18.8 C
Karnataka
Friday, November 22, 2024

    ಸರ್ ಎಂ.ವಿಶ್ವೇಶ್ವರಯ್ಯ ಯುವ ಪೀಳಿಗೆಗೆ ಪ್ರೇರಣೆ- ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

    Must read

    BENGALURU AUG 18

    ಭಾರತ ಮಾತೆಯ ಶ್ರೇಷ್ಠ ಪುತ್ರ ಸರ್ ಎಂ. ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿದ ಕೊಡುಗೆ ಅತ್ಯಮೂಲ್ಯವಾದುದು. ಅವರ ಹೆಸರಿನ ಪ್ರಶಸ್ತಿ ಯುವ ಪೀಳಿಗೆಗೆ ಉನ್ನತಿಯನ್ನು ಸಾಧಿಸಲು ಪ್ರೇರಣೆಯಾಗಬೇಕು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಆಶಿಸಿದರು.

    ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಎಫ್.ಕೆ.ಸಿ.ಸಿ.ಐ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಎಂ.ಎಸ್. ರಾಮಯ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಆರ್. ಜಯರಾಂ ಅವರಿಗೆ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

    ಕನ್ನಡದಲ್ಲಿಯೇ ತಮ್ಮ ಭಾಷಣವನ್ನು ಪ್ರಾರಂಭಿಸಿದ ಉಪರಾಷ್ಟ್ರಪತಿಗಳು, ದೇಶ ಕಂಡ ಬಹುಮುಖ ಪ್ರತಿಭೆಯ ಅಪರೂಪದ ಮೇಧಾವಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ. ಆಧುನಿಕ ಮೈಸೂರು ನಿರ್ಮಾತೃ, ದೇಶದಲ್ಲಿ ಆಣೆಕಟ್ಟುಗಳನ್ನು ನಿರ್ಮಿಸಿ, ಜಲಸಂಪನ್ಮೂಲದ ಸದ್ಬಳಕೆಯ ಹಾದಿ ತೋರಿದರು. ದೇಶ ಅವರಿಗೆ ಕೃತಜ್ಞವಾಗಿರುತ್ತದೆ ಎಂದು ತಿಳಿಸಿದರು.

    ಭಾರತದ ಯುವ ಜನರು ಅವರಿಂದ ಪ್ರೇರಿತರಾಗಿ, ದೇಶದ ಪ್ರಗತಿಯ ವೇಗ ಹೆಚ್ಚಿಸುವ ಮೂಲಕ ಆತ್ಮ ನಿರ್ಭರ್ ಭಾರತ್ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಅಭಿವೃದ್ಧಿ ಎಂದರೆ ಕೇವಲ ಸಂಪತ್ತಿನ ಸೃಷ್ಟಿ ಅಲ್ಲ; ಜನರು ಸಂತೋಷದಿಂದ ಬದುಕುವ ವಾತಾವರಣ ನಿರ್ಮಿಸುವುದೂ ಸೇರಿದೆ ಎಂದು ತಿಳಿಸಿದರು.

    ಸರ್ ಎಂ. ವಿಶ್ವೇಶ್ವರಯ್ಯ ನವರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಿದ್ದು, ಪ್ರತಿಯೊಬ್ಬರೂ ಸ್ವತಃ ತಮ್ಮ ಉನ್ನತಿಯೊಂದಿಗೆ ದೇಶದ ಉನ್ನತಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಸರ್ ಎಂ. ವಿಶ್ವೇಶ್ವರಯ್ಯ ಒಬ್ಬ ಪ್ರತಿಭಾವಂತ ಎಂಜಿನಿಯರ್, ದಕ್ಷ ಆಡಳಿತಗಾರ ಹಾಗೂ ಶ್ರೇಷ್ಠ ದಾರ್ಶನಿಕರಾಗಿದ್ದರು ಎಂದು ಸ್ಮರಿಸಿದರು.

    ಅಂತೆಯೇ ರಾಜ್ಯದ ಕೈಗಾರಿಕೋದ್ಯಮ ಅಭಿವೃದ್ಧಿಗೆ ಎಫ್ ಕೆ ಸಿ ಸಿ ಐ ನೀಡುತ್ತಿರುವ ಕೊಡುಗೆ ಅಪೂರ್ವವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ನಮಗೆ ಮತ್ತೊಬ್ಬ ವಿಶ್ವೇಶ್ವರಯ್ಯ ಬೇಕು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಚಿಂತನೆಗಳು ಇಂದಿಗೂ ಪ್ರಸ್ತುತ. ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಬೆಂಗಳೂರಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಖಾನೆಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಮುಂದಾಯಿತು. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಕರ್ನಾಟಕದಲ್ಲಿ ಕಬ್ಬಿಣ ಮತ್ತು ಉಕ್ಕು, ಸಿಮೆಂಟ್, ಸಾಬೂನು ಹೀಗೆ ಎಲ್ಲ ವಲಯಗಳ ಕೈಗಾರಿಕೆಗಳು ಪ್ರಾರಂಭವಾದವು. ಬ್ಯಾಂಕಿಂಗ್, ಶಿಕ್ಷಣ ಕ್ಷೇತ್ರಗಳಿಗೂ ಅವರ ಕೊಡುಗೆ ಅವಿಸ್ಮರಣೀಯ. ಅವರೊಬ್ಬ ಯುಗಪುರುಷ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

    ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವನ್ನು ನಂ. 1 ಸ್ಥಾನಕ್ಕೆ ತರಲು ಇನ್ನಷ್ಟು ಶ್ರಮಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ನಮ್ಮ ರಾಜ್ಯಕ್ಕೆ ಇನ್ನೊಬ್ಬ ವಿಶ್ವೇಶ್ವರಯ್ಯನವರ ಅಗತ್ಯವಿದೆ. ಅಂತಹ ಪ್ರತಿಭಾವಂತ ಯುವಕರಿಗೆ ಸರ್ಕಾರ ಅವಕಾಶ ನೀಡುವುದು ಎಂದು ನುಡಿದರು. ಪ್ರಶಸ್ತಿ ಪುರಸ್ಕೃತ ಡಾ. ಎಂ. ಆರ್. ಜಯರಾಂ ಅವರ ಮಾದರಿ ವ್ಯಕ್ತಿತ್ವವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಮುಖ್ಯಮಂತ್ರಿಗಳು, ಎಂ.ಆರ್. ಜಯರಾಂ ಅವರು 1972ರಲ್ಲಿ ಶಾಸಕರಾಗಿದ್ದರು. ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ಶಾಸಕರ ಅಧಿಕಾರಾವಧಿ ವಿಸ್ತರಿಸಿದಾಗ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇತರರಿಗೆ ಮಾದರಿಯಾದವರು ಎಂದು ಸ್ಮರಿಸಿದರು. ಕೋವಿಡ್ 19 ನಿರ್ವಹಣೆಯ ಸಂದರ್ಭದಲ್ಲಿ ಎಂ.ಆರ್. ಜಯರಾಂ ಅವರು ಸರ್ಕಾರದೊಂದಿಗೆ ಕೈಜೋಡಿಸಿ, ಸಹಕರಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ.ಆರ್. ಜಯರಾಂ, ಈ ಪ್ರಶಸ್ತಿ ತಮಗೆ ಗೌರವ ನೀಡಿರುವುದರೊಂದಿಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ತಮ್ಮೊಂದಿಗೆ ಕೆಲಸ ನಿರ್ವಹಿಸಿ, ಬೆಂಬಲ ನೀಡಿದ ಎಲ್ಲರಿಗೂ ಈ ಸಾಧನೆಯ ಶ್ರೇಯ ಸಲ್ಲಬೇಕು ಎಂದು ನುಡಿದರು.

    ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರ ಭಾಗವಹಿಸುವಿಕೆ ಕಡಿಮೆ ಇದ್ದ ಸಂದರ್ಭದಲ್ಲಿ ತಾವು ಶಿಕ್ಷಣ ಸಂಸ್ಥೆ ಸ್ಥಾಪಿಸಲು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಇಂದು 20 ಸಾವಿರ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮುಂದಾಗಿರುವುದನ್ನು ಸ್ವಾಗತಿಸಿದ ಅವರು, 2030ರ ವೇಳೆಗೆ ಕರ್ನಾಟಕದ ಒಟ್ಟಾರೆ ದಾಖಲಾತಿ ಅನುಪಾತ ಶೇ. 50ಕ್ಕೇರಿಸಬೇಕಾಗಿದೆ ಎಂದರು.ಮುಖ್ಯಮಂತ್ರಿಯವರು ಘೋಷಿಸಿದ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯ ಕುರಿತು ಸಹ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಕೋವಿಡ್ 19 ಸಂದರ್ಭದಲ್ಲಿ ಎಂ.ಎಸ್ ರಾಮಯ್ಯ ಸಂಸ್ಥೆಯಲ್ಲಿ ಶೇ. 75 ರಷ್ಟು ಬೆಡ್ ಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿರಿಸಿದ್ದು, ಅದರಲ್ಲಿ ಬಹುಪಾಲು ಸರ್ಕಾರದ ಶಿಫಾರಸಿನ ಮೇರೆಗೆ ದಾಖಲಾದ ರೋಗಿಗಳಿಗೆ ಒದಗಿಸಲಾಗಿತ್ತು ಎಂದು ತಿಳಿಸಿದರು.

    ಸಮಾರಂಭದಲ್ಲಿ ಎಫ್ ಕೆ ಸಿ ಸಿ ಐ ಅಧ್ಯಕ್ಷ ಪೆರಿಕಲ್ ಸುಂದರ್, ಸಂಸದ ಪಿ.ಸಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!