20.6 C
Karnataka
Sunday, September 22, 2024

    ಸದೃಢ ಸಮಾಜಕ್ಕೆ ಉದ್ಯಮಶೀಲತೆ ಮುಖ್ಯ

    Must read


    DHARAWADA AUG 21

    ಉದ್ಯಮಶೀಲರು ಸೋಲಿನಿಂದ ಧೃತಿಗೆಡದೇ ಸಮರ್ಥ ಮಾರ್ಗದರ್ಶನ ,ಸ್ಪಷ್ಟ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿದಾಗ ಯಶಸ್ಸು ಸಾಧ್ಯ.ಮುದ್ರಾ,ಜೀವನೋಪಾಯ ಯೋಜನೆಗಳಡಿ ಆರ್ಥಿಕ ನೆರವು ನೀಡಲಾಗುತ್ತಿದೆ.ಕೌಶಲ್ಯಾಭಿವೃದ್ಧಿಪಡಿಸಿಕೊಂಡು ಯಶಸ್ಸು ಸಾಧಿಸಬಹುದು.ದೇಶದಲ್ಲಿ ಕರ್ನಾಟಕವೇ ಮೊದಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಕಲಿಕೆಯೊಂದಿಗೆ ಕೌಶಲ್ಯ ಬೆಳೆಸಲು ಸಂಕಲ್ಪ ಮಾಡಿದೆ ಎಂದು ಉನ್ನತಶಿಕ್ಷಣ,ಐಟಿ-ಬಿಟಿ,ವಿಜ್ಞಾನ ಮತ್ತು ತಂತ್ರಜ್ಞಾನ,ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಕೌಶಲ್ಯಾಭಿವೃದ್ಧಿ,ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆಯು ಬೇಲೂರು ಕೈಗಾರಿಕಾ ಪ್ರದೇಶದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್)ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ವಿಶ್ವ ಉದ್ಯಮಶೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

    ಸರ್ಕಾರ ಇದೇ ಮೊದಲ ಬಾರಿಗೆ ವಿಶ್ವ ಉದ್ಯಮಶೀಲರ ದಿನ ಆಚರಿಸುತ್ತಿದೆ.ಸಮಾಜವನ್ನು ಸದೃಢವಾಗಿ ಕಟ್ಟಲು ಉದ್ಯಮಶೀಲತೆ ಬಹಳ ಮುಖ್ಯ,ಯುವಜನರಲ್ಲಿ ಸಂಚಲನ ಮೂಡಿಸಲು , ಕೌಶಲ್ಯ ಬೆಳಸಲು 30 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹಾಗೂ ಕೈಗಾರಿಕಾ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು ಧಾರವಾಡದಲ್ಲಿ ಸಿಡಾಕ್ ಸಂಸ್ಥೆ ಸ್ಥಾಪಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಯಾವುದೇ ಉದ್ಯಮ ಯಶಸ್ಸಿಗೆ ವ್ಯಾಪಾರದ ಕೌಶಲಗಳು ಅಗತ್ಯ, ಹಾಗಾದಾಗ ಮಾತ್ರ ಫಲ ಕಾಣಲು ಸಾಧ್ಯ. ವಿಜ್ಞಾನ ,ತಂತ್ರಜ್ಞಾನದ ಯುಗದಲ್ಲಿ ಯಾವುದೇ ಹಳ್ಳಿಯಿಂದಲಾದರೂ ಬಂದಿರುವ ವ್ಯಕ್ತಿ ಉದ್ಯಮಶೀಲನಾಗಿ ಬೆಳೆಯಲು ಸಾಧ್ಯವಿದೆ.ಕೃಷಿ ಬೆಳೆ,ಉತ್ಪಾದನೆ ಮಾರುಕಟ್ಟೆ ಪರಸ್ಪರ ಅವಲಂಬಿತವಾಗಿವೆ.ಈಗಿನ ಡಿಜಿಟಲ್ ಮಾರುಕಟ್ಟೆ ತಂತ್ರಜ್ಞಾನ ಬಳಸಿಕೊಂಡು ವ್ಯವಹಾರ ಮಾಡುತ್ತಿರುವ ಸಂಸ್ಥೆಗಳನ್ನೇ ಆಧರಿಸಿ ನಮ್ಮ ಉದ್ಯಮಗಳನ್ನು ಸಶಕ್ತಗೊಳಿಸಬೇಕು.ನಮ್ಮಲ್ಲಿರುವ ಅನೇಕ ಗೃಹ,ಗುಡಿಕೈಗಾರಿಕೆಗಳು ಮಾರುಕಟ್ಟೆ ಕೊರತೆಯನ್ನು ಈ ಮೂಲಕ ನೀಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು. ಯಶಸ್ವಿ ಉದ್ಯಮಿಗಳ ಸಾಧನೆಯನ್ನು ಗುರುತಿಸಿ,ಅಭಿನಂದಿಸುವ ಹಾಗೂ ಅವರ ಮೂಲಕ ಪ್ರೇರಣೆ ಮಾಡುವ ಉದ್ದೇಶದಿಂದ ವಿಶ್ವ ಉದ್ಯಮಶೀಲರ ದಿನಾಚರಣೆಗೆ ಸರ್ಕಾರ ಮುಂದಾಗಿದೆ.

    ಮುದ್ರಾ ಯೋಜನೆ,ಜೀವನೋಪಾಯ ಯೋಜನೆಗಳ ಮೂಲಕ‌ ಆರ್ಥಿಕ ನೆರವು,ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯಕ್ರಮಗಳಿವೆ.ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ಕಲಿಕೆಯೊಂದಿಗೆ ಬದುಕಿಗೆ ಅಗತ್ಯವಾಗಿರುವ ಔದ್ಯೋಗಿಕ ಕೌಶಲ್ಯವನ್ನು ಬೆಳೆಸುವ ಕಾರ್ಯವನ್ನು ಕರ್ನಾಟಕದಿಂದಲೇ ಪ್ರಾರಂಭಿಸಲಾಗುತ್ತಿದೆ. ಉದ್ಯಮಶೀಲತೆಯ ಅಭಿವೃದ್ಧಿಗೆ ಸರ್ಕಾರ ,ಸರ್ಕಾರೇತರ ಸಂಸ್ಥೆಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.ಶ್ರಮ,ಆಸಕ್ತಿ ಮತ್ತು ಗುಣಮಟ್ಟದ ಸೇವೆಗಳ ಮೂಲದ ಸದೃಢ ಗುಣಮಟ್ಟದ ರಾಷ್ಟ್ರ ನಿರ್ಮಾಣ ಸಾಧ್ಯ .ಬಸವಣ್ಣನವರು ಇದನ್ನೇ ಕಾಯಕವೇ ಕೈಲಾಸ ಎಂದು ವ್ಯಾಖ್ಯಾನಿಸಿದ್ದಾರೆ. ವಿಶ್ವದಲ್ಲಿಯೇ ಕರ್ನಾಟಕ ಉದ್ಯಮಶೀಲತೆಯಲ್ಲಿ ಉನ್ನತ ಸಾಧನೆ ಮಾಡಲು ಸಂಕಲ್ಪ ಮಾಡೋಣ, ಸೋಲಿನಿಂದ ಧೃತಿಗೆಡದೇ ಸಮರ್ಥ ಮಾರ್ಗದರ್ಶನ ,ಸ್ಪಷ್ಟ ಗುರಿಯೊಂದಿಗೆ ಯಶಸ್ಸು ಸಾಧಿಸಬಹುದು ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ವಿಶ್ವ ಉದ್ಯಮಶೀಲರ ದಿನಾಚರಣೆಯ ಮೊದಲ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಧಾರವಾಡದಲ್ಲಿ ಆಯೋಜಿಸಿರುವುದು ಅಭಿನಂದನೀಯ.ಉದ್ಯಮಶೀಲತೆಗೆ ಶಕ್ತಿ ತುಂಬಲು,ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಅಗತ್ಯವಿದೆ.ಯಾವುದೇ ದೇಶದ ಸರ್ವಾಂಗೀಣ ಅಭಿವೃದ್ಧಿ,ಆರ್ಥಿಕ ಸಬಲತೆ ಸಾಧಿಸಲು ಉದ್ಯಮಶೀಲತೆ ಮುಖ್ಯ . ಉದ್ಯಮಶೀಲರಿಗೆ ಸ್ನೇಹಿಯಾಗಿರುವ ನೀತಿ ಜಾರಿಗೊಳಿಸುವುದು ಅವಶ್ಯವಾಗಿದೆ . ವೃತ್ತಿಯೊಳಗೆ ಮೇಲು ಕೀಳು ಭಾವ ತೊರೆದು ಕಾಯಕಶ್ರೇಷ್ಟತೆಗೆ 12 ನೇ ಶತಮಾನದಲ್ಲಿ ಬಸವಣ್ಣನವರು ಮನ್ನಣೆ ನೀಡಿದ್ದರು ಎಂದು ಸ್ಮರಿಸಿದರು.

    ಕೃಷಿಕಲ್ಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ.ಪಾಟೀಲ ತಮ್ಮ ಉದ್ಯಮಶೀಲತೆಯ ವಿಕಸನದ ಹಾದಿ ಕುರಿತು ಆಶಯ ಭಾಷಣ ಮಾತನಾಡಿದರು.

    ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಮಾತನಾಡಿ, ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳನ್ನು ಸಮ್ಮಿಳಿತಗೊಳಿಸಿ ಕಾರ್ಯಕ್ರಮ ರೂಪಿಸಿದರೆ ಗ್ರಾಮೀಣ ಭಾಗಗಳಿಗೂ ಉದ್ಯಮಶೀಲತೆ ವಿಸ್ತರಿಸಲು ಸಾಧ್ಯವಾಗುತ್ತದೆ ಎಂದರು.ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಜಯಪ್ರಕಾಶ್ ಟೆಂಗಿನಕಾಯಿ ಮಾತನಾಡಿದರು.

    ಸನ್ಮಾನ: ಯಶಸ್ವಿ ಉದ್ಯಮಿಗಳಾದ ಅಲ್ಲಮಪ್ರಭು ಬಿರಾದಾರ,ಲತೀಶಬಾಬು ಪಿಎಸ್,ಬೆಂಗಳೂರಿನ, ಪರಿಮಳಾ ಎನ್, ಬೆಳಗಾವಿಯ ಜ್ಯೋತಿ ಕುಲಕರ್ಣಿ,ಬಳ್ಳಾರಿಯ ಮಧುಸೂಧನ ,ಸಂಜೀವಕುಮಾರ್ ಭಾಸನ್, ಯು.ಟಿ.ಮಾದನಾಯಕ, ಎಂ.ಮಂಗಳ,ಅಂಜನಪ್ಪ ಎಸ್.ಟಿ,ಕ್ಯಾತಣ್ಣ ಎ, ಮೋಹನ್ ಕೆ ಚಿಂಚಲಿ,ಅನೀಲ್ ಎಸ್,ಜಯಶ್ರೀ ಹಿರೇಮಠ,ಶ್ರೀನಿವಾಸ ಎಸ್ ಆರ್,ನಾಗನಗೌಡ ಕರೇಗೌಡ್ರ,ಚಂದ್ರಕಾಂತ ಹಾಗರಗಿ,ಮುದ್ದುಮಹದೇವ, ಸಿಂಪು ದಿನೇಶ್,ಸಿದ್ದಪ್ಪ ಗುಡ್ಡೋಡಗಿ, ಮಂಜುಳ ಜಿ.ವಿ,ರಾಧಾಕೃಷ್ಣ ಇಟ್ಟಿಗುಂಡಿ,ಚಂದ್ರ ಕೆ ಹರ್ಷ,ವಿದ್ಯಾ ಗುಪ್ತಾ,ಶ್ವೇತಾ ಎಸ್,ಮಮತಾಬಾಯಿ,ರಾಜಮ್ಮ,ಸುಬ್ರಮಣ್ಯ ಕುಲಾಲ್,ಪ್ರಭಾಕರ್ ರಾಯ್ಕರ್,ರುಕ್ಮಿಣಿನಾಯಕ,ಮೆಹಬೂಬ್ ದೇಸುಣಗಿ ಹಾಗೂ ವಿಶ್ವನಾಥ ಬಡಿಗೇರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ,ಗೌರವಿಸಲಾಯಿತು.

    ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ,ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ,, ಬೇಲೂರು ಗ್ರಾ.ಪಂ.ಅಧ್ಯಕ್ಷೆ ಅಕ್ಕಮಹಾದೇವಿ ಕಲ್ಲಪ್ಪ ಬಡವಣ್ಣವರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಉದ್ಯಮಶೀಲರ ಯಶೋಗಾಥೆ, ವ್ಯಕ್ತಿ ಚಿತ್ರಣಗಳ ಕೈಪಿಡಿ “ಸಂಕಲ್ಪ” ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
    ಸಿಡಾಕ್ ನಿರ್ದೇಶಕ ಡಾ.ವೀರಣ್ಣ ಎಸ್.ಎಚ್.ಪ್ರಾಸ್ತಾವಿಕ ಮಾತನಾಡಿದರು.ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!