26.8 C
Karnataka
Sunday, September 22, 2024

    ಮಹಾಸಾಧ್ವಿ ಹೆಳವನಕಟ್ಟೆ ಗಿರಿಯಮ್ಮ

    Must read


    ಹರಿದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಗಿರಿಯಮ್ಮನವರ ಆರಾಧನೆ ಇಂದು


    ಸಂಗ್ರಹಿತ ಲೇಖನ

    ಹೆಳವನಕಟ್ಟೆ ಗಿರಿಯಮ್ಮನವರು ಹರಿದಾಸ ಸಾಹಿತ್ಯಲೋಕದಲ್ಲಿ ಕಾಣಬರುವ ವಿಶಿಷ್ಟ ಸಾಹಿತಿ. ಕ್ರಿಶ. 1750ರ ಸುಮಾರಿಗೆ ಜೀವಿಸಿದ್ದರು. ಇವರ ತವರೂರು ಹಾವೇರಿ ಜಿಲ್ಲೆಯ ರಾಣಿಬೆನ್ನೂರು. ತಾಯಿ ತುಂಗಮ್ಮ, ತಂದೆ ಬಿಷ್ಟಪ್ಪ ಜೋಯಿಸರು. ಈ ದಂಪತಿಗಳಿಗೆ ದೀರ್ಘ ಕಾಲದ ನಂತರ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ, ಹೆಣ್ಣು ಮಗುವಿನ ಜನನವಾಯಿತು. ತಿಮ್ಮಪ್ಪನ ಅನುಗ್ರಹದ ಸಂಕೇತವಾಗಿ ಮಗುವಿಗೆ ಗಿರಿಯಮ್ಮ ಎಂದು ಹೆಸರನ್ನಿಟ್ಟರು.

    ಚಿಕ್ಕಂದಿನಿಂದಲೂ ಗಿರಿಯಮ್ಮ ಸ್ತೋತ್ರಪಾಠಗಳಲ್ಲಿ, ಪೂಜಾ ಕಾರ್ಯದಲ್ಲಿ ಆಸಕ್ತಳಾಗಿದ್ದಳು. ಈಕೆಗೆ ನಾಲ್ಕು ವರ್ಷ ವಯಸ್ಸಾದಾಗ ತಾಯಿ ತೀರಿಕೊಂಡರು. ತಾಯಿಯ ಹಿಂದೆಯೆ ತಂದೆ ಸಹ ಗತಿಸಿದರು. ಗಿರಿಯಮ್ಮ ಚಿಕ್ಕಮ್ಮ, ಚಿಕ್ಕಪ್ಪರ ವಾತ್ಸಲ್ಯದ ಆಶ್ರಯದಲ್ಲಿ ಬೆಳೆದಳು. ಬೆಳೆಯುತ್ತಿದ್ದಂತೆ ಗಿರಿಯಮ್ಮ ದೇವರ ಹಾಡುಗಳನ್ನು ಹಾಡುತ್ತ ನರ್ತಿಸುವುದರಲ್ಲಿ ಪರವಶಳಾಗತೊಡಗಿದಳು.

    ತನ್ನ ಬಳಗದವರೊಂದಿಗೆ ಇವಳೊಮ್ಮೆ ಮಲೇಬೆನ್ನೂರಿಗೆ ಹೋದಾಗ ಅಲ್ಲಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಳು. ಉಡುಪಿ ಯಾತ್ರೆಗೆಂದು ಆ ಮಾರ್ಗವಾಗಿ ಹೋಗುತ್ತಿದ್ದ ಗೋಪಾಲದಾಸರ ಅಕಸ್ಮಾತ್ ದರ್ಶನ ಹಾಗು ಅನುಗ್ರಹ ಈ ಬಾಲೆಗೆ ಆಯಿತು.
    ಆ ಕಾಲದ ಸಂಪ್ರದಾಯದಂತೆ ಗಿರಿಯಮ್ಮನವರ ಮದುವೆ ಬಾಲ್ಯದಲ್ಲೆ, ಮಲೇಬೆನ್ನೂರಿನ ಶ್ಯಾನುಭೋಗರಾದ ಕೃಷ್ಣಪ್ಪನವರ ಮಗ ತಿಪ್ಪರಸನೊಡನೆ ಜರುಗಿತು. ಗಿರಿಯಮ್ಮನ ಮನಸ್ಸು ರಂಗನಾಥಸ್ವಾಮಿಯಲ್ಲಿಯೆ ನಿಂತುಹೋಗಿತ್ತು. ಆಕೆ ಲೌಕಿಕ ಸಂಸಾರಕ್ಕೆ ವಿಮುಖರಾಗಿದ್ದರು. ಪತಿ ತಿಪ್ಪರಸ ಆಕೆಯ ಮನಸ್ಸನ್ನು ಅರಿತಿದ್ದರಿಂದ ವಿರೋಧವಾಗಿ ನಡೆಯಲಿಲ್ಲ. ಆದರೆ ಅತ್ತೆಯ ಕಾಟ ದಿನೇ ದಿನೇ ಹೆಚ್ಚಾಗತೊಡಗಿತು. ಕೊನೆಗೊಮ್ಮೆ ಗಿರಿಯಮ್ಮನವರೇ ಸ್ವತಃ ತಿಪ್ಪರಸನಿಗೆ ಕನ್ಯೆ ಹುಡುಕಿ ಎರಡನೆಯ ಮದುವೆ ಮಾಡಿಸಿದರು.

    ಹೆಳವನಕಟ್ಟೆ ರಂಗನ ಅಂಕಿತ

    ಗಿರಿಯಮ್ಮನವರ ಸಾಧನೆ ಮುಂದುವರಿಯುತ್ತಿದ್ದಂತೆ ಹೆಳವನಕಟ್ಟೆಗೆ ರಂಗನಾಥಸ್ವಾಮಿಯ ದರ್ಶನಕ್ಕೆ ಬರುತ್ತಿದ್ದವರು ಈಕೆಯ ಭಕ್ತರಾಗತೊಡಗಿದರು. ಗಿರಿಯಮ್ಮನ ಕರುಣೆಯಿಂದ ರೋಗ ನಿವಾರಣೆ ಮೊದಲಾದ ಪರಿಹಾರ ದೊರೆಯುತ್ತವೆ ಎಂದು ಜನ ನಂಬತೊಡಗಿದರು.
    ಮೊದಲೊಮ್ಮೆ ಉಡುಪಿಗೆ ಹೋಗುತ್ತಿದ್ದಾಗ ದರ್ಶನವಿತ್ತ ಗೋಪಾಲದಾಸರು ಮತ್ತೊಮ್ಮೆ ಅದೇ ಮಾರ್ಗವಾಗಿ ಉಡುಪಿಗೆ ಹೋಗುತ್ತಿರುವಾಗ ಗಿರಿಯಮ್ಮನವರಿಗೆ ಬಾಲಗೋಪಾಲನ ವಿಗ್ರಹ ನೀಡಿ ಆಶೀರ್ವದಿಸಿದರು. “ಹೆಳವನಕಟ್ಟೆ ರಂಗ”ನ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಲು ಸೂಚಿಸಿದರು.

    ಮಂತ್ರಾಲಯದ ಮಠಾಧೀಶ್ವರರಾದ ಶ್ರೀ ಸುಮತೀಂದ್ರರು ಮಲೇಬೆನ್ನೂರಿಗೆ ಬಂದಾಗ ಗಿರಿಯಮ್ಮನ ಕೆಲವು ವಿರೋಧಿಗಳು ಈಕೆಗೆ ಸ್ವಾಮಿಗಳು ತೀರ್ಥ ಕೊಡಲು ವಿರೋಧಿಸಿದರು. ಸ್ವಾಮಿಗಳು ಅದನ್ನು ಲೆಕ್ಕಿಸದೆ ಗಿರಿಯಮ್ಮನವರಿಗೆ ಮರ್ಯಾದೆ ನೀಡಿದರು.
    ರಂಗನಾಥಸ್ವಾಮಿಯ ಬೆರಳ ಉಂಗುರ ಕಾಣೆಯಾದಾಗ ಗುಬ್ಬಿಯ ಮೂಲಕ ಅದನ್ನು ಮರಳಿ ಪಡೆದದ್ದು, ಮೃತ ಶಿಶುವನ್ನು ಬದುಕಿಸಿದ್ದು, ಕುರುಡು ಬಾಲಕನಿಗೆ ದೃಷ್ಟಿದಾನ ಮಾಡಿದ್ದು ಮೊದಲಾದ ಪವಾಡಗಳ ಕಥೆಗಳು ಗಿರಿಯಮ್ಮನವರ ಕುರಿತು ಪ್ರಚಲಿತವಿದೆ. ಆ ಪ್ರದೇಶದಲ್ಲಿ ಒಮ್ಮೆ ಭೀಕರ ಬರಗಾಲ ಬಂದಿದ್ದು ಅವರ ಒಂದು ಹಾಡಿನಲ್ಲಿ ತಿಳಿದು ಬರುತ್ತದೆ. ಗಿರಿಯಮ್ಮನವರು ಭಕ್ತಿಯಿಂದ ಹಾಡಿ ಮಳೆ ಬಂತು ಎಂಬ ಕಥೆಯೂ ಪ್ರಚಲಿತವಿದೆ.

    ಗಿರಿಯಮ್ಮನವರ ಕೊಡುಗೆ ಹರಿದಾಸ ಸಾಹಿತ್ಯಕ್ಕೆ ಅಪಾರ. ಚಂದ್ರಹಾಸ ಕಥೆ, ಸೀತಾ ಕಲ್ಯಾಣ, ಉದ್ದಾಳಕನ ಕಥೆ ಅವರು ರಚಿಸಿರುವ ಖಂಡ ಕಾವ್ಯಗಳು. ಜೆಮಿನಿ ಭಾರತ ಕರ್ತೃ ಲಕ್ಷ್ಮೀಶನ ಶೈಲಿ ಅವರ ಕಾವ್ಯಗಳಲ್ಲಿ ಎದ್ದು ಕಾಣುತ್ತದೆ. ಗಿರಿಯಮ್ಮನ ಕೃತಿಗಳು ಹೆಚ್ಚಾಗಿ ಪ್ರಚಾರವಾಗಿರುವುದು ಆಕೆಯ ಹಾಡುಗಳಲ್ಲಿ, ನಾಡಿನದ್ಯಾಂತ ಗಿರಿಯಮ್ಮನವರು ರಚಿಸಿರುವ ಶಂಕರ ಗಂಡನ ಹಾಡು, ಬ್ರಹ್ಮ ಕೊರವಂಜಿ, ಕೃಷ್ಣ ಕೊರವಂಜಿ, ಸೀತಾಕಲ್ಯಾಣ, ಲವಕುಶ ಕಾಳಗ, ಉದ್ದಾಲಕನ ಹಾಡು ಬಹಳ ಪ್ರಖ್ಯಾತವಾಗಿವೆ. ಗಿರಿಯಮ್ಮನವರ ಬಹುತೇಕ ಹಾಡುಗಳು ನಿತ್ಯ ನಿರ್ಮಲ ಪರಮಾನಂದ ಹೃದಯೇ ಎಂದು ಅಂತ್ಯಗೊಳ್ಳುತ್ತವೆ.

    ಹೆಳವನಕಟ್ಟೆ ಗಿರಿಯಮ್ಮನವರ ರಚನೆಗಳಲ್ಲಿ ಈ ಗೀತೆ ಬಹು ಪ್ರಸಿದ್ಧವಾದುದು


    ಹೊನ್ನು ತಾ ಗುಬ್ಬಿ ಹೊನ್ನು ತಾ
    ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ
    ಹೊನ್ನು ತಾ ಗುಬ್ಬಿ ಹೊನ್ನು ತಾ…..
    ಆಗಮವನು ತಂದು ಜಗಕಿತ್ತ ಕೈಗೆ
    ಸಾಗರವನು ಮಥಿಸಿ ಸುಧೆ ತಂದ ಕೈಗೆ
    ತೂಗಿ ಮಾತಾಡುವ ಸ್ಥೂಲಕಾಯನ ಕೈಗೆ
    ಸಾಗರಪತಿ ನರಸಿಂಹನ ಕೈಗೆ
    ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ
    ಹೊನ್ನು ತಾ ಗುಬ್ಬಿ ಹೊನ್ನು ತಾ…..
    ಬಲಿಯ ದಾನವ ಬೇಡಿ ಕೊಂಡಂಥ ಕೈಗೆ
    ಛಲದಿಂದ ಕ್ಷತ್ರಿಯರ ಅಳಿದಂಥ ಕೈಗೆ
    ಒಲವಿಂದ ವಿಭೀಷಣಗೆ ಅಭಯವಿತ್ತ ಕೈಗೆ
    ಬಲು ಬೆಟ್ಟ ಬೆರಳಲ್ಲೆ ಹೊತ್ತಂಥ ಕೈಗೆ
    ಹೊನ್ನು ತಾ ಗುಬ್ಬಿ ಹೊನ್ನು ತಾ…..
    ಪತಿವ್ರತೆಯರ ವ್ರತವ ಅಳಿದಂಥ ಕೈಗೆ
    ಹಿತವಾಜಿಯನೇರಿ ಮರ್ದಿಸಿದ ಕೈಗೆ

    ಪತಿ ಶಿರೋಮಣಿ ಲಕ್ಷ್ಮೀ ಕಾಂತನ ಕೈಗೆ
    ಚತುರ ಹೆಳವನ ಕಟ್ಟೆ ರಂಗನ ಕೈಗೆ…
    ಹೊನ್ನು ತಾ ಗುಬ್ಬಿ ಹೊನ್ನು ತಾ…..

    ಹೊನ್ನಾಳಿಗೆ ಸಮೀಪವಾಗಿ ತುಂಗಭದ್ರಾ ನದಿಯ ದಂಡೆಯ ಮೇಲೆ ಕಮ್ಮಾರಗಟ್ಟೆ ಎನ್ನುವ ಗ್ರಾಮವಿದೆ. ಒಂದು ಶ್ರಾವಣ ಶುದ್ಧ ಪಂಚಮಿಯ ದಿನ ಗಿರಿಯಮ್ಮ ತುಂಗಾ ಪ್ರವಾಹದಲ್ಲಿಳಿದು ಜಲಸಮಾಧಿ ಹೊಂದಿದರೆಂದು ನಂಬಲಾಗಿದೆ.

    ಹೆಳವನಕಟ್ಟೆ ಶ್ರೀರಂಗನಾಥಸ್ವಾಮಿ ದೇವಾಲಯ

    ಒಂದು ದಿನ ಮಂತ್ರಾಲಯದ ಸ್ವಾಮೀಜಿಯವರು ಗಿರಿಯಮ್ಮನವರಿದ್ದ ಗ್ರಾಮಕ್ಕೆ ಭೇಟಿ ನೀಡಿ ಮೂಲರಾಮದೇವರ ಪೂಜೆ ಮಾಡುತ್ತಿದ್ದ ಸಮಯದಲ್ಲಿ ಗಿರಿಯಮ್ಮನವರ ಭಾವಾವೇಶದ ಕೀರ್ತನೆಯಿಂದಾಗಿ ಆ ಊರ ಮುಖಂಡನ ಮಗನಿಗೆ ಕಣ್ಣು ಬಂದಿತು ಎಂದೂ, ಇದರಿಂದ ಸಂತೃಪ್ತನಾದ ನಾಯಕ ಹೇರಳವಾದ ಹೊನ್ನು ದಾನ ಮಾಡಿದನೆಂದೂ ಅದನ್ನು ಗಿರಿಯಮ್ಮ ದೇವಾಲಯ ಕಟ್ಟಿಸಲು ಬಳಸಿಕೊಂಡರು ಎಂಬ ಮಾತೂ ಇದೆ.

    ಹೆಳವನಕಟ್ಟೆ ಶ್ರೀ ಲಕ್ಷ್ಮೀರಂಗನಾಥ ದೇವಾಲಯವು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಮಾರನಹಳ್ಳಿಯಲ್ಲಿ ಇದೆ. ಆ ಸ್ಥಳದಲ್ಲಿ ನದಿಗೆ ಸೋಪಾನವನ್ನೂ, ಮಾರುತಿ ದೇವಸ್ಥಾನವನ್ನೂ ಗಿರಿಯಮ್ಮನವರೇ ಕಟ್ಟಿಸಿದ್ದರೆಂದೂ ಜನ ಹೇಳುತ್ತಾರೆ. (ಸಂಗ್ರಹಿತ ಲೇಖನ ಜಯರಾಜ್ ಕುಲಕರ್ಣಿ)

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!