BENGALURU AUG 2
ರಾಜ್ಯದ ಸಚಿವ ಸಂಪುಟ ಕೆಲವೇ ದಿನಗಳಲ್ಲಿ ವಿಸ್ತರಣೆ ಆಗಲಿದೆ. ಸರಕಾರವು ಉತ್ತಮವಾಗಿ ಕೆಲಸ ಮಾಡಲಿದೆ.ಪ್ರತಿಪಕ್ಷಗಳು ಕಾಲೆಳೆಯುವ ಪ್ರವೃತ್ತಿಯನ್ನು ಕೈಬಿಟ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಆಧಾರರಹಿತ ಹಾಗೂ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ್ ಅವರು ಪಕ್ಷದ ರಾಜ್ಯ ಘಟಕದ ಪರವಾಗಿ ಎಚ್ಚರಿಕೆ ನೀಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಹಾದಿಬೀದಿಗಳಲ್ಲಿ ಸರಕಾರದ ವಿರುದ್ಧ ಅಪಪ್ರಚಾರದ ಹುನ್ನಾರಕ್ಕೆ ಸಿದ್ದರಾಮಯ್ಯ ಮುಂದಾಗಿದ್ದರು. ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬಳಿಕ ಈಗ ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ಇಲ್ಲ ಎಂಬ ಮಾತನಾಡಲು ಆರಂಭಿಸಿದ್ದಾರೆ. ನೀವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದೀರಿ. ಯಾಕೆ ಕಿತ್ತು ಹಾಕಿದಿರಿ? ನೀವು ಕಾರಣ ಕೊಡಬೇಕಲ್ಲವೇ? ಮಂಡ್ಯದ ಅಂಬರೀಷ್ ಅವರನ್ನು ಮಂತ್ರಿ ಪದವಿಯಿಂದ ಏಕಾಏಕಿ ಕಿತ್ತು ಹಾಕಿದ್ದಕ್ಕೆ ಉತ್ತರ ಕೊಟ್ಟಿದ್ದೀರಾ? ಮಂಗಳೂರಿನ ಹಿರಿಯ ನಾಯಕರು, ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ ಜನಾರ್ದನ ಪೂಜಾರಿ ಅವರನ್ನು ಮೂಲೆಗುಂಪು ಮಾಡಿದ್ದಕ್ಕೆ ಕಾರಣ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ನಿಮ್ಮ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹವನ್ನು ಮೊದಲು ಸರಿ ಮಾಡಿಕೊಳ್ಳಿ. ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಆಗಬೇಕೇ ಅಥವಾ ನಲಪಾಡ್ ಆಗಬೇಕೇ ಎಂಬ ಗೊಂದಲ ನಿವಾರಿಸಿ. ಡಿ.ಕೆ.ಶಿವಕುಮಾರ್ ಹಾಗೂ ನಿಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಮೊದಲು ಸರಿ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ ಅವರು, ನಮ್ಮ ಪಕ್ಷದ ಕೇಂದ್ರ ನಾಯಕರ ನಿರ್ಧಾರದ ಬಗ್ಗೆ ನೀವು ಹೇಳಿಕೆ ನೀಡುವ ಅವಶ್ಯಕತೆ ಇಲ್ಲ ಎಂದರು.
ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರೂ ಆದ ಶ್ರೀ ಛಲವಾದಿ ನಾರಾಯಣಸ್ವಾಮಿ ಮತ್ತು ರಾಜ್ಯ ವಕ್ತಾರರಾದ ಶ್ರೀ ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.