BENGALURU AUG 7
ಜಾಗತಿಕವಾಗಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಅತೀ ವೇಗವಾಗಿ ಮುನ್ನುಗ್ಗುತ್ತಿರುವ ಬೆಂಗಳೂರು ನಗರದ ಸಂಚಾರ ದಟ್ಟಣೆಯ ಪರಿಣಾಮಕಾರಿ ಪರಿಹಾರಕ್ಕೆ ನಮ್ಮ ಮೆಟ್ರೋ ಅತ್ಯಂತ ಸಹಕಾರಿಯಾಗಲಿದ್ದು, 2025 ರೊಳಗಾಗಿ ಮೆಟ್ರೋ 2, 2A ಮತ್ತು 2B ಹಂತಗಳು ಬೆಂಗಳೂರು ನಾಗರಿಕರ ಉಪಯೋಗಕ್ಕೆ ಹಾಗೂ ಸಂಪೂರ್ಣ ಕಾರ್ಯಾಚರಣೆಗೆ ಸಿದ್ಧವಾಗಲಿವೆ ಎಂದು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ತಿಳಿಸಿದರು.
ಡೈರಿ ಸರ್ಕಲ್ ಬಳಿಯ ಟನಲ್ ಬೋರಿಂಗ್ ಮಷಿನ್ ಕಾಮಗಾರಿಯನ್ನು ಮೆಟ್ರೋ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಸಂಸದರು, ನಿಗದಿತ ಕಾಲಮಿತಿಗಿಂತಲೂ ಮುಂಚಿತವಾಗಿ ಮೆಟ್ರೋ ಕಾಮಗಾರಿ ಮುಗಿಯುವ ಕುರಿತು ವಿವರಿಸಿದರು.
“ಬೆಂಗಳೂರು ನಗರ ಸ್ಟಾರ್ಟ್ ಅಪ್ ಗಳ ತವರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅವಿಷ್ಕಾರಹಾಗೂ ಇತರ ಕ್ಷೇತ್ರಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿದ್ದು ಜಾಗತಿಕ ಪ್ರಾಮುಖ್ಯತೆ ಹೊಂದಿರುವ ನಗರವಾಗಿದೆ. ನಗರದ ಸಂಚಾರ ದಟ್ಟಣೆಗೆ ಪರಿಹಾರವಾಗುವ ನಿಟ್ಟಿನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯು ವೇಗವಾಗಿ ನಡೆಯುತ್ತಿರುವುದು ಅಭಿನಂಧನಾರ್ಹ. ಪ್ರಸ್ತುತ 56ಕಿಮೀ ಇರುವ ಮೆಟ್ರೋ ಮಾರ್ಗವು 2025ರೊಳಗಾಗಿ 175 ಕಿಮೀ ವರೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದ್ದು, ಇದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಮಟ್ಟದಲ್ಲಿ ಸಹಕಾರಿಯಾಗಲಿದೆ.
ಜಯದೇವ & ಸಿಲ್ಕ್ ಬೋರ್ಡ್ ನಿಲ್ದಾಣಗಳು ಡಬಲ್ ಎಲಿವೆಟೆಡ್ ಸ್ಟೇಷನ್ ಗಳಾಗಿರಲಿವೆ ಎಂದರು.
ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಮೆಟ್ರೋ ಅಧಿಕಾರಿಗಳು Comprehensive Mobility Plan ಅನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವುದು ಶ್ಲಾಘನೀಯ.
ಕಾಮಗಾರಿಗೆ ಅಗತ್ಯವಿರುವ ಶೇ. 99 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವುದಕ್ಕೆ ನೂತನ ಭೂಸ್ವಾಧೀನ ನೀತಿಯಲ್ಲಿ ತಂದಿರುವ ಬದಲಾವಣೆಗಳು ಕೂಡ ಕಾರಣವಾಗಿವೆ” ಎಂದು ತೇಜಸ್ವೀ ಸೂರ್ಯ ರವರು ವಿವರಿಸಿದರು.
ಸೆಪ್ಟೆಂಬರ್ 2021 ರೊಳಗಾಗಿ ಕೇಂದ್ರ ಸರ್ಕಾರದ ‘ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್’ ಅನ್ನು ಮೆಟ್ರೋ ಸೇವೆಗಳಿಗೂ ಅಳವಡಿಸಲು ತೀರ್ಮಾನಿಸಿದ್ದು, ಈ ಕಾರ್ಡ್ ಅನ್ವಯ ದೇಶಾದ್ಯಂತ ಎಲ್ಲ ವಿಧದ ಸಾರಿಗೆ ಪ್ರಾಕಾರಗಳಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ತಿಳಿಸಿದರು.
ಸಧ್ಯದಲ್ಲೇ ಸಾರಿಗೆ ಸಚಿವರಾದ ಶ್ರೀ ರಾಮುಲು ರೊಂದಿಗೆ ಚರ್ಚಿಸಿ, ನಗರದ ಆಂತರಿಕ (ಒಳ) ಪ್ರದೇಶಗಳಿಂದ, ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಗಳನ್ನು ಇನ್ನಷ್ಟು ಹೆಚ್ಚಿಸಿ, ಅತಿ ಹೆಚ್ಚು ಜನರು ಮೆಟ್ರೋ ಬಳಸುವ ನಿಟ್ಟಿನಲ್ಲಿ ಸಹಕಾರ ಒದಗಿಸುವಂತೆ ಕೋರಲಾಗುವುದು ಎಂದು ಸಂಸದರು ತಿಳಿಸಿದರು.
ಮೆಟ್ರೋ ಕಾಮಗಾರಿಯ ಸಂದರ್ಭದಲ್ಲಿ ಸ್ಥಳಾಂತರಗೊಂಡಿರುವ ಮರಗಳ ಪರಿಹಾರವಾಗಿ 10 ಸಾವಿರಕ್ಕೂ ಅಧಿಕ ಮರಗಳನ್ನು ನೆಡಲು ನಮ್ಮ ಮೆಟ್ರೋ ಮುಂದೆಬಂದಿದ್ದು, ಸಾರ್ವಜನಿಕರನ್ನು ಸಹ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಂಸದರು ವಿವರಿಸಿದರು.