18 C
Karnataka
Friday, November 22, 2024

    ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಪ್ರಧಾನಿಗೆ ಸಿಎಂ ಮನವಿ

    Must read

    NEW DELHI, JULY 30

    ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

    ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಜೊತೆಗೆ ಕಲಬುರಗಿಯ ಇಎಸ್ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಪ್ರಾದೇಶಿಕ ಏಮ್ಸ್ ಮಾದರಿಯ ಸಂಸ್ಥೆಯನ್ನಾಗಿ ಉನ್ನತೀಕರಿಸುವಂತೆ ಕೋರಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಶುಭಕೋರಿದ ಪ್ರಧಾನಿಯವರು, ಈ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ಮಾಡಿದರು. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಇದಕ್ಕೂ ಮುನ್ನ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಹೊಸದಾಗಿ ಸೃಜನೆಯಾದ ಸಹಕಾರ ಸಚಿವಾಲಯದ ಹೊಣೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ರಾಜ್ಯದ ಪ್ರವಾಹ ಪರಿಸ್ಥಿತಿ, ಕೋವಿಡ್ 19 ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಇದು ಪರೀಕ್ಷೆಯ ಸಮಯವೆಂದ ಗೃಹ ಸಚಿವರಿಗೆ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

    ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಮುಖ್ಯಮಂತ್ರಿಯವರು ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವಂತೆ ಹಾಗೂ ಕೃಷ್ಣಾ ಮೇಲ್ದಂಡೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕುರಿತು ಸಹ ಚರ್ಚೆ ನಡೆಸಲಾಯಿತು.

    ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಅನುರಾಗ್ ಠಾಕುರ್ ಮೊದಲಾದವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನೂತನ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಈ ಗಣ್ಯರು, ರಾಜ್ಯದ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಮಧ್ಯಾಹ್ನ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸತ್ ಸದಸ್ಯರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಯವರು ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ಹಾಗೂ ಕೇಂದ್ರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಹಕಾರ ನೀಡುವಂತೆ ಕೋರಿದರು. ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಂಸದರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ತಿಳಿಸಿದರು. ನಾಡಿನ ನೆಲ, ಜಲದ ರಕ್ಷಣೆಯಲ್ಲಿ ಸಂಸದರು ಸಹಕರಿಸುವಂತೆ ಮನವಿ ಮಾಡಿದರು.

    ತಮ್ಮ ದೆಹಲಿ ಭೇಟಿಯ ವಿವರಗಳನ್ನು ಮಾಧ್ಯಮದವರಿಗೆ ನೀಡಿದ ಮುಖ್ಯಮಂತ್ರಿಯವರು, ರಾಜ್ಯದಲ್ಲಿ ಆರ್ಥಿಕ ಸುಸ್ಥಿರತೆ ಕಾಪಾಡುವುದು, ಪ್ರವಾಹ ಹಾಗೂ ಕೋವಿಡ್ ನಿಯಂತ್ರಣ ಆದ್ಯತೆಯ ವಿಷಯಗಳು ಎಂದು ತಿಳಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!