಾರವಾಗಬೇಕಿದ್ದಲ್ಲಿ ಆ ಪ್ರಾಣಿಗಳು ಸಹ ತಮ್ಮ ಬದುಕಿಗಾಗಿ ಇನ್ನೊಂದು ಜೀವಿಯನ್ನು ಅವಲಂಬಿಸಬೇಕಲ್ಲವೇ? ಅಂದರೆ ಮಾಂಸ ಭಕ್ಷಕ ಪ್ರಾಣಿಗಳು ಸಸ್ಯಾಹಾರಿ ಪ್ರಾಣಿಗಳನ್ನು ಹಿಡಿಯುತ್ತವೆ. ಭೂಮಿಯಲ್ಲಿರುವ ಎಲ್ಲಾ ಜೀವಿಗಳು ಬದುಕಬೇಕಾದರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಹಾರಕ್ಕಾಗಿ ಒಂದನ್ನೊಂದು ಅವಲಂಬಿಸಿಕೊಳ್ಳಲೇಬೇಕು.
ಈ ರೀತಿ ಆಹಾರಕ್ಕಾಗಿ ಪರಸ್ಪರ ಅವಲಂಬಿತವಾಗಿರುವ ಜೀವಿಗಳ ಸಂಬಂಧದ ಒಂದು ಸಂಕೀರ್ಣ ರಚನೆಯನ್ನು ಆಹಾರ ಸರಪಳಿ ಎನ್ನುತ್ತಾರೆ. ಈ ಸರಪಳಿಯಲ್ಲಿ ಉತ್ಪಾದಕರ ಸ್ಥಾನದಲ್ಲಿ ಇರುವ ಸಸ್ಯಗಳ ಪಾತ್ರ ಮಹತ್ವವಾದದ್ದು. ಹೀಗೆ ಜೀವಸಂಕುಲದ ಪ್ರತಿಯೊಂದು ಸದಸ್ಯರುಗಳು ಜೈವಿಕ ಸಮತೋಲನೆಯನ್ನು ಕಾಪಾಡಿಕೊಂಡು ಬರುತ್ತದೆ. ಆಹಾರ ಸರಪಳಿಯ ಕೇಂದ್ರ ನಿಸರ್ಗದ ಹಸಿರು. ಒಂದೊಮ್ಮೆ ಈ ಹಸಿರು ನಿರ್ನಾಮವಾದರೆ ಸರಪಳಿಯ ಕೋಡಿಯು ಬೇರ್ಪಟ್ಟು ಯಾವ ಜೀವಿಯ ಉಸಿರು ಇನ್ನಿಲ್ಲವಾದಂತಾಗುತ್ತದೆ.
ಉಸಿರಾಡಲು ಗಾಳಿ ಎಷ್ಟು ಮುಖ್ಯವೋ ಅಂತೆಯೇ ಬದುಕಲು ನೀರು ಅಷ್ಟೇ ಪ್ರಾಮುಖ್ಯ. ನೀರು ವಸುಂಧರೆಯ ಅನರ್ಘ್ಯ ರತ್ನ. ಜೀವನದ ಸಾರ ಸರ್ವಸ್ವವಾಗಿರುವ ನೀರು ಸಮಸ್ತ ಜೀವಜಾಲದ ರಾಸಾಯನಿಕ ಕ್ರಿಯೆಗೆ ಮಾಧ್ಯಮ. ಜೀವಿಗಳು ಉಗಮವಾಗಿದ್ದೇ ನೀರಿನಲ್ಲಿ. ಆದ್ದರಿಂದಲೇ ನೀರನ್ನು ಜೀವಜಲ ಎಂದು ಕರೆಯಲಾಗಿದೆ. ನಮ್ಮ ದೇಹದ ಶೇ.70ರಷ್ಟು ಭಾಗ ನೀರಿನಿಂದಲೇ ಆಗಿದೆ ಎಂದರೆ ನೀರಿನ ಮಹತ್ವ ತಿಳಿಯುತ್ತದೆ. ಭೂಮಿಯ ಶೇಕಡ 70ರಷ್ಟು ಭಾಗ ನೀರಿನಿಂದ ಅವೃತವಾಗಿದೆ. (ಜಗತ್ತಿನಲ್ಲಿ ದೊರೆಯುವ ಸುಮಾರು 1.4 ಬಿಲಿಯನ್ ಕ್ಯುಬಿಕ್ ಮೀಟರ್ ನೀರಿನಲ್ಲಿ ಕೇವಲ ಶೇ.3ರಷ್ಟು ಮಾತ್ರ ಶುದ್ಧ ಮತ್ತು ಮಾನವನ ಉಪಯೋಗಕ್ಕೆ ಯೋಗ್ಯವಾದದ್ದು) ಅದರಲ್ಲಿ ಹೆಚ್ಚಿನ ಭಾಗ ಸುಮುದ್ರಗಳು ಆವರಿಸಿಕೊಂಡಿವೆ. ಆದರೆ ನಾವು ಸಮುದ್ರ ನೀರನ್ನು ಉಪಯೋಗಿಸಲು ಸಾಧ್ಯವಿಲ್ಲ (ನೀರಿಗಾಗಿ ಹಾಹಾಕಾರ ಅತಿಯಾಗಿ ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲೂ ಸಮುದ್ರ ದ ನೀರನ್ನೇ ಭಟ್ಟಿ ಇಳಿಸಿ ಉಪಯೋಗಿಸಬೇಕಾದ ಪ್ರಮೇಯ ಬರಬಹುದು). ನೀರಿಗಾಗಿ ನಾವು ಅವಲಂಬಿಸಿರುವುದು ಒಂದು ಮಳೆನೀರು, ಇನ್ನೊಂದು ಅಂತರ್ಜಲ. ಈ ಎರಡು ಮೂಲಗಳಿಂದ ನೀರು ಸಿಗಬೇಕಿದ್ದರೆ ಜಲಚಕ್ರವು ನಿರಂತರವಾಗಿ, ಸಮರ್ಪಕವಾಗಿ ನಡೆಯಬೇಕು.
ನದಿ, ಕೆರೆ-ತೊರೆ-ಹಳ್ಳ-ಕೊಳಗಳು ತುಂಬಿ ಹರಿಯಬೇಕಾದರೂ ಮಳೆಯೇ ಮುಖ್ಯ. ಮಳೆನೀರು ಆಕಾಶದಿಂದ ಬೀಳುವುದೇನೋ ಸರಿ, ಆದರೆ ಆ ನೀರಿನ ಹನಿಗಳು ಭೂಮಿಯಿಂದಲೇ ವಾತಾವರಣಕ್ಕೆ ಭಾಷ್ಪೀಕರಣಗೊಂಡು ಅಲ್ಲಿ ಮೋಡಗಳಾಗುತ್ತವೆ. ಕಾಲ ಕಳೆದಂತೆ ವಾತಾವರಣದ ತಾಪಮಾನಕ್ಕೆ ಮೋಡಗಳು ಕರಗಿ ಪುನ: ಹನಿಹನಿಯಾಗಿ ಭೂಮಿಯನ್ನು ಸೇರುತ್ತದೆ. ‘ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ ‘ ಎಂಬ ಅರ್ಥಪೂರ್ಣವಾದ ಗಾದೆ ಮಾತು ಈ ಹಿನ್ನೆಲೆಯಿಂದಲೇ ಬಂದಿರುವುದಲ್ಲವೇ? ನೀರಿನ ಪರಿಚಲನೆಯನ್ನು ಜಲಚಕ್ರ ಎಂದು ಕರೆಯಲಾಗುತ್ತದೆ. ಉಷ್ಣವಲಯದ ಮಳೆಕಾಡುಗಳು ಭೂಮೇಲ್ಮೈಯ 1/16 ಭಾಗವಿದ್ದರೂ ಸಹ ಭೂಮಿಗೆ ಬೀಳುವ ಅರ್ಧದಷ್ಟು ಮಳೆಯನ್ನು ಪಡೆಯುತ್ತವೆ. ಜಗತ್ತಿನಲ್ಲಿ ಜಲಚಕ್ರದ ಸಮತೋಲನವನ್ನು ಕಾಪಾಡುವಲ್ಲಿ ಜೀವವೈಧ್ಯವು, ಅದರಲ್ಲಿಯೂ ಮುಖ್ಯವಾಗಿ ಸಸ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಭೂಮಿಯಿಂದ ಹೀರಿಕೊಂಡ ನೀರನ್ನು ತಮಗೆ ಬೇಕಾದಷ್ಟನ್ನು ಉಪಯೋಗಿಸಿಕೊಂಡು ಉಳಿದುದನ್ನು ಭಾಷ್ಪವಿಸರ್ಜನೆ ಕ್ರಿಯೆಯ ಮೂಲಕ ಯಥೇಚ್ಛವಾಗಿ ವಾತಾವರಣಕ್ಕೆ ರವಾನಿಸುವುದು. ಮಳೆಯ ಹೊಡೆತವನ್ನು ಕಾಡಿನಲ್ಲಿ ದಟ್ಟವಾಗಿ ಹರಡಿರುವ ಮರದ ಬೇರುಗಳು ಮಳೆನೀರು ಕೊಚ್ಚಿಹೋಗಿ ಸಮುದ್ರವನ್ನು ಸೇರಿ ನಷ್ಟವಾಗುವುದನ್ನು ತಡೆಗಟ್ಟಿ ಅಂತರ್ಜಲ ಮಟ್ಟವನ್ನು ಕಾಪಾಡುತ್ತವೆ.
ಉದುರಿದ ಎಲೆಗಳು ಮತ್ತು ಬೇರುಗಳು ಸ್ಪಂಜಿನ ರೀತಿಯಲ್ಲಿ ನೀರನ್ನು ಹೀರಿಕೊಂಡು ನಿಧಾನವಾಗಿ ಮಣ್ಣಿನ ಒಳಭಾಗಕ್ಕೆ ಬಿಡುತ್ತವೆ. ಆ ಮೂಲಕ ಮಣ್ಣಿನ ಫಲವತ್ತತೆ ಮತ್ತು ಹ್ಯೂಮಸ್‍ನ್ನು ಕಾಪಾಡುವುದು. ಅರಣ್ಯಗಳು ಇಲ್ಲವಾದರೆ ಜಲಚಕ್ರದಿಂದಾಗುತ್ತಿರುವ ವಾತಾವರಣದಲ್ಲಿ ಉಷ್ಣತೆಯ ನಿಯಂತ್ರಣ ಹಾಗೂ ತೇವಾಂಶಭರಿತ ಗಾಳಿ ಇಲ್ಲವಾಗುತ್ತದೆ. ಅರಣ್ಯನಾಶದಿಂದ ವಾತಾವರಣದಲ್ಲಿ ಅನೇಕ ಅನಪೇಕ್ಷಿತ ಬದಲಾವಣೆಗಳಾಗುತ್ತವೆ (ಉತ್ತರ ಭಾರತದಲ್ಲಿ ಬೇಸಿಗೆಯಲ್ಲಿ ಬಿಸಿಗಾಳಿಯಿಂದಾಗಿ ಇತ್ತೀಚೆಗೆ ಪ್ರತಿವರ್ಷ ನೂರಾರು ಜನರು ದುರ್ಮರಣಕ್ಕೀಡಾಗುತ್ತಿದ್ದಾರೆ. ಇದಕ್ಕೆ ತೇವಾಂಶರಹಿತ ಬಿಸಿಯಾದ ಗಾಳಿಯೇ ಕಾರಣ).
ಭಾರತವು ಸಸ್ಯ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ದೇಶ. 45,000 ಸಸ್ಯ ಪ್ರಭೇದಗಳಲ್ಲಿ 15,000 ಹೂಬಿಡುವ ಸಸ್ಯಗಳು, 1,6,76 ಪಾಚಿ, 1,940 ಕಲ್ಲುಹೂವುಗಳಿರುವ, 12,480 ಅಣಬೆ, 64 ಅನಾವೃತ ಬೀಜದ, 2,843 ಯಕೃತ್ತಿನ ಆಕಾರದ ಎಲೆಗಳುಳ್ಳ, 1,012 ಟೆರಿಡೋಫೈಟಸ್, ಇದರಲ್ಲಿ 28 ಜಾತಿಗಳು ಈಗಾಗಲೇ ಕಣ್ಣರೆಯಾಗಿವೆ. 399 ಅಪಾಯಕ್ಕೆ ಸಿಲುಕಿವೆ. 1,500 ಅಪಾಯಕ್ಕೆ ಸಿಲುಕುವ ಸಾಧ್ಯತೆ ಬಹಳವಾಗಿದೆ. ಕಳೆದ ನೂರೈವತ್ತು ವರ್ಷಗಳಲ್ಲಿ ಜಗತ್ತಿನಾದ್ಯಂತ ಸುಮಾರು 10,000 ಲಕ್ಪ ಹೆಕ್ಟೇರ್ ಪ್ರದೇಶವನ್ನು ಕೃಷಿಭೂಮಿಯಾಗಿ ಪರಿವರ್ತಿಸಲಾಗಿದೆ. ಅದಕ್ಕಾಗಿ ಅರಣ್ಯಗಳು, ಹುಲ್ಲುಗಾವಲುಗಳು ನಾಶವಾಗಿವೆ. ಉಷ್ಣವಲಯದ ಕಾಡುಗಳು ಜಗತ್ತಿನ ಒಟ್ಟು ಪ್ರಭೇದಗಳ ಅರ್ಧದಷ್ಟಿವೆ. ಇಂದು ಈ ಕಾಡುಗಳು ಅಭಿವೃದ್ಧಿಯ ಹೆಸರಿನಲ್ಲಿ ಒಂದು ನಿಮಿಷಕ್ಕೆ ಎರಡೂವರೆ ಹೆಕ್ಟೇರಿನಷ್ಟು ನಾಶವಾಗುತ್ತಿವೆ. ಇದರಿಂದಾಗಿ ಒಂದು ವರ್ಷಕ್ಕೆ 15,000 ದಿಂದ 50,000 ಜೀವಿ ಪ್ರಬೇಧಗಳು ನಶಿಸಿಹೋಗುತ್ತಿವೆ. ಒಂದು ಮರವನ್ನು ಕಡಿದರೆ ಆ ಮರದಲ್ಲಿ ಅವಾಸವಾಗಿರುವ ಮತ್ತು ಅವಲಂಬಿಸಿರುವ ಹಲವಾರು ಜೀವಿಗಳ ಬದುಕು ನಾಶವಾಗುತ್ತದೆ.
ಮಾನವನ ಉಳಿವು-ಅಳಿವುಗಳನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರುವ, ಮಣ್ಣಿನ ರಚನೆಯನ್ನು ರೂಪಿಸುವ, ವಾಯುಗುಣವನ್ನು ಸೌಮ್ಯಗೊಳಿಸುವ, ಪ್ರವಾಹಗಳನ್ನು ನಿಯಂತ್ರಿಸುವ, ನೀರನ್ನು ಶೇಖರಿಸುವ ಇಳಿಜಾರುಗಳಲ್ಲಿ ಮಣ್ಣನ್ನು ಹಿಡಿದಿಟ್ಟು ಭೂಕೊರೆತವನ್ನು ತಡೆಗಟ್ಟುವ, ವಾಯುಗೋಳದಲ್ಲಿ ಇಂಗಾಲದ ಪ್ರಮಾಣವನ್ನು ನಿಯಂತ್ರಿಸಿ ಹಸಿರುಮನೆ ಪರಿಣಾಮವನ್ನು ತಡೆಗಟ್ಟುವ, ಪ್ರಪಂಚದಲ್ಲಿ ಕಾಣಬರುವ ಲಕ್ಷೋಪಲಕ್ಷ ಜೀವ ಪ್ರಭೇದಗಳ ಆವಾಸಸ್ಥಾನವಾಗಿರುವ ಅರಣ್ಯಗಳು ಜೀವವಾಸಗಳ ಪಂಕ್ತಿಯಲ್ಲಿ ಅತ್ಯಂತ ಮುಖ್ಯವಾದ ಸ್ಥಾನವನ್ನು ಅಲಂಕರಿಸಿವೆ.
“ಮಾನವನ ನಾಗರಿಕತೆ, ಸಂಸ್ಕೃತಿ ಅರಣ್ಯಗಳ ನೆರಳಲ್ಲಿ ಬೆಳೆದಿವೆಯಾದರೂ, ಮನುಕುಲದ ಒಳಿತಿಗೆ ನೈಸರ್ಗಿಕ ಕೊಡುಗೆಯಾದ ಅರಣ್ಯಗಳ ಮತ್ತು ಅವುಗಳಲ್ಲಿ ವಾಸಿಸುತ್ತಿರುವ ಜೀವಜಾಲದ “ಭವಿಷ್ಯ ಇಂದಿನ ಮಾನವನ ನಡವಳಿಕೆಯಿಂದ ಅತ್ಯಂತ ಕರಾಳವಾದುದಾಗಿದೆ” ಎಂದು ಇಂದಿನ ಪರಿಸರ ಮಾಲಿನ್ಯದ ಭೀಕರತೆಯನ್ನು ಪರಿಸರ ವಿಜ್ಞಾನಿ ಬರ್ಟನ್‍ರವರು ಎಚ್ಚರಿಸಿದ್ದಾರೆ.
ಜೀವಿ ಪ್ರಭೇಧಗಳ ಸಾಮೂಹಿಕ ಅಳಿವು (ಹತ್ಯೆಯನ್ನು) ನಾವು ಹಗುರವಾಗಿ ಪರಿಗಣಿಸುವಂತಿಲ್ಲ. ಭೂಮಿಯ ಮೇಲೆ ಮಾನವ ವಿಕಾಸವಾಗುವ ಪೂರ್ವದಿಂದಲೂ ವೈವಿಧ್ಯಮಯ ಸಸ್ಯರಾಶಿಗಳು, ಜೀವಜಂತುಗಳು ಇಲ್ಲಿ ವಾಸಿಸುತ್ತಿವೆ. ಅವು ವಾಸಿಸುವ ವಿಶಿಷ್ಟ ಪರಿಸರ ತಾಣಗಳು ಭೂಮಿಯಲ್ಲಿವೆ. ಅವುಗಳ ಚಟುವಟಿಕೆ ಹಾಗೂ ಇರುವಿಕೆಯಿಂದ ಜಗತ್ತಿನ ನಿರ್ಜೀವ ಹಾಗೂ ಸಜೀವ ವಸ್ತುಗಳ ನಡುವೆ ಸೂಕ್ಷ್ಮವಾದ ಸಂಬಂಧ, ಸಮತೋಲನ ಹಾಗೂ ಪರಸ್ಪರ ಅವಲಂಬನೆ ಇದೆ. ಮಾನವನ ಅಸ್ತಿತ್ವಕ್ಕೂ ಎಲ್ಲಾ ಜೀವಿಗಳ ಕೊಡುಗೆ ಇದೆ. ಪ್ರತಿ ಪ್ರಭೇದದ ಕೊಡುಗೆಯೂ ಅನನ್ಯ. ಈ ಹಿನ್ನೆಲೆಯಲ್ಲಿ ಗೋಪಾಲಕೃಷ್ಣ ಅಡಿಗರು ಹೇಳಿದ ಈ ಮಾತನ್ನು ನೆನಪಿಸಿಕೊಳ್ಳಬಹುದು, “ಪ್ರತಿಯೊಂದು ಜೀವಕ್ಕೂ ಇನ್ನೊಂದು ಪೂರಕವಯ್ಯ: ಜೀವ ಜೀವದ ನಂಟು ಬ್ರಹ್ಮ ಗಂಟು”.
“ಸಸ್ಯವೆಂದರೆ ವಿಶಿಷ್ಟ ಜೀವಕೋಶ, ಅದು ತನಗಾಗಿ ಏನನ್ನೂ ಬೇಡದೆ, ಬೇಡಿ ಬಂದ ಎಲ್ಲರಿಗೂ ತನ್ನ ಅಸ್ತಿತ್ವವನ್ನೇ ಧಾರಯೆರೆಯುತ್ತದೆ. ಎಲ್ಲಾ ಜೀವಿಗಳಿಗೂ ಆಶ್ರಯ ನೀಡುತ್ತದೆ. ತನ್ನನ್ನು ಕಡಿಯಲು ಕೊಡಲಿ ತಂದವನಿಗೂ ನೆರಳು ನೀಡುತ್ತದೆ”- ಗೌತಮ ಬುದ್ಧ.
‘ವಿಶ್ವ ಪ್ರಕೃತಿ ಸಂರಕ್ಷಣಾ ದಿನದಂದು, ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ನಾವು ನಿರ್ಧರಿಸೋಣ ಮತ್ತು ಹೆಚ್ಚು ಸುಸ್ಥಿರ ಗ್ರಹವನ್ನು ರಚಿಸುವತ್ತ ಕೆಲಸ ಮಾಡೋಣ. ನಮ್ಮ ಇಂದಿನ ಸಾಮೂಹಿಕ ಕಾರ್ಯಗಳು ನಮ್ಮ ಭವಿಷ್ಯದ ಪೀಳಿಗೆಗೆ ಜೀವಂತ ಗ್ರಹವನ್ನು ಹಸ್ತಾಂತರಿಸಲು ಸಹಾಯ ಮಾಡುತ್ತದೆ’ ಈ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಈ ಸಂದರ್ಭದಲ್ಲಿ ನಮ್ಮ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿರುವ ಈ ಮಾತು ಅರ್ಥಪೂರ್ಣವಾದದ್ದು. |
Eco-balance is utmost important for survival in earth. This article has successfully captured this. Nice informative article by Dr. Prashanth.
ಪ್ರೊ ಪ್ರಶಾಂತ್ ನಾಯ್ಕ್ ರವರು ಸಮಯೋಚಿತ ವಾಗಿ ಅತ್ಯುತ್ತಮವಾದ ಬರಹವನ್ನು ಬರೆಯುವ ಮೂಲಕ ಪ್ರಕೃತಿ ಜೊತೆಗೆ ಮನುಷ್ಯನ ಸಂಬಂಧ ಇನ್ನಷ್ಟು ಗಟ್ಟಿ ಗೊಳ್ಳುವಂತೆ ಪ್ರೆರೇಪಣೆ ನೀಡಿರುತ್ತಾರೆ ತಮ್ಮ ಲೇಖನಿ ಯಿಂದ ಇನ್ನಷ್ಟು ಉತ್ತಮ ಬರಹಗಳು ಮೂಡಿಬರಲಿ.
ಪರಿಸರದ ಬಗ್ಗೆ ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ.ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಅದನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿಯೂ ಕೂಡ. ಮನುಷ್ಯ ಪ್ರಾಣಿ ಇದನ್ನ ತಿಳ್ಕೊಂಡ್ರೆ ಪ್ರಕೃತಿ ಮಾತೆ ಸದಾ ಹಚ್ಚ ಹಸಿರಿನಿಂದ ಕಂಗೊಳಿಸ್ತಾಳೆ. ನಿಮ್ಮ ಬರಹಕ್ಕೆ dhanyavaadagalu🙏💐
Excellent article and narration is very rational.
ಪರಿಸರ ಕಾಳಜಿಯುಳ್ಳ ಈ ಲೇಖನ ಅತ್ಯಂತ ಪ್ರಸ್ತುತವಾಗಿದೆ.