21.3 C
Karnataka
Tuesday, December 3, 2024

    ಹುಬ್ಬಳ್ಳಿ ಧಾರವಾಡ ನಗರ ಅಭಿವೃದ್ಧಿಗೆ ಪ್ರಾಶಸ್ತ್ಯ:ಬೊಮ್ಮಾಯಿ

    Must read

    HUBBALLI JULY 29

    ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದೆ. ಅವಳಿ ನಗರದ ಸಮಸ್ಯೆಗಳನ್ನು ಬಗೆಹರಿಸಿ, ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳುವ ಮುನ್ನ ವಿಮಾನ ನಿಲ್ದಾಣದ‌ ಬಳಿ ಮಾಧ್ಯಮ‌ದವರೊಂದಿಗೆ ಮಾತನಾಡಿದರು.

    ಹುಬ್ಬಳ್ಳಿ ನನಗೆ ಅತ್ಯಂತ ಪ್ರೀತಿಯ ಊರು. ನನ್ನ ಶೈಕ್ಷಣಿಕ ಜೀವನದ ಅಪಾರ ಪ್ರಮಾಣದ ಸ್ನೇಹಿತರ ಬಳಗ ಇಲ್ಲಿದೆ. ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಆಗಮಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಪಕ್ಷ ಹಾಗೂ ಕೇಂದ್ರದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆರ್ಶೀವಾದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೇನೆ.‌ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಹಿರಿಯ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಅನೇಕ ಶಾಸಕ ಮಿತ್ರರು ಇಲ್ಲಿರುವುದರಿಂದ ಪಕ್ಷ ಇಲ್ಲಿ ಬಲಿಷ್ಠವಾಗಿದೆ. ಪಕ್ಷ ಹಾಗೂ ಪರಿವಾರದ ಹಿರಿಯರೊಂದಿಗೆ ಚರ್ಚೆ ಮಾಡಿ ಅವರ ಸಲಹೆ ಸೂಚನೆಗಳನ್ನು ಅನುಷ್ಠಾನ ಮಾಡಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

    ನಾಳೆ ಬೆಳಗ್ಗೆ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತೆ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸುತ್ತೇನೆ.ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಸಚಿವ ಸಂಪುಟ ಸೇರದಿರುವ ಕುರಿತು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿದ್ದಾರೆ. ಅದಾಗ್ಯೂ ಸಹ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಕುರಿತು ಮಾತನಾಡುತ್ತೇನೆ. ರಾಜಕೀಯಕ್ಕೆ ಬರುವ ಮೊದಲಿನಿಂದಲೇ ನಾವಿಬ್ಬರೂ ಸ್ನೇಹಿತರು. ಅವರ ಬಗ್ಗೆ ಅಪಾರವಾದ ಅಭಿಮಾನ, ಪ್ರೀತಿ – ವಿಶ್ವಾಸ ಇದೆ. ಅವರೊಂದಿಗೆ ಮಾತನಾಡಿ ಅವರ ಬಯಕೆಯನ್ನು ತಿಳಿದುಕೊಂಡು ಪಕ್ಷದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

    ಲಮಟ್ಟಿ ಜಲಾಶಯದ ಎತ್ತರ ಹೆಚ್ಚಳಕ್ಕೆ ಕ್ರಮ

    ಈ ಸಂದರ್ಭದಲ್ಲಿ ಮಾಧ್ಯಮಮಿತರ ಪ್ರಶ್ನೆಗೆ ಉತ್ತರಿಸಿದ ಅವರು ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತು ಸುಪ್ರೀಂಕೋರ್ಟ್ ಆದೇಶದಂತೆ ಬ್ರಿಜೇಶ್ ಕುಮಾರ್ ಪಟೇಲ್ ಅವರ ನೇತೃತ್ವದಲ್ಲಿ ಟ್ರುಬ್ಯುನಲ್ ರಚಿಸಲಾಯಿತು. ಇದರ ತೀರ್ಪಿನಂತೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಹಂತದಲ್ಲಿ ಆಂದ್ರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತು. ಮಹಾರಾಷ್ಟ್ರ ಹಾಗೂ ಕರ್ನಾಟಕ ಒಟ್ಟಾಗಿ ಇದನ್ನು ಎದುರಿಸುತ್ತಿದ್ದೇವೆ. ಮುಂದಿನ ಒಂದುವರೆ ತಿಂಗಳ ಒಳಗಾಗಿ ಸುಪ್ರೀಂಕೋರ್ಟ್ ತೀರ್ಪು ಬರಬಹುದು. ನಮ್ಮ ಪಾಲಿನ ನೀರಿನ ಬಳಕೆಗೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ತಕ್ಷಣ ಪುನರ್ವಸತಿ ಕಾರ್ಯಕ್ರಮ ರೂಪಿಸಿ, ಆಲಮಟ್ಟಿ ಜಲಾಶಯದ ಎತ್ತರವನ್ನು ಏರಿಸಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯಿದೆ. ಜಲಾಶಯದ ಎತ್ತರ ಹೆಚ್ಚಳದಿಂದ 13.50 ಲಕ್ಷ ಚದುರ ಪ್ರದೇಶ ನೀರಾವರಿಗೆ ಒಳಪಡುವುದು. ಇದಕ್ಕೆ ಪ್ರಾಶಸ್ತ್ಯ ನೀಡಿ ಕೆಲಸ ಮಾಡಲಾಗುವುದು ಎಂದರು.

    ತಂದೆ -ತಾಯಿ ಅವರ ಸಮಾಧಿಗೆ ಗೌರವ ಸಮರ್ಪಣೆ

    ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿಸ ಬಸವರಾಜ ಬೊಮ್ಮಾಯಿ ಅವರು , ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಧ್ಯೆ ಅಮರಗೋಳದಲ್ಲಿರುವ ಮಾತೋಶ್ರೀ ಗಂಗಮ್ಮ ಎಸ್ ಬೊಮ್ಮಾಯಿ ಹಾಗೂ ತಂದೆ,ಮಾಜಿಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ,ಗೌರವ ಸಮರ್ಪಿಸಿದರು.

    ತಂದೆ -ತಾಯಿಯ ಸಮಾಧಿಗೆ ಪ್ರದಕ್ಷಿಣೆ ಹಾಕಿ ಕೆಲನಿಮಿಷ ಮೌನವಾಗಿ ಸ್ಮರಣೆ ಮಾಡಿದರು.ಉಭಯ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!