ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಜುಲೈ 16 ರಂದು 53,290 ಪಾಯಿಂಟುಗಳ ಮಟ್ಟಕ್ಕೆ ಜಿಗಿತ ಕಂಡು ಸರ್ವಕಾಲೀನ ಗರಿಷ್ಠದ ದಾಖಲೆ ನಿರ್ಮಿಸಿದೆ. ಇದರೊಂದಿಗೆ ಅಂದಿನ ಪೇಟೆಯ ಮಾರ್ಕೆಟ್ ಕ್ಯಾಪಿಟಲೈಸೇಷನ್, ರೂ.234.46 ಲಕ್ಷ ಕೋಟಿಗೆ ತಲುಪಿಸಿತು. ನಂತರದ ಚಟುವಟಿಕೆಯಲ್ಲಿ ಜುಲೈ 30 ರಂದು ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.235.49 ಲಕ್ಷ ಕೋಟಿಗೆ ಜಿಗಿತ ಕಂಡಿತಾದರೂ, ಸೆನ್ಸೆಕ್ಸ್ ಸುಮಾರು 550 ಪಾಯಿಂಟುಗಳಷ್ಠು ಕುಸಿತಕ್ಕೊಳಗಾಗಿದೆ. ಅಂದರೆ ಈ ಅಂತರವನ್ನು ಮಧ್ಯಮ ಮತ್ತು ಕೆಳಮಧ್ಯಮ ವಲಯದ ಷೇರುಗಳು ಆಕ್ರಮಿಸಿವೆ ಎಂದಾಯಿತು.
ಇತ್ತೀಚಿನ ದಿನಗಳಲ್ಲಿ ಪ್ರಮುಖ ಕಂಪನಿಗಳಾದ ಏಶಿಯನ್ ಪೇಂಟ್ಸ್, ಬಜಾಜ್ ಆಟೋ, ಎಚ್ ಡಿ ಎಫ್ ಸಿ, ಎಚ್ ಡಿ ಎಫ್ ಸಿ ಬ್ಯಾಂಕ್, ಲಾರ್ಸನ್ ಅಂಡ್ ಟೋಬ್ರೋ, ಕೋಟಕ್ ಮಹೀಂದ್ರ ಬ್ಯಾಂಕ್, ಇನ್ ಫೋಸಿಸ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ , ಟೈಟಾನ್ ಕಂಪನಿ, ಟೆಕ್ ಮಹೀಂದ್ರ, ಅಲ್ಟ್ರಾಟೆಕ್ ಸಿಮೆಂಟ್ ನಂತಹ ಕಂಪನಿಗಳು ಭಾರಿ ಏರಿಕೆ ಕಂಡು ಪಕ್ವತಾ ಹಂತದಲ್ಲಿವೆ. ಈ ಕಾರಣದಿಂದಾಗಿ ಸೆನ್ಸೆಕ್ಸ್ ನ ಇತರೆ ಕಂಪನಿಗಳಾದ ಎಸ್ ಬಿ ಐ, ಟಾಟಾ ಸ್ಟೀಲ್ ಗಳು ಚಟುವಟಿಕೆ ಭರಿತವಾಗಿ ಏರಿಕೆ ಕಂಡು ಸೆನ್ಸೆಕ್ಸ್ ನಲ್ಲಿ ಸ್ಥಿರತೆ ಮೂಡಿಸಿವೆ.
ಈ ಮಧ್ಯೆ ಕಂಪನಿಯ ಸಾಧನೆಯು ತೃಪ್ತಿಕರವಾಗಿಲ್ಲವೆಂಬ ಕಾರಣಕ್ಕಾಗಿ ಡಾ.ರೆಡ್ಡಿ ಲ್ಯಾಬ್, ರಿಲಯನ್ಸ್ ಇಂಡಸ್ಟ್ರೀಸ್ ಗಳು ಮಾರಾಟದ ಒತ್ತಡದಲ್ಲಿವೆ. ಒಟ್ಟಾರೆ ಮಂಥನ ಕ್ರಿಯೆಯಲ್ಲಿ ಕೆಲವು ಕಂಪನಿಗಳು ಏರಿಕೆ ಕಾಣುತ್ತವೆ ಮತ್ತೆ ಕೆಲವು ಕುಸಿಯುತ್ತವೆ. ಈ ರೀತಿಯ ಚಟುವಟಿಕೆಯು ಸೆನ್ಸೆಕ್ಸ್ ನ್ನು ಸ್ಥಿರತೆ ಕಾಣುವಂತೆ ಮಾಡಲಾಗುತ್ತಿದೆ. ಅಂದರೆ ಈಗಿನ ಪೇಟೆಗಳು ಪೂರ್ಣವಾಗಿ ಪಕ್ವವಾಗಿರುವುದರ ಕಾರಣ ಒಂದು ರೀತಿಯ ಮ್ಯೂಸಿಕಲ್ ಚೇರ್ ರೀತಿ ಏರಿಕೆ ಇಳಿಕೆ ಪ್ರದರ್ಶಿಸುತ್ತಿವೆ. ಈ ಸಂದರ್ಭದಲ್ಲಿ ಅಗ್ರಮಾನ್ಯ ಕಂಪನಿಗಳಲ್ಲಿ ಚಟುವಟಿಕೆ ನಡೆಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.
ಇತ್ತೀಚೆಗೆ ಪ್ರಚಲಿತದಲ್ಲಿರುವುದು ಮೆಟಲ್ಸ್ ವಿಭಾಗ. ಈ ವಿಭಾಗದಲ್ಲಿ ಹೆಚ್ಚಿನ ಚಟುವಟಿಕೆಗೆ ಕಾರಣ ಚೀನಾದಲ್ಲಿನ ಬದಲಾವಣೆಯ ಕಾರಣ ಭಾರತೀಯ ಲೋಹಗಳಿಗೆ ಹೆಚ್ಚು ಅನುಕೂಲಕರ ಎಂಬುದಾಗಿದೆ. ಈ ವಾತಾವರಣದಲ್ಲಿ ಪ್ರಮುಖ ಕಂಪನಿಗಳಾದ ಟಾಟಾ ಸ್ಟೀಲ್, ಸ್ಟೀಲ್ ಅಥಾರಿಟೀಸ್ ಆಫ್ ಇಂಡಿಯಾ, ಜಿಂದಾಲ್ ಸ್ಟೀಲ್ ಅಂಡ್ ಪವರ್, ವೇದಾಂತದಂತಹ ಅನೇಕ ಕಂಪನಿಗಳು ರಭಸದ ಏರಿಕೆಯನ್ನು ಕಂಡಿವೆ. ಈ ಸಂದರ್ಭವನ್ನು ಲಾಭದ ನಗದೀಕರಣಕ್ಕೆ ಆದ್ಯತೆ ನೀಡುವುದು ಒಳಿತು. ಪೂರ್ಣವಾಗಿಯಲ್ಲದಿದ್ದರೆ ಭಾಗಶ: ವಾಗಿಯಾದರೂ ಮಾಡುವುದು ಸೂಕ್ತ. ಈ ಸಂದರ್ಭದಲ್ಲಿ ಸೆನ್ಸೆಕ್ಸ್ ನ ಅಂಗವಾಗಿರುವ ಟಾಟಾ ಸ್ಟೀಲ್ ಕಂಪನಿಯ ಕಳೆದ ಒಂದು ದಶಕದಿಂದ ಯಾವ ರೀತಿ ಏರಿಳಿತ ಪ್ರದರ್ಶಿಸಿದೆ ಎಂಬುದನ್ನು ತಿಳಿಸಬಯಸುತ್ತೇನೆ.
ಟಾಟಾ ಸ್ಟೀಲ್ ಲಿಮಿಟೆಡ್ :
ಟಾಟಾ ಸ್ಟೀಲ್ ಕಂಪನಿಯ ಷೇರು ಸೆನ್ಸೆಕ್ಸ್ ನ 30 ಕಂಪನಿಗಳಲ್ಲಿ ಒಂದು ಪ್ರಮುಖ ಕಂಪನಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ರೂ.1,130 ರ ಸಮೀಪದಿಂದ ರೂ.1,480 ರವರೆಗೂ ಏರಿಕೆ ಕಂಡಿದೆ. ಈ ಕಂಪನಿಯ ಷೇರು ಕಳೆದ ಒಂದು ವರ್ಷದಲ್ಲಿ ರೂ.343 ರಿಂದ ರೂ.1,481 ರ ಸರ್ವಕಾಲೀನ ಗರಿಷ್ಠದವರೆಗೂ ಜಿಗಿತ ಕಂಡು ಸಧ್ಯ ರೂ.1,433 ರಲ್ಲಿ ಕೊನೆಗೊಂಡಿದೆ. ಈ ಕಂಪನಿಯು ಜೂನ್ ತಿಂಗಳಲ್ಲಿ ಪ್ರತಿ ಷೇರಿಗೆ ರೂ.25 ರಂತೆ ಡಿವಿಡೆಂಡನ್ನು ವಿತರಿಸಿದೆ. ಈ ಷೇರಿನ ಏರಿಕೆ ಹೇಗಿದೆ ಎಂದರೆ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ರೂ. 600 ರ ಸಮೀಪವಿದ್ದು ಮಾರ್ಚ್ ನಲ್ಲಿ ರೂ.823 ರವರೆಗೂ, ಏಪ್ರಿಲ್ ನಲ್ಲಿ ರೂ.1,050 ರವರೆಗೂ, ಮೇ ತಿಂಗಳಲ್ಲಿ ರೂ.1,246 ರವರೆಗೂ ಏರಿಕೆ ಕಂಡು ಜುಲೈ ತಿಂಗಳಲ್ಲಿ ರೂ.1,481 ರ ಸರ್ವಕಾಲೀನ ಗರಿಷ್ಠಕ್ಕೆ ತಲುಪಿದ್ದು ದಾಖಲೆಯಾಗಿದೆ.
ಸೆನ್ಸೆಕ್ಸ್ ನಲ್ಲಿ ಮರು ಸ್ಥಾನ:
ಟಾಟಾ ಸ್ಟೀಲ್ ಕಂಪನಿಯು ನಿರಂತರವಾಗಿ ಸೆನ್ಸೆಕ್ಸ್ ನ ಅಂಗವಾಗಿತ್ತಾದರೂ ಡಿಸೆಂಬರ್ 2020 ರಲ್ಲಿ ಸೆನ್ಸೆಕ್ಸ್ ನಿಂದ ಹೊರಬಂದು ಡಾ.ರೆಡ್ಡೀಸ್ ಲ್ಯಾಬ್ ಗೆ ಅವಕಾಶ ಮಾಡಿಕೊಟ್ಟಿತು. ಸುಮಾರು ಒಂದೂವರೆ ವರ್ಷದ ನಂತರ ಮತ್ತೆ ಜೂನ್ 2021 ರಲ್ಲಿ ಎನ್ ಜಿ ಸಿ ಯನ್ನು ಹೊರಕಳಿಸಿ ಸೆನ್ಸೆಕ್ಸ್ ನಲ್ಲಿ ತನ್ನ ಸ್ಥಾನ ಬಲಪಡಿಸಿಕೊಂಡಿತು.
ಷೇರಿನ ಬೆಲೆ ನಡೆದು ಬಂದ ದಾರಿ:
2013 ರಲ್ಲಿ ಈ ಷೇರಿನ ಬೆಲೆ ರೂ.195 ರ ಸಮೀಪವಿತ್ತು. ನಂತರ 2017 ರವರೆಗೂ ರೂ.200 ರಿಂದ ರೂ.440 ರವರೆಗೂ ಏರಿಳಿತ ಕಂಡು 2017 ರಲ್ಲಿ ರೂ.744 ರವರೆಗೂ ಏರಿಕೆ ಕಂಡು, 2018 ರ ಆರಂಭಿಕ ದಿನಗಳಲ್ಲಿ ರೂ.790 ರ ಗಡಿಯನ್ನು ದಾಟಿತು. ಈ ಕಂಪನಿ 2010 ರಲ್ಲಿ ಪ್ರತಿ ಷೇರಿಗೆ ರೂ.610 ರಂತೆ ವಿತರಿಸಿದ್ದ ಬೆಲೆಯನ್ನು 2017 ರಲ್ಲಿ ಮತ್ತೆ ತಲುಪಿತು. 2018 ರಲ್ಲಿ ಮತ್ತೊಮ್ಮೆ ರೂ.510 ರಂತೆ ಮತ್ತು ಪಾರ್ಟ್ ಪೇಮೆಂಟ್ ಆಧಾರದಲ್ಲಿ ಪ್ರತಿ ಷೇರಿಗೆ ರೂ.615 ರಂತೆ ಹಕ್ಕಿನ ಷೇರು ವಿತರಿಸಿತು. ಈ ವಿತರಣೆ ನಂತರ ಷೇರಿನ ಬೆಲೆ 2019 ರಲ್ಲಿ ರೂ.320 ರ ಸಮೀಪಕ್ಕೂ, 2020 ರಲ್ಲಿ ರೂ.250 ರ ಸಮೀಪಕ್ಕೂ ಜಾರಿ 2021 ರಲ್ಲಿ ರೂ.1,480 ರವರೆಗೂ ಜಿಗಿತ ಕಂಡಿದೆ.
ಡಿವಿಡೆಂಡ್ ವಿತರಣೆ:
ಷೇರುದಾರರಿಗೆ ವಿತರಿಸಿದ ಡಿವಿಡೆಂಡ್ ಪ್ರಮಾಣ ಹೇಗಿತ್ತೆಂದರೆ 2018 ರಲ್ಲಿ ಪ್ರತಿ ಷೇರಿಗೆ ರೂ.10, 2019 ರಲ್ಲಿ ಪ್ರತಿ ಷೇರಿಗೆ ರೂ.13, 2020 ರಲ್ಲಿ ಪ್ರತಿ ಷೇರಿಗೆ ರೂ.10 ಮತ್ತು 2021 ರಲ್ಲಿ ಪ್ರತಿ ಷೇರಿಗೆ ರೂ.25 ರಂತೆ ಡಿವಿಡೆಂಡ್ ನ್ನು ಘೋಷಿಸಿ ವಿತರಿಸಿ, ಹೂಡಿಕೆದಾರರನ್ನು ತನ್ನ ಏರಿಳಿತಗಳ ಜಾಲದಿಂದ ಲಾಭಗಳಿಕೆಗೆ ಅವಕಾಶ ಕಲ್ಪಿಸುವುದರೊಂದಿಗೆ ಆಕರ್ಷಕ ಡಿವಿಡೆಂಡ್ ವಿತರಿಸಿದೆ.
ಎಲ್ಲಾ ಹೆಚ್ಚಿನ ಬೆಲೆಯ ಷೇರುಗಳೂ ಹೂಡಿಕೆಗೆ ಯೋಗ್ಯವೇ?
ಹೂಡಿಕೆಗೆ ಕಂಪನಿಗಳನ್ನು ಆಯ್ಕೆ ಮಾಡುವಾಗ ಕಂಪನಿಗಳ ಚಟುವಟಿಕೆ, ಸಾಧನೆ, ಆಡಳಿತ ಮಂಡಳಿಗಳ ಸ್ನೇಹಪರತೆ, ಪೇಟೆಯಲ್ಲಿ ಆ ಷೇರಿನ ಪರಿಸ್ಥಿತಿ, ಮೌಲ್ಯಾಧಾರಿತವೇ ಎಂಬ ಅಂಶಗಳನ್ನಾಧರಿಸಿ ನಿರ್ಧರಿಸಬೇಕು. ಸಧ್ಯ ಪೇಟೆಗಳಲ್ಲಿ ಷೇರಿನ ಬೆಲೆಗಳು ಗಗನದಲ್ಲಿ ತೇಲಾಡುತ್ತಿರುವ ಸಂದರ್ಭವಾಗಿದ್ದು, ವಿದೇಶಿ ವಿತ್ತೀಯ ಹೂಡಿಕೆದಾರರು ಮಾರಾಟಕ್ಕೆ ಹೆಚ್ಚು ಒಲವು ತೋರುತ್ತಿದ್ದು, ಸ್ಥಳೀಯ ವಿತ್ತೀಯ ಸಂಸ್ಥೆಗಳು ಚಟುವಟಿಕೆಭರಿತವಾಗಿರುವ ಕಾರಣ, ಸಣ್ಣ ಹೂಡಿಕೆದಾರರು ಸಹ ಲಾಭದ ನಗದೀಕರಣಕ್ಕೆ ಆದ್ಯತೆ ನೀಡುವುದು ಒಳಿತು. ಕೈಲಿ ಹಣ ಸಿದ್ಧವಿದ್ದಲ್ಲಿ ಅವಕಾಶಗಳು ಅಗಾಧವಾಗಿ ಸೃಷ್ಠಿಯಾಗುತ್ತವೆ ಎನ್ನುವುದಕ್ಕೆ ಹಿಂದಿನ ವಾರದಲ್ಲಿ ಫಾರ್ಮಾ ವಲಯದ ಡಾ.ರೆಡ್ಡೀಸ್ ಲ್ಯಾಬ್, ಸಿಪ್ಲಾ, ಗ್ಲೆನ್ ಮಾರ್ಕ್ ಫಾರ್ಮಾ, ಅಲೆಂಬಿಕ್ ಫಾರ್ಮ, ಲೌರಸ್ ಲ್ಯಾಬ್, ಕ್ಲಾರಿಯಂಟ್ ಕೆಮಿಕಲ್ಸ್, ಬ್ಯಾಂಕಿಂಗ್ ವಲಯದ ಕೆನರಾ ಬ್ಯಾಂಕ್ ಅಲ್ಲದೆ ಎನ್ ಎಂಡಿ ಸಿ, ಹಿಂದೂಸ್ಥಾನ್ ಕಾಪರ್, ಒರ್ಯಾಕಲ್, ಭಾರತ್ ಡೈನಾಮಿಕ್ಸ್ ಮುಂತಾದ ಕಂಪನಿಗಳು ದೊರಕಿಸಿಕೊಟ್ಟ ಅವಕಾಶಗಳೇ ನಿದರ್ಶನ.
ಈಗಿನ ಪೇಟೆಗಳಲ್ಲಿ ವ್ಯವಹರಿಸಬೇಕೆ ಹೊರತು ದೀರ್ಘಕಾಲೀನ ಹೂಡಿಕೆಗೆ ಎಂದು ದೊರೆತಂತಹ ಅವಕಾಶಗಳನ್ನು ಕೈಚೆಲ್ಲುವುದು ಸರಿಯಲ್ಲವೆಂದೆನಿಸುತ್ತದೆ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.