ಎಂ.ವಿ. ಶಂಕರಾನಂದ
ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬುದು ಬಹು ಚಾಲ್ತಿಯಲ್ಲಿರುವ ಮಾತು. ನಾಗರ ಪಂಚಮಿ ಅಥವಾ ಗರುಡ ಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ದೊಡ್ಡ ಹಬ್ಬ. ಇದು ಸರ್ಪಗಳು ನಮ್ಮನ್ನು ಕಚ್ಚದಿರಲಿ, ವಿಷಬಾಧೆ ಪರಿಹಾರವಾಗಲಿ, ಸಂತಾನ ಪ್ರಾಪ್ತಿಯಾಗಲಿ, ಸಂಪತ್ತು ದೊರೆಯಲಿ, ಚರ್ಮರೋಗಗಳು ನಿವಾರಣೆಯಾಗಲಿ ಮತ್ತು ಮರಣಾನಂತರ ಸ್ವರ್ಗ ಪ್ರಾಪ್ತಿಯಾಗಲಿ ಎಂಬ ಹಲವಾರು ಇಚ್ಛೆಗಳನ್ನು ಇಟ್ಟುಕೊಂಡು ಫಲಪ್ರಾಪ್ತಿಗಾಗಿ ತನಿ ಎರೆಯುವ ಹಬ್ಬ.
ಅದು ವಿಶೇಷವಾಗಿ ಅಕ್ಕ ತಂಗಿಯರು ತವರುಮನೆಗೆ ಬಂದು ಸಿಹಿ ಉಂಡು, ಬಣ್ಣದ ಸೀರೆ ಉಟ್ಟು, ನಲಿಯುವ ಹಬ್ಬ. ಈ ದಿನ ನಾಗರಕಲ್ಲಿಗೆ, ಹಾವಿನ ಹುತ್ತಕ್ಕೆ ಅಥವಾ ಮನೆಗೇ ತಂದ ಹುತ್ತದ ಮಣ್ಣಿಗೆ, ಇಲ್ಲವೇ ರಂಗೋಲಿಯಿಂದ ಬರೆದ, ಅಕ್ಕಿ ಹಿಟ್ಟಿನಿಂದ ಮಾಡಿದ ನಾಗರಹಾವಿನ ಚಿತ್ರಕ್ಕೆ ಶ್ರದ್ಧಾಭಕ್ತಿಗಳಿಂದ ಹಾಲೆರೆಯುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ.
ಈ ದಿನ ನಾಗರ ಕಲ್ಲಿಗೆ ಹಾಲೆರೆಯುವ ಮೂಲಕ ತಾಯಿಯ ಹಾಲ ಋಣ ತೀರಿಸಬಹುದು ಎಂಬ ನಂಬಿಕೆಯೂ ಇದೆ. ಕೆಲವು ಕಡೆ ನಿಜವಾದ ನಾಗರನಿಗೇ ಹಾಲೆರೆವ ರೂಢಿಯೂ ಇದೆ. ಗುಜರಾತಿನಲ್ಲಿ ಈ ವ್ರತವನ್ನು ಇದೇ ತಿಂಗಳ ಕೃಷ್ಣ ಪಂಚಮಿಯಂದು ಆಚರಿಸುತ್ತಾರೆ. ಪಶ್ಚಿಮ ಬಂಗಾಳ, ಬಾಂಗ್ಲಾ ದೇಶಗಳಲ್ಲಿ ಕಶ್ಯಪ ಋಷಿಗಳ ಮಾನಸ ಪುತ್ರಿಯಾದ ಸರ್ಪದೇವಿಯ ಆರಾಧನೆಯಾಗಿ ಈ ಹಬ್ಬವನ್ನು ಮನಸಾದೇವಿ ಎಂದು ಆಚರಿಸುತ್ತಾರೆ.
ನಾಗರ ಪಂಚಮಿ ಅಣ್ಣ –ತಂಗಿಯರ ಹಬ್ಬವೂ ಹೌದು. ಅಂದು ಸೋದರಿಯರು ಸೋದರರ ಹೊಟ್ಟೆ-ಬೆನ್ನಿಗೆ ಹಾಲನ್ನು ಸವರಿ.ಹೊಟ್ಟೆ ಬೆನ್ನು ತಂಪಾಗಿರಲಿ’’ ಎಂದು ಹಾರೈಸುತ್ತಾರೆ. ಹೊಟ್ಟೆ ಎಂದರೆ ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ. ಬೆನ್ನು ಎಂದರೆ ಹಿಂದಿನ ಪೀಳಿಗೆ ಅಂದರೆ, ನಮ್ಮ ಹಿರಿಯರು ಎಂಬ ಸಂಕೇತ. ಒಡ ಹುಟ್ಟಿದವವರು ಮತ್ತು ಅವರ ಮಕ್ಕಳು ಎಲ್ಲರೂ ಚೆನ್ನಾಗಿರಲಿ ಎಂದು ಹೀಗೆ ಹಾರೈಸುತ್ತಾರೆ.
ಹಿಂದೆ ಒಂದೂರಿನಿಂದ ಮತ್ತೊಂದೂರಿಗೆ ಹೋಗಲು ಈಗಿನಂತೆ ವಾಹನ ಸೌಕರ್ಯಗಳು ಇರುತ್ತಿರಲಿಲ್ಲ. ಆಗ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಒಬ್ಬರನ್ನೊಬ್ಬರು ನೋಡುವುದೇ ಕಷ್ಟವಾಗಿತ್ತು. ಕನಿಷ್ಠ ವರ್ಷಕ್ಕೊಮ್ಮೆಯಾದರೂ ಅಣ್ಣ-ತಂಗಿ, ಅಕ್ಕ-ತಮ್ಮಂದಿರು ಸಂಧಿಸಲಿ, ಬಾಂಧವ್ಯ ಹಾಗೇ ಚಿರವಾಗಿರಲಿ ಎಂದು ಹಿರಿಯರು ಈ ಹಬ್ಬವನ್ನು ಸಹೋದರ-ಸಹೋದರಿಯರ ಹಬ್ಬ ಎಂದು ಕರೆದರು. ಬಿತ್ತನೆ ಕಾರ್ಯ ಮುಗಿಸಿ, ವರ್ಷದ ಮೊದಲ ಫಸಲಿನ ನಿರೀಕ್ಷೆಯಲ್ಲಿರುವ ಸೋದರರು, ಸೋದರಿಯರನ್ನು ಕರೆಸಿ, ಉಡಿ ತುಂಬಿ ಕಳುಹಿಸಲಿ ಎಂಬುದೂ ಈ ಹಬ್ಬದ ಆಶಯವಾಗಿದೆ.
ಚಂದ್ರನು ಪೂರ್ಣಿಮಾ ದಿನ ಶ್ರವಣ ನಕ್ಷತ್ರದಲ್ಲಿ ಇರುವ ಮಾಸವೇ ಶ್ರಾವಣ. ಚಂದ್ರನು ಮನಃಕಾರಕ. ಶ್ರಾವಣದಲ್ಲಿ ಚಂದ್ರನ ಪ್ರಭಾವ ಹೆಚ್ಚು. ಚಂದ್ರನು ಶ್ರಾವಣ ತಿಂಗಳ ಮೊದಲ ದಿನವಾದ ಪಾಡ್ಯದಿಂದ ಪ್ರತಿ ದಿನವೂ ಹನ್ನೆರಡು ಡಿಗ್ರಿಯಂತೆ ಸಂಚರಿಸುತ್ತಾನೆ. ಪಂಚಮಿಯ ದಿನದ ಹೊತ್ತಿಗೆ ಅರವತ್ತು ಡಿಗ್ರಿಗೆ ಬರುತ್ತಾನೆ. ಅಂದರೆ ಚಂದ್ರ ಆ ಹೊತ್ತಿಗೆ ಒಂದು ಕೋನದಲ್ಲಿರುತ್ತಾನೆ. ಚಂದ್ರನು ತ್ರಿಕೋನಕ್ಕೆ ಬಂದಾಗ ಭೂವರ್ಗ ಹಾಗೂ ಜಲವರ್ಗದ ಮೇಲೆ ಅವನ ಪ್ರಭಾವ ಹೆಚ್ಚಾಗಿರುತ್ತದೆ. ಚಂದ್ರ ಪ್ರಭಾವ ಹೆಚ್ಚಾಗಿರುವ ಕಾಲದಲ್ಲಿ ಸಾತ್ವಿಕ ಆಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ಶ್ರಾವಣ ಶುದ್ಧ ಪಂಚಮಿಯ ದಿನ ಉದ್ದಿನ ಕಡುಬು, ಹಾಗೂ ಸಿಹಿ ಕಡುಬು, ತಂಬಿಟ್ಟು ಮೊದಲಾದ ಸಾತ್ವಿಕ ಆಹಾರಗಳನ್ನು ಮಾಡುತ್ತಾರೆ. ಅಂದು ಸಾತ್ವಿಕ ಆಹಾರ ಸೇವಿಸಿ ಪಾರಮಾರ್ಥಿಕ ಚಿಂತನೆ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ.ಮನುಷ್ಯ ಚಿಂತನೆಯ ಕೇಂದ್ರವೇ ಮೆದುಳು. ಮೆದುಳು ಕೂಡ ಸರ್ಪದ ಆಕಾರದಲ್ಲೇ ಇದೆ. ಹೀಗಾಗಿ ಇದಕ್ಕೆ ಕುಂಡಲಿನಿ ಎನ್ನುವರು. ಮನಃಕಾರಕನಾದ ಚಂದ್ರನ ಪ್ರಭಾವವಿರುವ ಮಾಸದಲ್ಲಿ ಕುಂಡಲಿಯನ್ನು ಸಾತ್ವಿಕ ರೀತಿಯಲ್ಲಿ ಉದ್ರೇಕಿಸುವುದೇ ಈ ಸರ್ಪಪೂಜೆಯ ಪರಮಾರ್ಥವಾಗಿದೆ.
ಸಾಮಾನ್ಯವಾಗಿ ಜ್ಯೇಷ್ಠ-ಆಷಾಢದ ನಡುವೆ ಮಳೆಯಾಗುತ್ತದೆ. ಈ ಕಾಲದಲ್ಲಿ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಶ್ರಾವಣದ ಆರಂಭದ ಹೊತ್ತಿಗೆ ಬಿತ್ತಿದ ಬೀಜಗಳು ಪೈರುಗಳಾಗಿ ಬೆಳೆದಿರುತ್ತವೆ. ಬೆಳೆದ ಪೈರನ್ನು ಇಲಿಗಳು ತಿಂದು ಅಪಾರ ಹಾನಿಯನ್ನುಂಟು ಮಾಡುತ್ತವೆ. ಇಲಿಗಳನ್ನು ಹಿಡಿಯುವುದು ರೈತರಿಗೆ ಅಸಾಧ್ಯವಾದ ಕೆಲಸ. ಈ ಕಾರ್ಯದಲ್ಲಿ ಹಾವುಗಳು ರೈತನಿಗೆ ನೆರವಾಗುತ್ತವೆ. ಇಲಿಗಳನ್ನು ತಿನ್ನುವ ಮೂಲಕ ಹಾವು ರೈತನ ಮಿತ್ರನಾಗಿದೆ. ಈ ಋಣವನ್ನು ರೈತ ಹುತ್ತಕ್ಕೆ ಹಾಲು ಎರೆಯುವ ಮೂಲಕ ತೀರಿಸುತ್ತಾನೆ.
ಹಾವುಗಳು ಗೆದ್ದಲುಗಳು ಕಟ್ಟುವ ಹುತ್ತದಲ್ಲಿ ವಾಸಿಸುತ್ತದೆ. ಬಹು ನಯವಾದ ಮಣ್ಣಿನಿಂದ ಗೆದ್ದಲು ಕಟ್ಟಿದ ಹುತ್ತವು ಮಳೆ, ಗಾಳಿಗಳಿಗೂ ಜಗ್ಗುವುದಿಲ್ಲ. ಹುತ್ತದ ಒಳಗೆ ಕೂಡ ಗೆದ್ದಲುಗಳು ನವಿರಾದ ಮಣ್ಣಿನಿಂದ ನೆಲವನ್ನು ಸಮತಟ್ಟು ಮಾಡಿರುತ್ತವೆ. ಅಲ್ಲಿ ನೆಲ ಮೆತ್ತನೆಯ ಹಾಸಿಗೆಯಂತಿರುತ್ತದೆ. ಇಂತಹ ಸ್ಥಳದಲ್ಲಿ ವಾಸಿಸುವ ಹಾವುಗಳಿಗೆ ಶ್ರಾವಣದ ಚಂದ್ರನ ಕಿರಣಗಳು ಬೀಳುತ್ತಿದ್ದಂತೆ ಕಾಮೋದ್ರೇಕಗೊಳ್ಳುತ್ತವೆ. ಸಾಮಾನ್ಯವಾಗಿ ಹಾವುಗಳು ಕೂಡುವುದೂ ಈ ಕಾಲದಲ್ಲೇ. ಹಾಗೆ ಕೂಡುವ ಮುನ್ನ ಹೆಣ್ಣು ಹಾವುಗಳು ರಜಸ್ಸನ್ನು ಹೊರಬಿಡುತ್ತವಂತೆ. ಈ ಸಮಯದಲ್ಲಿ ಹಾವುಗಳ ಹುತ್ತದಿಂದ ಹೊರಬರುವಾಗ ಅಥವಾ ಹುತ್ತವನ್ನು ಸೇರುವಾಗ ವಿಸರ್ಜಿಸಲ್ಪಟ್ಟ ರಜಸ್ಸನ್ನು ನಯವಾದ ಹುತ್ತದ ಮಣ್ಣು ಹೀರಿಕೊಳ್ಳುತ್ತದೆ. ಹಾಗೆಯೇ ಈ ಸಮಯದಲ್ಲಿ ಸ್ಖಲನವಾಗುವ ಗಂಡುಹಾವಿನ ವೀರ್ಯವೂ ಹುತ್ತದ ಮಣ್ಣಿನಲ್ಲಿ ಸೇರ್ಪಡೆಯಾಗುತ್ತದೆ. ಈ ರೀತಿಯಾಗಿ ವೀರ್ಯ ಮತ್ತು ರಜಸ್ಸು ಲೇಪಿತ ಹುತ್ತದ ಮಣ್ಣಿಗೆ ನೀರಾಗಲೀ ಹಾಲಾಗಲೀ ಬಿದ್ದಾಗ ಒಂದು ಸುಮಧುರವಾದ ವಾಸನೆ ಉತ್ಪತ್ತಿಯಾಗುತ್ತದೆ.
ಹೆಂಗಸರು ಹಬ್ಬದ ದಿನ ಹುತ್ತಕ್ಕೆ ಹಾಲು ಹಾಕಿದಾಗ ಅಂದರೆ ತನಿ ಎರೆದಾಗಲೂ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈ ಸುಗಂಧಯುಕ್ತವಾದ ವಾಸನೆಯು ಹೆಣ್ಣಿನ ಭಾವನೆಗಳನ್ನು ಕೆರಳಿಸುವುದೇ ಅಲ್ಲದೆ, ರೀಪ್ರೋಡಕ್ಟೀವ್ ಆರ್ಗನ್ಸ್ ಮೇಲೂ ನೇರ ಪರಿಣಾಮ ಉಂಟು ಮಾಡುತ್ತವೆ. ಈ ಮಾಸದಲ್ಲಿ ಚಂದ್ರ ಪ್ರಭಾವವೂ ಇರುವ ಕಾರಣ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ. ಆದ್ದರಿಂದಲೇ ಹಿರಿಯರು ನಾಗರ ಪಂಚಮಿ ದಿನ ಹುತ್ತಕ್ಕೆ ತನಿ ಎರೆದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.
ಸಾಮಾನ್ಯವಾಗಿ ಚರ್ಮರೋಗ ಬಂದಾಗ ಜನರು ಹುತ್ತಕ್ಕೆ ಹಾಲೆರೆದು ಆ ಹುತ್ತದ ಮಣ್ಣನ್ನು ಮೈಗೆಲ್ಲಾ ಹಚ್ಚಿಕೊಳ್ಳುತ್ತಾರೆ. ಅಂದರೆ ಹುತ್ತದ ಮಣ್ಣಿನಲ್ಲಿ ಔಷಧಿಯ ಗುಣವಿರುತ್ತದೆ ಎಂಬುದನ್ನು ಇದು ಸಾಬೀತು ಮಾಡುತ್ತದೆ. ನಾಗರ ಪಂಚಮಿಯಂದು ವಿಷ್ಣುವಿನ ಶಯನ ಶೇಷನಾಗನಿಗೆ ಸಲ್ಲಿಸುವ ಪೂಜೆಯೇ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂದು ಹೇಳುತ್ತಾರೆ. ಈ ಸಲುವಾಗಿ ವಾಸುಕಿ, ತಕ್ಷಕ, ಕಾಲಿಯಾ, ಮಣಿಭದ್ರ, ಐರಾವತ, ಧೃತರಾಷ್ಟç, ಕಾರ್ಕೋಟಕ, ಧನಂಜಯ ಅನಂತ, ಶಂಖ, ಪದ್ಮ, ಪಿಂಗಳ ಮುಂತಾದ ಹಾವುಗಳನ್ನು ಸ್ಮರಿಸಿಕೊಂಡು ನಾಗಪೂಜೆ ಮಾಡಿ ಹಾಲನ್ನು ಎರೆಯುವರು.
ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಗಿರುವ ಇನ್ನೊಂದು ಹೆಸರೇ ಉಂಡಿ ಹಬ್ಬ. ಈ ಹಬ್ಬಕ್ಕಾಗಿ ಹೊಸ ಬೆಲ್ಲದ ಪಾಕದಲ್ಲಿ ವಿವಿಧ ದವಸ ಧಾನ್ಯಗಳನ್ನು ಒಡಗೂಡಿಸಿ ವೈವಿಧ್ಯಮಯ ರುಚಿ ನೀಡುವಂಥ ತಂಬಿಟ್ಟು, ನವಣೆ ಉಂಡೆ, ಅಕ್ಕಿ ತಂಬಿಟ್ಟು, ಅರಳುಂಡೆ, ಎಳ್ಳು ಉಂಡಿ, ಸೇಂಗಾ ಉಂಡಿ, ಡಾಣಿ ಉಂಡಿ, ಹುರಗಡ್ಲಿ ಹುಂಡಿ, ಮಂಡಾಳು ಉಂಡಿ, ಅವಲಕ್ಕಿ ಉಂಡಿ, ರವೆ ಉಂಡೆ, ಬೇಸನ್ ಉಂಡೆ, ಬೂಂದಿ ಲಾಡು, ಅಂಟಿನ ಉಂಡಿ, ಸೀಕೆದುಂಡಿ, ಅಳ್ಳಿಟ್ಟಿನ ಉಂಡಿ, ಎಳ್ಳಿನ ಚಿಗಳಿ ಮುಂತಾದ ಉಂಡಿಗಳನ್ನು ತಯಾರು ಮಾಡಿರುತ್ತಾರೆ.
ನಾಗರ ಪಂಚಮಿ ದಿನ ಕರಿದರೆ ನಾಗರ ಹೆಡೆ ಕರಿದಂತೆ’’ ಎಂಬ ನಂಬುಗೆ ಇರುವುದರಿಂದ ಈ ದಿನದ ಆಹಾರದಲ್ಲಿ ಯಾವುದೇ ಕರಿದ ತಿಂಡಿ ಇರುವುದಿಲ್ಲ. ಜನರು ವೈವಿಧ್ಯಮಯ ತಿನಿಸನ್ನು ಸವಿದ ಮೇಲೆ ಊರ ಮುಂದಿರುವ ಮರಗಳಿಗೆ ಜೋಕಾಲಿ ಕಟ್ಟಿ ಮಕ್ಕಳನ್ನು ಅದರಲ್ಲಿ ಕುಳ್ಳಿರಿಸಿ ತೂಗುವರು. ಇಲ್ಲವಾದರೆ ಮುಂದಿನ ಜನ್ಮದಲ್ಲಿ ಬಾವಲಿಯಾಗಿ ತಲೆಕೆಳಗು ಮಾಡಿಕೊಂಡು ಬದುಕುವ ಸ್ಥಿತಿ ಬರುವುದು ಎಂಬ ನಂಬಿಕೆ ಇದೆ.
ಇದು ಹೆಣ್ಣು ಮಕ್ಕಳ ಹಬ್ಬ. ಮದುವೆಯಾಗಿ ಹತ್ತಾರು ವರ್ಷ ಕಳೆದರೂ, ಗಂಡನ ಮನೆಯಲ್ಲಿ ಸುಖ ಸಂತೋಷದಿಂದಿದ್ದರೂ, ತಾಯಿಯ ಜತೆ ನಾಗರಪಂಚಮಿಯಾದಾಗಲೇ ಮನಸ್ಸಿಗೆ ಮುದ. ಇದು ಹೆಂಗಸರ ವಿಶೇಷ. ಗಂಡನಿಗೆ ಪ್ರವೇಶವಿಲ್ಲ. ಆದ್ದರಿಂದಲೇ ನಾಚಿಕೆಯಿಲ್ಲದ ಅಳಿಯ, ನಾಗರ ಪಂಚಮಿಗೆ ಬಂದ ಎಂಬ ಗಾದೆಯೇ ಇದೆ.ವಿಷ್ಣುವಿನ ವಾಹನವಾದ ಗರುಡನು ದೇವಲೋಕದಿಂದ ಅಮೃತವನ್ನು ನಾಗಗಳಿಗೆ ತಂದುಕೊಟ್ಟು ತನ್ನ ತಾಯಿ ವಿನತೆಯನ್ನು ಅವುಗಳ ದಾಸ್ಯದಿಂದ ಬಿಡಿಸಿಕೊಂಡ ದಿನವೂ ಇಂದೇ ಆಗಿದೆ. ಆದ್ದರಿಂದಲೇ ಈ ದಿನವನ್ನು ಗರುಡಪಂಚಮಿ ಎಂದೂ ಕರೆಯುತ್ತಾರೆ.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.
Very informative article.
ಹತ್ತು ಹಲವು ಬಗೆಯ ನಂಬುಗೆ, ಆಚರಣೆ ಹೊಂದಿದ ನಾಗರ ಪಂಚಮಿಯ ಲೇಖನ ಖುಷಿ ಕೊಟ್ಟಿದೆ.
ಗರುಡ ಪಂಚಮಿ ಬಗ್ಗೆ ಸೊಗಸಾದ ವಿವರಣೆ ಮೂಡಿಬಂದಿದೆ.ಲೆಕಕರಿಗೂ ಪ್ರಕಟಿಸಿದ ತಮಗೂ.ಧನ್ಯವಾದಗಳು.🙏
ನಾಗರಪಂಚಮಿ ಆಚರಣೆ ಬಗ್ಗೆ ಬಹಳ ವಿವರವಾಗಿ ಬರೆದಿದ್ದಾರೆ. ಲೇಖಕರಿಗೆ ಧನ್ಯವಾದಗಳು.