ಟೋಕಿಯೊ ಒಲಿಂಪಿಕ್ಸ್ ನ ಪುರುಷರ ಹಾಕಿ ಪಂದ್ಯಾಟದಲ್ಲಿ ಭಾರತ ಗುರುವಾರ ಕಂಚಿನ ಪದಕ ಸಂಪಾದಿಸುವದರೊಂದಿಗೆ 41 ವರ್ಷಗಳ ವನವಾಸ ಅಂತ್ಯಗೊಂಡಿದೆ.
ಒಂದು ಕಾಲದಲ್ಲಿ ಒಲಿಂಪಿಕ್ಸ್ ನಲ್ಲಿ ಹಾಕಿಯ ಕಣ್ಮಣಿ ಎನಿಸಿಕೊಂಡಿದ್ದ ಭಾರತ ತಂಡ ಕಳೆದ ನಲವತ್ತೊಂದು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಪದಕದ ಬಳಿ ಸುಳಿದಿರಲಿಲ್ಲ. 1980ರಲ್ಲಿ ಯುಎಸ್ ಎಸ್ ಆರ್ (ಈಗ ಅಸ್ತಿತ್ವದಲ್ಲಿ ಇಲ್ಲ) ನಲ್ಲಿ ನಡೆದಿದ್ದ ಒಲಿಂಪಿಕ್ಸ್ ನಲ್ಲಿ ಭಾರತ ತಂಡ ಚಿನ್ನದ ಪದಕ ಸಂಪಾದಿಸಿತ್ತು. ಆದಾಗಿ 41 ವರ್ಷಗಳ ಬರಗಾಲದ ನಂತರ ಮತ್ತೆ ಪದಕ ಪ್ರಾಪ್ತಿಯಾಗಿದೆ.
ಆಗ 1980ರಲ್ಲಿ ಜನತಾ ಪಕ್ಷದ ಸರಕಾರ ಪತನವಾಗಿ ಇಂದಿರಾ ಗಾಂಧೀ ಮತ್ತೆ ಅಧಿಕಾರಕ್ಕೆ ಬಂದಿದ್ದರು. ಹಲವು ದೇಶಗಳು ಈ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿರಲಿಲ್ಲ ಇದಕ್ಕೆ ಕಾರಣ ಅಮೆರಿಕ ಮತ್ತು ಯುಎಸ್ ಎಸ್ ಆರ್ ನಡುವಿನ ಶೀತಲ ಸಮರ. ಆದರೆ ಇಂದಿರಾ ಸರಕಾರ ಪಂದ್ಯದಲ್ಲಿ ಭಾಗವಹಿಸುವ ನಿರ್ಧಾರ ತೆಗೆದು ಕೊಂಡಿತ್ತು.
ಈ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಪಡೆಯಲು ಪ್ರಮುಖವಾಗಿ ಕಾರಣರಾದವರು ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್. ಅವರು ಅತ್ಯಂತ ಮುತುವರ್ಜಿ ವಹಿಸಿ ಈ ಬಾರಿ ಭಾರತ ತಂಡವನ್ನು ಪ್ರತಿನಿಧಿಸುವ ಹಾಕಿ ಇಂಡಿಯಾಕ್ಕೆ ಸಕಲ ನೆರವನ್ನು ನೀಡಿ ಪ್ರೋತ್ಸಾಹಿಸಿದ್ದರು.
ಇದಕ್ಕೆ ಪ್ರಮುಖ ಕಾರಣ ನವೀನ್ ಸ್ವತಃ ಹಾಕಿ ಆಟಗಾರ. ಅವರು ಡೂನ್ ಸ್ಕೂಲ್ ಲ್ಲಿ ಓದುತ್ತಿರುವಾಗ ಅಲ್ಲಿನ ಪ್ರಮುಖ ಹಾಕಿ ಆಟಗಾರರಾಗಿದ್ದರು. 2018ರಲ್ಲಿ ಹಾಕಿ ಇಂಡಿಯಾದ ಪ್ರಾಯೋಜಕತ್ವ ವಹಿಸಿದ್ದ ಸಹರಾ ಸಂಸ್ಥೆ ಅದರಿಂದ ಹಿಂದೆ ಸರಿಯಿತು. ಮತ್ತಾವ ಸಂಸ್ಥೆಯೂ ಪ್ರಾಯೋಜಕತ್ವಕ್ಕೆ ಮುಂದೆ ಬರಲಿಲ್ಲ. ಈ ಸಮಯದಲ್ಲಿ ಒಡಿಸ್ಸಾ ಸರಕಾರ ಭಾರತ ಹಾಕಿ ಸಂಸ್ಥೆಗೆ 100 ಕೋಟಿ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿ ಪ್ರಾಯೋಜಕತ್ವ ವಹಿಸಿಕೊಂಡಿತು. ಹಾಕಿ ಇಂಡಿಯಾ ದೊಂದಿಗಿನ ಒಡಿಸ್ಸಾ ಸರಕಾರದ ಪ್ರಾಯೋಜಕತ್ವದ ಒಪ್ಪಂದ 2023 ರವರೆಗೂ ಮುಂದುವರಿಯಲಿದೆ.
ಇಲ್ಲೂ ಒಂದು ಆಸಕ್ತಿದಾಯಕ ರಾಜಕೀಯ ಸಂಗತಿಯೂ ಇದೆ. 1980ರಲ್ಲಿ ಭಾರತ ಹಾಕಿ ತಂಡ ಚಿನ್ನದ ಪದಕ ಗೆದ್ದಾಗ ಒಡಿಸ್ಸಾದ ಮುಖ್ಯಮಂತ್ರಿ ಆಗಿದ್ದವರು ಜಾನಕಿ ವಲ್ಲಭ ಪಟ್ನಾಯಕ್. ಅವರು ಸುದೀರ್ಘ ಅವಧಿಯ ಒರಿಸ್ಸಾ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದರು. ಇದೀಗ ನವೀನ್ ಪಟ್ನಾಯಕ್ ಆ ದಾಖಲೆಯನ್ನು ಮುರಿದ ಸಂದರ್ಭದಲ್ಲೇ ಭಾರತ ತಂಡ ಒಲಿಂಪಿಕ್ಸ್ ನಲ್ಲಿ ಪದಕ ಸಂಪಾದಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಆನೇಕ ಗಣ್ಯರು ಹಾಕಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.