ಬಳಕೂರು ವಿ ಎಸ್ ನಾಯಕ
ಕಲಾವಿದನ ಕಲಾ ಭಾಷೆಗೆ ಗಡಿಯಿಲ್ಲ. ತನ್ನ ಮನಸ್ಸಿನಲ್ಲಿ ಪುಟಿದೆದ್ದ ಭಾವನೆಗಳನ್ನು ಚಿತ್ರ ಚಿತ್ತಾರಗಳಲ್ಲಿ ಭಿನ್ನವಾಗಿ ಬಿಂಬಿಸಿ ಎಲ್ಲರ ಮನಸೂರೆಗೊಳ್ಳುವಂತೆ ಮಾಡುತ್ತಾನೆ. ಅವನ ಕುಂಚದಲ್ಲಿ ಅರಳಿರುವ ವಿಭಿನ್ನಬಗೆಯ ಕಲಾಕೃತಿಗಳು ಪ್ರತಿಯೊಬ್ಬರನ್ನು ಒಂದು ಕ್ಷಣ ಭಾವಪರವಶರನ್ನಾಗಿ ಸುತ್ತದೆ. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳ ಗುಚ್ಛವನ್ನು ನೀಡಿದ ನಮ್ಮ ನಾಡಿನ ಪ್ರಖ್ಯಾತ ಕಲಾವಿದರಲ್ಲಿ ಒಬ್ಬರು ಬಿ. ಜಯರಾಮ್.
ಇವರು ಮೊದಲಿನಿಂದಲೂ ಹೊಸತನ ಹೊಸ ವಿಷಯಗಳ ಅನ್ವೇಷಣೆಯಲ್ಲಿ ಇರುತ್ತಾರೆ. ಇಂತಹ ವಿಭಿನ್ನ ಕಲಾಕೃತಿಗಳ ರಚಿಸುವುದರ ಮೂಲಕ ಜನಮಾನಸವನ್ನು ಗೆದ್ದಿದ್ದಾರೆ. ಇದೀಗ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹೆಣ್ಣು ಮತ್ತು ಬೆಕ್ಕು ಎಂಬ ಶೀರ್ಷಿಕೆಯ ಅಡಿಯಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ.
ಇವರು ರಚಿಸಿರುವ ರೇಖಾಚಿತ್ರಗಳು ವರ್ಣಚಿತ್ರಗಳು ನಿಜವಾಗಿಯೂ ಕೂಡ ಪ್ರತಿಯೊಬ್ಬರ ಮನಸ್ಸನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯವಾಗಿ ಇವರ ಕಲಾಕೃತಿಗಳಲ್ಲಿ ಪ್ರಪ್ರಥಮವಾಗಿ ತಾಮ್ರದ ಉಬ್ಬು ಫಲಕಗಳ ಮೂಲಕ ವಿಭಿನ್ನ ರೀತಿಯ ಕಲಾಕೃತಿಗಳ ರಚಿಸಿರುವುದು ಎಲ್ಲರ ಗಮನ ಸೆಳೆಯುತ್ತದೆ.
ಈ ಕಲಾಕೃತಿಗಳಲ್ಲಿ ವಿದೇಶಿಯರ ಪ್ರಾಣಿ-ಪ್ರೀತಿಯ ವಿಶಿಷ್ಟ ಗ್ರಹಿಕೆಗಳು ಇಲ್ಲಿ ಅದ್ಭುತವಾಗಿ ಅಭಿವ್ಯಕ್ತಿಗೊಂಡಿದೆ. ಹೆಣ್ಣು ಮತ್ತು ಬೆಕ್ಕು ಶೀರ್ಷಿಕೆಯ ಬಹುತೇಕ ಅಭಿವ್ಯಕ್ತಿಗಳು ಹೊರದೇಶಗಳಲ್ಲಿ ಹೆಣ್ಣು ಮತ್ತು ಬೆಕ್ಕುಗಳು ಪರಸ್ಪರ ಸಹಬಾಳ್ವೆಯನ್ನು ಸಾಧಿಸಿರುವುದು ಸಂಕೇತದಂತೆ ತಾಮ್ರದ ಫಲಕವನ್ನು ಪೂರಕವಾಗಿಸಿ ಕೊಂಡಿದೆ. ಇವರ ರೇಖಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ ಅದ್ಭುತವಾದ ವಿಚಾರಧಾರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಕಲಾವಿದರು ಯಶಸ್ವಿಯಾಗಿದ್ದಾರೆ.
ಸಾಮಾನ್ಯ ಕಾಗದದಲ್ಲಿ ಇಂಕ್ ಪೆನ್ ಮೂಲಕವಾಗಿ ರಚಿಸಿರುವ ರೇಖಾಚಿತ್ರಗಳು ವಿಶೇಷ ಸಂದೇಶವನ್ನು ಕಲಾ ನೈಪುಣ್ಯತೆಯನ್ನು ತಿಳಿಸುತ್ತವೆ. ಬಿ. ಜಯರಾಮ್ ಅವರು ಕಲಾ ಗುರು ಎನ್ ಆರ್ ಹಡಪದ್ ಅವರ ಕೆನ್ ಕಲಾಶಾಲೆಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ರಾಜ್ಯ ಹಾಗೂ ಅಂತಾರಾಜ್ಯಮಟ್ಟದಲ್ಲಿ ಚಿತ್ರಕಲಾ ಶಿಬಿರಕ್ಕೆ23 ಬಾರಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಹಲವಾರು ಪ್ರಶಸ್ತಿಗಳು ಸಂದಿವೆ.
ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಪ್ರಶಸ್ತಿ.ಲಲಿತಕಲಾ ಅಕಾಡೆಮಿ ಪ್ರಶಸ್ತಿ.ಮೈಸೂರು ದಸರಾ ಮತ್ತು ಕ್ಯಾಮಲಿನ್ ಪ್ರಶಸ್ತಿ. ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2018 ರಲ್ಲಿ ಬೆಂಗಳೂರು ಫೌಂಡೇಶನ್ ವತಿಯಿಂದ ಬಿ ಜಯರಾಮ್ ಸಮಕಾಲೀನ ದೃಶ್ಯಕಲೆಯ ಸಾಕ್ಷಿಪ್ರಜ್ಞೆ ಪ್ರಕಟಿಸಿದ್ದ ಈ ಪುಸ್ತಕಕ್ಕೆ2018 ನೇ ಸಾಲಿನ ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಸೊಬಗು ವಿಭಾಗದಲ್ಲಿ ಮೊದಲನೆಯ ಬಹುಮಾನ ಬಂದಿದೆ. ಇವರ ಕಲಾ ಸೇವೆ ಹೀಗೆ ಮುಂದುವರಿಯಲಿ. ಇವರು ರಚಿಸಿದ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬೇಕಾದರೆ ಬೆಂಗಳೂರಿನ ಕುಮಾರಕೃಪ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾಗ್ಯಾಲರಿಗೆ ತಪ್ಪದೇ ಭೇಟಿ ನೀಡಿ. ಪ್ರದರ್ಶನ ಆಗಸ್ಟ್ 11ರವರೆಗೆ ತೆರೆದಿರುತ್ತದೆ. ಸಮಯ ಬೆಳಿಗ್ಗೆ 11ರಿಂದ ಸಂಜೆ 7
ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.
ಬಹಳ ಕ್ರಿಯಾತ್ಮಕತೆಯಿಂದ ಕೂಡಿದ ಛಾಯಾಚಿತ್ರ ಪ್ರದರ್ಶನ ಅಭಿನಂದನೆಗಳು ನಮ್ಮ ಶಾಲೆಯಲ್ಲಿ ಓದುವಾಗ ನಮಗೆ ಚಿತ್ರಕಲೆಯ ಉಪಾಧ್ಯಾಯರಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಜಯರಾಮ ಸರ್ ಅವರ ಪ್ರತಿಭೆಗೆ ಕ್ರಿಯಾತ್ಮಕತೆಗೆ ಸಾಕ್ಷಿ ಈ ಪ್ರದರ್ಶನ