ಸುಮಾ ವೀಣಾ
ಕ್ರೂರ ಜಂತುಗಳೊಡನೆ ಸಖತನ ಫಲಿಸಿತು– ಮಹತ್ವದ ಕೀರ್ತನಕಾರರಲ್ಲಿ ಒಬ್ಬರಾಗಿರುವ ಕನಕದಾಸರು ಸಾಂಗತ್ಯ ಛಂದಸ್ಸಿನಲ್ಲಿ ರಚಿಸಿರುವ ‘ನಳಚರಿತ್ರೆ’ ಎಂಬ ಕಾವ್ಯದಿಂದ ಪ್ರಸ್ತುತ ಸಾಲನ್ನು ಆರಿಸಿದೆ.
ನಳಮಹಾರಾಜ ಬೆಂಕಿಯಲ್ಲಿ ಸಿಲುಕಿದ್ದ ಕಾರ್ಕೋಟಕ ಸರ್ಪವನ್ನು ರಕ್ಷಿಸುತ್ತಾನೆ. ಆದರೆ ಆ ಹಾವು ಉಪಕಾರಸ್ಮರಣೆ ಮಾಡದೆ ನಳಮಹಾರಾಜನನ್ನೆ ಕಚ್ಚುತ್ತದೆ. ಆ ಸಂದರ್ಭದಲ್ಲಿ ನಳಮಹಾರಾಜ ತನ್ನಲ್ಲಿಯೇ “ಕ್ರೂರ ಜಂತುಗಳೊಡನೆ ಸಖತನ ಫಲಿಸಿತು” ಎಂದು ಹೇಳಿಕೊಳ್ಳುತ್ತಾನೆ.
ಹಾವು ಕಚ್ಚಿದೊಡನೆ ಸ್ಫುರದ್ರೂಪಿಯಾಗಿದ್ದವನು ಕುರೂಪಿಯಾದಾಗ ದುಷ್ಟ ಹಾವಿನೊಂದಿಗೆ ಗೆಳೆತನ ಬೆಳೆಸುವ ತಪ್ಪಿಗೆ ನಾನು ಕೈ ಹಾಕಬಾರದಿತ್ತು ಎಂದು ತನ್ನನ್ನೆ ತಾನು ಹಳಿದುಕೊಳ್ಳುತ್ತಾನೆ. ಇಲ್ಲಿ ನಳಮಹಾರಾಜನ ಪರಿಸ್ಥಿತಿ” ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬಂತಾಗಿರುತ್ತದೆ.
ಮನುಷ್ಯ ನಿತ್ಯ ಸಹಜೀವನವನ್ನು ಅಪೇಕ್ಷಿಸುತ್ತಾನೆ ಹಾಗಾಗಿ ಸ್ನೇಹ, ಕೂಟ, ಆಟ,ಊಟ, ಎಲ್ಲವೂ ಇರುತ್ತದೆ. ಹಾಗೆ ಜೊತೆಗಿರಲಿ, ಜೊತೆಯಾಗಿರೋಣ ಎಂದು ಸ್ನೇಹಸಂಬಂಧ ಹೊಂದುವಾಗ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ತೊಂದರೆಗೆ ಸಿಲುಕುವುದು ಸತ್ಯ.
ಅದಕ್ಕೆ ಹಿರಿಯರು ‘ಸಜ್ಜನರ ಸಂಘ ಹೆಜ್ಜೇನು ಸವಿದಂತೆ’ ಎಂದಿರುವುದು. ಸಾಮಾಜಿಕ ಬದುಕಿನಲ್ಲಿ ನಮ್ಮ ಸಹವಾಸ ಸಖ್ಯ ಯಾವ ರೀತಿಯ ವ್ಯಕ್ತಿಗಳೊಂದಿಗೆ ಇದೆ ಎಂಬುದರ ಮೇಲೆಯೂ ನಮ್ಮ ವ್ಯಕ್ತಿತ್ವ ನಿರ್ಣಯವಾಗುತ್ತದೆ.
ಆದ್ದರಿಂದ ಸ್ನೇಹ ಹಸ್ತವನ್ನು ಚಾಚುವಾಗ ಇಲ್ಲವೆ ಬಯಸುವಾಗ ಆದಷ್ಟೂ ಜಾಗರೂಕವಾಗಿರಬೇಕಾಗುತ್ತದೆ. ಪರಾಮರ್ಶಿಸಿ ನೋಡದೆ ದುಷ್ಟರೊಡನೆ ಗೆಳೆತನ ಕಟ್ಟಿಕೊಂಡರೆ ಹಾವಿನಿಂದ ಕಚ್ಚಿಸಿಕೊಂಡು ವಿಕಾರ ರೂಪಿಯಾಗಿ ದುಷ್ಟ ಜಂತುವಿನೊಡನೆ ಗೆಳೆತನ ಮಾಡಿದೆನಲ್ಲಾ ಎಂದು ಪರಿತಪಿಸಿದ ನಳ ಮಹಾರಾಜನಂತಾಗುತ್ತದೆ ನಮ್ಮ ಪರಿಸ್ಥಿತಿಯೂ ಕೂಡ. ಸ್ನೇಹ ಎಷ್ಟು ಮಧುರವೋ ತುಸು ಎಡವಿದರೆ ಅಷ್ಟೇ ಯಾತನೆಯನ್ನೂ ಕೊಡಬಲ್ಲುದು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.