19.9 C
Karnataka
Sunday, September 22, 2024

    ದಿಲ್ಲಿಯಲ್ಲಿ ಸಿಎಂ ಬೊಮ್ಮಾಯಿ; ಕ್ಯಾಬಿನೆಟ್‌ಗೆ ಇಂದೇ ಅಂತಿಮ ಟಚ್; ಬುಧವಾರ ಅಥವಾ ಗುರುವಾರ ಪ್ರಮಾಣ

    Must read

    ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಆರು ದಿನಗಳ ನಂತರ ಅವರ ಸಂಪುಟ ರಚನೆಯ ಕಸರತ್ತು ಕ್ಲೈಮ್ಯಾಕ್ಸ್‌ಗೆ ಬಂದಿದ್ದು, ಇವತ್ತು ರಾತ್ರಿ ಅಥವಾ ನಾಳೆ ಬೆಳಗ್ಗೆ ಹೊತ್ತಿಗೆ ಅಂತಿಮ ಪಟ್ಟಿ ಅವರ ಕೈಸೇರಲಿದೆ.

    22-26 ಮಂದಿಯ ಹೆಸರಿದೆ ಎನ್ನಲಾದ ಹೈಕಮಾಂಡ್‌ ಕೊಡುವ ಪಟ್ಟಿಯೊಂದಿಗೆ ಮುಖ್ಯಮಂತ್ರಿ ನಾಳೆ ಬೆಂಗಳೂರಿಗೆ ವಾಪಸ್‌ ಆಗಲಿದ್ದು, ಬುಧವಾರ ಇಲ್ಲವೇ ಗುರುವಾರ ನೂತನ ಸಂಪುಟದ ಪ್ರಮಾಣ ವಚನ ಸ್ವೀಕಾರ ನಡೆಯಬಹುದು.

    ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತಿತರ ಮುಖಂಡರ ಜತೆ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಮಾಧ್ಯಮಗಳ ಜತೆ ಮಾತನಾಡಿ “ಮೂರು ಸೂತ್ರ ಇಟ್ಟುಕೊಂಡಿದ್ದೇವೆ. ಅದರ ಅನ್ವಯವೇ ಸಂಪುಟ ರಚನೆ ನಡೆಯಲಿದೆ. ಎಷ್ಟು ಹಂತದಲ್ಲಿ ಸಂಪುಟ ರಚನೆ ಆಗಬೇಕು? ಎಷ್ಟು ಸಚಿವರು ಇರಬೇಕು? ಜಾತಿ-ಪ್ರಾದೇಶಿಕ ಸಮತೋಲನ ಇತ್ಯಾದಿ ಅಂಶಗಳು ಸೂತ್ರದಲ್ಲಿವೆ” ಎಂದರು.

    ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಹದಿನೇಳು ವಲಸಿಗರಲ್ಲಿ ಎಷ್ಟು ಜನ ಸಂಪುಟದಲ್ಲಿ ಇರುತ್ತಾರೆ? ಎಷ್ಟು ಡಿಸಿಎಂಗಳು ಇರಬೇಕು? ಎಂಬುದು ಅಂತಿಮ ಪಟ್ಟಿ ಬಂದ ನಂತರವೇ ಗೊತ್ತಾಗುತ್ತದೆ. ಆವರೆಗೂ ಏನನ್ನೂ ಹೇಳಲಾಗದು. ಎಲ್ಲವನ್ನೂ ವರಿಷ್ಠರೇ ನಿರ್ಧಾರ ಮಡುತ್ತಾರೆ ಎಂದರು ಬೊಮ್ಮಾಯಿ.

    ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವಂಥ ಸಮತೋಲನ ಸಂಪುಟ ರಚನೆ ಆಗಲಿದೆ. ಎಲ್ಲರೂ ಸಚಿವರಾಗಲು ಆಗದು ಎಂಬ ಅಂಶ ನಮ್ಮ ಶಾಸಕರಿಗೆ ಗೊತ್ತಿದೆ. ಹಿಂದೆಯೂ ಒಂದು ಸಂಪುಟ ಇತ್ತು. ಅದೆಲ್ಲವನ್ನೂ ಗಮನದಲ್ಲಿದ್ದಟ್ಟುಕೊಂಡು ಸಂಪುಟ ರಚನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

    ಹೈಕಮಾಂಡ್‌ ಅಂತಿಮ ಪಟ್ಟಿ ಆಖೈರು ಮಾಡಿದ ಮೇಲೆಯೂ ಸಚಿವಾಕಾಂಕ್ಷಿಗಳು ಬಿರುಸಿನ ಲಾಬಿ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಂತೂ ಯಡಿಯೂರಪ್ಪ, ಸಂಘ ಪರಿವಾರ ಮತ್ತು ಹೈಕಮಾಂಡ್‌ ಪಟ್ಟಿಗಳ ಒತ್ತಡದಲ್ಲಿ ಹೈರಾಣಾಗಿದ್ದಾರೆ.

    ಸಂಘ ಪರಿವಾರ ಮತ್ತು ಮುಖ್ಯಮಂತ್ರಿಗಳ ಬಳಿ ಇರುವ ಯಡಿಯೂರಪ್ಪ ಅವರು ರೆಕಮಂಡ್‌ ಮಾಡಿರುವ ಆಕಾಂಕ್ಷಿಗಳ ಪಟ್ಟಿಯನ್ನೂ ಅವಲೋಕನ ಮಾಡಿರುವ ಮಾಡಿರುವ ವರಿಷ್ಠರು, ಅಂತಿಮ ಪಟ್ಟಿಯನ್ನು ಬೊಮ್ಮಾಯಿ ಕೈಗಿಡಲಿದ್ದಾರೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಡುವೆ ಇಂದು ಸಂಜೆ ಮಹತ್ವದ ಮಾತುಕತೆ ನಡೆಯಲಿದೆ. ಯಾರೆಲ್ಲ ಸಂಪುಟಕ್ಕೆ ಸೇರುತ್ತಾರೆ? ಯಾರೆಲ್ಲ ಹೊರಗಿರುತ್ತಾರೆ? ಎಂಬುದನ್ನು ವರಿಷ್ಠರು ನಿರ್ಣಯಿಸಿದ್ದು, ಆ ಮಾಹಿತಿಯನ್ನು ನಡ್ಡಾ ಅವರು ಸಿಎಂ ಜತೆ ಹಂಚಿಕೊಳ್ಳಲಿದ್ದಾರೆ.

    ಸಂಪಟ ಲೆಕ್ಕ ಹೇಗೆ? ಎತ್ತ?

    ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಹೊಸಬರು, ಹಳಬರು ಹಾಗೂ ವಲಸಿಗರನ್ನು ಒಳಗೊಂಡ ಸಮತೋಲಿತ ಕ್ಯಾಬಿನೆಟ್‌ ಅಸ್ತಿತ್ವಕ್ಕೆ ಬರಲಿದ್ದು, 17ವಲಸಿಗರ ಪೈಕಿ ಯಡಿಯೂರಪ್ಪ ಸಂಪುಟದಲ್ಲಿದ್ದ 9 ಹಾಗೂ ಹೊಸಬರು 8 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗಿದೆ. ಮುಖ್ಯವಾಗಿ ಸಂಘದ ಹಿನ್ನೆಲೆಯಿಂದ ಬಂದ ಹಾಗೂ ಬಿಜೆಪಿ ಮೂಲ ನಿವಾಸಿಗಳಿಗೆ ಅಗ್ರ ಆದ್ಯತೆ ನೀಡಬೇಕು ಹಾಗೂ ಪ್ರಮುಖ ಖಾತೆಗಳೂ ಅವರಿಗೇ ಹೋಗಬೇಕು ಎಂದು ವರಿಷ್ಠರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಈ ಸಂಖ್ಯೆಗಳಲ್ಲಿ ಕೊಂಚ ವ್ಯತ್ಯಾಸವೂ ಆಗಬಹುದು.

    ವಲಸಿಗರಲ್ಲಿ ಮುಖ್ಯವಾಗಿ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್‌, ಭೈರತಿ ಬಸವರಾಜು, ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಆನಂದ್ ಸಿಂಗ್, ಡಾ.ಕೆ.ಸಿ.ನಾರಾಯಣ ಗೌಡ, ಶಿವರಾಮ ಹೆಬ್ಬಾರ್, ಮುನಿರತ್ನ ಸಂಪುಟದೊಳಕ್ಕೆ ಬರಬಹುದು ಎನ್ನಲಾಗುತ್ತಿದ್ದು, ಈ ಪಟ್ಟಿಯಲ್ಲಿರುವ ಶಿವರಾಮ್‌ ಹೆಬ್ಬಾರ್‌ ಬಿ.ಸಿ.ಪಾಟೀಲ್‌ ಅನುಮಾನ ಎಂಬ ಸುದ್ದಿಗಳೂ ಇವೆ. ಜತೆಗೆ; ಶಂಕರ್, ಕೋಲಾರದ ನಾಗೇಶ್‌, ಶ್ರೀಮಂತ ಪಾಟೀಲ್ ಅವರಿಗೆ ಅವಕಾಶ ಇಲ್ಲ ಎಂದು ಹೇಳಲಾಗುತ್ತಿದೆ.

    ಇನ್ನು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ಆರ್.ಅಶೋಕ್,‌ ಬಿ.ಶ್ರೀರಾಮುಲು, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಜಿ.ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಎಸ್.ಅಂಗಾರ ಅವರ ಜೊತೆಗೆ ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್.ಸುರೇಶ್ ಕುಮಾರ್‌ ಅವರೂ ಸಚಿವರಾಗಬಹುದು ಎಂಬ ಮಾಹಿತಿ ಇದೆ.

    ಮೇಲೆ ತಿಳಿಸಲಾದ ವಲಸಿಗರು ಹಾಗೂ ಹಳಬರ ಜತೆಗೆ, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಬದಲಾಗಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ, ಅರವಿಂದ ಬೆಲ್ಲದ್, ಪೂರ್ಣಿಮಾ ಶ್ರೀನಿವಾಸ್, ಪಿ.ರಾಜೀವ್, ಸುನೀಲ್ ಕುಮಾರ್, ರಾಜೂಗೌಡ, ಎಸ್.ಎ.ರಾಮದಾಸ್, ಹರ್ಷ ವರ್ಧನ್, ರೂಪಾಲಿ ನಾಯ್ಕ್ ಹೆಸರುಗಳು ಹೊಸ ಸಚಿವರ ಯಾದಿಯಲ್ಲಿವೆ ಎನ್ನಲಾಗಿದೆ.

    ಇದಲ್ಲದೆ, ಈವರೆಗಿನ ಎಲ್ಲ ಬಿಜೆಪಿ ಸರಕಾರಗಳಲ್ಲೂ ಸಚಿವ ಸ್ಥಾನಕ್ಕೆ ಪ್ರಯತ್ನವನ್ನೂ ಮಾಡದ ಹಾಗೂ ಸಚಿವ ಸ್ಥಾನಕ್ಕೆ ಪರಿಗಣನೆಯೂ ಮಾಡದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೂ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಗಬುದು ಎಂಬ ಸುದ್ದಿ ಹರಿದಾಡುತ್ತಿದೆ. ಶೆಟ್ಟರ ಬಗ್ಗೆ ಹೈಕಮಾಂಡ್‌ ಹಾಗೂ ಆರ್‌ಎಸ್‌ಎಸ್‌ ಕೂಡ ಸಮ್ಮತಿಸಿದೆ ಎಂದು ಗೊತ್ತಾಗಿದೆ.

    ಹೊನ್ನಾಳಿ ಶಾಸಕ ಹಾಗೂ ಬಿಎಸ್‌ವೈ ಕಟ್ಟಾ ಬೆಂಬಲಿಗ ರೇಣುಕಾಚಾರ್ಯ ಅವರ ಹೆಸರೂ ಕೇಳಿಬರುತ್ತಿದ್ದು, ಅವರಿಗೆ ಸಂಘದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿಲ್ಲ ಎಂದ ಮಾಹಿತಿ ಇದೆ.

    ಸಂಭನೀಯ ಪಟ್ಟಿಗಳ ಜತೆ ಭರ್ಜರಿ ಲಾಬಿ

    ಸಚಿವಾಕಾಂಕ್ಷಿಗಳ ಲಾಬಿ ಬಿರುಸಾಗಿದ್ದು, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಿಸಿ ಪಾಟೀಲ್‌, ರಾಜೂಗೌಡ ಮುಂತಾದವರು ದಿಲ್ಲಿಯಲ್ಲಿ ವಿವಿಧ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸಿದ್ದಾರೆ. ವಲಸಿಗರಂತೂ ಒಂದೆಡೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದು, ಅದರ ಜತೆಗೆ ಬಸವರಾಜ ಬೊಮ್ಮಾಯಿ ಅವರನ್ನು ಎಲ್ಲಿಗೇ ಹೋದರೂ ನೆರಳಿಂತೆ ಫಾಲೋ ಮಾಡುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

    ಚನ್ನಕೃಷ್ಣ ಪಿ ಕೆ
    ಚನ್ನಕೃಷ್ಣ ಪಿ ಕೆhttps://cknewsnow.com/
    ಸಿಕೆ ನ್ಯೂಸ್ ನೌ.ಕಾಮ್ ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!