BENGALURU AUG 7
ನೂತನ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ, ಐಟ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಹುನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2021-22ನೇ ಸಾಲಿನಿಂದಲೇ ಜಾರಿ ಮಾಡುವ ಆದೇಶಕ್ಕೆ ಸಹಿ ಹಾಕಿದರು.
ಇದು ದೇಶದಲ್ಲೇ ಕರ್ನಾಟಕ ರಾಜ್ಯವು ಮೊದಲನೆಯದಾಗಿ ಅನುಷ್ಠಾನಗೊಳಿಸುತ್ತಿರುವುದಾಗಿದೆ.
ತಮ್ಮ ಗೃಹ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಮುಂತಾದ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಈ ಆದೇಶಕ್ಕೆ ಅಸ್ತು ಎಂದರು.
ಅಲ್ಲದೆ, ಮಲ್ಲೇಶ್ವರದ 13ನೇ ಕ್ರಾಸ್‌ನಲ್ಲಿರುವ ಪಿಯುಸಿ ಕಾಲೇಜು ಆವರಣದಲ್ಲಿ ನೂತನ ಮಹಿಳಾ ಪದವಿ ಕಾಲೇಜು ಆರಂಭಿಸುವ ಮತ್ತೊಂದು ಆದೇಶಕ್ಕೂ ಡಾ.ಅಶ್ವತ್ಥನಾರಾಯಣ ಸಹಿ ಹಾಕಿದರು.
ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಅವರು, “ಉನ್ನತ ಶಿಕ್ಷಣ ಕೇತ್ರದಲ್ಲಿ ಈ ಹಿಂದೆ ಕೈಗೊಳ್ಳಲಾಗಿದ್ದ ಎಲ್ಲ ಸುಧಾರಣಾ ಕ್ರಮಗಳು ಮುಂದುವರಿಯುತ್ತವೆ ಹಾಗೂ ವೇಗವಾಗಿ ಅನುಷ್ಠಾನಕ್ಕೆ ಬರುತ್ತಿವೆ. ಅದರಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆದೇಶ ಹೊರಡಿಸಲಾಗಿದೆ” ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಅವುಗಳ ಬಗ್ಗೆ ಡಾ.ಅಶ್ವತ್ಥನಾರಾಯಣ ಅವರು ವಿವರಿಸಿದ್ದು ಹೀಗೆ;
ಪ್ರಸಕ್ತ ವರ್ಷಕ್ಕೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಿ.ಎ. ಅಥವಾ ಬಿ.ಎಸ್ಸಿ ಪದವಿ ಅಧ್ಯಯನಕ್ಕೆ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಎರಡು ವಿಷಯಗಳನ್ನು (Discipline Core) ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೂರನೇ ವರ್ಷದ ಆರಂಭದಲ್ಲಿ ಒಂದು ವಿಷಯವನ್ನು ಮೇಜರ್ ಆಗಿಯೂ, ಇನ್ನೊಂದು ವಿಷಯವನ್ನು ಮೈನರ್ ವಿಷಯವನ್ನಾಗಿಯೂ ಅಥವಾ ಎರಡೂ ವಿಷಯಗಳನ್ನು ಮೇಜರ್ ಆಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲು ಅವಕಾಶವಿದೆ.
ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಎರಡು ವಿಷಯಗಳ (Discipline Core) ಜತೆಗೆ, ಕನ್ನಡ ಮತ್ತು ಇನ್ನೊಂದು ಭಾಷಾ ವಿಷಯವನ್ನು, ಪ್ರೋಗ್ರಾಮ್ ವಿನ್ಯಾಸಕ್ಕೆ (Curriculum Structure) ಅನುಗುಣವಾಗಿ ಮುಕ್ತ ಆಯ್ಕೆಗಳು (Open Electives) ಮತ್ತು ಬಹುಶಿಸ್ತೀಯ ಆಯ್ಕೆಗಳನ್ನು (Discipline Electives) ಮಾಡಿಕೊಳ್ಳಬೇಕು. ಪಿಯುಸಿ ಅಥವಾ 10+2 ಹಂತದಲ್ಲಿ ಕನ್ನಡ ಕಲಿಯದವರಿಗೆ ಅಥವಾ ಕನ್ನಡ ಮಾತೃ ಭಾಷೆಯಲ್ಲದವರಿಗೆ ಕನ್ನಡದ ಬೇರೆ ಪಠ್ಯಕ್ರಮ ರೂಪಿಸಿ ಬೋಧಿಸಲು ಅವಕಾಶ ನೀಡಲಾಗಿದ್ದು, ಮಾತೃಭಾಷೆ ಕಲಿಕೆಗೆ ಹೆಚ್ಚು ಮಹತ್ವ ನೀಡಲಾಗಿದೆ.
ವಿಷಯಾಧಾರಿತ ಪದವಿ ಅಧ್ಯಯನಗಳಿಗೆ (B.Com, BCA, BBA, BVA, BPA, etc.) ಸಂಬಂಧಪಟ್ಟ ಹಾಗೆ ವಿಷಯಗಳನ್ನು ಬಹಶಿಸ್ತೀಯ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ, ಅವರು ಕನ್ನಡ ಹಾಗೂ ಮತ್ತೊಂದು ಭಾಷೆ ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ಮುಕ್ತ ಆಯ್ಕೆಗಳನ್ನು ಮತ್ತು ಬಹಶಿಸ್ತೀಯ ಆಯ್ಕೆಗಳನ್ನು ಮಾಡಿಕೊಳ್ಳಬೇಕು.
ವಿದ್ಯಾರ್ಥಿಯು ಪ್ರಥಮ ವರ್ಷದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 5ನೇ ಹಂತದ (National Skills Qualifications Framework Level 5) ನಿಗಧಿತ ಪಠ್ಯವನ್ನು ಅಧ್ಯಯನ ಮಾಡಿ, ಅವಶ್ಯಕ ಅಂಕಗಳನ್ನು ಗಳಿಸಿ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಿದರೆ ಪ್ರಮಾಣ ಪತ್ರವನ್ನು ನೀಡಬೇಕು.
ವಿದ್ಯಾರ್ಥಿಯು ಎರಡನೇ ವರ್ಷದ ಅಧ್ಯಯನವನ್ನು ಮುಂದುವರೆಸಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 6ನೇ ಹಂತದ (National Skills Qualifications Framework Level 6) ನಿಗಧಿತ ಪಠ್ಯವನ್ನು ಅಧ್ಯಯನ ಮಾಡಿ ಅವಶ್ಯಕ ಅಂಕಗಳನ್ನು ಗಳಿಸಿ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಿದರೆ ಡಿಪ್ಲೋಮಾ ನೀಡಬೇಕು.
ವಿದ್ಯಾರ್ಥಿಯು ಮೂರನೇ ವರ್ಷದ ಅಧ್ಯಯನವನ್ನು ಮುಂದುವರೆಸಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 3ನೇ ಹಂತದ (National Skills Qualifications Framework Level 7) ನಿಗದಿತ ಪಠ್ಯವನ್ನು ಅಧ್ಯಯನ ಮಾಡಿ ಅವಶ್ಯಕ ಅಂಕಗಳನ್ನು ಗಳಿಸಿದರೆ ಪದವಿ ನೀಡುವುದು.
ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ ನಾಲ್ಕನೇ ವರ್ಷದ ಅಧ್ಯಯನ ಲಭ್ಯವಿದ್ದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 8ನೇ ಹಂತದ (National Skills Qualifications Framework Level 8) ಅವರು ಆಯ್ಕೆ ಮಾಡಿದ ಐಚ್ಛಿಕ ವಿಷಯಗಳ ಅಧ್ಯಯನ ಮುಂದುವರೆಸಿ ಅಧ್ಯಯನ ಪೂರ್ಣಗೊಳಿಸಿದರೆ ಸ್ನಾತಕ ಹಾನರ್ಸ್ ಪದವಿ ನೀಡಲಾಗುವುದು. ನಾಲ್ಕನೇ ವರ್ಷದಲ್ಲಿ ಸಂಶೋಧನೆಯು ಅಧ್ಯಯನದ ಭಾಗವಾದರೆ, ಅಂತಹ ಸ್ನಾತಕ ಹಾನರ್ಸ್ ಪದವೀಧರರು ನೇರವಾಗಿ ಡಾಕ್ಟರೇಟ್ (Ph.D) ಪದವಿ ಅಧ್ಯಯನಕ್ಕೆ ಸೇರಲು ಅರ್ಹರು.
ಒಂದು ವೇಳೆ ವಿದ್ಯಾರ್ಥಿಯು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ ಸ್ನಾತಕ ಹಾನರ್ಸ್ ಪದವಿ ತರಗತಿ ಲಭ್ಯವಿಲ್ಲದಿದ್ದರೆ, ವಿದ್ಯಾರ್ಥಿಯು ನಾಲ್ಕನೇ ವರ್ಷದ ಸ್ನಾತಕ ಹಾನರ್ಸ್ ಪದವಿಗೆ ಬೇರೊಂದು ಮಹಾವಿದ್ಯಾಲಯ ಸೇರಲು ಅವಕಾಶವಿದೆ.(ಈ ಕೆಳಗಿರುವ ಸರ್ಕಾರದ ಆದೇಶ ಪ್ರತಿಯನ್ನು ಸ್ಕ್ರಾಲ್ ಮಾಡಿ ಓದಿ)
ಮಲ್ಲೇಶ್ವರದಲ್ಲಿ ಮಹಿಳಾ ಪದವಿ ಕಾಲೇಜು
ಮಲ್ಲೇಶ್ವರದ 13ನೇ ಕ್ರಾಸ್‌ನಲ್ಲಿರುವ ಬಾಲಕಿಯರ ಪಿಯುಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಹೊಸ ಪದವಿ ಕಾಲೇಜು ಆರಂಭಕ್ಕೂ ಇಂದೇ ಆದೇಶ ಹೊರಡಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಇಲ್ಲದೆಯೇ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಆಗಿರುವುದರಿಂದ ಹೆಚ್ಚು ಪದವಿ ಕಾಲೇಜುಗಳ ಅಗತ್ಯವಿದೆ. ಹೀಗಾಗಿ ಮಲ್ಲೇಶ್ವರದಲ್ಲಿ ಹೊಸ ಡಿಗ್ರಿ ಕಾಲೇಜು ಆರಂಭಕ್ಕೆ ಕ್ರಮ ವಹಿಸಲಾಗಿದೆ ಎಂದರು ಅವರು.
ಈ ಕಾಲೇಜನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಅಡಿಯಲ್ಲಿ ಆರಂಭಿಸಲಾಗುತ್ತಿದ್ದು, ಅಲ್ಲಿನ ಪಿಯುಸಿ ಕಾಲೇಜಿನಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿನಿಯರಿಗೆ ಅದೇ ಕ್ಯಾಂಪಸ್‌ನಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಅನುಕೂಲವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
Great job by govt for the help to farmers family to provide a good education