19.9 C
Karnataka
Sunday, September 22, 2024

    ಖಾತೆಗಾಗಿ ಕಸರತ್ತು; ರಾತ್ರಿ ವೇಳೆಗೆ ಹಂಚಿಕೆ ಸಾಧ್ಯತೆ

    Must read

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ ಸಚಿವರಿಗೆ ಇಂದು ಖಾತೆಗಳನ್ನು ಹಂಚಿಕೆ ಮಾಡಲಿದ್ದಾರೆ. ರಾತ್ರಿಯೊಳಗೆ ಖಾತೆ ಹಂಚಿಕೆ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.

    ವಿಚಿತ್ರವೆಂದರೆ ಸಂಪುಟಕ್ಕೆ ಸೇರಲು ತೀವ್ರ ಒದ್ದಾಟ ನಡೆಸಿ ಕೊನೆಗೂ ಪ್ರಮಾಣ ಸ್ವೀಕಾರ ಮಾಡಿದ್ದ ಸಚಿವರು, ಈಗ ತಮಗೆ ಬೇಕಾದ ಹಾಗೂ ತಮ್ಮ ಹಿತಾಸಕ್ತಿ ಅಡಗಿರುವ ಖಾತೆಗಳನ್ನು ಪಡೆಯಲು ಇನ್ನಿಲ್ಲದ ಪ್ರಭಾವ ಬಳಸುತ್ತಿದ್ದಾರೆ. ಇದನ್ನು ಕಂಡು ಸಿಎಂ ಬೊಮ್ಮಾಯಿ ಅವರಿಗೆ ರೇಜಿಗೆ ಉಂಟಾಗಿದೆ ಎಂದ ಮಾಹಿತಿ ಸಿಕ್ಕಿದೆ.

    ಕೆಲ ಸಚಿವರು ತಮಗೆ ಇಂಥದ್ದೇ ನಿರ್ದಿಷ್ಟ ಖಾತೆ ಬೇಕು ಎಂದು ಪಟ್ಟು ಹಾಕಿದರೆ, ಇನ್ನು ಕೆಲವರು ಯಡಿಯೂರಪ್ಪ ಸಂಪುಟದಲ್ಲಿ ನೀಡಲಾಗಿದ್ದ ಖಾತೆಯನ್ನೇ ನೀಡಿ ಎಂದು ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನು ಕೆಲವರಂತೂ ಹೈಕಮಾಂಡ್‌ ಬಳಿ, ಅದರಲ್ಲೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬಳಿ ಲಾಬಿ ಮಾಡುತ್ತಿದ್ದಾರೆಂದು ಗೊತ್ತಾಗಿದೆ.

    ಸಂಪುಟಕ್ಕೆ ಸೇರುವ ತನಕ ಒಂದು ಲೆಕ್ಕ, ಸಂಪುಟ ಸೇರಿದ ಮೇಲೆ ಇನ್ನೊಂದು ಲೆಕ್ಕ ಎನ್ನುವಂತೆ ಪ್ರಭಾವೀ ಹಾಗೂ ಹೆಚ್ಚು ಅನುದಾನವಿರುವ ಖಾತೆಗಳ ಮೇಲೆ ಕಣ್ಣು ಹಾಕಿರುವ ಸಚಿವರು, ಶತಾಯಗತಾಯ ತಮಗೆ ʼಲಾಭʼ ತಂದುಕೊಡುವ ಖಾತೆಗಳನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ.

    ಮುಖ್ಯವಾಗಿ ಬಿಜೆಪಿಯಲ್ಲಿ ಆರಂಭದಿಂದಲೂ ಸಚಿವರಾಗಿದ್ದವರು ಹಾಗೂ ಅನ್ಯ ಪಕ್ಷಗಳಿಂದ ವಲಸೆ ಬಂದು ಸಚಿವರಾದವರು ಮಹತ್ವದ ಖಾತೆಗಳಿಗೆ ಪಟ್ಟು ಹಿಡಿದಿದ್ದು, ಬೊಮ್ಮಾಯಿ ಅವರು ಇವರೆಲ್ಲರಿಗೂ ʼನೋಡೋಣʼ ಎನ್ನುವ ಒಂದು ಪದದ ಭರವಸೆಯನ್ನಷ್ಟೇ ನೀಡಿದ್ದಾರೆ. ಹೀಗಾಗಿ ಪಟ್ಟಿ ಹೊರಬರುವುದನ್ನೇ ಎಲ್ಲರೂ ನೋಡುತ್ತಿದ್ದಾರೆ.

    ಇದೇ ವೇಳೆ ಖಾತೆಗಳ ಹಂಚಿಕೆ ಬಗ್ಗೆ ಹೈಕಮಾಂಡ್‌ ಕೆಲ ನಿರ್ದಿಷ್ಟ ಸೂಚನೆಗಳನ್ನು ಬೊಮ್ಮಾಯಿ ಅವರಿಗೆ ನೀಡಿದೆ. ಆ ಮಾರ್ಗಸೂಚಿ ಪ್ರಕಾರವೇ ಸಿಎಂ ಖಾತೆಗಳನ್ನು ಹಂಚಿಕೆ ಮಾಡುವುದು ಖಚಿತ.

    ಸಂಘ ಪರಿವಾರದ ನಾಯಕರು ಕೂಡ ಖಾತೆ ಹಂಚಿಕೆಯ ಬಗ್ಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಸಚಿವರ ಒತ್ತಡಕ್ಕೆ ಮಣೆ ಹಾಕುವುದು ಕಡಿಮೆ. ಇದರ ಜತೆಗೆ, ಕೆಲ ಸಚಿವರಂತೂ ಯಡಿಯೂರಪ್ಪ ಅವರ ಮೂಲಕ ಸಿಎಂ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

    ಹೈಪ್ರೊಫೈಲ್‌ ಖಾತೆಗಳು, ಕೆಲ ನೀತಿ ಆಧಾರಿತ ಖಾತೆಗಳನ್ನು ಸಂಘ ಪರಿವಾರದ ಹಿನ್ನೆಲೆಯುಳ್ಳ ಬಿಜೆಪಿ ಮೂಲ ನಿವಾಸಿಗಳಿಗೇ ಕೊಡಬೇಕು ಎನ್ನುವ ಚರ್ಚೆ ನಡೆದಿದೆ.

    ಹೈಪ್ರೊಫೈಲ್‌ ಖಾತೆಗಳು

    ಗೃಹ, ಹಣಕಾಸು, ಜಲಸಂಪನ್ಮೂಲ, ಲೋಕೋಪಯೋಗಿ, ಕೃಷಿ, ಸಹಕಾರ, ಗ್ರಾಮೀಣಾಭಿವೃದ್ಧಿ, ಇಂಧನ, ಬೃಹತ್‌ ಕೈಗಾರಿಕೆ, ನಗರಾಭಿವೃದ್ಧಿ, ಬೃಹತ್‌ ಕೈಗಾರಿಕೆ ಇಲಾಖೆಗಳೆಲ್ಲ ಮೂಲ ಬಿಜೆಪಿಗರ ಪಾಲಾಗಲಿವೆ. ಅಲ್ಲದೆ, ಸಂಘ ಪರಿವಾರದ ಆಸಕ್ತಿ ಇರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಉನ್ನತ ಶಿಕ್ಷಣ, ಸಮಾಜ ಕಲ್ಯಾಣ, ಮುಜರಾಯಿ ಖಾತೆಗಳು ಕೂಡ ಬಿಜೆಪಿ ಮೂಲ ನಿವಾಸಿಗಳಿಗೇ ಕೊಡುವ ಸಾಧ್ಯತೆ ಇದೆ.

    ಉಳಿದಂತೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಉನ್ನತ ಶಿಕ್ಷಣ ಖಾತೆಗಳು ಬಿಜೆಪಿ ಮೂಲದವರಿಗೆ ಕೊಡುವ ಉದ್ದೇಶ ಸಿಎಂ ಅವರಿಗಿದೆ ಎನ್ನಲಾಗಿದೆ.

    ಅಬಕಾರಿ, ಯುವಜನ ಸಬಲೀಕರಣ, ಸಾರ್ವಜನಕ ಸಂಪರ್ಕ, ವಕ್ಫ್‌, ಹಿಂದುಳಿದ ವರ್ಗಗಳ ಕಲ್ಯಾಣ, ಕಾರ್ಮಿಕ, ಜವಳಿ, ರೇಷ್ಮೆ, ತೋಟಗಾರಿಕೆಯಂಥ ಖಾತೆಗಳನ್ನು ವಲಸಿಗರಿಗೆ ನೀಡಲು ಸಿಎಂ ಉದ್ದೇಶಿಸಿದ್ದಾರೆಂಬ ಮಾಹಿತಿ ಸಿಕ್ಕಿದೆ. ಈ ಮಧ್ಯೆ ಪ್ರಭಾವಿ ಖಾತೆಗಳನ್ನು ಪಡೆಯಲು ವಲಸಿಗ ಸಚಿವರು ನಿನ್ನೆಯಿಂದಲೂ ಮುಖ್ಯಮಂತ್ರಿ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾರೆ.

    ಹಳೆಯ ಖಾತೆಗಳ ಮೇಲೆ ವಲಸಿಗರ ಕಣ್ಣು

    ಯಡಿಯೂರಪ್ಪ ಸಂಪುಟದಲ್ಲಿ ಎಸ್‌.ಟಿ.ಸೋಮಶೇಖರ್‌-ಸಹಕಾರ, ಭೈರತಿ ಬಸವರಾಜ್‌-ನಗರಾಭಿವೃದ್ಧಿ (ಬೆಂಗಳೂರು) ಹೊರತುಪಡಿಸಿ, ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ವೈದ್ಯಶಿಕ್ಷಣ, ಬಿಸಿ ಪಾಟೀಲ್-ಕೃಷಿ, ಎಂಟಿಬಿ ನಾಗರಾಜ್‌-ಪೌರಾಡಳಿತ, ಶಿವರಾಮ್‌ ಹೆಬ್ಬಾರ್-ಕಾರ್ಮಿಕ, ರಮೇಶ್‌ ಜಾರಕಿಹೊಳಿ-ಜಲಸಂಪನ್ಮೂಲ (ಇವರು ರಾಜೀನಾಮೆ ನೀಡಿದ್ದರು.), ಆನಂದ ಸಿಂಗ್-ಪ್ರವಾಸೋದ್ಯಮ, ಕೆ.ಗೋಪಾಲಯ್ಯ-ಅಬಕಾರಿ, ನಾರಾಯಣ ಗೌಡ-ಯುವಜನ ಸಬಲೀಕರಣ ಖಾತೆಗಳನ್ನು ಹೊಂದಿದ್ದರು. ಈ ಸಂಪುಟದಲ್ಲಿಯೂ ಮುಖ್ಯವಾಗಿ ಸೋಮಶೇಖರ್‌, ಭೈರತಿ ಬಸವರಾಜ್‌, ಡಾ.ಸುಧಾಕರ್‌, ಬಿಸಿ ಪಾಟೀಲ್‌ ಅದೇ ಖಾತೆಗಳನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆನ್ನಲಾಗಿದೆ.

    ಬೆಂಗಳೂರು ಅಭಿವೃದ್ಧಿ ಬೇಕೆಂದ ಅಶೋಕ್

    ಹಿಂದೆ ಕಂದಾಯ, ಅದಕ್ಕೂ ಹಿಂದೆ ಗೃಹ ಖಾತೆಗಳನ್ನು ನಿರ್ವಹಿಸಿದ್ದ ಹಿರಿಯ ಸಚಿವ ಆರ್.‌ಅಶೋಕ್‌, ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕೆಂದು ಪಟ್ಟು ಹಿಡಿದ್ದಾರೆ. ಆದರೆ, ಸಂಘ ಪರಿವಾರ ಈ ಖಾತೆಯನ್ನು ಡಾ.ಅಶ್ವತ್ಥನಾರಾಯಣ ಅವರಿಗೆ ನೀಡಿ ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದೆ ಎನ್ನಲಾಗಿದೆ. ಆದರೆ, ಯಡಿಯೂರಪ್ಪ ಅವರೂ ಅಶೋಕ್‌ಗೆ ಬೆಂಗಳೂರು ನಗರಾಭಿವೃದ್ಧಿ ಕೊಡುವಂತೆ ಒತ್ತಡ ಹೇರಿದ್ದಾರೆನ್ನಲಾಗಿದೆ. ಆದರೆ, ಅಂತಿಮವಾಗಿ ಬೊಮ್ಮಾಯಿ ಅವರು ಸಂಘ ಪರಿವಾರ ಅಥವಾ ಯಡಿಯೂರಪ್ಪ ಇಬ್ಬರಲ್ಲಿ ಯಾರ ಮಾತು ಕೇಳುತ್ತಾರೆ ಎನ್ನುವದನ್ನು ಕಾದು ನೋಡಬೇಕಿದೆ.

    ಉಳಿದಂತೆ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಕೇಳಿದ್ದು, ಅದು ತಪ್ಪಿದರೆ ಇಂಧನ ಕೊಡಿ, ಅದೂ ಬಿಟ್ಟರೆ ಜಲಸಂಪನ್ಮೂಲ ಕೊಡಿ ಎಂದು ಕೇಳಿದ್ದಾರೆಂದು ಗೊತ್ತಾಗಿದೆ.

    ಚನ್ನಕೃಷ್ಣ ಪಿ ಕೆ
    ಚನ್ನಕೃಷ್ಣ ಪಿ ಕೆhttps://cknewsnow.com/
    ಸಿಕೆ ನ್ಯೂಸ್ ನೌ.ಕಾಮ್ ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!