ಆಗಸ್ಟ್ 13, ಶುಕ್ರವಾರ ಗುರುಗಳ ಆರಾಧನೆಯ ಪ್ರಯುಕ್ತ ತನ್ನಿಮಿತ್ತ ಈ ಲೇಖನ
ವಿಷ್ಣುತೀರ್ಥ, ಇಭರಾಮಪುರ
ಶ್ರೀ ಯೋಗಿ ನಾರಾಯಣಾಚಾರ್ಯರು ಕಲಿಯುಗ ಕಲ್ಪವೃಕ್ಷ ಕಾಮಧೇನು ಶ್ರೀರಾಘವೇಂದ್ರ ಗುರುಸಾರ್ವಭೌಮರ ವಿಶೇಷ ಕರುಣಾ ಸುಪಾತ್ರರು ಹಾಗೂ ಶ್ರೀ ಅಪ್ಪಾವರ ಸಾಕ್ಷಾತ್ ಶಿಷ್ಯರು.
ಶ್ರೀಯೋಗಿ ನಾರಾಯಣಾಚಾರ್ಯರು ವಿದ್ಯಾಸಂಪನ್ನರಾದ ಶ್ರೀ ಉಪಾಧ್ಯಾಯ ರಾಮಾಚಾರ್ಯರಲ್ಲಿ ಸಕಲ ವೇದಾಂತ ಶಾಸ್ತ್ರವನ್ನು ಅಧ್ಯಯನ ಮಾಡಿದವರು.
ಶ್ರೀ ನಾರಾಯಣಾಚಾರ್ಯರು ಮೂಲತಃ ಗದುಗಿನವರು. ಆಚಾರ್ಯರು ಗದುಗಿನ ವೀರ ನಾರಾಯಣನ ಅಂತರಂಗ ಭಕ್ತರು. ತಮ್ಮ ಸ್ವರೂಪಪೋದ್ಧಾರಕ ಗುರುಗಳ ಪ್ರಾಪ್ತಿಗಾಗಿ ನಿತ್ಯವೂ ಶ್ರೀ ನಾರಾಯಣಾಚಾರ್ಯರು ವೀರ ನಾರಾಯಣನ ಸೇವೆ ಮಾಡುತ್ತಿದ್ದರು.
ಸ್ವರೂಪೋದ್ಧಾರಕ ಗುರುಗಳ ಪ್ರಾಪ್ತಿ:ಆಚಾರ್ಯರ ನಿಷ್ಠೆಯ ಸೇವೆಗೆ ಮೆಚ್ಚಿದ ವೀರ ನಾರಾಯಣ ದೇವರು ಸ್ವಪ್ನದಲ್ಲಿ ಆಚಾರ್ಯರಿಗೆ ನಿಮ್ಮ ಸ್ವರೂಪೊದ್ದಾರಕರು ಅತಿ ಶೀಘ್ರದಲ್ಲಿ ನಿನಗೆ ಭೇಟಿ ಆಗುತ್ತಾರೆ ಅಂತ ಸೂಚನೆ ಕೊಡುತ್ತಾರೆ.ಶ್ರೀ ಅಪ್ಪಾವರು ಸಂಚಾರದ ಅನ್ವಯ ಗದುಗಿಗೆ ಬಂದಿರುತ್ತಾರೆ. ಅಲ್ಲಿ ಮಧ್ಯಾಹ್ನದ ಸಮಯಕ್ಕೆ ಶ್ರೀ ವೀರ ನಾರಾಯಣನ ದರ್ಶನಕ್ಕೆ ಅಪ್ಪಾವರು ಬಂದರು, ಬಂದ ಸಮಯದಲ್ಲಿ ಅರ್ಚಕರು ದೇವಸ್ಥಾನ ಗರ್ಭಗುಡಿಗೆ ಬೀಗ ಹಾಕಿರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಅಪ್ಪಾವರು ವೀರ ನಾರಾಯಣನ ಪ್ರಾರ್ಥಿಸುತ್ತಾ ಸ್ವಾಮಿ ನಾನು ನಿನ್ನ ದರ್ಶನಕ್ಕಾಗಿ ಇಭರಾಮಪುರದಿಂದ ಬಂದಿದ್ದೇನೆ ಅಂತ ಪ್ರಾರ್ಥಿಸಿದಾಗ, ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆಯುತ್ತದೆ.
ಇದೇ ಸಮಯದಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ದೇವಸ್ಥಾನ ಪ್ರಾಂಗಣದಲ್ಲಿಯೇ ಇರುತ್ತಾರೆ. ಶ್ರೀ ಅಪ್ಪಾವರನ್ನು ಯಾರೋ ಯಾತ್ರಿಕರು ನಾರಾಯಣನ ದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿದಿರುತ್ತಾರೆ ಆದರೆ ಅಲ್ಲಿ ನಡೆದಿದ್ದು ಬೇರೆ. ಅಪ್ಪಾವರ ಪ್ರಾರ್ಥನೆಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುದನ್ನು ಕಂಡು ಆಚಾರ್ಯರು ಒಂದು ಕ್ಷಣ ಏನು ತೋಚದೆ ಬೆರಗಾಗುತ್ತಾರೆ .
ಶ್ರೀಅಪ್ಪಾವರು ವೀರ ನಾರಾಯಣನ ಜೊತೆ ನೇರವಾಗಿ ಸಂದರ್ಶನ ಮಾಡುವುದನ್ನು ಕಂಡು ಸ್ವಪ್ನದಲ್ಲಿ ಸೂಚಿಸಿದ ಹಾಗೆ ತಮಗೆ ಯೋಗ್ಯವಾದ ಗುರುಗಳ ಪ್ರಾಪ್ತಿಯಾಯಿತು ಎಂದು ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರಲ್ಲಿ ಶಿಷ್ಯ ಸ್ವೀಕಾರಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರ ಪ್ರಾರ್ಥನೆಗೆ ಶ್ರೀ ಅಪ್ಪಾವರು ಸಂತುಷ್ಟರಾಗಿ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ.
ರಾಯರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ: ಶಿಷ್ಯತ್ವ ಸ್ವೀಕಾರದ ಪ್ರತೀಕವಾಗಿ ನಮ್ಮ ಕುಲಗುರುಗಳಾದ ಮಂತ್ರಾಲಯ ಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠಾಪಿಸಲು ಶ್ರೀ ಅಪ್ಪಾವರು ಇಚ್ಛಿಸುತ್ತಾರೆ. ಅಪ್ಪಾವರ ಆಜ್ಞೆಯಂತೆ ಶ್ರೀ ಯೋಗಿ ನಾರಾಯಣಾಚಾರ್ಯರು ಬೃಂದಾವನ ಕೆತ್ತನೆ ಮಾಡುತ್ತಾರೆ. ಶ್ರೀ ಅಪ್ಪಾವರು ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಭವ್ಯ ಬೃಂದಾವನವನ್ನು ಪ್ರತಿಷ್ಠಾಪನೆ ಮಾಡುತ್ತಾರೆ.
ಶಿಲ್ಪಕಲಾ ನಿಪುಣ : ಶ್ರೀ ಅಪ್ಪಾವರು ಹಾಗೂ ವೀರ ನಾರಾಯಣನ ಅನುಗ್ರಹದಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶಿಲ್ಪಕಲೆಯ ಅನುಗ್ರಹ ಹೊಂದಿರುತ್ತಾರೆ. ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಬೃಂದಾವನ, ಅಪ್ಪಾವರ ಕಟ್ಟೆಯಲ್ಲಿ ಮಂಟಪದಲ್ಲಿ ಕೆತ್ತನೆಗಳು , ಮಂತ್ರಾಲಯದ ತುಂಗಾ ತಟದಲ್ಲಿ ರಾಯರು ಆಹ್ನಿಕ ಮಾಡುತ್ತಿದ್ದ ಸ್ಥಳ ಗುರುತಿಸಿ ಅಲ್ಲಿ ಅವತಾರತ್ರಯ ಪ್ರಾಣದೇವರು, ಅಪ್ಪಾವರ ಕಟ್ಟೆಯಲ್ಲಿ ಶಾಲಿಗ್ರಾಮ ಶಿಲೆಯಲ್ಲಿ ಚತುರ್ಭುಜ ವೇಣುಗೋಪಾಲ ಹಾಗೂ ಶ್ರೀ ಅಪ್ಪಾವರ ಭವ್ಯವಾದ ಮೂರ್ತಿಯು ಶ್ರೀ ಯೋಗಿ ನಾರಾಯಣಾಚಾರ್ಯರ ನೈಪುಣ್ಯತೆ ತೋರಿಸುತ್ತೆ.
ಗುರುಗಳ ಅನುಗ್ರಹದಿಂದ ಯಾತ್ರೆ:ಶ್ರೀ ಅಪ್ಪಾವರು ಒಂದು ಬಾರಿ ದಕ್ಷಿಣ ಭಾರತದ ತೀರ್ಥ ಯಾತ್ರೆ ಮಾಡಲು ಇಚ್ಛಿಸುತ್ತಾರೆ. ಇದಕ್ಕಾಗಿಯೇ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀಂದ್ರತೀರ್ಥರ ದರ್ಶನ ಮಾಡಲು ನಿರ್ಧರಿಸುತ್ತಾರೆ. ಯಾತ್ರೆಯ ಬಗ್ಗೆ ಶ್ರೀ ಅಪ್ಪಾವರು ತಮ್ಮ ಶಿಷ್ಯರಾದ ಯೋಗಿ ನಾರಾಯಣಾಚಾರ್ಯರ ಹತ್ತಿರ ಹೇಳಿಕೊಳ್ಳುತ್ತಾರೆ.
ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರ ಮಾತಿನಂತೆಯೇ ಎಲ್ಲಾ ಸಿದ್ಧತೆಗಳನ್ನು ಮಾಡಿರುತ್ತಾರೆ. ದೂರದ ಕುಂಭಕೋಣಕ್ಕೆ ತಲುಪಲು ಸುಮಾರು ವಾರದ ಸಮಯ ಬೇಕು. ವಾರಗಳೇ ಕಳೆದವು. ಶ್ರೀ ವಿಜಯೀಂದ್ರತೀರ್ಥರ ಆರಾಧನೆ ಹತ್ತಿರವಾಗುತ್ತಿದೆ. ಜೇಷ್ಟ ಮಾಸದ ಕೃಷ್ಣ ಪಕ್ಷ ಏಕಾದಶಿಯೂ ಕೂಡ ಬಂತು. ಮರುದಿನವೇ ಶ್ರೀ ವಿಜಯೀಂದ್ರತೀರ್ಥರ ಆರಾಧನೆ. ಆದರೂ ಶ್ರೀ ಅಪ್ಪಾವರು ಯಾತ್ರೆಗೆ ಹೊರಡುವ ಬಗ್ಗೆ ಏನೂ ಸುಳಿವು ಕೊಡಲಿಲ್ಲ.
ಏಕಾದಶಿಯ ರಾತ್ರಿ ಅಪ್ಪಾವರು ಶ್ರೀ ನಾರಾಯಣಾಚಾರ್ಯರಿಗೆ ಕರೆದು ನಾಳೆ ಶ್ರೀ ವಿಜಯೀಂದ್ರರ ಆರಾಧನೆ ದರ್ಶನಕ್ಕೆ ಹೊರಡಬೇಕು ಬೆಳಗ್ಗೆ ಬೇಗ ಎದ್ದು ಅಹ್ನಿಕಾದಿಗಳನ್ನು ಮುಗಿಸಲು ಸೂಚಿಸುತ್ತಾರೆ. ದರ್ಶನದ ಭಾಗ್ಯ ದೊರೆಯುತ್ತದೆ ಎನ್ನುವ ಖುಷಿಯಲ್ಲಿ ಇದ್ದ ಆಚಾರ್ಯರಿಗೆ ಇನ್ನೊಂದು ಕಡೆ ದೂರದ ಕುಂಭಕೋಣಕ್ಕೆ ಬೆಳಗಾಗುವುದರಲ್ಲಿ ಹೇಗೆ ಹೋಗಿ ತಲುಪಬೇಕೆಂಬ ಗೊಂದಲ ಮನಸ್ಸಿನಲ್ಲಿ ಮೂಡುತ್ತದೆ.
ಆದರೂ ಶ್ರೀ ಅಪ್ಪಾವರ ಆಜ್ಞೆ ಎಂದು ಭಾವಿಸಿ ಬೆಳಗ್ಗೆ ಬೇಗ ಎದ್ದು ಅಹ್ನೀಕಾದಿಗಳನ್ನು ಮುಗಿಸಿದ ಆಚಾರ್ಯರು ಶ್ರೀ ಅಪ್ಪಾವರ ಬಳಿ ಬಂದು ತಮ್ಮ ಮನದಲ್ಲಿನ ಗೊಂದಲಗಳನ್ನು ಹೇಳಿಕೊಳ್ಳುತ್ತಾರೆ . ಅಪ್ಪಾವರು ಆಚಾರ್ಯರ ಗೊಂದಲಕ್ಕೆ ನಗುತ್ತಾ ನನ್ನ ಕೈ ಹಿಡಿಯಿರಿ ಎನ್ನುತ್ತಾರೆ.
ಶ್ರೀ ಅಪ್ಪಾವರ ಕೈ ಹಿಡಿದ ಶ್ರೀ ಯೋಗಿ ನಾರಾಯಣಾಚಾರ್ಯರಿಗೆ ಕ್ಷಣಮಾತ್ರದಲ್ಲಿ ಕುಂಭಕೋಣಕ್ಕೆ ತಲುಪಿಸಿ ಚತುರಧಿಕ ಶತಗ್ರಂಥರತ್ನಗಳ ಒಡೆಯರಾದ ಶ್ರೀ ವಿಜಯೀಂದ್ರ ತೀರ್ಥರ ದರ್ಶನವನ್ನು ಮಾಡಿಸುತ್ತಾರೆ.
ಶ್ರೀ ಅಪ್ಪಾವರ ಸ್ತೋತ್ರ :ಶ್ರೀ ಆಚಾರ್ಯರು ತಮ್ಮ ಗುರುಗಳಾದ ಶ್ರೀ ಅಪ್ಪಾವರ ಮಹಿಮೆ ಸಾರುವ ಶ್ರೀ ಇಭರಾಮಪುರ ಶ್ರೀ ಕೃಷ್ಣಾರ್ಯ ಸ್ತೋತ್ರ ರಚಿಸಿದರು. ತಾವು ಪ್ರತೀಕ್ಷ್ಯವಾಗಿ ಕಂಡ ಹಾಗೂ ಶ್ರುತಿ ಸ್ಮೃತಿ ಸಮ್ಮತಿಸುವ ಮಹಿಮೆಗಳು ಮತ್ತು ಆ ಮಹಿಮೆಗಳು ಯಾವ ಯಾವ ಪುರಾಣಗಳಲ್ಲಿ ಉಲೇಖವಾಗಿದೆ ಎಂದು ಸ್ತೋತ್ರಮಾಡಿದ್ದಾರೆ.
ಅಪರೋಕ್ಷ ಜ್ಞಾನ: ಸುರಪುರದ ಆನಂದದಾಸರು ತಮ್ಮ ಸಮಕಾಲೀನ ಎಲ್ಲಾ ಅಪರೋಕ್ಷ ಜ್ಞಾನಿಗಳನ್ನು ಗುರುತಿಸಿ ರಚಿಸಿದ ಕೀರ್ತನೆ :
ಶ್ರೀ ರಾಘವೇಂದ್ರರಾಯರ ಪಾದಾಂಬುಜ ।ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
*ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।**ಬಲವಂತ ಯೋಗಿ ನಾರಾಯಣಾರ್ಯರ ।।*
ಮೇಲೆಕಂಡ ಕೀರ್ತನೆಯಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶ್ರೀರಾಘವೇಂದ್ರ ಗುರುಸಾರ್ವಭೌಮರ, ಶ್ರೀ ಅಪ್ಪಾವರ ಹಾಗೂ ತಮ್ಮ ಇಷ್ಟ ದೈವ ಶ್ರೀ ವೀರ ನಾರಾಯಣನ ಅನುಗ್ರಹಕ್ಕೆ ಪಾತ್ರರಾಗಿ ಅಪರೋಕ್ಷ ಜ್ಞಾನ ಹೊಂದಿದ್ದಾರೆ ಎಂದು ತಿಳಿಯಬಹುದು.
ಸಮಕಾಲೀನ ಅಪರೋಕ್ಷ ಜ್ಞಾನಿಗಳ ಜೊತೆ ಒಡನಾಟ :
ಶ್ರೀ ಆಚಾರ್ಯರು ತಮ್ಮ ಸಮಕಾಲೀನ ಅಪರೋಕ್ಷ ಜ್ಞಾನಿಗಳಾದ ಸುರಪುರದ ಆನಂದದಾಸರು , ಮೊದಲಕಲ್ಲು ಶೇಷದಾಸರು , ವಿಜಯರಾಮಚಂದ್ರ ವಿಠಲರು , ಸುಜ್ಞಾನೇಂದ್ರತೀರ್ಥರು , ಗಣೇಶಾಚಾರ್ಯರು , ಯಳಮೇಲಿ ಹಯಗ್ರೀವಾಚಾರ್ಯರು , ಅಂತಃ ಜ್ಞಾನಿಗಳ ಸಮ್ಮೂಹರೊಡನೆ ವಿಶೇಷ ಒಡನಾಟ ಹೊಂದಿದವರು ಮತ್ತು ಅವರ ಜೊತೆ ಅನೇಕ ಶಾಸ್ತ್ರದ ವಿಚಾರ ಚರ್ಚೆಮಾಡುತ್ತಿದ್ದರು.
ಶ್ರಾವಣ ಶುದ್ಧ ಪಂಚಮಿ ಶ್ರೀಲಯ ಚಿಂತನಾ ಪೂರ್ವಕವಾಗಿ ಹರಿಧ್ಯಾನ ಮಾಡುತ್ತಾ ತಮ್ಮ ಸ್ವರೂಪೋಧಾರ ಅಪ್ಪಾವರ ಸನ್ನಿಧಾನ ಹತ್ತಿರ ಅದೃಶ್ಯರಾದರು.