BELAGAAVI AUG 23
ಕೃಷ್ಣಾ ಮೇಲ್ದಂಡೆ 3 ಹಂತದ ಯೋಜನೆಯಿಂದ ಮುಳುಗಡೆಯಾದ ಗ್ರಾಮಗಳ ಪುನರ್ವಸತಿ ಹಾಗೂ ಪುನರ್ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಈ ಹಿಂದೆ 100 ಕೋಟಿ ರೂ.ಗಳ ಅನುದಾನವನ್ನು ನೀಡಲಾಗಿತ್ತು. ಇತ್ತೀಚೆಗೆ 197 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇನ್ನೂ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಸಿಬ್ಬಂದಿ ಕೊರತೆ ನೀಗಿಸುವುದರಿಂದ ಹಿಡಿದು ಪುನರ್ವಸತಿಗೆ ದೊಡ್ಡ ಪ್ರಮಾಣದ ಅನುದಾನದ ಅವಶ್ಯಕತೆ ಇದೆ. ವಸತಿ, ಮೂಲಭೂತ ಸೌಕರ್ಯ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ವಿವಿಧ ಅಂತರರಾಷ್ಟ್ರೀಯ ಮಟ್ಟದ ಏಜೆನ್ಸಿಗಳಿಂದ ಸಾಲ ಪಡೆಯಲು ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು.
8 ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕೇಂದ್ರಗಳಿಗೆ ಅಗತ್ಯವಿರುವ ಭೂ ಸ್ವಾಧೀನ ಮಾಡಲಾಗಿದೆ. ಶೀಘ್ರವಾಗಿ ಅಂತಿಮ ದಿಕ್ಸೂಚಿಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಾಗಿನ ಅರ್ಪಣೆ: ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಭಕ್ತಿಯಿಂದ ಗಂಗೆ ಪೂಜೆಯನ್ನು ನೆರವೇರಿಸಿದ್ದೇನೆ ಎಂದ ಮುಖ್ಯಮಂತ್ರಿಗಳು ರೈತರು ಆರ್ಥಿಕವಾಗಿ ಮುಂದುವರೆಯಬೇಕಾದರೆ ಮನೆಯಲ್ಲಿ ಯಾರಾದರೂ ಬೇರೆಡೆ ನೌಕರಿ ಮಾಡಬೇಕಾದ ಅನಿವಾರ್ಯತೆ ಇದೆ. ರೈತರು ಹವಾಮಾನ ವೈಪರೀತ್ಯದ ನಡುವೆ ಬದುಕುತ್ತಿದ್ದಾರೆ.
ನಮ್ಮ ರೈತಾಪಿ ವರ್ಗ ಕಾಲಕಾಲಕ್ಕೆ ಮಳೆಯಾಗಿ ಬೆಳೆ ತೆಗೆದರೆ ರಾಜ್ಯವೂ ಸುಭಿಕ್ಷವಾಗಿರುತ್ತೆ. ಬಂಗಾರದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.