ಸುಮಾವೀಣಾ
ಪಾವಾಗಿ ಪುಟ್ಟಿ ಧನಮಂ ಕಾವಂತುಟೆ -ನೇಮಿಚಂದ್ರನ ‘ಲೀಲಾವತಿ ಪ್ರಬಂಧ’ದಲ್ಲಿ ಉಲ್ಲೇಖವಾಗಿರುವ ಶ್ರಮದ ಮೌಲ್ಯವನ್ನು ಕುರಿತು ಆಡುವ ಮಾತಿದು. ಯಾವುದೇ ಕೆಲಸ ಮಾಡಿದರು ಅದು ತನಗೆ ಉಪಯೋಗವಾಗುವಂತಿರಬೇಕು ಇಲ್ಲವಾದರೆ ಅದಕ್ಕೆ ಅರ್ಥವಿಲ್ಲ ಎಂಬ ವಾಸ್ತವ ಸತ್ಯ ತಿಳಿಸುವಂಥ ಮಾತು.
ಸರೀಸೃಪಗಳೆ ಆಗಲಿ, ಪ್ರಾಣಿ ಪಕ್ಷಿಗಳೇ ಆಗಲಿ ಅವುಗಳು ಮನುಷ್ಯ ತೊಡುವಂಥ ವಿನಿಯೋಗಿಸುವಂಥ ಬಂಗಾರವನ್ನು , ಹಣವನ್ನು ಜೋಪಾನ ಮಾಡಿದರೆ ಅದರಿಂದ ಎಳ್ಳಷ್ಟೂ ಪ್ರಯೋಜನವಾಗುವುದಿಲ್ಲ. “ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ” ಅನ್ನುತ್ತಾರಲ್ಲ ಹಾಗೆ ಮಾಣಿಕ್ಯದ ಬೆಲೆಯೂ ಆ ಮಂಗಕ್ಕೆ ತಿಳಿದಿರುವುದಿಲ್ಲ. ಅದು ಉಪಯೋಗಿಸಿದರೂ ಕಂಡೂ ಕಾಣದ ಹಾಗೆ ಮಾಡುತ್ತೇವೆ ಇನ್ನೂ ಹೆಚ್ಚಿಗೆ ಅಂದರೆ ಛೇಡಿಸುತ್ತೇವೆ ಅದರಲ್ಲಿ ಅಂಥ ಗಹನತೆ ಏನೂ ಇರುವುದಿಲ್ಲ .
ನಿಧಿ ಇದ್ದಲ್ಲಿ ಸರ್ಪವಿರುತ್ತದೆ, ನಿಧಿಯನ್ನು ಅದು ಕಾಯುತ್ತದೆ, ಹುತ್ತದಲ್ಲಿ ನಿಧಿ ಇರುತ್ತದೆ ಇತ್ಯಾದಿ ಇತ್ಯಾದಿ ಮಾತುಗಳು ಬರುತ್ತವೆ. ಇನ್ನು ಜಾನಪದ ಕತೆಗಳಲ್ಲೂ ಹಾವಿಗೆ ಇನ್ನಿಲ್ಲದ ಸ್ಥಾನಮಾನ ಏಳುಹೆಡೆ ಸರ್ಪ, ನಾಗಮಣಿ ಹೋಂದಿರುವ ಸರ್ಪ, ಮಾಯಾವಿ ಸರ್ಪ, ಕಪಾಲಗುರ ಆಗಿದ್ದ (ಕಿವಿಯಬಳಿ ಬಾವು ಇರುವುದು) ಸರ್ಪ ಇತ್ಯಾದಿ ಇತ್ಯಾದಿ. ನಿಧಿಯನ್ನು ತನಗೆ ಸಹಾಯ ಮಾಡಿದವರಿಗೆ ಕೊಡುತ್ತದೆ ಎಂಬ ಕತೆಗಳಿವೆ.
‘ನಿಧಿ’ ಎಂದರೆ ಸಂಪತ್ತು, ಭಂಡಾರ , ಖಜಾನೆ , ಬೊಕ್ಕಸ ಮುಂತಾದ ಅರ್ಥವಿದೆ. ಅಂತಹ ನಿಧಿಯನ್ನು ಕಾಯುವುದು ಹಾವು . ಅದೆಷ್ಟೇ ಕಾಯ್ದರೂ ಪ್ರಯೋಜನ ಮಾತ್ರ ಶೂನ್ಯ. ಅದು ಕಾಯುವುದಷ್ಟೇ ಲಾಭ. “ನೀನು ಇಷ್ಟು ದಿನ ಕಾಯ್ದಿರುವೆ ತಗೊ ಸಂಬಳ” ಎಂದಾಗಲೀ “ತಗೋ ಈ ಆಭರಣ ಧರಿಸು” ಎಂದು ಯಾರೂ ಹೇಳುವುದಿಲ್ಲ. ಯಾರೇ ಆಗಲಿ ತಮ್ಮ ಹುಟ್ಟಿಗೆ, ಬದುಕಿಗೆ ತಕ್ಕಂತೆ ಕೆಲಸವನ್ನು ಉದ್ಯೋಗವನ್ನು ಮಾಡಬೇಕಾಗುತ್ತದೆ ಇಲ್ಲವಾದರೆ ವ್ಯರ್ಥ ಎಂದು “ಪಾವಾಗಿ ಪುಟ್ಟಿ ಧನಮಂ ಕಾವಂತುಟೆ” ಎಂಬ ಮಾತಿನ ಮೂಲಕ ತಿಳಿಯುತ್ತದೆ.
ಬಸವಣ್ಣನವರ ವಚನದಲ್ಲಿಯೂ ಇದೇ ಅರ್ಥವನ್ನು ಕೊಡುವಂಥ “ನಿಧಾನವ ಕಾಯ್ದಿರ್ದ ಬೆಂತರನಂತೆ” ಎಂಬ ಮಾತಿದೆ.ಅದೇ ರೀತಿ ಕುಮಾರವ್ಯಾಸನ ‘ಉದ್ಯೋಗಪರ್ವ’ದಲ್ಲಿಯೂ “ತಾನು ಭಕ್ಷಿಸದಹಿನಿಧಾನವನುಒಸೆದು ಕಾದಿಪ್ಪಂತೆ” ಎಂಬ ಮಾತು ಬರುತ್ತದೆ. ‘ತಾನು’ ಎಂದರೆ ಯಾರು ಕಾಯುತ್ತಾರೊ ಅವರು ಭಕ್ಷಿಸದ ಎಂದರೆ ಅನುಭವಿಸದ ‘ಅಹಿ’ ಎಂದರೆ ಸರ್ಪ ಎಂಬ ಅರ್ಥವಿದೆ.
ಕುಮಾರವ್ಯಾಸನ ಕಾವ್ಯದಲ್ಲಿ ಪ್ರಸ್ತುತ ಮಾತನ್ನು ಭಂಢಾರವನ್ನು ಕಾಯುವಂತಹ ವ್ಯಕ್ತಿಯ ಲಕ್ಷಣಗಳೇನು ಇರಬೇಕು ಎನ್ನುವಲ್ಲಿ ಹೇಳಿದ್ದಾರೆ. ಅಂದರೆ ಬಹಳ ಅಮೂಲ್ಯವಾದ ರತ್ನ, ವಜ್ರ, ವೈಢೂರ್ಯವನ್ನು ಅದರ ಮೌಲ್ಯವನ್ನು ನಿಖರವಾಗಿ ಊಹೆ ಮಾಡಬಲ್ಲವನಾಗಿರಬೇಕು ಜೊತೆಗೆ ಹಾವಿನ ಹಾಗೆ ನಿಧಿಯನ್ನು ಜೋಪಾನ ಮಾಡಬೇಕು .ಯಾವಾಗಲು ಸತ್ಯವನ್ನೇ ನುಡಿಯುವವನನ್ನು ಭಂಢಾರದ ರಕ್ಷಣೆಗೆ ನೇಮಿಸಬೇಕು ಎನ್ನುತ್ತಾರೆ. ಜೋಪಾನ ಮಾಡಬೇಕು ಆದರೆ ಅನುಭವಿಸಬಾರದು ಎಂಬ ಅರ್ಥದಲ್ಲಿ.
ಏನೇ ಇರಲಿ ನೇಮಿಚಂದ್ರನ ಪ್ರಕಾರ ಯಾವುದೇ ಕೆಲಸವನ್ನು ಮಾಡಿ ಅದರಿಂದ ನಿಮಗೆ ಉಪಯೋಗವಾಗುವಂತಿರಲಿ ಬಹಳ ಜೋಪಾನದಿಂದ ನಿಧಿಯನ್ನು ಕಾಯ್ದರೂ ಕಿಂಚಿತ್ ಲಾಭವನ್ನು ಗಳಿಸದೆ ಸುಮ್ಮನೆ ಉಳಿಯುವ ಹಾವಿನಂತಾಗಬಾರದು ಶ್ರಮಿಕರ ಶ್ರಮ ಎನ್ನುತ್ತಾರೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.