26.3 C
Karnataka
Saturday, November 23, 2024

    ವಿಭಿನ್ನ ಪ್ರಯೋಗದ `ಇಕ್ಕಟ್’

    Must read

    ಒಂದು ಲಾಕ್ ಡೌನ್, ಒಂದು ಕರೋನಾ, ಒಂದು ಟಿಕ್ ಟಾಕ್ ಸಂಸಾರವೊಂದರಲ್ಲಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಬಹುದು ಎಂಬುದನ್ನು ನವಿರು ಹಾಸ್ಯದೊಂದಿಗೆ ಹೇಳಿರುವ ಇಕ್ಕಟ್ ಎಂಬ ಸಿನಿಮಾ ತನ್ನ ಹಲವು ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ. ಇದೇ ಇಪ್ಪತ್ತೊಂದರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಮಿಸ್ ಮಾಡದೇ ನೋಡಬೇಕಾದ ಚಿತ್ರಗಳ ಸಾಲಿಗೆ ಸೇರಬಲ್ಲದು.

    ಇಶಾಮ್ ಹಾಗೂ ಹಸೀನ್ ಖಾನ್ ಸಹೋದರರು ನಿರ್ದೇಶಿಸಿರುವ ಈ ಚಿತ್ರ ಲವಲವಿಕೆಯಿಂದ ಕೂಡಿದೆ. ಹೊಸ ಹುಡುಗರಾದರೂ ತಮ್ಮಲ್ಲಿನ ಆಲೋಚನೆಗಳನ್ನು ದೃಶ್ಯರೂಪಕ್ಕೆ ತಂದು ನೋಡುಗರನ್ನು ಹಿಡಿದಿಟ್ಟಿದ್ದಾರೆ.

    ಒಂದೇ ಒಂದು ಮನೆಯ ಒಳಗೆ ಇಡೀ ಚಿತ್ರವನ್ನು ಚಿತ್ರಿಸಿದ್ದಾರೆ. ಚಿತ್ರದಲ್ಲಿ ಬೆರಳಿಣಿಕೆಯ ಪಾತ್ರಗಳಷ್ಟೇ ಜೀವಿಸಿವೆ. ಮನೆಯ ಒಳಗೇ ಇಡಿ ಚಿತ್ರವನ್ನು ದೃಶ್ಯೀಕರಿಸಿರುವ ರೀತಿ ಹಾಗೂ ಅದನ್ನು ಬೋರಾಗದಂತೆ ಕಟ್ಟಿಕೊಟ್ಟದ್ದು ನಿರ್ದೇಶಕರ ಜಾಣ್ಮೆಗೆ ಸಾಕ್ಷಿ.

    ಮನೆಯ ಕೋನಗಳನ್ನು ತಮ್ಮ ಕತೆಯ ಬೆಳವಣಿಗೆಗೆ ಹೇಗೆಲ್ಲಾ ದೃಶ್ಯ ರೂಪಕ್ಕೆ ತರಬಹುದೆಂದು ಸರಿಯಾಗಿಯೇ ಯೋಚಿಸಿ ಆಗು ಮಾಡಿಸಿದ್ದಾರೆ.ಹೊರಗಿನ ಜಗತ್ತಿನ ಬಗ್ಗೆ ಮಾತಲ್ಲೇ ಕಟ್ಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ನೋಡುಗನಿಗೆ ತಲುಪಿಸುತ್ತಾರೆ. ಮನೆಯಲ್ಲಿನ ಟೀವಿಯನ್ನೂ ಒಂದು ಪಾತ್ರವನ್ನಾಗಿಸಿದ್ದಾರೆ. ಅದನ್ನು ಕತೆಯ ಓಟಕ್ಕೆ ಬಳಸಿಕೊಂಡಿದ್ದಾರೆ.

    ಇಲ್ಲಿ ಪಾತ್ರಗಳ ನಡುವಿನ ಜಿದ್ದಾ-ಜಿದ್ದಿ, ಒಳ ತುಮುಲಗಳ ತಾಕಲಾಟ, ಪ್ರೀತಿ-ದ್ವೇಷ, ಬಂಧು-ಬಳಗದವರ ಆಕ್ರಮಣ, ಅಕ್ಕ-ಪಕ್ಕದವರ ಕಿರಿಕಿರಿ ಹಾಗೂ ಕುಚೋದ್ಯ ಹೀಗೆ ಎಲ್ಲವನ್ನೂ ಸಂದರ್ಭೋಚಿತವಾಗಿ ಹೆಣೆಯಲಾಗಿದೆ.

    ಮುಖ್ಯ ಪಾತ್ರಗಳಲ್ಲಿನ ನಾಗಭೂಷಣ್ ಎನ್ನೆಸ್, ಭೂಮಿಕಾ ಶೆಟ್ಟಿ, ಸುಂದರ್, ಆರ್ಜೆ ವಿಕ್ಕಿ ಹಾಗೂ ಆನಂದ್ ನೀನಾಸಮ್ ಹಾಗೂ ಜೇಡ ಹಿಡಿಯಲು ಬರುವ ಹುಡುಗ ಎಲ್ಲರ ಟೈಮಿಂಗ್ ಹಾಗೂ ಸಹಜ ನಟನೆ ಪ್ಲಸ್ ಆಗಿದೆ.

    ಸಿನಿಮಾಟೋಗ್ರಫಿಯ ಹೊಣೆಯನ್ನು ಯುವ ಪ್ರತಿಭೆ ಲವಿತ್ ಅವರು ನಿರ್ವಹಿಸಿದ್ದಾರೆ. ತಮ್ಮ ಮೊದಲ ಸಿನಿಮಾ ‘ ರಾಮ ರಾಮ ರೇ’ ಯಲ್ಲಿ ಚಿತ್ರದ ಬಹುಪಾಲು ಭಾಗವನ್ನು ಬಯಲಲ್ಲಿ ಚಿತ್ರೀಕರಿಸಿದ್ದರು. ಕಳ್ಬೆಟ್ಟದ ದರೋಡೆಕೋರರು’ ಚಿತ್ರದಲ್ಲಿ ಹಳ್ಳಿಯ ಪರಿಸರ ಹಾಗೂ ಅಲ್ಲಿನ ಗಲ್ಲಿಗಳನ್ನೂ ಹಿಡಿದಿಟ್ಟಿದ್ದ ಲವಿತ್ ಈ ಚಿತ್ರದಲ್ಲಿ ಇಡೀ ಚಿತ್ರವನ್ನು ಗೋಡೆಗಳ ನಡುವೆಯೇ ಚಿತ್ರಿಸಿ ದಾಖಲೆ ಮಾಡಿದ್ದಾರೆ. ಹೊರಾಂಗಣವೇ ಇಲ್ಲದೇ ಎಲ್ಲವನ್ನೂ ಇಂಡೋರ್ ನಲ್ಲೇ ಚಿತ್ರಿಸಿ `ಸೈ’ ಎನಿಸಿಕೊಂಡಿದ್ದಾರೆ.

    ನಿರ್ದೇಶಕರೇ ಈ ಚಿತ್ರದ ಎಡಿಟರ್ ಕೂಡ ಆಗಿರುವುದರಿಂದ ಫ್ರೇಮ್ ಅನ್ನು ಇಡುವಾಗಲೇ ಎಲ್ಲಿ ಎಷ್ಟಿದ್ದರೆ ಸೂಕ್ತ ಎಂದು ನಿರ್ಧರಿಸಿದಂತೆ ಕಾಣುತ್ತದೆ. ನಿರ್ದೇಶನದಷ್ಟೇ ಸಂಕಲನದ ಕೆಲಸದಲ್ಲೂ ಸಾಕಷ್ಟು ನುರಿತವರಷ್ಟೇ ಚೆನ್ನಾಗಿ ಕೆಲಸ ಮಾಡಿದ್ದಾರೆ. ಡಾಸ್ಮೋಡೆ ಅವರ ಬೀಟ್ ಹಾಗೂ ಹಿನ್ನೆಲೆಯ ಸಂಗೀತ ಪೂರಕವಾಗಿದೆ.

    ಸಣ್ಣ ಸಣ್ಣ ಸಂಗತಿಗಳನ್ನೂ ಸೂಕ್ತವಾಗಿ ದೃಶ್ಯೀಕರಿಸಿದ್ದಾರೆ. ಬರೀ ಮಾತಲ್ಲೇ ದೃಶ್ಯಗಳನ್ನು ಕಟ್ಟದೇ ಚಿತ್ರಭಾಷೆಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಕರೋನಾ ಸಂದಿಗ್ಧದಲ್ಲಿ ಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಸವಿವರವಾಗಿ ಹಿಡಿದಿಟ್ಟಿದ್ದಾರೆ.

    ಚೈನ್ ಕಟ್’ ಮಾಡಬೇಕು ಎನ್ನುವ ಡೈಲಾಗಿಗೆ ನಾಯಕಿಯು ಕತ್ತಿನ ಚೈನ್ ಮುಟ್ಟಿಕೊಳ್ಳುವುದು, ಸರೀ ರಾತ್ರಿಯಲ್ಲಿ ಆಗಂತುಕ ಮನೆಯ ಒಳಗೆ ಬಂದು ಏನೆಲ್ಲಾ ದಾಂದಲೆ ಮಾಡಿರಬಹುದೆಂಬ ಕಲ್ಪನೆ,ಅತಿಥಿಗೆ ಕಾಫಿ ಮಾಡು ಎನ್ನುವುದನ್ನು ಕಣ್ಸನ್ನೆಯಲ್ಲೇ ಹೇಳುವುದು,ಮಂಚದ ಕೆಳಗೇ ಅವಿತ ಆಗಂತುಕ ಅಲ್ಲಿನ ಜಿರಳೆಯನ್ನೇ ಪ್ರೆಂಡ್ ಮಾಡಿಕೊಂಡು ಅದರೊಂದಿಗೆ ಮಾತಾಡುವುದು, ಚೈನಾ ಆಸಾಮಿಯು ಕೊಟ್ಟಿದ್ದ ಎನ್ನುವ ಮೊಬೈಲ್ ಅನ್ನು ಮುಟ್ಟಲು ಹೆಣಗಾಡುವುದು, ಅತಿಥಿಯ ಸೀನು ಹೆಚ್ಚಾದಾಗ ಅವರಿಗೆ ಕೋವಿಡ್ ರೋಗ ಬಂದಿರಬಹುದೆಂದು ಅನುಮಾನಿಸಿ ಪರಿಪಾಟಲು ಅನುಭವಿಸುವುದು ನೋಡುಗರಿಗೆ ಸಾಕಷ್ಟು ರಂಜನೆ ನೀಡುತ್ತದೆ.

    ಪಕ್ಕದ ಮನೆಯವನ ಕೀಟಲೆ-ಕಿರಿಕಿರಿಯು ಚಿತ್ರಕ್ಕೆ ಹೊಸ ತಿರುವು ಕೊಡುವುದು. ಟಿಕ್ ಟಾಕ್ ಗೀಳು ಹಾಗೂ ಅದರ ಪರಿಣಾಮಗಳನ್ನು ಸೂಕ್ಷ್ಮವಾಗಿ ಬಿತ್ತರಿಸುವ ಪರಿ ವಿಭಿನ್ನವಾಗಿದೆ.

    ನಗಿಸಲು ಸಾಕಷ್ಟು ಸೀನ್ ಗಳು/ಸೀನುಗಳಿವೆ. ಯುವ ಗಂಡ-ಹೆಂಡತಿ ಇಬ್ಬರೇ ಇರುವ ದೃಶ್ಯಗಳಲ್ಲೂ ಇತಿ-ಮಿತಿಯನ್ನು ಕಾಯ್ದುಕೊಂಡೇ ಚಿತ್ರಿಸಿ ಸಕುಟುಂಬ ಪರಿವಾರವಾಗಿ ಮನೆಯಲ್ಲಿನ ಎಲ್ಲರೂ ನೋಡುವಂತಹ ಚಿತ್ರವನ್ನಾಗಿಸಿದ್ದಾರೆ. ಪಕ್ಕಾ ಫ್ಯಾಮಿಲಿಯ ನವಿರು ಹಾಸ್ಯದ ಚಿತ್ರ ಎನ್ನಲಡ್ಡಿಯಿಲ್ಲ.

    ನಾಗಭೂಷಣ್ ಅವರ ನಟನೆಯು ಮತ್ತೊಬ್ಬ ಅಚ್ಯುತ್ ಕುಮಾರ್ ಅವರನ್ನು ಹುಟ್ಟು ಹಾಕಲಿದೆ. ಅಷ್ಟು ಸಹಜಾಭಿನಯ ಅವರಲ್ಲಿದೆ. ಈ ದಿನಮಾನದ ಹುಡುಗಿಯರಲ್ಲಿರುವ ಹಾವಭಾವವನ್ನು ಯಥಾವತ್ತಾಗಿ ಭೂಮಿಕಾ ಶೆಟ್ಟಿ ಪ್ರತಿಬಿಂಬಿಸಿದ್ದಾರೆ. ಸುಂದರ್ ಅವರ ಪಳಗಿದ ಅನುಭವವು ದೃಶ್ಯಗಳಲ್ಲಿ ಗೋಚರಿಸುತ್ತದೆ. ಆಗಂತುಕ ಪಾತ್ರದಲ್ಲಿ ವಿಕ್ಕಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

    ಆನಂದ್ ನೀನಾಸಂ ಆಗಾಗ ಬಂದು ಚಟಾಕಿ ಹಾರಿಸಿ ದೃಶ್ಯಗಳಿಗೆ ತಿರುವು ನೀಡುತ್ತಾರೆ. ಚಿತ್ರದ ಆರಂಭದಲ್ಲಿ ಬರುವ ಪುಟ್ಟ ಪಾತ್ರಧಾರಿ ಕೂಡ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎನ್ನುವುದೂ ಗಮನಾರ್ಹ.

    ಜೇಡವನ್ನು ಸಂಶೋಧಿಸುವ ದೃಶ್ಯದಿಂದ ಆರಂಭವಾದ ಚಿತ್ರ, ಅದೇ ಚಿತ್ರದ ತಿರುವಿಗೆ ಸಹಕಾರಿಯಾಗುತ್ತೆ. ಮತ್ತೆ ಚಿತ್ರದ ಕೊನೆಯಲ್ಲೂ ಕಾಣಿಸಿಕೊಂಡು ಚಿತ್ರದ `ಶುಭಂ’ ವರೆಗೂ ಕಾಡುತ್ತೆ! ಜೇಡವೂ ಒಂದು ಪಾತ್ರದಂತೆಯೇ ಅಡಕವಾಗಿದೆ.

    ಒಟ್ಟಿನಲ್ಲಿ ಎಲ್ಲಾ ಹೊಸ ನಿರ್ದೇಶಕರಲ್ಲಿ ಇರಬಹುದಾದ ಸಿನಿಮಾ ಪ್ರೀತಿ ಹಾಗೂ ಎಲ್ಲಾ ಫ್ರೇಮ್ಗಳನ್ನೂ, ಸಂಬಾಷಣೆಗಳನ್ನೂ ವಿಭಿನ್ನವಾಗಿಸುವ ಕ್ರಮವು ಇಲ್ಲೂ ಅಭಿವ್ಯಕ್ತವಾಗಿದೆ. ಈ ಹೊಸ ಪ್ರಯತ್ನವೇ ಈ ತಂಡಕ್ಕೆ ಹೆಚ್ಚು ಬಲ ತರಲಿ, ಹಾಗೂ ಮತ್ತಷ್ಟು ಇಂತಹ ಉತ್ತಮ ಅಭಿರುಚಿಯ ಚಿತ್ರಗಳನ್ನು ಕನ್ನಡಕ್ಕೆ ತರಲೆಂದು ಆಶಿಸೋಣ.ಕನ್ನಡದ ಖ್ಯಾತ ನಿರ್ದೇಶಕ ಪವನ್ ಕುಮಾರ್ ಅವರು ಈ ಚಿತ್ರಕ್ಕೆ ನಿರ್ಮಾಪಕರಾಗಿರುವುದು ಚಿತ್ರಕ್ಕೆ ಮತ್ತಷ್ಟು ಬೆಂಬಲವಾಗಿದೆ.


    ಅಮೇಜಾನ್ ಪ್ರೈಮ್ ನಲ್ಲಿ ಇಂಥ ಅನೇಕ ಸದುಭಿರುಚಿಯ ಚಿತ್ರಗಳಿವೆ. ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪ್ರೈಮ್ ನ ಸದಸ್ಯತ್ವ ಪಡೆಯಿರಿ.

    ಸಂಕೇತದತ್ತ
    ಸಂಕೇತದತ್ತ
    ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರು‌ವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ‌‌. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭ ಹೊಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!