BENGALURU AUG 10
ಕನ್ನಡ ಸಿನಿಮಾ ಚಿತ್ರೀಕರಣದಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಅಪಾಯಕಾರಿ ದೃಶ್ಯಗಳನ್ನು ಚಿತ್ರೀಕರಣ ಮಾಡಿ, ಸಾವು-ನೋವಿಗೆ ಕಾರಣವಾಗುತ್ತಿರುವುದನ್ನು ತಪ್ಪಿಸಲು ಕಠಿಣ ನಿಯಮ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ಹೇಳಿದ್ದಾರೆ.
ʼಲವ್ ಯೂ ರಚ್ಚುʼ ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಎಂಬ ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಅವರು, ಪದೇಪದೆ ಇಂತಹ ಘಟನೆಗಳು ನಡೆಯುತ್ತಿರುವುದು ದುರಂತ. ಈ ಘಟನೆ ನೋವು ತಂದಿದೆ ಎಂದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರೀಕರಣದ ವೇಳೆ ಕೆಲವರು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಅನೇಕ ಅವಘಡಗಳು ಮತ್ತೆ ಮತ್ತೆ ಸಂಭವಿಸುತ್ತಿವೆ. ಹಾಗಾಗಿ ಚಿತ್ರೀಕರಣದ ವೇಳೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದರು.
ಒದೆರಡು ದಿನಗಳಲ್ಲಿ ಕಠಿಣ ನಿಯಮಗಳ ಬಗ್ಗೆ ಆದೇಶ ಹೊರಡಿಸಲಾಗುವುದು. ಇನ್ನು ಮುಂದೆ ಶೂಟಿಂಗ್ ವೇಳೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಸಂಬಂಧಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮನರಂಜನಾ ಮಾಧ್ಯಮದಲ್ಲಿ ಇಂಥ ಅಪಶೃತಿಗಳಿಗೆ ಅವಕಾಶ ಇರಬಾರದು. ಚಿತ್ರೀಕರಣಕ್ಕೆ ಮುನ್ನ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಅಪಾಯಕಾರಿ ಸನ್ನಿವೇಶಗಳನ್ನು ಚಿತ್ರಿಸುವ ಮುನ್ನ ಎಲ್ಲ ಕ್ರಮಗಳನ್ನು ಪಾಲಿಸಿ, ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯಬೇಕೆಂದು ಅವರು ತಿಳಿಸಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದ ಗೃಹ ಸಚಿವರು
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಮನಗರ ಎಸ್‌ಪಿ ಅವರು ಈಗಾಗಲೇ ಎಲ್ಲ ಮಾಹಿತಿ ನೀಡಿದ್ದಾರೆ.
ಈ ಘಟನೆ ನಡೆಯಬಾರದಾಗಿತ್ತು. ಈ ಹಿಂದೆ ʼಮಾಸ್ತಿಗುಡಿʼ ಸಿನಿಮಾ ಚಿತ್ರೀಕರಣದ ವೇಳೆ ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡುವ ವೇಳೆ ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ ಇಬ್ಬರು ಸಾಹಸ ಕಲಾವಿದರು (ಉದಯ್ ಮತ್ತು ಅನಿಲ್) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅದಾದ ಮೇಲೆ ಇನ್ನೊಂದು ಸಿನಿಮಾ ಸೆಟ್‌ನಲ್ಲಿ ಸ್ಫೋಟಕವೂ ಉಂಟಾಗಿತ್ತು. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಏನಿದು ಘಟನೆ?
ಬಿಡದಿ ಬಳಿ ನಡೆಯುತ್ತಿದ್ದ ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ಸೋಮವಾರ ವಿದ್ಯುತ್ ತಂತಿ ಸ್ಪರ್ಶಿಸಿ 28 ವರ್ಷದ ಫೈಟರ್ ವಿವೇಕ್ ಮೃತಪಟ್ಟಿದ್ದರು.
ಈ ಘಟನೆ ಸಂಬಂಧ ಬಿಡದಿ ಪೊಲೀಸರು ನಿರ್ದೇಶಕ ಶಂಕರಯ್ಯ, ನಿರ್ಮಾಪಕ ಗುರು ದೇಶಪಾಂಡೆ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್, ಕ್ರೇನ್ ಆಪರೇಟರ್ ಮಹದೇವ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.