23.7 C
Karnataka
Saturday, April 5, 2025

    ಶ್ರೀ ಇಭರಾಮಪುರ ಅಪ್ಪಾವರು

    Must read


    ಆಗಸ್ಟ್ 11, ಬುಧವಾರ ಶ್ರೀ ಇಭರಾಮಪುರ ಅಪ್ಪಾವರ 1789 -1869 ಆರಾಧನೆಯ ಪ್ರಯುಕ್ತ ಈ ಲೇಖನ.


    ವಿಷ್ಣುತೀರ್ಥಚಾರ್ಯ

    ಪುಣ್ಯ ಭರತ ಭೂಮಿಯಲ್ಲಿ ಹಲವು ದಾರ್ಶನಿಕರು , ಜ್ಞಾನಿಗಳು ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ್ದಾರೆ. ಆಚಾರ್ಯತ್ರೈಯರಲ್ಲಿ ಒಬ್ಬರಾದ ದ್ವೈತ ಸಿದ್ಧಾಂತದ ಪ್ರತಿಷ್ಠಾಪನಾಚಾರ್ಯರಾದ ಜಗದ್ಗುರು ಮಧ್ವಾಚಾರ್ಯರ ನೇರ ಪರಂಪರೆಯಲ್ಲಿ ಬಂದ ಶ್ರೀ ವಿಜಯೀಂದ್ರತೀರ್ಥರ ಕರಕಮಲ ಸಂಜಾತರಾಜ ಶ್ರೀ ಸುಧೀಂದ್ರತೀರ್ಥರ ವರಕುಮಾರರಾದ ಕಲಿಯುಗ ಕಲ್ಪತರು ಕಾಮಧೇನು ಶ್ರೀರಾಘವೇಂದ್ರ ಗುರುಸಾರ್ವಭೌಮರ ಕಾರ್ಯಕ್ಷೇತ್ರವಾದ ಮಂತ್ರಿಸಿದ್ಧಿ ಕ್ಷೇತ್ರ ಮಂತ್ರಾಲಯ. ಈ ಮಂತ್ರಾಲಯದ ಹತ್ತಿರದ ಪುಟ್ಟ ಗ್ರಾಮ ಇಭರಾಮಪುರ. ಗ್ರಾಮಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ.

    ಶ್ರೀರಾಮಚಂದ್ರ ದೇವರು ಅಂಬಾರಿಯಲ್ಲಿ ಬಂದು ಸ್ವಲ್ಪ ಕಾಲ ವಿಶ್ರಾಂತಿಸಿದ ಸ್ಥಳವೆಂದು ಸ್ಥಳ ಪುರಾಣ ಹೇಳುತ್ತದೆ. ಈ ಗ್ರಾಮದಲ್ಲಿ ಸದಾಚಾರ ಸಂಪನ್ನರಾದ ಅಹೋಬಲಾಚಾರ್ಯ ಮತ್ತು ಸಾಧ್ವಿ ಕೃಷ್ಣಾಬಾಯಿ ದಂಪತಿಗಳು ನೆಲಸಿದ್ದರು. ಅಹೋಬಲಾಚಾರ್ಯರಿಗೆ ಬಹುವರ್ಷದಿಂದ ಸಂತಾನವಿರಲಿಲ್ಲ. ಕುಲಗುರುಗಳಾದ ಶ್ರೀರಾಘವೇಂದ್ರ ಸ್ವಾಮಿಗಳು ಹಾಗೂ ಕುಲ ಸ್ವಾಮಿಯಾದ ತಿರುಪತಿಯ ಶ್ರೀನಿವಾಸನ ವಿಶೇಷ ಅನುಗ್ರಹದಿಂದ 1789 ವಿಜಯದಶಮಿಯಂದು ಸಂತಾನ ಪ್ರಾಪ್ತಿಯಾಗಿ ಆ ಮಗುವಿಗೆ ಕೃಷ್ಣಾಚಾರ್ಯವೆಂದು ನಾಮಕರಣ ಮಾಡಿದರು.

    ಚಿಕ್ಕವಯಸ್ಸಿನಲ್ಲೇ ಅಪಾರವಾದ ಪ್ರೌಢತೆಯನ್ನು ತೋರಿಸಿ ಮೆರೆದ ಜನರಿಗೆ ಆಶ್ಚರ್ಯವನ್ನುಂಟು ಮಾಡುತಿದ್ದರು. ಕೃಷ್ಣಚಾರ್ಯರು ಮಲಗಿದ್ದ ತೊಟ್ಟಿಲು ತಾನಾಗಿಯೇ ತೂಗುತ್ತಿತ್ತು. ತಾಯಿ ಪುರಾಣ / ಪ್ರವಚನಕ್ಕೆ ಕರೆದುಕೊಂಡು ಹೋದಕಡೆ ಪುರಾಣದಲ್ಲಿ ಸಜ್ಜನರಿಗೆ ತೊಂದರೆಯಾದ ಪ್ರಸಂಗ ಬಂದರೆ ಕೂಸು ಬಿಕ್ಕಿಬಿಕ್ಕಿ ಅಳುತ್ತಿತು. ದುರ್ಜನರಿಗೆ ಭಾವಂತ ಶಿಕ್ಷೆಯನ್ನು ಕೊಟ್ಟ ಪ್ರಸಂಗ ಬಂದರೆ ಕೇಕೆ ಹಾಕಿ ನಗುವುದನ್ನು ಕಂಡು ಜನರಿಗೆ ಆಶ್ಚರ್ಯವಾಗುತ್ತಿತು.

    ಅಹೋಬಲಾಚಾರ್ಯರು ಮಗನಿಗೆ 7ನೆ ವಯಸ್ಸಿನಲ್ಲೇ ಉಪನಯನ ಮಾಡುತ್ತಾರೆ. ಅಪ್ಪಾವರ ಉಪನಯನ ನಂತರ ಶಾಸ್ತ್ರದ ಅಭ್ಯಾಸ ತಮ್ಮಲ್ಲಿಯೇ ಮಾಡಿಸಬೇಕೆಂಬ ಆಸೆ, ಆದರೆ ಚಿಕ್ಕ ವಯಸ್ಸಿನಲ್ಲೇ ದೇವರ , ವೇದ ಶಾಸ್ತ್ರದ ಮೇಲೆ ಅಷ್ಟು ಆಸಕ್ತಿಯನ್ನು ಹೊಂದಿದ ಕೃಷ್ಣಾಚಾರ್ಯರು ಉಪನಯನ ಆದಮೇಲೆ ಯಾವ ಆಸಕ್ತಿಯನ್ನು ತೋರುತ್ತಿರಲಿಲ್ಲ.ಈ ಮನಃಸ್ಥಿತಿಯಲ್ಲಿ ಕೃಷ್ಣಾಚಾರ್ಯರನ್ನು ನೋಡಿ ಅಹೋಬಲಾಚಾರ್ಯರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಒಂದು ದಿವಸ ಮಗನಿಗೆ ಅಹೋಬಲಾಚಾರ್ಯರು ಕೋಪದಿಂದ ಬೈದು ಬುದ್ಧಿ ಹೇಳುತ್ತಾರೆ. ಮನನೊಂದ ಕೃಷ್ಣಾಚಾರ್ಯರು ಮನೆಬಿಟ್ಟು ಅಳುತ್ತಾ ಊರಿನ ಹತ್ತಿರದ ಕಾಡಿನಲ್ಲಿ ಕುಳಿತಿರುತ್ತಾರೆ.

    ಅಶ್ವಥಾಮಾಚಾರ್ಯರಿಂದ ಅನುಗ್ರಹ :

    ಮರದ ಕೆಳಗಡೆ ಕುಳಿತು ಕೃಷ್ಣಾಚಾರ್ಯರು ಅಳುವುದನ್ನು ನೋಡಿದ ಮಹಾ ತಪಸ್ವಿತರಹ ಇದ್ದ ಒಬ್ಬ ವೃದ್ಧ ಬ್ರಾಹ್ಮಣ ಕೃಷ್ಣಾಚಾರ್ಯರನ್ನು ವಿಚಾರಿಸಿ ಅವರ ನಾಲಿಗೆಯ ಮೇಲೆ ಬೀಜಾಕ್ಷರಗಳನ್ನು ಬರೆದು ನಿನ್ನ ಜೀವ ಸ್ವರೂಪವೇ ಬೇರೆ ನಿನ್ನ ಅವತಾರ ನಿನಗೆ ಅರಿವು ಆಗುತ್ತೆ ಹಾಗೂ ಮಂತ್ರಾಲಯದ ಗುರುಸಾರ್ವಭೌಮರಲ್ಲಿ ವಿಶೇಷ ಅನುಗ್ರಹ ಆಗುತ್ತೆ ಅಂತ ಹೇಳಿ ತಾವು ಅಶ್ವಥಾಮಾಚಾರ್ಯರೆಂದು ಬೀಜಾಕ್ಷರಗಳು ಬರೆಯೋ ಮುಂಚೆ ಹೇಳಿಕೊಂಡು ಅದೃಶ್ಯರಾಗುತ್ತಾರೆ.

    ಅಶ್ವಥಾಮಾಚಾರ್ಯರ ಈ ವಿಶೇಷ ಅನುಗ್ರಹದಿಂದ ಕೃಷ್ಣಾಚಾರ್ಯರು ತಮ್ಮ ಸ್ವರೂಪವನ್ನು ಅರಿತು ಅಪರೋಕ್ಷವನ್ನು ಹೊಂದಿ ಜನರ ಬಾಯಿಯಲ್ಲಿ ಅಪ್ಪ ಅಪ್ಪ ಎಂದು ಕರೆಸಿಕೊಂಡು ಕೃಷ್ಣಾಚಾರ್ಯರು ಅಪ್ಪಾವರೆಂದು ಪ್ರಸಿದ್ಧಿ ಹೊಂದುತ್ತಾರೆ.

    ಶ್ರೀ ರಾಘವೇಂದ್ರ ಚಿತ್ತಜ್ಞಂ :

    ಶ್ರೀ ಅಪ್ಪಾವರಿಗೆ ಶ್ರೀ ಮಂತ್ರಾಲಯ ಪ್ರಭುಗಳ ಮೇಲೆ ಅಪರಿಮಿತವಾದ ಭಕ್ತಿ. ಶ್ರೀ ರಾಯರು ಸಹ ಶ್ರೀ ಅಪ್ಪಾವರ ಮೇಲೆ ಅತ್ಯಂತ ಅಂತಃಕರಣ – ಪ್ರೀತಿ – ಮಾತೃವಾತ್ಸಲ್ಯ ತೋರುತ್ತಿದ್ದರು. ಇವರಿಬ್ಬರ ಸಂಬಂಧ ಹಸು – ಕರುವಿನ ಸಂಬಂಧ.ಶ್ರೀ ರಾಯರು ಸಹ ಶ್ರೀ ಅಪ್ಪಾವರ ವಿಷಯದಲ್ಲಿ ಅತ್ಯಂತ ಪ್ರಸನ್ನರಾಗಿದ್ದರು.ಶ್ರೀ ರಾಯರು ನಡೆಸುವ ಸಕಲ ವ್ಯಾಪಾರವೂ ಶ್ರೀ ಅಪ್ಪಾವರಿಗೆ ಮೊದಲೇ ತಿಳಿದಿರುತ್ತಿತ್ತು.

    ಶ್ರೀ ರಾಘವೇಂದ್ರ ಚಿತ್ತಜ್ಞಂ ಸಾರಮಾತ್ರ ವದಾವದಂ ।
    ದೂರೀಕೃತ ದುರಾಚಾರಂ ಕೃಷ್ಣಾಚಾರ್ಯ ಗುರುಂಭಜೇ ।।
    ಅಗಮ್ಯ ಮಹಿಮರೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಸಾಮರ್ಥ್ಯ ಉಳ್ಳವರಾದರಿಂದ ” ಶ್ರೀ ರಾಘವೇಂದ್ರ ಚಿತ್ತಜ್ಞಂ ” ಎಂದು ಹೆಸರು ಪಡೆದರು

    ಶ್ರೀ ಅಪ್ಪಾವರಿಗೆ ಪಂಚಮುಖಿ ಪ್ರಾಣದೇವರ ಪ್ರಾಪ್ತಿ :

    ಮೈಸೂರಿನಲ್ಲಿ ತಮ್ಮ ಮಿತ ಪರಿವಾರದೊಡನೆ ಶ್ರೀ ಅಪ್ಪಾವರು ಶ್ರೀ ಮನ್ಮಹಾರಾಜರ ಅರಮನೆಯ ಸಮೀಪದಲ್ಲಿಯೇ ಒಂದು ಚಿಕ್ಕ ಮನೆಯಲ್ಲಿ (ಈಗಿನ ಕಟ್ಟೆ ಮನೆ) ಬಿಡಾರ ಮಾಡಿದರು. ಈ ವಾರ್ತೆ ಗ್ರಾಮದಲ್ಲಿರುತ್ತಿದ್ದ ಸಮೀಪವರ್ತಿಗಳಿಗೆ ಮಾತ್ರವಲ್ಲದೆ ಅರಮನೆಯವರೆಲ್ಲರಿಗೂ ಮುಮ್ಮಡಿ ಕೃಷ್ಣರಾಜ ಒಡೆಯರಿಗೂ ತಲುಪಿತ್ತು.

    ಇದಾದ ಎಂಟು ದಿನಕ್ಕೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ಇದ್ದಕ್ಕಿದ್ದ ಹಾಗೆ ಪಾದಚಾರಿಗಳಾಗಿ ಶ್ರೀ ಅಪ್ಪಾವರ ಸಂದರ್ಶನಕ್ಕೆ ಹೊರಡುವುದಾಗಿ ನಿಶ್ಚಯಮಾಡಿಕೊಂಡು ಕೇವಲ ಶ್ರೀ ಮನ್ಮಹಾರಾಣಿಯವರಿಗೆ ಮಾತ್ರವೇ ಈ ವಾರ್ತೆಯನ್ನು ತಿಳಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀ ಅಪ್ಪಾವರನ್ನು ಸಂದರ್ಶನ ಮಾಡಲು ಅವರು ತಂಗಿದ್ದ ಕಟ್ಟೆ ಮನೆಗೆ ಮಾರು ವೇಷದಲ್ಲಿ ಪಾದಚಾರಿಗಳಾಗಿ ಬಂದರು.

    ಶ್ರೀ ಅಪಾವರು ಧ್ಯಾನದಲ್ಲಿರುವ ಸಂಗತಿಯನ್ನು ತಿಳಿದು ಅಲ್ಲಿಯೇ ಹೊರಗೆ ಇದ್ದ ಕಟ್ಟೆ ಮೇಲೆ ಕುಳಿತು ಕಾಯುತ್ತಿದ್ದರು. ಅದನ್ನು ಗ್ರಹಣ ಮಾಡಿದ ಶ್ರೀ ಅಪ್ಪಾವರು ತಮ್ಮ ಶಿಷ್ಯರನ್ನು ಕರೆದು “ ಹೊರಗಡೆ ಮಹಾರಾಜರು ಮಾರುವೇಷದಲ್ಲಿ ಬಂದು ಕಾಯುತ್ತಾ ಕುಳಿತಿದ್ದಾರೆ, ಹೋಗಿ ಅವರನ್ನು ರಾಜ ಮರ್ಯಾದೆಯಿಂದ ಬರಮಾಡಿಕೊಂಡು ಬನ್ನಿ “ ಎಂದು ಆಜ್ಞಾಪಿಸಿದರು. ಗುರುಗಳ ಆಜ್ಞೆಯಂತೆ ಮಹಾರಾಜರನ್ನು ಬರಮಾಡಿಕೊಂಡರು. ಕೇವಲ ಮಹಾರಾಣಿಯವರಿಗೆ ಮಾತ್ರ ತಿಳಿದ ಈ ವಿಷಯವು ಶ್ರೀ ಅಪ್ಪಾವರ ಜ್ಞಾನ ದೃಷ್ಟಿಗೆ ತಿಳಿದ ಸಂಗತಿಯನ್ನು ಕಂಡು ಮಹಾರಾಜರಿಗೆ ಆಶ್ಚರ್ಯದ ಜೊತೆ ಸಂತೋಷವೂ ಆಯಿತು.ಶ್ರೀ ಅಪ್ಪಾವರ ದರ್ಶನದಿಂದ ಮನಃಸಂತೋಷಭರಿತರಾದ ಮಹಾರಾಜರು ಅವರ ಪಾದಾರವಿಂದಗಳಿಗೆ ಶಿರಃಸಾಷ್ಟಾಂಗ ನಮಸ್ಕರಿಸಿದರು.

    ನಂತರ ಈರ್ವರ ನಡುವೆಯೂ ಸಂದರ್ಶನ ಪ್ರಾರಂಭವಾಯಿತು. ಹೀಗೇ ಸಂದರ್ಶನ ನಡೆಯುತ್ತಿರುವಾಗ ಮಹಾರಾಜರು ಶ್ರೀ ಅಪ್ಪಾವರಲ್ಲಿ ಸ್ವಾಮೀ !! ಬಹಳ ದಿನಗಳಿಂದ ನನ್ನ ಮನದಲ್ಲಿ ಒಂದು ಪ್ರಶ್ನೆ ಕಾಡುತ್ತಿದೆ, ತಾವು ನನ್ನ ಮೇಲೆ ದಯತೋರಿ ಅದನ್ನು ಪರಿಹರಿಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸಿದರು. ಶ್ರೀ ಅಪ್ಪಾವರು ಏನೆಂದು ವಿಚಾರಿಸಿದಾಗ ಮಹಾರಾಜರು, ಸ್ವಾಮೀ !! “ ನಾನು ಪ್ರಸ್ತುತ ಜನ್ಮದಲ್ಲಿ ಇಂತಹ ಒಂದು ರಾಜ ವೈಭೋಗವನ್ನು ಅನುಭವಿಸಬೇಕಾದರೆ, ಪೂರ್ವ ಜನ್ಮದ ಸುಕೃತದ ಫಲವೇ ಆಗಿರಬೇಕು. ದಯಮಾಡಿ ಅದರ ವೃತ್ತಾಂತವನ್ನು ತಿಳಿಸಿಕೊಡಿ” ಎಂದು ಮನವರಿಕೆ ಮಾಡಿಕೊಂಡರು. ಆಗ ಅಪ್ಪಾವರು ಮುಗುಳ್ನಗೆ ಬೀರುತ್ತಾ ಮಹಾರಾಜರ ಪೂರ್ವ ಜನ್ಮದ ವೃತ್ತಾಂತವನ್ನು ಈ ರೀತಿ ತಿಳಿಸುತ್ತಾರೆ.

    ಮಹಾರಾಜರು ತಮ್ಮ ಪೂರ್ವ ಜನ್ಮದಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನಾದ ಶ್ರೀ ವೆಂಕಟೇಶ್ವರಸ್ವಾಮಿ ಸನ್ನಿಧಾನ (ತಿರುಮಲೆ) ದಲ್ಲಿ ಕಾರ್ಯರೂಪಕ ಸೇವೆಯನ್ನು ಸಲ್ಲಿಸುತ್ತಿದ್ದರು. ಸ್ವಾಮಿಯ ಅಲಂಕಾರಕ್ಕೆ ಬೇಕಾದ ಹೂವು – ತುಳಸಿಯ ವ್ಯವಸ್ಥೆ ಹಾಗೂ ನಂತರದ ನಿರ್ಮಾಲ್ಯ ವಿಸರ್ಜನೆ (ಸರೋವರದಲ್ಲಿ) ಯು ಅವರ ಕಾರ್ಯಧರ್ಮವಾಗಿತ್ತು. ನಿತ್ಯವೂ ಇದೇ ಸೇವೆಯಲ್ಲಿ ನಿರತರಾದ ಆಚಾರ್ಯರು, ಒಂದು ದಿನ ನಿರ್ಮಾಲ್ಯ ವಿಸರ್ಜನೆಗೆಂದು ಸರೋವರಕ್ಕೆ ಬಂದಾಗ ತಂದ ನಿರ್ಮಾಲ್ಯದಲ್ಲಿ ಶ್ರೀನಿವಾಸ ದೇವರ ಅಪರೂಪವಾದ ರಾಜಮುದ್ರಿಕೆ ಕಂಡುಬಂತು. ಸ್ವಾಮಿಯ ಮೂರ್ತಿ ದರ್ಶನದ ತೇಜಸ್ಸಿಗೇ ಮಿತಿಯಿಲ್ಲವಾದರೆ ಇನ್ನು ಸಾಕ್ಷಾತ್ ಅವನು ಧರಿಸಿದ ರಾಜಮುದ್ರಿಕೆಯ ಅಪೂರ್ವವಾದ ತೇಜಸ್ಸು ಆಚಾರ್ಯರನ್ನು ಅನಂತ ಆಕರ್ಷಿಸಿ ಅದನ್ನು ಧರಿಸುವಂತೆ ಮನೋಪ್ರೇರಿತವಾಯಿತು. ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನಾದ ಸ್ವಾಮಿಯ ಆಭರಣವನ್ನು ಸಾಮಾನ್ಯ ಮಾನವರಾದ ನಾವು ಅಪೇಕ್ಷಿಸುವುದೇ ತಪ್ಪು, ಅದರಲ್ಲಿಯೂ ಧರಿಸಿದ್ದು ಸರಿಯಾಗಲಾರದು ಎಂದು ತಿಳಿದು ಮತ್ತೆ ಅದನ್ನು ಸ್ವಾಮಿಯ ಸನ್ನಿಧಾನದಲ್ಲಿ ಅರ್ಪಣೆ ಮಾಡಿದರು. ಅಂದು ನೀವು ಸ್ವಾಮಿಯ ರಾಜಮುದ್ರಿಕೆಯನ್ನು ಕ್ಷಣ ಮಾತ್ರ ಧರಿಸಿದ ಕಾರಣ ಪ್ರಸ್ತುತ ಜನ್ಮದಲ್ಲಿ ಅನುಗ್ರಹ ಪೂರ್ವಕ ರಾಜವೈಭೋಗವು ಲಭ್ಯವಾಗಿದೆ ಎಂದು ತಿಳಿಸಿದರು.

    ಇದನ್ನು ಕೇಳಿ ಆನಂದ ಭರಿತರಾದ ಮಹಾರಾಜರು ಸ್ವಾಮೀ !! ಪೂರ್ವ ಜನ್ಮದ ವೃತ್ತಾಂತವನ್ನು ಹೇಳಿ ಮಹದಾನುಗ್ರಹ ಮಾಡಿದ್ದೀರಿ. ತಮ್ಮಲ್ಲಿ ನಾವೇನಾದರೂ ಸಮರ್ಪಿಸಿಕೊಳ್ಳಬೇಕು ಎಂದು ಮನಃ ಸಂತೋಷಭರಿತರಾಗಿ ಪ್ರಾರ್ಥಿಸಿದರು. ಆಗ ಶ್ರೀ ಅಪ್ಪಾವರು ಅರಮನೆಯ ಈಶಾನ್ಯ ಭಾಗವನ್ನು ಖನನ ಮಾಡಿ ಆ ಭೂ ಗೃಹದಲ್ಲಿ ಇರುವ ವಸ್ತುವೊಂದನ್ನು ತಮಗೆ ಕೊಡುವುದಾಗಿ ವಿವರಣೆ ಮಾಡಿದರು.
    ಭೂ ಖನನ ಮಾಡಿದ ಮೇಲೆ ಅಲ್ಲಿ ಕಂಡು ಬಂದ ಬಹಳ ಅಪರೂಪವಾದ, ಅದ್ಭುತವಾದ ಹಾಗೂ ನಯನ ಮನೋಹರವಾದ ಶ್ರೀ ಪಂಚಮುಖಿ ಪ್ರಾಣದೇವರ ತೇಜೋಮಯವಾದ ವಿಗ್ರಹವನ್ನು ಕಂಡು ಮಹಾರಾಜರಿಗೆ ಅನಂತ ಸಂತೋಷದ ಜೊತೆಗೆ ಮನದಲ್ಲಿ ಪ್ರಶ್ನೆಯೂ ಉದ್ಭವವಾಯಿತು. ಇಂತಹ ಅದ್ಭುತವಾದ ಮೂರ್ತಿಯು ನಮ್ಮ ಅರಮನೆಯಲ್ಲಿ ಹೇಗೆ ಬಂದಿತು, ಇದರ ಮಹಿಮೆಯನ್ನು ತಿಳಿಸಿಕೊಡಿ ಎಂದು ಶ್ರೀ ಅಪ್ಪಾವರಲ್ಲಿ ಪ್ರಾರ್ಥಿಸಿದರು.

    ಆಗ ಶ್ರೀ ಅಪ್ಪಾವರು ಈ ರೀತಿ ವಿವರಣೆ ಮಾಡುತ್ತಾರೆ. “ಮಹಾಭಾರತದಲ್ಲಿ ಪಾಂಡವರು ರಾಜಸೂಯ ಮಹಾಯಾಗವನ್ನು ನಿರ್ವಹಿಸುವ ಸಂದರ್ಭದಲ್ಲಿ ದೇವಶಿಲ್ಪಿಯಾದ ವಿಶ್ವಕರ್ಮನನ್ನು ಕರೆಯಿಸಿ ಈ ಅಭೂತಪೂರ್ವವಾದ ವಿಗ್ರಹವನ್ನು ನಿರ್ಮಿಸಿದರು. ವಿಶೇಷ ಪೂಜೆ ಉಪಾಸನೆಯೊಂದಿಗೆ ಪರಮಾತ್ಮನ ಉಪಸ್ಥಿತಿಯಲ್ಲಿ ಮಹಾಯಾಗವು ನಿರ್ವಿಘ್ನವಾಗಿ ಜರುಗಿತು. ಕಾಲಾನಂತರ 12 ವರ್ಷ ವನವಾಸವಾಯಿತು. ಇನ್ನು 13ನೇ ವರ್ಷದ ಅಜ್ಞಾತವಾಸದಲ್ಲಿ ಪೂಜೆ, ಉಪಾಸನೆ ಬಹಳ ಕಷ್ಟವಾಯಿತು (ಶ್ರೀ ಪಂಚಮುಖಿ ಪ್ರಾಣದೇವರ ವಿಗ್ರಹವು ಜೊತೆಗಿದ್ದರೆ ಅವರು ಪಾಂಡವರೆಂದು ಗುರುತಿಸಲ್ಪಡುತ್ತಾರೆ, ಹಾಗಾದ ಪಕ್ಷದಲ್ಲಿ ಮತ್ತೆ 12 ವರ್ಷ ವನವಾಸ 1 ವರ್ಷ ಅಜ್ಞಾತವಾಸ ಮಾಡಬೇಕಾಗಿತ್ತು). ಇಂತಹ ಸಂದರ್ಭದಲ್ಲಿ ಈ ಅಭೂತಪೂರ್ವವಾದ ವಿಗ್ರಹವನ್ನು ಭೂ ಗರ್ಭದಲ್ಲಿ ಭದ್ರ ಮಾಡಿದರು (ಭೂ ಗರ್ಭದಲ್ಲಿದ್ದರೆ ಅದರ ಸನ್ನಿಧಾನ ಮತ್ತು ಅದರಲ್ಲಿಯ ವಿಶೇಷ ಶಕ್ತಿ ಯುಗಾಂತರದಲ್ಲಿಯೂ ಹಾಗೆಯೇ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ). “ ಕಾಲಕ್ರಮೇಣ ಕುರುಕ್ಷೇತ್ರವಾಯಿತು, ಯುಗಗಳು ಕಳೆದವು, ಅರಮನೆ ನಿರ್ಮಾಣವಾಯಿತು ಹಾಗೂ ಈ ಕಾರಣವಾಗಿಯೇ ತಾವು ಹರಿಪ್ರೇರಣೆಯಂತೆ ಆಗಮಿಸಿರುವುದಾಗಿಯೂ ತಿಳಿಸಿದರು. ಇದನ್ನು ಕೇಳಿ ಆನಂದಭರಿತರಾದ ಮಹಾರಾಜರು ಸಕಲ ವೈಭವದೊಂದಿಗೆ ಉತ್ಸವ, ರಾಜಮರ್ಯಾದೆ ಪೂರಕವಾಗಿ ಈ ಅಭೂತಪೂರ್ವವಾದ ವಿಗ್ರಹವನ್ನು ಶ್ರೀ ಅಪ್ಪಾವರಲ್ಲಿ ಸಮರ್ಪಣೆ ಮಾಡಿದರು.

    ಇದರ ಗುರುತಾಗಿ ರಾಜಾಲಯದಲ್ಲಿಯೇ ಶ್ರೀ ಮಂತ್ರಾಲಯ ಪ್ರಭುಗಳ ಮೃತ್ತಿಕಾ ವೃಂದಾವನವನ್ನು ಸ್ಥಾಪಿಸಿದರು. ನಂತರ ಶ್ರೀ ಅಪ್ಪಾವರು ಪಂಚಮುಖಿ ಪ್ರಾಣದೇವರನ್ನು ತಮ್ಮ ಸ್ವಸ್ಥಾನವಾದ ಇಭರಾಮಪುರಕ್ಕೆ ತೆಗೆದುಕೊಂಡು ಬಂದು ವಿಶೇಷ ಉಪಾಸನೆಯೊಂದಿಗೆ ಬಂದ ಭಕ್ತರಿಗೆಲ್ಲಾ ಅನುಗ್ರಹ ಮಾಡುತ್ತಾ ಮತ್ತಷ್ಟು ವಿಜೃಂಭಿಸತೊಡಗಿದರು. ಪರಮಾತ್ಮನ ಅನುಗ್ರಹಕ್ಕೆ ಮಿತಿಯೇ ಇಲ್ಲವೆಂಬ ಹಾಗೆ ಮಹಾರಾಜರಿಗೆ ಪ್ರಸ್ತುತ ಜನ್ಮದಲ್ಲಿ ಅಪರೂಪವಾದ ರಾಜ ವೈಭೋಗವು ದೊರಕಿದ್ದು ಒಂದು ಕಡೆ ಆದರೆ, ಇನ್ನು ಶ್ರೀ ಅಪ್ಪಾವರು ಕೇವಲ ಪೂರ್ವ ಜನ್ಮದ ವೃತ್ತಾಂತ ಮಾತ್ರವಲ್ಲದೇ ಹಿಂದಿನ ಏಳು ಜನ್ಮದ ವೃತ್ತಾಂತವನ್ನು ಹೇಳುತ್ತಿದ್ದರು.

    ಗುರು ಜಗನ್ನಾಥದಾಸರಿಗೆ ಅನುಗ್ರಹ:

    ಶ್ರೀ ವೆಂಕಟಗಿರಿ ಆಚಾರ್ಯರು ಮತ್ತು ಶ್ರೀ ಇಭರಾಮಪುರದ ಅಪ್ಪಾವರು ಸ್ನೇಹಿತರು. ಇಬ್ಬರು ಒಬ್ಬರಿಗೊಬ್ಬರು ಅಣ್ಣ ತಮ್ಮನ ಹಾಗೆ ಆತ್ಮೀಯ ಸಂಬಂಧ. ಶ್ರೀ ವೆಂಕಟಗಿರಿ ಆಚಾರ್ಯರು ಒಂದು ಸಂದರ್ಭದಲ್ಲಿ ಇಭರಾಮಪುರಕೆ ಬಂದಿರುತ್ತಾರೆ. ಬಂದ ಸಂದರ್ಭದಲ್ಲಿ ಅಪ್ಪಾವರು ಪ್ರಾಣದೇವರ ಪೂಜೆಯಲ್ಲಿ ನಿರತರಾಗಿರುತ್ತಾರೆ, ಆಚಾರ್ಯರು ನೊಂದ ಮನಸ್ಸಿನಿಂದ ಅಪ್ಪಾವರಲ್ಲಿ ಪ್ರಾರ್ಥನೆ ಮಾಡುತ್ತಾರೆ, ಅಣ್ಣಾ ಎಲ್ಲರಿಗೂ ಅನುಗ್ರಹ ಮಾಡ್ತೀಯ, ನನಗೆ ಸಂತಾನ ಇಲ್ಲ ಅಂತ ಬೇಡಿಕೊಂಡಾಗ ಅಪ್ಪಾವರು ತಮ್ಮ ಉಪಾಸ್ಯಮೂರ್ತಿಯಾದ ಪಂಚಮುಖಿ ಮುಖ್ಯ ಪ್ರಾಣದೇವರಿಗೆ ಅಭಿಷೇಕ ಮಾಡಿದ ಮುತ್ತು ಕೊಡುತ್ತಾ “ವೆಂಕಟಗಿರಿ ನಿನಗೆ ಮುತ್ತಿನಂತಹ ಮಗ ಹುಟ್ಟುತ್ತಾನೆ ಅಂತ ಆಶೀರ್ವಾದ ಮಾಡುತ್ತಾರೆ. ಅಪ್ಪಾವರ ಆಶೀರ್ವಾದದಿಂದ ಗಂಡುಮಗು ಜನನವಾಗಿ ಸ್ವಾಮಿರಾಯ ಅಂತ ನಾಮಕರ್ಣ ಮಾಡುತ್ತಾರೆ. ಶ್ರೀ ಸ್ವಾಮಿರಾಯಾಚಾರ್ಯರೇ ಮುಂದೆ ಶ್ರೀ ಗುರುಜಗನ್ನಾಥದಾಸರು ಅಂತ ಜಗನ್ಮಾನ್ಯರಾದರು.

    ಸ್ವಪ್ನದಲ್ಲಿ ಪಾಠ :

    ಶ್ರೀ ಸ್ವಾಮಿರಾಯ (ಶ್ರೀ ಗುರು ಜಗನ್ನಾಥದಾಸರು) ಶ್ರೀಹರಿಯ ಕೃಪೆಗೆ ಗುರುವೇ ಕಾರಣ. ಅತಿರೋಹಿತ ವಿಮಲವಿಜ್ಞಾನಿಗಳಾದ ವಾಯು ದೇವರ ಮೊರೆ ಹೋಗಬೇಕೆಂದು ನಿಶ್ಚಯಸಿದರು.

    ಸ್ವಗ್ರಾಮ ಕೌತಾಳ ಹತ್ತಿರವಾದ ಬುಡಮಲ ದೊಡ್ಡಿಯೆಂಬ ಪವಿತ್ರ ಕ್ಷೇತ್ರ ಸಾಧನೆಗೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಯಾರಿಗೂ ಹೇಳದೆ ಪ್ರಯಾಣ ಬೆಳೆಸುತ್ತಾರೆ. ಆ ಕ್ಷೇತ್ರದಲ್ಲಿಯ ವಾಯು ದೇವರ ಸೇವೆ ಆರಂಭಿಸುತ್ತಾರೆ. ಶ್ರೀ ಸ್ವಾಮಿರಾಯರ ಸೇವೆ ಸ್ವೀಕರಿಸಿದ ಮುಖ್ಯಪ್ರಾಣದೇವರು ಸ್ವಪ್ನದಲ್ಲಿ ನಾಲಿಗೆಯಮೇಲೆ ಬೀಜಾಕ್ಷರ ಬರೆದು ಸ್ವಗ್ರಾಮಕ್ಕೆ ತೆರೆಳು ನಿನಗೆ ಉಪದೇಶ ಆಗುತ್ತೆ ಎಂದು ಅನುಗ್ರಹಿಸುತ್ತಾರೆ.
    ವಾಯುದೇವರ ಆಜ್ಞೆಯಂತೆ ಸ್ವಗ್ರಾಮಗೆ ತೆರುಳುತ್ತಾರೆ. ರೂಢಿನಾಮ ಸಂವತ್ಸರ ಶ್ರಾವಣ ಶುದ್ಧ ಮಹಾಲಕ್ಷ್ಮಿಯ ದಿನದಂದು ಸ್ವಪ್ನದಲ್ಲಿ ಶ್ರೀ ಅಪ್ಪಾವರು ಹಾಗು ರಾಘವೇಂದ್ರತೀರ್ಥ ಗುರುಸಾರ್ವಭೌಮರು ಗುರು ಉಪದೇಶ ಕೊಡುತ್ತಾರೆ. ನಂತರ ಶ್ರೀ ಸ್ವಾಮಿರಾಯರು ಮುಂದೆ ಗುರುಜಗನ್ನಾಥದಾಸರು ಎಂದು ಜಗನ್ಮಾನ್ಯರಾಗುತ್ತಾರೆ.

    ಶ್ರೀ ಗುರುಜಗನ್ನಾಥದಾಸರು ದಾಸಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. “ತೂಗಿರೆ ರಾಯರ ತೂಗಿರೆ ಗುರುಗಳ” ಕೃತಿ ದಾಸರ ಪ್ರಸಿದ್ದವಾದ ರಚನೆ. ದಾಸರು ಕೆಲವು ಕನ್ನಡವಲ್ಲದೆ ಸಂಸ್ಕೃತ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ.

    ಭವಿಷ್ಯ ವಾಣಿ :
    ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ಪಂಚಮುಖಿ ಮುಖ್ಯಪ್ರಾಣ ಆರಾಧಕರು. ನಿರಂತರ ಶ್ರೀಮಾನ್ ನ್ಯಾಯಸುಧಾ ಪರಿಮಳ ಗ್ರಂಥದ ಪಾರಾಯಣದಿಂದ ಅವರು ನುಡಿದ ಪ್ರತಿಯೊಂದು ಮಾತೂ ಸತ್ಯವಾಗುತ್ತಿತ್ತು.

    ಶ್ರೀ ಗಣೇಶಾಚಾರ್ಯರು ಮಂತ್ರಾಲಯ ಅಪ್ಪಾವರ ಕಾಲದಲ್ಲಿ ಇದ್ದ ಮಹಾ ಪಂಡಿತರು. ಅಪ್ಪಾವರು ಶ್ರೀ ರಾಯರ ದರ್ಶನಕೆಂದು ಬಂದಿರುತ್ತಾರೆ. ಅಪ್ಪಾವರನ್ನು ಕಂಡು ದೀರ್ಘ ದಂಡ ನಮಸ್ಕಾರ ಮಾಡಿದರು ಗಣೇಶಾಚಾರ್ಯರು. ನಮಸ್ಕಾರ ಮಾಡಿದ ಮೇಲೆ ಅಪ್ಪಾವರು ಅವರಿಗೆ ಇದು ನೀನು ನನಗೆ ಮಾಡುವ ಕೊನೆಯ ನಮಸ್ಕಾರ ನಾಳೆಯಿಂದ ನಾನು ನಿನಗೆ ಮಾಡುತ್ತೇನೆ ಅಂತ ಮಾರ್ಮಿಕವಾಗಿ ಆಚಾರ್ಯರಿಗೆ ಹೇಳುತ್ತಾರೆ.

    ಮರುದಿನದ ಸಾಯಂಕಾಲ ಸಮಯಕ್ಕೆ ಶ್ರೀಮಠದಿಂದ ಗಣೇಶಾಚಾರ್ಯರಿಗೆ ಈಗಲೇ ನಂಜನಗೂಡುಗೆ ಹೊರಡ ಬೇಕು ಶ್ರೀ ಸುಜ್ಞಾನೇಂದ್ರ ತೀರ್ಥರಿಗೆ ದೇಹ ಆಲಸ್ಯವಾಗುತ್ತಿದೆ ಅವರು ಮುಂದಿನ ಜವಾಬ್ದಾರಿ ನಿಮಗೆ ವಹಿಸಿದ್ದಾರೆ ಎಂದು ಹೇಳಿದ ತಕ್ಷಣ ನಂಜನಗೂಡುಗೆ ಪ್ರಯಾಣ ಬೆಳಸಿ ಮುಂದೆ ಅವರೇ ಪರಮಹಂಸ ಪೀಠದಲ್ಲಿ ವಿರಾಜಾಮಾನರಾಗಿ ಶ್ರೀ ಸುಧರ್ಮೇಂದ್ರತೀರ್ಥರೆಂದು ಜಗನ್ಮಾನ್ಯರಾದರು.

    ಶ್ರೀ ಬೇಲೂರು ಕೇಶವ ದಾಸರಿಗೆ ಅನುಗ್ರಹ :
    ಶ್ರೀ ಅಪ್ಪಾವರು ಸಂಚಾರತ್ವೇನ ಉಡುಪಿಯಾತ್ರೆ ಹೋಗಿರುತ್ತಾರೆ. ಶ್ರೀ ಮಧ್ವಾಚಾರ್ಯರ ಜನ್ಮಭೂಮಿಯಾದ ಪಾಜಕ ಕ್ಷೇತ್ರ ದರ್ಶನಮಾಡಿ ನಂತರದಲ್ಲಿ ಪರಶುರಾಮ ದೇವರು ಪ್ರತಿಷ್ಠಿತ ಕುಂಜಾರು ಗಿರಿ ಶ್ರೀದುರ್ಗಾ ದೇವಿಯ ದರ್ಶನಕ್ಕೆ ಬಂದಿರುತ್ತಾರೆ.

    ಅಲ್ಲಿ ಶ್ರೀವೆಂಕಟೇಶದಾಸರೆಂಬುವರು ತಮ್ಮ ಪತ್ನಿ ತಿಮ್ಮವ್ವನವರ ಜೊತೆಯಲ್ಲಿ ದುರ್ಗಾದೇವಿಯ ಸೇವೆ ಮಾಡಲು ಬಂದಿರುತ್ತಾರೆ. ತಿಮ್ಮವ್ವನವರು ತಮ್ಮ ಗಂಡನಿಗೆ ಇರುವ ವ್ಯಾಧಿಯ ನಿವಾರಣೆಗೆ ಹಲವು ದಿವಸದಿಂದ ಸೇವೆ ಸಲ್ಲಿಸುತ್ತಿದ್ದರು.

    ಒಂದು ದಿನ ಶ್ರೀ ವೆಂಕಟೇಶದಾಸರ ಪತ್ನಿ ತಿಮ್ಮವ್ವನವರು ಸೇವೆ ಮುಗಿಸಿಕೊಂಡು ದೇವಿಯ ದರ್ಶನ ಪಡೆದಮೇಲೆ ಅಲ್ಲಿಯ ದೇವಸ್ಥಾನದ ಅರ್ಚಕರು ಪ್ರಸಾದ ಕೊಟ್ಟರು. ಪ್ರಸಾದದಲ್ಲಿ ಅಂಗಾರ ಮತ್ತು ತುಳಸಿ ಇರುವ ಕಾಯಿ ಬಟ್ಟಲು ಬಂತು. ಅರ್ಚಕರು ಕೊಟ್ಟ ಆ ಪ್ರಸಾದವನ್ನು ನೋಡಿ ಅದರಲ್ಲಿ ಇದ್ದ ಅಂಗಾರ ಮತ್ತು ತುಳಸಿಯನ್ನು ನೋಡಿ ಅಶುಭಸೂಚಕವೆಂದು ಬಹುದುಃಖದಿಂದ ಅಳ್ಳುತ್ತಾ ಕಣ್ಣೀರು ಹಾಕುತ್ತಿದಳು.ಕಣ್ಣೀರು ಇಡುತ್ತಿದ್ದ ತಿಮ್ಮವ್ವನವರನ್ನು ನೋಡಿ ಅಲ್ಲಿಯೇ ಇದ್ದ ಅಪ್ಪಾವರು , ಬೇಸರ ಪಡಬೇಡಮ್ಮ ದೇವಿಯು ಪ್ರಸನ್ನಳಾಗಿ ಆ ಪ್ರಸಾದ ಕರುಣಿಸಿದ್ದಾಳೆ.

    ನಿಮಗೆ ಅಂಗಾರವನ್ನು ನೀಡುವ ಮೂಲಕ ಅದನ್ನು ಧರಿಸುವ ವೈಷ್ಣವೋತ್ತಮನಾದ ಪುತ್ರನನ್ನು ಹಾಗೂ ತುಳಸಿಯನ್ನು ನೀಡುವ ಮೂಲಕ ಅದನ್ನು ಪೂಜೆಸುವ ಹೆಣ್ಣು ಸಂತಾನವನ್ನು ಕರುಣಿಸುವುದಾಗಿಯೂ ಸೂಚಿಸಿದ್ದಾಳೆ ಎಂದು ತಿಮ್ಮವ್ವನವರಿಗೆ ಸಮಾಧಾನಮಾಡಿ ಅವರಿಗೆ ಅಭಯ ನೀಡುತ್ತಾರೆ. ಮುಂದೆ ಎಲ್ಲವೂ ಒಳ್ಳೆಯದಾಗುವದು ಎಂದು ಆಶೀರ್ವಾದ ಮಾಡಿದರು. ಅಪ್ಪಾವರು ಹೇಳಿದ ಮಾತು ಹುಸಿಯಾಗಲಿಲ್ಲ, ಮುಂದೆ ವೆಂಕಟದಾಸರಿಗೆ ಒಂದು ಗಂಡು ಮಗು ಜನಿಸಿತು, ಅವರೇ ಶ್ರೀ ಕರ್ಣಾಟಕ ಭಕ್ತ ವಿಜಯ ಎಂಬ ಉತ್ತಮ ಗ್ರಂಥ ವನ್ನು ಬರೆದ ಶ್ರೀ ಬೇಲೂರು ಕೇಶವ ದಾಸರು ಎಂದು ಪ್ರಸಿದ್ಧಿಯನ್ನು ಹೊಂದಿದರು.

    ಪರಿಮಳ ಶರೀರ :
    ಶ್ರೀ ಅಪ್ಪಾವರು ನಿರಂತರವಾಗಿ ಶ್ರೀಮನ್ಯಾಯ ಸುಧಾ ಪರಿಮಳ ಗ್ರಂಥದ ಶ್ರವಣ, ಮನನ, ಧ್ಯಾನ , ಪಾಂಡವರು ಪೂಜಿಸಿದ ಅರ್ಜುನ ಕರಾರ್ಜಿತ ಪಂಚಮುಖಿ ಮುಖ್ಯಪ್ರಾಣದೇವರ ನಿರಂತರ ಸೇವೆ ಇಂದ ಅವರ ಶರೀರದಿಂದ ನಿತಂತರವಾಗಿ ಪರಿಮಳ ಸುವಾಸನೆ ಬರುತಿತ್ತು.
    ಒಂದು ಬಾರಿ ಶ್ರೀ ಅಪ್ಪಾವರು ದಕ್ಷಿಣ ಭಾರತದ ಯಾತ್ರೆಯ ಸಮಯದಲ್ಲಿ ಕಾವೇರಿ ಸ್ನಾನಕ್ಕೆಂದು ಶ್ರೀರಂಗಪಟ್ಟಣ ನಗರಕ್ಕೆ ಬಂದಾಗ ಅಲ್ಲಿ ಕೆಲವು ಕುಹಕಿಗಳು ಶ್ರೀ ಅಪ್ಪಾವರು ಯಾವುದೋ ದ್ರವ್ಯ ಧಾರಣೆ ಮಾಡಿಕೊಂಡು ಜನರಿಗೆ ತಪ್ಪು ಗ್ರಹಿಕೆ ಮಾಡುತ್ತಿದ್ದಾರೆಂದು ಅವರ ಪರೀಕ್ಷೆ ಮಾಡುಲು ಮುಂದಾಗುತ್ತಾರೆ.

    “ನೀವು ಸ್ನಾನ ಮಾಡಿದಾಗ ಪರಿಮಳದ‌ ಸುವಾಸನೆ ಬರುವುದೆಂದು ಕೇಳಿದ್ದೇವೆ, ಅದನ್ನು ನೀವು ಈಗ ಕಾವೇರಿ ನದಿಯಲ್ಲಿ ಸ್ನಾನಮಾಡಿ ತೋರಿಸಿ” ಎನ್ನುತ್ತಾರೆ.ಆಗ ಶ್ರೀ ಅಪ್ಪಾವರು ಸ್ನಾನ ಮಾಡಿದಾಗ ಕಾವೇರಿ ನದಿಯಲ್ಲಿ ಮತ್ತು ಸುತ್ತ- ಮುತ್ತಲಿನ ಗ್ರಾಮದಲ್ಲಿ ಪರಿಮಳದ ಸುವಾಸನೆ ಹರಡಿತು. ಅಪ್ಪಾವರ ಪರೀಕ್ಷೆ ಮಾಡಲು ಬಂದ ಆ ಕುಹಕಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಅಪ್ಪಾವರ ಬಳಿ ಶರಣಾಗುತ್ತಾರೆ. ಕರುಣಾಸಾಗರರಾದ ಅಪ್ಪಾವರು ಪರೀಕ್ಷೆ ಮಾಡಲು ಬಂದ‌ ಆ ಜನರನ್ನು ಕ್ಷಮಿಸಿ ಅನುಗ್ರಹಿಸುತ್ತಾರೆ.

    ಶ್ರೀ ಅಪ್ಪಾವರು ಬರೆದ ಪತ್ರಗಳು, ಧರಿಸಿದ ಉಡುಪುಗಳು ,ಅವರು ನದಿಯಲ್ಲಿ ಸ್ನಾನ ಮಾಡಿದಾಗ, ಅವರ ಕೈನಿಂದ ಬಂದ ವಸ್ತುಗಳಲ್ಲಿ ಪರಿಮಳದ ಸುವಾಸನೆ ಬರುತ್ತಿದ್ದ ಕಾರಣ ಶ್ರೀ ಅಪ್ಪಾವರು ಶ್ರೀ ಪರಿಮಳಾಚಾರ್ಯರು ಎಂದು ಪ್ರಸಿದ್ಧಿಯಾಗಿದ್ದರು.

    ಶ್ರೀ ಅಪ್ಪಾವರು ನಿರಂತರವಾಗಿ ಶ್ರೀಮನ್ಯಾಯಸುಧಾ, ಪರಿಮಳ ಗ್ರಂಥದ ಶ್ರವಣ, ಮನನ, ಧ್ಯಾನ , ಪಾಂಡವರು ಪೂಜಿಸಿದ ಅರ್ಜುನ ಕರಾರ್ಜಿತ ಪಂಚಮುಖಿ ಮುಖ್ಯಪ್ರಾಣದೇವರ ನಿರಂತರ ಸೇವೆ, ಉಪಾಸನೆ ಮತ್ತು ಅನುಷ್ಠಾನ ಹಾಗೂ ಶ್ರೀ ರಾಯರ ಮತ್ತು ಶ್ರೀ ವಾಯುದೇವರ ವಿಶೇಷ ಕಾರುಣ್ಯದಿಂದ ಶೃತಿ- ಸ್ಮೃತಿ ಸಮ್ಮತವಾದ ಈ ಮಹಿಮೆಗಳು ಗೋಚರವಾಗುತ್ತಿತ್ತು ಎಂದು ಅಪ್ಪಾವರ ಶಿಷ್ಯರಾದ ಶ್ರೀಯೋಗಿ ನಾರಾಯಣಾಚಾರ್ಯರು ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ ಸ್ಪಷ್ಟವಾಗಿ ತಿಳಿಸುತ್ತಾರೆ .

    ಶ್ರೀ ಅಪ್ಪಾವರ ಶಿಷ್ಯರು ಶ್ರೀ ಯೋಗಿ ನಾರಾಯಣಾಚಾರ್ಯರು :

    ಶ್ರೀ ಅಪ್ಪಾವರಿಗೆ ದೇಶದೆಲ್ಲೆಡೆ ಹಲವಾರು ಶಿಷ್ಯರು ಅಪ್ಪಾವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಅವರ ಪ್ರಮುಖ ಶಿಷ್ಯರಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ಒಬ್ಬರು.ಶ್ರೀ ನಾರಾಯಣಾಚಾರ್ಯರು ಮೂಲತಃ ಗದಗಿನವರು. ಆಚಾರ್ಯರು ಗದಗಿನ ವೀರ ನಾರಾಯಣನ ಅಂತರಂಗ ಭಕ್ತರು. ತಮ್ಮ ಸ್ವರೂಪೊದ್ದಾರಕ ಗುರುಗಳ ಪ್ರಾಪ್ತಿಗಾಗಿ ನಿತ್ಯವೂ ಶ್ರೀ ನಾರಾಯಣಾಚಾರ್ಯರು ವೀರ ನಾರಾಯಣನ ಸೇವೆ ಮಾಡುತಿದ್ದರು. ಆಚಾರ್ಯರ ನಿಷ್ಠೆಯ ಸೇವೆಗೆ ಮೆಚ್ಚಿದ ವೀರ ನಾರಾಯಣ ದೇವರು ಸ್ವಪ್ನದಲ್ಲಿ ಆಚಾರ್ಯರಿಗೆ ನಿಮ್ಮ ಸ್ವರೂಪೊದ್ದಾರಕರು ಅತಿ ಶೀಘ್ರದಲ್ಲಿ ನಿನಗೆ ಭೇಟಿ ಆಗುತ್ತಾರೆ ಅಂತ ಸೂಚನೆ ಕೊಡುತ್ತಾರೆ.

    ಶ್ರೀ ಅಪ್ಪಾವರು ಸಂಚಾರ ಅನ್ವಯ ಗದಗಗೆ ಬಂದಿರುತ್ತಾರೆ. ಅಲ್ಲಿ ಮಧ್ಯಾಹ್ನದ ಸಮಯಕ್ಕೆ ಶ್ರೀ ವೀರ ನಾರಾಯಣನ ದರ್ಶನಕ್ಕೆ ಅಪ್ಪಾವರು ಬಂದಿರುತ್ತಾರೆ, ಬಂದ ಸಮಯದಲ್ಲಿ ಅರ್ಚಕರು ದೇವಸ್ಥಾನ ಗರ್ಭಗುಡಿ ಬೀಗ ಹಾಕಿರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಅಪ್ಪಾವರು ವೀರ ನಾರಾಯಣನ ಪ್ರಾರ್ಥಿಸುತ್ತಾ- ಸ್ವಾಮಿ ನಾನು ನಿನ್ನ ದರ್ಶನಕ್ಕಾಗಿ ಇಭರಾಮಪುರದಿಂದ ಬಂದಿದ್ದೇನೆ ಅಂತ ಪ್ರಾರ್ಥಿಸಿದಾಗ, ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆಯುತ್ತದೆ.

    ಇದೇ ಸಮಯದಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ದೇವಸ್ಥಾನ ಪ್ರಾಂಗಣದಲ್ಲಿಯೇ ಇರುತ್ತಾರೆ. ಶ್ರೀ ಅಪ್ಪಾವರನ್ನು ಯಾರೋ ಯಾತ್ರಿಕರು ನಾರಾಯಣನ ದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿದಿರುತ್ತಾರೆ ಆದರೆ ಅಲ್ಲಿ ನಡೆದಿದ್ದು ಬೇರೆ. ಅಪ್ಪಾವರ ಪ್ರಾರ್ಥನೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುದನ್ನು ಕಂಡು ಆಚಾರ್ಯರು ಒಂದು ಕ್ಷಣ ಏನು ತೋಚಲಾಗದೆ ಬೆರಗಾಗುತ್ತಾರೆ. ಶ್ರೀ ಅಪ್ಪಾವರು ವೀರ ನಾರಾಯಣನ ಜೊತೆ ನೇರವಾಗಿ ಸಂದರ್ಶನ ಮಾಡುವುದನ್ನು ಕಂಡು ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರಲ್ಲಿ ಶಿಷ್ಯ ಸ್ವೀಕಾರಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರ ಪ್ರಾರ್ಥನೆಗೆ ಶ್ರೀ ಅಪ್ಪಾವರು ಸಂತುಷ್ಟರಾಗಿ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ.

    ರಾಯರ ಮೃತಿಕಾ ಬೃಂದಾವನ :

    ಶಿಷ್ಯತ್ವ ಸ್ವೀಕಾರದ ಪ್ರತೀಕವಾಗಿ ನಮ್ಮ ಕುಲ ಗುರುಗಳಾದ ಮಂತ್ರಾಲಯ ಗುರುಸೌರ್ವಭೌಮರ ಬೃಂದಾವನ ಪ್ರತಿಷ್ಠಾಪಿಸಲು ಶ್ರೀ ಅಪ್ಪಾವರು ಇಚ್ಛಿಸುತ್ತಾರೆ. ಅಪ್ಪಾವರ ಆಜ್ಞೆಯಂತೆ ಶ್ರೀ ಯೋಗಿ ನಾರಾಯಣಾಚಾರ್ಯರು ಬೃಂದಾವನ ಕೆತ್ತನೆ ಮಾಡುತ್ತಾರೆ. ಶ್ರೀ ಅಪ್ಪಾವರು ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಭವ್ಯ ಬೃಂದಾವನವನ್ನು ಪ್ರತಿಷ್ಠಾಪನೆ ಮಾಡುತ್ತಾರೆ.

    ಶಿಲ್ಪಕಳಾ ನಿಪುಣರು ಶ್ರೀಯೋಗಿ ನಾರಾಯಣಾಚಾರ್ಯರು :

    ಶ್ರೀ ಅಪ್ಪಾವರು ಹಾಗೂ ವೀರ ನಾರಾಯಣನ ಅನುಗ್ರಹದಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶಿಲ್ಪಕಲೆಯ ಅನುಗ್ರಹ ಹೊಂದಿರುತ್ತಾರೆ. ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಬೃಂದಾವನ, ಅಪ್ಪಾವರ ಕಟ್ಟೆಯಲ್ಲಿ ಮಂಟಪದಲ್ಲಿ ಕೆತ್ತನೆಗಳು , ಮಂತ್ರಾಲಯದ ತುಂಗಾ ತಟದಲ್ಲಿ ರಾಯರು ಆಹ್ನಿಕ ಮಾಡುತಿದ್ದ ಸ್ಥಳ ಗುರುತಿಸಿ ಅಲ್ಲಿ ಅವತಾರತ್ರಯ ಪ್ರಾಣದೇವರು , ಅಪ್ಪಾವರ ಕಟ್ಟೆಯಲ್ಲಿ ಶಾಲಿಗ್ರಾಮ ಶಿಲೆಯಲ್ಲಿ ಚತುರ್ಭುಜ ವೇಣುಗೋಪಾಲ ಹಾಗು ಶ್ರೀ ಅಪ್ಪಾವರ ಭವ್ಯವಾದ ಮೂರ್ತಿಯು ಶ್ರೀ ಯೋಗಿ ನಾರಾಯಣಾಚಾರ್ಯರ ನೈಪುಣ್ಯತೆ ತೋರಿಸುತ್ತದೆ.

    ಯೋಗಿ ನಾರಾಯಣಾಚಾರ್ಯರು ರಚಿಸಿದ ಶ್ರೀ ಅಪ್ಪಾವರ ಸ್ತೋತ್ರ. ಶ್ರೀ ಆಚಾರ್ಯರು ತಮ್ಮ ಗುರುಗಳಾದ ಶ್ರೀ ಅಪ್ಪಾವರ ಮಹಿಮೆ ಸಾರುವ ಶ್ರೀ ಇಭರಾಮಪುರ ಶ್ರೀ ಕೃಷ್ಣಾರ್ಯ ಸ್ತೋತ್ರ ರಚಿಸಿದರು. ತಾವು ಪ್ರತ್ಯಕ್ಷ್ಯವಾಗಿ ಕಂಡ ಹಾಗೂ ಶ್ರುತಿ ಸ್ಮೃತಿ ಸಮ್ಮತಿಸುವ ಮಹಿಮೆಗಳು ಮತ್ತು ಆ ಮಹಿಮೆಗಳು ಯಾವ ಯಾವ ಪುರಾಣಗಳಲ್ಲಿ ಉಲ್ಲೇಖವಾಗಿದ ಎಂದು ಸ್ತೋತ್ರಮಾಡಿದ್ದಾರೆ.

    ಸುರಪುರದ ಆನಂದ ದಾಸರು ತಮ್ಮ ಸಮಕಾಲೀನ ಎಲ್ಲಾ ಅಪರೋಕ್ಷ ಜ್ಞಾನಿಗಳನ್ನು ಗುರುತಿಸಿ ರಚಿಸಿದ ಕೀರ್ತನೆ :
    ಶ್ರೀ ರಾಘವೇಂದ್ರರಾಯರ ಪಾದಾಂಬುಜ
    ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
    ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
    ಬಲವಂತ ಯೋಗಿ ನಾರಾಯಣಾರ್ಯರ ।।

    ಮೇಲೆಕಂಡ ಕೀರ್ತನೆಯಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಗುರುಸಾರ್ವಭೌಮ ಶ್ರೀ ಅಪ್ಪಾವರ ಹಾಗೂ ತಮ್ಮ ಇಷ್ಟ ದೈವ ಶ್ರೀ ವೀರ ನಾರಾಯಣನ ಅನುಗ್ರಹಕ್ಕೆ ಪಾತ್ರರಾಗಿ ಅಪರೋಕ್ಷ ಜ್ಞಾನ ಹೊಂದಿದ್ದಾರೆ ಎಂದು ತಿಳಿಯಬಹುದು.

    ಶ್ರೀ ಅಪ್ಪಾವರ ಹೆಸರಿನ ಮಹಿಮೆ :

    ಶ್ರೀ ಅಪ್ಪಾವರ ಕೀರ್ತಿಯು ಅಪಾರವಾದದು , ದೇಶದೆಲ್ಲೆಡೆ ಹಲವಾರು ಶಿಷ್ಯರು ಅಪ್ಪಾವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಹೀಗೆ ಅಪ್ಪಾವರ ಶಿಷ್ಯರಾದ ಶ್ರೀ ಕೆರೊಡೆ ಕೃಷ್ಣರಾಯರು ಆಮಂತ್ರಣಮೇರೆಗೆ ಶಿವಮೊಗ್ಗಕ್ಕೆ ಬಂದಿರುತ್ತಾರೆ.

    ಅಪ್ಪಾವರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದ ಕೃಷ್ಣರಾಯರು ಮನೆತನದವರು ತಮ್ಮ ಸರ್ವಸ್ವವವು ಅಪ್ಪಾವರಿಗೆ ಸಮರ್ಪಣೆಯ ಸಂಕಲ್ಪಿಸಿದರು. ಆದರೆ ಯದ್ಪಚ್ಛಾಲಾಭ ಸಂತುಷ್ಟರಾದ ಅಪ್ಪಾವರು ಇದಕ್ಕೆ ಸಮ್ಮತಿಸಲಿಲ್ಲ. ತಮ್ಮಿಂದ ಏನನ್ನಾದರೂ ಸ್ವೀಕರಿಸಿ ಅಂತ ಶಿಷ್ಯ ಒತ್ತಾಯ ಮಾಡಿದಾಗ ಅಪ್ಪಾವರು ನಿನಗೆ ಕೊಡಲೇಬೇಕೆಂಬ ಇಚ್ಛೆಯಿದ್ದರೆ ನಿಮ್ಮಲ್ಲಿ ಇರುವ ಮರದ ದಿಮ್ಮಿಗಳನ್ನು ನಮಗೆ ಕೊಡಿ ಎಂದರು. ಶ್ರೀ ಅಪ್ಪಾವರ ಆಜ್ಞೆಯಂತೆ ಸಂತುಷ್ಠರಾದ ಕುಟುಂಬದವರು ಎಲ್ಲವೂ ಸಮರ್ಪಣೆ ಮಾಡುತ್ತಾರೆ.

    ಆ ಕಾಲದಲ್ಲಿ ಇಂಥಹ ದೊಡ್ಡದಾದ ವಸ್ತುಗಳ ಸಾಗಣೆಗೆ ವ್ಯವಸ್ಥೆ ಇರಲಿಲ್ಲ. ಈ ವಿಷಯದ ಬಗ್ಗೆ ಕುಟುಂಬದ ಸದಸ್ಯರಿಗೆ ಗೊಂದಲ ಉಂಟಾಗುತ್ತದೆ. ಈ ಸಮಸ್ಯೆಯ ಬಗ್ಗೆ ಶ್ರೀ ಅಪ್ಪಾವರಲ್ಲಿ ಹೇಳಿದಾಗ, ಚಿಂತಿಸಬೇಡಿ ಮರದ ದಿಮ್ಮಿಗಳ ಮೇಲೆ ಶ್ರೀ ಇಭರಾಮಪುರ ಅಪ್ಪಾವರು ಅಂತ ಬರೆದು ನಿಮ್ಮ ಊರಿನಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಬಿಡಿ ಅವು ನನಗೆ ತಲುಪುತ್ತೆ. ಅಪ್ಪಾವರು ಹೇಳಿದಾಗೇ ಅವರ ಶಿಷ್ಯ ಪರಿವಾರ ಆ ಮರದ ದಿಮ್ಮಿಗಳು ಶಿವಮೊಗ್ಗದ ತುಂಗಾ ನದಿಯಲ್ಲಿ ಹಾಕಿದರು. ಶಿವಮೊಗ್ಗದಿಂದ ತುಂಗಭದ್ರ ನದಿಯಿಂದ ಮಂತ್ರಾಲಯಕ್ಕೆ ಬಂದು ತಲುಪಿದವು.ಈ ಮರದ ದಿಮ್ಮಿಯಿಂದ ಶ್ರೀ ಅಪ್ಪಾವರು ಮಂತ್ರಾಲಯದಲ್ಲಿ ತಮ್ಮ ಮನೆ ನಿರ್ಮಾಣಕ್ಕೆ ಉಪಯೋಗ ಮಾಡಿದರು.

    ನಂದವಾರ ಇಭರಾಮಪುರ ಗ್ರಾಮಕ್ಕೆ ಹತ್ತಿರವಾದ ಗ್ರಾಮ. ಆ ಗ್ರಾಮದಲ್ಲಿ ನಂದವಾರ ದೇಸಾಯಿ ಮನೆತನದವರು ನೆಲಸಿದ್ರು. ಸುಖ ಸಂಪತಿನಲ್ಲಿ ಇದ್ದ ದೇಸಾಯಿ ಮನೆತನಕ್ಕೆ ಸಂತಾನ ಭಾಗ್ಯ ಇರಲಿಲ್ಲ. ಸಂತಾನ ಅನುಗ್ರಹಕಾಗಿ ಅಪ್ಪಾವರ ಮೊರೆ ಹೋಗುತ್ತಾರೆ. ಶ್ರೀ ಅಪ್ಪಾವರ ಅನುಗ್ರಹದಿಂದ ಅವರ ವಂಶ ಬೆಳೆಯುತ್ತೆ.

    ಶ್ರೀ ಅಪ್ಪಾವರು ಮಾಡಿದ ಅನುಗ್ರಹಕ್ಕೆ ದೇಸಾಯಿಯವರು ಶ್ರೀ ಅಪ್ಪಾವರಿಗೆ ನಿತ್ಯ ಅನುಷ್ಠಾನಕ್ಕೆ ಇಭರಾಮಪುರದಲ್ಲಿ ಮಂಟಪ ಕಟ್ಟಲು ಸಂಕಲ್ಪಿಸುತ್ತಾರೆ.ಮಂಟಪ ಕಟ್ಟಲು ಬೇಕಾದ ಎಲ್ಲಾ ಬಂಡೆಗಳು ರಾಂಪುರ ಗ್ರಾಮದಲ್ಲಿ ಇರುತ್ತೆ. ಕಲ್ಲು ಬಂಡೆಗಳು ಸಾಗಿಸಲು ದೂರದ ಇಭರಾಮಪುರಕ್ಕೆ ಸೇರಿಸುವುದು ಅಸಾದ್ಯದ ಮಾತು. ದೇಸಾಯಿಯವರು ಅಪ್ಪಾವರಲ್ಲಿ ಈ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಅಪ್ಪಾವರು ಆಗ ಬಂದು ಎಲ್ಲಾ ಬಂಡೆಗಳ ಮೇಲೆ ಇಭರಾಮಪುರ ಶ್ರೀ ಅಪ್ಪಾವರ ಅಂತ ಬರೆದು ನದಿಗೆ ಹಾಕಿಸು ಅಂತ ಹೇಳುತ್ತಾರೆ. ಅಪ್ಪಾವರ ಮಾತಿನಂತೆ ಆ ಕಲ್ಲುಗಳ ಮೇಲೆ ಇಭರಾಮಪುರ ಶ್ರೀ ಅಪ್ಪಾವರ ಅಂತ ಬರೆದು ನದಿಯಲ್ಲಿ ಹಾಕುತ್ತಾರೆ. ಇಭರಾಮಪುರ ಹತ್ತಿರದಲ್ಲಿ ಇದ್ದ ನದಿಖೈರವಾಡಿಯಲ್ಲಿ ತೇಲಿಬಂದವು. ಆ ದೊಡ್ಡ ಗಾತ್ರದ ಕಲ್ಲುಬಂಡೆಗಳು ಭಾರವು ಹುಲ್ಲುಕಡ್ಡಿಯಂತೆ ಆಗಿತ್ತು ನದಿಖೈರವಾಡಿಯಿಂದ ಇಭರಾಮಪುರಕ್ಕೆ ಅತಿಸುಲಭವಾಗಿ ಸಾಗಿಸಿ ಅಲ್ಲಿ ಮಂಟಪ ನಿರ್ಮಾಣವಾಯಿತು .

    ಶ್ರೀ ಕ್ಷೇತ್ರ ಅಪ್ಪಾವರ ಕಟ್ಟೆಯಲ್ಲಿ ಈಗಿನ ಮಂಟಪವಾಗಿದೆ. ಈ ಮಂಟಪದಲ್ಲಿ ಶ್ರೀ ಯೋಗಿನಾರಾಯಣಾಚಾರ್ಯರು ಮಂಟಪದ ಕಂಬದ ಮೇಲೆ ಗಣಪತಿ , ಪ್ರಾಣದೇವರು , ರುದ್ರದೇವರು , ರಾಯರನ್ನು, ಅವತಾರತ್ರಯ ಪ್ರಾಣದೇವರ ಕೆತ್ತನೆ ಮಾಡಿದ್ದಾರೆ.

    ಹರಿದಾಸರಿಗೆ ಮಂದಿರ :
    ಶ್ರೀ ಅಪ್ಪಾವರಿಂದ ಅನುಗ್ರಹೀತರಾದ ದಾಸರು ಮತ್ತು ಜ್ಞಾನಿಗಳು
    ೧. ಶ್ರೀ ಗಂಧರ್ವಾಂಶ ಸಂಭೂತರಾದ ಸುರಪುರದ ಆನಂದದಾಸರು
    ೨. ಶ್ರೀ ಗುರು ಜಗನ್ನಾಥದಾಸರು
    ೩. ಅಪರೋಕ್ಷ ಜ್ಞಾನಿಗಳಾದ ವಿದ್ವಾನ್ ಶ್ರೀ ಯಳಮೇಲಿ ಹಯಗ್ರೀವಾಚಾರ್ಯರು
    ೪. ವಿದ್ವಾನ್ ಯಳಮೇಲಿ ವಿಠಲಾಚಾರ್ಯರು
    ೫. ಶ್ರೀ ವಿಜಯರಾಮಚಂದ್ರದಾಸರು
    ೬. ಶ್ರೀ ಜಯೇಶವಿಠಲರು
    ೭. ಶ್ರೀ ಕಾರ್ಪರ ನರಹರಿದಾಸರು
    ೮. ಶ್ರೀ ಮುದ್ದು ಭೀಮಾಚಾರ್ಯರು
    ೯. ಬೇಲೂರು ಕೇಶವದಾಸರು
    ೧೦. ಶ್ರೀ ಯೋಗಿ ನಾರಾಯಣಾಚಾರ್ಯರು
    ೧೧. ಶ್ರೀ ಇಂದಿರೇಶದಾಸರು
    ಹೀಗೆ ಅಪರೋಕ್ಷ ಜ್ಞಾನಿಗಳ ಸಮೂಹಕ್ಕೆ ಸ್ವರೂಪಧಾರಕರು ಶ್ರೀ ಅಪ್ಪಾವರು .

    ಸುಜ್ಞಾನಬೆಳಕಿನಕಣ್ಮರೆ :

    ಶ್ರೀ ಅಪ್ಪಾವರು ಶ್ರೀ ಪಂಚಮುಖಿ ಪ್ರಾಣದೇವರನ್ನು ಪ್ರತಿನಿತ್ಯ ಪೂಜಿಸುತ್ತಾ; ಪಂಚಮುಖನ ಪಂಚ ರೂಪಗಳನ್ನು ತಮ್ಮ ಮನೋ ಪಂಕಜದಲ್ಲಿ ಸದಾ ಧ್ಯಾನಿಸುತ್ತಾ ಅಪೂರ್ವವಾದ ಆನಂದವನ್ನು ಸೂರೆಗೊಂಡ ಶ್ರೀ ಅಪ್ಪಾವರು ತಮ್ಮ ಕೊನೆಯ ಕಾಲ ಸ್ವಗ್ರಾಮವಾದ ಇಭರಾಮಪುರದಲ್ಲಿಯೇ ನೆಲಸಿದರು.

    ಅಗಮ್ಯ ಮಹಿಮನಾದ ವಾಯುವಾಹನ ತಮ್ಮ ಮೂಲಕ ಪ್ರಕಟಿಸಿದ ವಿವಿಧ ಮಹಿಮೆಗಳನ್ನು ಮೆಲಕು ಹಾಕಿದರು. ತಮ್ಮ ಮೇಲೆ ಶ್ರೀ ಪಂಚಮುಖಿ ಪ್ರಾಣದೇವರು ಸುರಿಸಿದ ಕಾರುಣ್ಯ ವೃಷ್ಟಿಯನ್ನು ಸ್ಮರಿಸಿ ಅವರ ಕಣ್ಣಲೆಗಳು ತೇಲಿ ಬಂದವು. ತಮ್ಮ ಜೀವನದಲ್ಲಿ ನಡೆದ ಸಕಲ ಕ್ರಿಯೆಗಳನ್ನೂ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನೃಸಿಂಹದೇವರ ಪಾದಾರವಿಂದಗಳಲ್ಲಿ ಸಲ್ಲಿಸಿ, ಶ್ರಾವಣ ಶುದ್ಧ ತೃತೀಯಾ 1869 ಶ್ರೀ ಕೃಷ್ಣ ಪಾದಾರವಿಂದವನ್ನು ಸೇರಿದರು!!

    (ಶ್ರೀ ಅಪ್ಪಾವರ ಪವಾಡಗಳು ಮುಂದಿನ ಸಂಚಿಕೆಯಲ್ಲಿ)

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!