20.6 C
Karnataka
Friday, November 22, 2024

    ವ್ರತ ಮಾಡುವ ಮುನ್ನ ಅದರ ಹಿನ್ನೆಲೆ ಅರಿಯಬೇಕು

    Must read

    ಹೇಮ ಶ್ರೀಧರ

    ಇಂದು ವರಮಹಾಲಕ್ಷ್ಮಿ ವ್ರತ. ಯಾವುದಾದರೂ ವ್ರತ ಮಾಡುತ್ತೇವೆ ಎಂದರೆ ಮೊದಲು ಆ ದೇವತೆಗಳ ಮಹಿಮೆಗಳನ್ನು ತಿಳಿದುಕೊಂಡು ಸ್ವಲ್ಪ ಮಟ್ಟಿಗಾದರೂ ಅರ್ಥೈಸಿಕೊಂಡು ಮಾಡಬೇಕು. ವರ ಮಹಾಲಕ್ಷ್ಮಿಯ ವ್ರತವೆಂದರೆ ಜಗಜ್ಜನನಿ ಯಾದ ಆಕೆಯ ಬಗ್ಗೆ ಎಷ್ಟು ಹೇಳಿದರೂ ಅದು ಸ್ವಲ್ಪಮಾತ್ರವೇ ಆಗುತ್ತದೆ.

    ಪರಮಾತ್ಮ ಮತ್ತು ಲಕ್ಷ್ಮೀದೇವಿ ಇಬ್ಬರು ಅಕ್ಷರ ಪುರುಷರು. ಜಗಜ್ಜನನಿಯಾದ ಮಹಾಲಕ್ಷ್ಮಿ ದೇವಿಗೆ ದೇಹ ನಾಶವಿಲ್ಲ ಆದ್ದರಿಂದ ಮಹಾಲಕ್ಷ್ಮಿಗೆ ಸಮನ ಎಂದೂ ಹೆಸರು. ದೇಶತ: ಕಾಲತ: ಪರಮಾತ್ಮನಿಗೆ ಸಮ. ಗುಣದಲ್ಲಿ ಪರಮಾತ್ಮನ ಅಧೀನಳು. ಆದ್ದರಿಂದ ಅವಳು ಪರಮಾತ್ಮನಿಗೆ ಸಮ. ಅಚಿಂತ್ಯಾತ್ಮಕ ಗುಣವುಳ್ಳ ಪರಮಾತ್ಮನ ಸೇವೆಯನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಛತ್ರ ಚಾಮರ ವ್ಯಜನ ಪರಿಯಂಕ ಎಲ್ಲವೂ ತಾನೇ ಆಗಿ ಪರಮಾತ್ಮನ ಸೇವೆಯನ್ನು ಪೂರ್ಣವಾಗಿ ಮಾಡಿ ಆನಂದ ಹೊಂದುತ್ತಾಳೆ. ಪ್ರಳಯಕಾಲದಲ್ಲಿ ಎಲ್ಲವೂ ನಾಶವಾದರೂ ಲಕ್ಷ್ಮಿ ದೇವಿಯು ಮಾತ್ರ ಜಲವಾಗಿ ಆಲದೆಲೆಯಾಗಿ ಕತ್ತಲಾಗಿ ಹಲವು ಆಭರಣಗಳು ಆಗಿ ಪರಮಾತ್ಮನ ಜೊತೆಯಲ್ಲೇ ಇರುತ್ತಾಳೆ ಎಂದು ಪುರಾಣದಲ್ಲಿ ಹೇಳಿದೆ. ಶ್ರೀ, ಭೂ, ಮತ್ತು ದುರ್ಗಾ ಎಂಬ ಮೂರು ರೂಪದಿಂದ ಪರಮಾತ್ಮನ ಸೇವೆಯನ್ನು ಮಾಡುತ್ತಾಳೆ. ಜಗಜ್ಜನನಿಯಾದ ಮಹಾಲಕ್ಷ್ಮಿ ಪೂಜೆ ಮಾಡಬೇಕಾದರೆ ನಮಗೆ ಇವೆಲ್ಲದರ ಬಗ್ಗೆ ಕಿಂಚಿತ್ತಾದರೂ ಜ್ಞಾನವಿರಬೇಕು .

    ವರಮಹಾಲಕ್ಷ್ಮಿ ವ್ರತದ ಮಹತ್ವ :

    ಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತವಾಗಿರುತ್ತದೆ. ಈ ವ್ರತ ಮಾಡಬೇಕಾದರೆ ತುಳಸಿ ಬೃಂದಾವನದ ಹತ್ತಿರ ಯಮನಾ ಪೂಜೆಯನ್ನು ಮಾಡಬೇಕು.
    ಯಾವುದೇ ವ್ರತವನ್ನು ನದಿ ತೀರದಲ್ಲಿಯೇ ಆಚರಿಸುವುದು ಉತ್ತಮ. ಆದರೆ ಈಗಿನ ದೇಶ ಕಾಲ ಪರಿಸ್ಥಿತಿಯಲ್ಲಿ ನದಿ ತೀರದಲ್ಲಿ ಮಾಡುವುದು ಅಸಾಧ್ಯವೆಂದು ತಿಳಿದು ಎನ್ಮೂಲೇ ಸರ್ವ ತೀರ್ಥಾನಿ ಎನ್ಮದ್ಯೇ ಸರ್ವದೇವತಾ ಎಂಬಂತೆ ಸಕಲ ತೀರ್ಥಗಳ ಸನ್ನಿಧಾನ ಉಳ್ಳ ತುಳಸಿ ಬೃಂದಾವನದ ಸಮೀಪ ಯಮುನಾ ಕಲಶವನ್ನು ಸ್ಥಾಪಿಸಿ ಗಂಗಾ ಯಮುನಾ ಗೋದಾವರಿ ಮೊದಲಾದ ನದಿ ದೇವತೆಗಳನ್ನು ಆವಾಹಿಸಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ನಂತರ ಆ ಕಲಶವನ್ನು ತೆಗೆದುಕೊಂಡುಬಂದು ಮನೆಯ ಬಾಗಿಲಲ್ಲಿ ‌ ಪಡಿಯನ್ನು(ಅಕ್ಕಿ ಬೆಲ್ಲ) ಕಲಶದಿಂದ ಮುಂದಕ್ಕೆ ತಳ್ಳಿ ಬಲಗಾಲು ಮುಂದಿಟ್ಟು ಕೊಂಡು ಮನೆಯೊಳಗೆ ಪ್ರವೇಶಿಸಬೇಕು.

    ಆ ಕಲಶವನ್ನು ಅಲಂಕೃತವಾದ ಮಂಟಪದಲ್ಲಿ ಇಟ್ಟು ಅದರ ಪಕ್ಕದಲ್ಲಿ ಮತ್ತೊಂದು ಕಲಶವನ್ನು ಇಟ್ಟು ಪೀಠ ಪೂಜೆ ಮಾಡಿ ಅದರಲ್ಲಿ ಲಕ್ಷ್ಮೀನಾರಾಯಣರನ್ನು ಪ್ರತಿಷ್ಠ ಸೂಕ್ತದಿಂದ ಆವಾಹಿಸಿಬೇಕು. ನಂತರ ನವ ದೊರ ಸ್ಥಾಪನೆ ಮಾಡಬೇಕು. ದಾರದಲ್ಲಿ 9 ಅಥವಾ ಹನ್ನೆರಡು ಗ್ರಂಥಿಗಳು ಮಾಡಿ, ಆ ಗ್ರಂಥಿಗಳಲ್ಲಿ ಲಕ್ಷ್ಮೀನಾರಾಯಣರ ನಾಮಗಳಿಂದ ಪೂಜಿಸಬೇಕು. ನಂತರ ದೇವಿಗೆ ಒಂದು ದಾರವನ್ನು ಅರ್ಪಿಸಬೇಕು. ಷೋಡಶೋಪಚಾರ ಪೂಜೆಯನ್ನು ಮಾಡಿ ಪರಿಮಳ ಪತ್ರ-ಪುಷ್ಪಗಳಿಂದ ಅರ್ಚನೆಯನ್ನು ಮಾಡಿ ಲಕ್ಷ್ಮೀನಾರಾಯಣರ ಕಲಾಪಕ್ಕೆ ಅರಿಶಿನ ಕುಂಕುಮ ಗಂಧ ಅಕ್ಷತೆಗಳಿಂದ ಪೂಜಿಸಿ ಸೌಭಾಗ್ಯ ದ್ರವ್ಯಗಳನ್ನು ಅರ್ಪಿಸಿ ಕುಂಕುಮಾರ್ಚನೆಯನ್ನು ಮಾಡಿ ಧೂಪ ದೀಪ ಮಾಡಿ ಪಂಚ ಭಕ್ಷಗಳನ್ನು (ಯಥಾಶಕ್ತಿ) ನೈವೇದ್ಯ ಮಾಡಬೇಕು. ಮಂಗಳಾರತಿ ಯನ್ನು
    ಮಾಡಿ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಪೂಜೆಯನ್ನು ಭಗವಂತನಿಗೆ ಸಮರ್ಥಿಸಬೇಕು. ಹಾಡುಗಳನ್ನು ಹೇಳಿ ಆರತಿಯನ್ನು ಮಾಡಬೇಕು. ವಾಯನ ದಾನ ಮತ್ತು ಮೊರದ ಬಾಗಿನ ಕೊಟ್ಟು ವ್ರತ ಸಮರ್ಪಣೆ ಮಾಡಬೇಕು.

    ಕಲಶದ ವಿಚಾರ :

    ಕಲಶದ ತಂಬಿಗೆಯಲ್ಲಿ ಪಂಚ ಫಲ ಗಳನ್ನು ಮತ್ತು ಮಂಗಳ ದ್ರವ್ಯಗಳನ್ನುಹಾಕಿ , ಅದರ ಮೇಲೆ ಅಲಂಕರಿಸಿದ ತೆಂಗಿನಕಾಯಿಯನ್ನು ಇಡಬೇಕು. ಕೆಲವರು ತೆಂಗಿನಕಾಯಿಗೆ ಮುಖವಾಡ ಇರಿಸಿ ಅಲಂಕಾರ ಮಾಡುತ್ತಾರೆ. ಮತ್ತೆ ಕೆಲವರು ತೆಂಗಿನಕಾಯಿಗೆ ಅರಿಶಿಣ ಹಚ್ಚಿ ಕುಂಕುಮದ ತಿಲಕವಿಟ್ಟು ಪೂಜಿಸುತ್ತಾರೆ. ಇದು ಅವರವರ ಸಂಪ್ರದಾಯದಂತೆ ಅವರಿಗೆ ಬಿಟ್ಟದ್ದು.

    ನಾವು ಏನೇ ಪೂಜೆ ಮಾಡಿದರೂ ಪರಮಾತ್ಮ ಲಕ್ಷ್ಮಿ ವಾಯುದೇವರು ಮತ್ತು ತತ್ವಾಭಿಮಾನಿ ದೇವತೆಗಳ ದ್ವಾರ ಮಾಡಿಸುತ್ತಾನೆ. ನಾನು ಮಾಡಿದೆ ಎನ್ನದೇ ನಿನ್ನ ಪೂಜೆ ನೀನೇ ಮಾಡಿಸಿದೆ ಎಂಬ ಭಾವದಿಂದ ಮಾಡಿದರೆ ಪರಮಾತ್ಮನ ಅನುಗ್ರಹವಾಗಿ ಮೋಕ್ಷಕ್ಕೆ ಕಾರಣೀಭೂತವಾಗುತ್ತದೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!