18 C
Karnataka
Friday, November 22, 2024

    ಇಂದಿರಾ ನೆಹರೂ ಹೊರತು ಪಡಿಸಿ ಬೇರೆ ಯಾರೂ ದೇಶಕ್ಕೆ ಕೊಡುಗೆ ನೀಡಿಲ್ಲವೆ?- ಸಿಟಿ ರವಿ ಪ್ರಶ್ನೆ

    Must read

    BENGALURU AUG 12

    ಮೇಕೆದಾಟು ಯೋಜನೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕು. ರಾಜಕೀಯವಾಗಿ ಯಾವುದೇ ಪಕ್ಷ ಇದರ ದುರ್ಬಳಕೆ ಮಾಡಬಾರದು. ಎರಡು ದೇಶಗಳ ನೀರಿನ ಹಂಚಿಕೆ ಸುಗಮವಾಗಿ ನಡೆಯುತ್ತದೆ. ಎರಡು ರಾಜ್ಯಗಳ ನಡುವಿನ ನೀರಿನ ಹಂಚಿಕೆ; ಅದರಲ್ಲೂ ಕುಡಿಯುವ ನೀರಿನ ಹಂಚಿಕೆಯ ಸಮಸ್ಯೆ ಪರಿಹಾರ ಕಷ್ಟವೇನಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ತಿಳಿಸಿದರು.

    ಕುಡಿಯುವ ನೀರು ಎಲ್ಲರಿಗೂ ಅವಶ್ಯಕ. ಈ ವಿಷಯದಲ್ಲಿ ರಾಜಕಾರಣ ಸಲ್ಲದು. ಬೆಂಗಳೂರಿನಲ್ಲಿ ಶೇ 15ರಿಂದ 16 ಮಂದಿ ತಮಿಳುನಾಡಿನಿಂದ ಬಂದವರು ಇದ್ದಾರೆ. ಅವರಿಗೆ ಕುಡಿಯುವ ನೀರು ಕೊಡುವುದಿಲ್ಲ ಎನ್ನಲಾದೀತೇ ಎಂದು ಅವರು ಪ್ರಶ್ನಿಸಿದರು. ಈ ನೆಲೆಗಟ್ಟಿನಲ್ಲಿ ವಿಷಯ ಮನವರಿಕೆ ಮಾಡಬೇಕು ಎಂದು ಆಶಿಸಿದರು. ಕುಡಿಯುವ ನೀರಿನ ವಿಚಾರದಲ್ಲಿ ಬೆಂಕಿ ಹಚ್ಚುವ ರಾಜಕಾರಣಕ್ಕೆ ಅವಕಾಶವಿಲ್ಲ. ಇದು ಸೌಹಾರ್ದಯುತವಾಗಿ ಬಗೆಹರಿಯಬೇಕಾದ ವಿಚಾರ ಎಂದು ಅವರು ನುಡಿದರು.

    ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿ ಹಲವು ತೀರ್ಪುಗಳು ಬಂದಿವೆ. ಆ ತೀರ್ಪಿನ ವ್ಯಾಪ್ತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ಪಾಲನ್ನು ಉಪಯೋಗಿಸಲು ಯಾವುದೇ ಅಡ್ಡಿ ಇಲ್ಲ. ಆ ತೀರ್ಪನ್ನು ಮೀರಿದರೆ ವ್ಯಾಜ್ಯ ಆಗುತ್ತದೆ. ಕರ್ನಾಟಕವು ತೀರ್ಪಿನನ್ವಯ ಯೋಜನೆ ರೂಪಿಸಿದರೆ ಅದರಿಂದ ಏನೂ ಸಮಸ್ಯೆ ಆಗಲಾರದು. ಈ ಮಾತನ್ನು ತಮಿಳುನಾಡಿನಲ್ಲೂ ಹೇಳುತ್ತೇನೆ ಎಂದು ತಿಳಿಸಿದರು.

    ಇಂದಿರಾ ಕ್ಯಾಂಟೀನ್

    ಇಂದಿರಾ ಗಾಂಧಿ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದಿದೆ. 2017-18ರಲ್ಲಿ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸಲಾಯಿತು. ಇಂದಿರಾ ಗಾಂಧಿ ಅವರ ಮೇಲೆ ಪ್ರೇಮದಿಂದ ಈ ಕ್ಯಾಂಟೀನ್ ಆರಂಭಿಸಿಲ್ಲ. ಅದು ರಾಜಕಾರಣಕ್ಕಾಗಿ ಮಾಡಿದ ನಿರ್ಧಾರ. ಬದ್ಧತೆಗಾಗಿ ಅಲ್ಲ ಎಂದು ತಿಳಿಸಿದ ಅವರು, 89- 94, 1999-2006, 2013ರಿಂದ 2017ರ ನಡುವೆ ಕಾಂಗ್ರೆಸ್ ಸರಕಾರ ಇದ್ದರೂ ಯಾಕೆ ಇಂದಿರಾ ಕ್ಯಾಂಟೀನ್ ತೆರೆದಿಲ್ಲ ಎಂದು ಪ್ರಶ್ನಿಸಿದರು. ಇಂದಿರಾ ಗಾಂಧಿ ಅವರ ಎಲ್ಲ ನಿರ್ಧಾರಗಳನ್ನು ವಿರೋಧಿಸುವ ಪೂರ್ವಗ್ರಹ ಪೀಡಿತ ಮನಸ್ಥಿತಿ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.

    ದೇಶಕ್ಕೆ ನೆಹರೂ, ಇಂದಿರಾ ಗಾಂಧಿ ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಅವರ ಗುಲಾಮರು ಮಾತ್ರ ಒಪ್ಪಿಕೊಳ್ಳಲು ಸಾಧ್ಯ. ಸ್ವಾತಂತ್ರ್ಯ ಲಭಿಸಲು ಅವರು ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಮೂರ್ಖರು ಮತ್ತು ಗುಲಾಮರು ಮಾತ್ರ ಒಪ್ಪಿಕೊಳ್ಳುತ್ತಾರೆ. ಆದರೆ, ನಾವು ಮೂರ್ಖರು ಮತ್ತು ಗುಲಾಮರಲ್ಲ ಎಂದು ನುಡಿದರು.
    217 ಯೋಜನೆಗಳಿಗೆ ಅವರ ಹೆಸರು ಇಡಲಾಗಿದೆ. ಹಾಗಿದ್ದರೆ ಬೇರೆ ಯಾರೂ ದೇಶಕ್ಕೆ ಕೊಡುಗೆ ನೀಡಿಲ್ಲವೇ ಎಂದು ಕೇಳಿದ ಅವರು, ಅನ್ನಪೂರ್ಣೇಶ್ವರಿ ರಾಜಕೀಯ ವ್ಯಕ್ತಿಯಲ್ಲ. ಅನ್ನದ ದೇವತೆ; ದುರ್ಭಿಕ್ಷ ಬಂದಾಗ ಅನ್ನ ಕೊಡುವ ತಾಯಿ ಅವಳು. ಅದಕ್ಕೇ ಅನ್ನಪೂರ್ಣೇಶ್ವರಿ ಹೆಸರು ಇಡಲು ಹೇಳಿದ್ದೇನೆ. ನಾನೇನಾದರೂ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಹೆಸರು ಇಡಲು ಹೇಳಿದರೆ ಅದು ರಾಜಕಾರಣ ಆಗುತ್ತಿತ್ತು ಎಂದರು.

    ಬಡವರಿಗೆ ಅನ್ನಪೂರ್ಣೇಶ್ವರಿ ಹೆಸರಿನಲ್ಲಿ ಅನ್ನ ಕೊಟ್ಟರೇನು? ಇಂದಿರಾ ಹೆಸರಲ್ಲಿ ಅನ್ನ ಕೊಟ್ಟರೇನು? ಜನರ ತೆರಿಗೆಯಿಂದ ಅನ್ನ ಕೊಡುವುದಲ್ಲವೇ ಎಂದರು. ಕಾಂಗ್ರೆಸ್ ಕಾರ್ಯಾಲಯದಲ್ಲಿ ನೆಹರೂ ಅಥವಾ ಇಂದಿರಾ ಹೆಸರಿನಲ್ಲಿ ಕ್ಯಾಂಟೀನ್ ತೆರೆದರೆ ನಮ್ಮ ಅಡ್ಡಿ ಇಲ್ಲ ಎಂದು ತಿಳಿಸಿದರು. ಅನ್ನಪೂರ್ಣೇಶ್ವರಿ ಹೆಸರು ಸಲಹೆ ಮಾತ್ರ. ಆ ಕುರಿತು ಚರ್ಚೆ ನಡೆಯಲಿ ಎಂದು ತಿಳಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!