ಎಂ.ವಿ. ಶಂಕರಾನಂದ
ಶ್ರಾವಣ ಮಾಸದ ಹುಣ್ಣಿಮೆಯ ದಿನವನ್ನು ಭಾರತೀಯ ಸಂಸ್ಕೃತಿಯಲ್ಲಿ ನೂಲು ಹುಣ್ಣಿಮೆ ಅಥವಾ ರಕ್ಷಾಬಂಧನದ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ.
ಈ ದಿನ ಪ್ರತಿಯೊಬ್ಬ ಸಹೋದರಿಯೂ ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟುತ್ತಾಳೆ. ಹಾಗೆ ಕಟ್ಟುವಾಗ ಆಕೆ ಈ ಶ್ಲೋಕವನ್ನು ಪಠಿಸುತ್ತಾಳೆ; ಏನ ಬದ್ಧೋ ಬಲಿರಾಜಾ ದಾನವೇಂದ್ರೋ ಮಹಾಬಲಃ, ತೇನ ತ್ವಾಮಪಿ ಬಧ್ನಾಮಿ ರಕ್ಷೆ ಮಾ ಚಲ ಮಾ ಚಲ’’. ಅಂದರೆ,
ಮಹಾಬಲಿ ಮತ್ತು ಮಹಾದಾನಿಯಾದ ಬಲಿರಾಜನು ಯಾವುದರಿಂದ ಬಂಧಿತನಾದನೋ, ಅದೇ ರಕ್ಷೆಯನ್ನು ನಾನು ನಿನಗೆ ಕಟ್ಟುತ್ತಿದ್ದೇನೆ. ಹೇ ರಾಖಿಯೇ ನೀನು ವಿಚಲಿತಳಾಗಬೇಡ’’ ಎಂದರ್ಥ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತೃತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾ ಬಂಧನ ಹಬ್ಬದ ನೀತಿಯಾಗಿದೆ.
ಪುರಾಣ ಕಥೆ:ವಿಷ್ಣು ಭಾಗವತದಲ್ಲಿನ ವಾಮನ ಪುರಾಣ ವಿಭಾಗದಲ್ಲಿ ಈ ರಕ್ಷಾ ಬಂಧನಕ್ಕೆ ಸಂಬಂಧಿಸಿದ ಕಥೆಯೊಂದು ಕಂಡು ಬರುತ್ತದೆ. ಅಸುರ ಚಕ್ರವರ್ತಿ ಮಹಾಬಲಿ ವಿಷ್ಣುವಿನ ಪರಮ ಭಕ್ತ. ಆತನ ಮಹಾಭಕ್ತಿಗೆ ಪರವಶನಾಗಿದ್ದ ವಿಷ್ಣು ಬಲಿಯ ಸಾಮ್ರಾಜ್ಯವನ್ನು ರಕ್ಷಿಸುವುದಕ್ಕಾಗಿ ತನ್ನ ವೈಕುಂಠವನ್ನೇ ತೊರೆದು ಪಾತಾಳಕ್ಕೆ ಬರುತ್ತಾನೆ. ಇದರಿಂದ ವಿಷ್ಣುವಿನ ಪತ್ನಿ ಲಕ್ಷ್ಮಿದೇವಿಗೆ ಬಹಳ ಬೇಸರ ಉಂಟಾಯಿತು. ವಿಷ್ಣು ಸದಾ ತನ್ನ ಜೊತೆಗೆ ಇರಬೇಕೆಂದು ಲಕ್ಷ್ಮಿದೇವಿ ಬಯಸಿದಳು. ಆದ್ದರಿಂದ ಆಕೆ ಬ್ರಾಹ್ಮಣ ಸ್ತ್ರೀಯ ವೇಷ ಧರಿಸಿ ಬಲಿಯ ಅರಮನೆಯನ್ನು ಪ್ರವೇಶಿಸಿ, ಅಲ್ಲಿ ಆಶ್ರಯ ಪಡೆದಳು.
ಶ್ರಾವಣ ಪೂರ್ಣಿಮೆಯಂದು ಆಕೆ ಬಲಿಯ ಕೈಗೆ ರಾಖಿಯನ್ನು ಕಟ್ಟಿದಳು. ತಾನು ಯಾರು ಮತ್ತು ಯಾಕಾಗಿ ಅಲ್ಲಿದ್ದೇನೆ ಎಂದು ಬಲಿಗೆ ವಿವರಿಸಿದಳು. ಬಲಿಗೆ ವಿಷ್ಣು, ಲಕ್ಷ್ಮಿ ದಂಪತಿಗಳು ತನ್ನ ಮೇಲಿಟ್ಟಿರುವ ಅಭಿಮಾನವನ್ನು ಕಂಡು ಮನತುಂಬಿ ಬಂತು. ಲಕ್ಷ್ಮಿದೇವಿಯ ಜೊತೆ ವೈಕುಂಠಕ್ಕೆ ಹೋಗುವಂತೆ ಬಲಿ ವಿಷ್ಣುವನ್ನು ವಿನಂತಿಸಿದನು. ಸಹೋದರಿಯರನ್ನು ಶ್ರಾವಣ ಪೂರ್ಣಿಮೆಯ ದಿನ ಆಹ್ವಾನಿಸಿ, ರಾಖಿ ಕಟ್ಟುವ ಸಂಪ್ರದಾಯ ಅಂದಿನಿಂದ ಆರಂಭವಾಯಿತೆಂದು ಹೇಳುತ್ತಾರೆ.
ದ್ವಾಪರ ಯುಗದಲ್ಲಿ ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗ ನಡೆಯುವಾಗ ದುಷ್ಟನಾದ ಶಿಶುಪಾಲನು ಶ್ರೀಕೃಷ್ಣನನ್ನು ನಿಂದಿಸಿದಾಗ ಕೃಷ್ಣನು ಅವನನ್ನು ಕೊಂದು ಹಾಕಿದನು. ಆಗ ಕೃಷ್ಣನ ಬೆರಳಿಗೆ ಚಕ್ರಾಯುಧದಿಂದ ಗಾಯವಾಗಿ ರಕ್ತ ಸುರಿಯತೊಡಗಿತು. ಕೃಷ್ಣನ ಪತ್ನಿಯರ ಸಹಿತ ಎಲ್ಲರೂ ಗಾಭರಿಯಿಂದ ಸುಮ್ಮನೇ ನೋಡುತ್ತಿರುವಾಗ, ಕೂಡಲೇ ದ್ರೌಪದಿಯು ತನ್ನ ಸೀರೆಯ ಸೆರಗನ್ನು ಹರಿದು ಅದನ್ನು ಕೃಷ್ಣನ ಬೆರಳಿಗೆ ಸುತ್ತಿ ಸುರಿಯುತ್ತಿದ್ದ ರಕ್ತವನ್ನು ನಿಲ್ಲಿಸಿದಳು. ಆಕೆಯು ತನ್ನ ಮೇಲಿರುವ ಗೌರವ ಮತ್ತು ಸೋದರ ಪ್ರೀತಿಯನ್ನು ಮನಗಂಡ ಕೃಷ್ಣ ಆಕೆಯನ್ನು ತನ್ನ ಸೋದರಿಯಾಗಿ ಸ್ವೀಕರಿಸಿದ. ಭವಿಷ್ಯದಲ್ಲಿ ಆಕೆಯ ಕಷ್ಟಕಾಲದಲ್ಲಿ ತಾನು ಈ ಋಣವನ್ನು ತೀರಿಸುವುದಾಗಿ ಆಕೆಗೆ ಮಾತು ಕೊಟ್ಟ. ಮುಂದೆ ಪಾಂಡವರು ಜೂಜಿನಲ್ಲಿ ಸೋತು, ದುಷ್ಟನಾದ ದುಶ್ಯಾಸನನು ದ್ರೌಪದಿಯ ಸೀರೆಯನ್ನು ಎಳೆಯುವಾಗ ಕೃಷ್ಣನು ದ್ರೌಪದಿಯ ಸೀರೆಯನ್ನು ಅಕ್ಷಯವಾಗಿಸಿ, ಆಕೆಯ ಮಾನವನ್ನು ರಕ್ಷಿಸಿದ ಎಂದು ಹೇಳುತ್ತಾರೆ.
ಇತಿಹಾಸದ ಪುಟಗಳಲ್ಲಿ:ಭಾರತದ ಇತಿಹಾಸದಲ್ಲಿನ ಕೆಲವು ಚಾರಿತ್ರಿಕ ಘಟನೆಗಳನ್ನು ನೋಡೋಣ. ಸಿಂಧೂ ಕಣಿವೆಯಲ್ಲಿ ಆರ್ಯನ್ನರ ಪ್ರಥಮ ನಾಗರಿಕತೆಯು ಆರಂಭವಾದಾಗ ಅಂದರೆ ಸುಮಾರು ಆರು ಸಾವಿರ ವರ್ಷಗಳಿಗೂ ಹಿಂದೆಯೇ ಈ ರಕ್ಷಾಬಂಧನ ಆಚರಣೆ ಚಾಲ್ತಿಗೆ ಬಂದಿತ್ತು. ಬಹು ಭಾಷೆ ಮತ್ತು ಸಂಸ್ಕೃತಿಗಳೊಂದಿಗೆ ನಮ್ಮ ದೇಶದ ವಿವಿಧೆಡೆ ರಕ್ಷಾಬಂಧನದ ಆಚರಣೆಯಲ್ಲಿ ವಿಭಿನ್ನತೆಯನ್ನು ಕಾಣಬಹುದು.
ಕ್ರಿ.ಪೂ.300ರಲ್ಲಿ ಗ್ರೀಸ್‌ನ ರಾಜ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಆತ ಪುರೂರವನ ಸಾಹಸವನ್ನು ಕಂಡು ಬೆರಗಾಗಿಬಿಟ್ಟನು. ಒಂದು ಹಂತದಲ್ಲಿ ಆತ ಯುದ್ಧದಲ್ಲಿ ಸೋಲುವ ಸಂದರ್ಭವೇ ಬಂದಿತು. ಇದರಿಂದ ವಿಚಲಿತಳಾದ ರಾಖಿ ಹಬ್ಬದ ಬಗ್ಗೆ ತಿಳಿದುಕೊಂಡಿದ್ದ ಅಲೆಗ್ಸಾಂಡರನ ಹೆಂಡತಿ ಪುರೂರವನಿಗೆ ರಾಖಿಯನ್ನು ಕಳಿಸಿಕೊಟ್ಟಳು. ಅದನ್ನು ಸ್ವೀಕರಿಸಿದ ಪುರೂರವ ಆಕೆಯನ್ನು ಸೋದರಿ ಎಂದು ಪರಿಗಣಿಸಿದ. ಯುದ್ಧದಲ್ಲಿ ಅಲೆಕ್ಸಾಂಡರನನ್ನು ಕೊಲ್ಲುವ ಸಂದರ್ಭ ಬಂದಾಗಲೂ ಆತ ಅವನನ್ನು ಕೊಲ್ಲಲಿಲ್ಲ ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ.
ಮಧ್ಯಯುಗದ ಕಾಲದಲ್ಲಿ ರಜಪೂತರು ಮುಸ್ಲಿಂ ಆಕ್ರಮಣಕಾರರ ವಿರುದ್ಧ ಹೋರಾಡುತ್ತಿದ್ದರು. ಆ ಕಾಲದಲ್ಲಿ ರಾಖಿ ಸಹೋದರಿಯರ ರಕ್ಷಣೆಗಾಗಿ ಮತ್ತು ಆಧ್ಯಾತ್ಮ ಪಾವಿತ್ರತೆಯ ಸಂಕೇತವಾಗಿ ಪರಿಗಣಿತವಾಗಿತ್ತು. ಚಿತ್ತೂರಿನ ರಾಣಿ ಕರ್ಣಾವತಿಗೆ ತನ್ನ ರಾಜ್ಯವನ್ನು ಗುಜರಾತಿನ ಸುಲ್ತಾನ ಬಹುದ್ದೂರ್ ಶಾನ ಆಕ್ರಮಣದಿಂದ ರಕ್ಷಿಸಿಕೊಳ್ಳುವ ಅನಿವಾರ್ಯತೆ ಉಂಟಾಯಿತು. ಆದರೆ ಆ ಯುದ್ಧದಲ್ಲಿ ಆಕೆಯು ಸೋಲಿನ ದವಡೆಗೆ ಸಿಲುಕಿದಾಗ ಆಕೆಯು ಆಗಿನ ಮೊಘಲ್ ಚಕ್ರವರ್ತಿ ಹುಮಾಯೂನನಿಗೆ ತನ್ನನ್ನು ಸೋದರಿಯಾಗಿ ಪರಿಗಣಿಸಿ ರಕ್ಷಿಸುವಂತೆ ರಾಖಿಯನ್ನು ಕಳುಹಿಸಿಕೊಟ್ಟಳು. ಹುಮಾಯೂನನ ಹೃದಯಕ್ಕೆ ಇದು ನಾಟಿತು. ಕೂಡಲೇ ಆತ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ತನ್ನ ಸೈನ್ಯದೊಂದಿಗೆ ಆಕೆಯ ರಕ್ಷಣೆಗೆ ಧಾವಿಸಿ ಬಂದು ಬಹದ್ದೂರ್ ಶಾನನ್ನು ಸೋಲಿಸಿ ಓಡಿಸಿ, ಚಿತ್ತೂರನ್ನು ರಕ್ಷಿಸಿಕೊಟ್ಟನು ಎಂದು ಇತಿಹಾಸ ತಿಳಿಸುತ್ತದೆ.
ಆಚರಣೆ:
ಹಿಂದಿನ ಕಾಲದಲ್ಲಿ ಈ ದಿನದಂದು ಅಕ್ಕಿ, ಚಿನ್ನದ ಶುಭ್ರ ನಾಣ್ಯವನ್ನು ಸೆರಗಿನ ಗಂಟಿನಲ್ಲಿ ಕಟ್ಟಿ, ರಕ್ಷೆ ಅಂದರೆ ರಾಖಿಯನ್ನು ತಯಾರಿಸುತ್ತಿದ್ದರು. ಚಿತ್ರ ವಿಚಿತ್ರ ರಾಖಿಗಳನ್ನು ಉಪಯೋಗಿಸುವುದಕ್ಕಿಂತ ಸಾತ್ವಿಕ ಮತ್ತು ಮನಸ್ಸಿಗೆ ಆಹ್ಲಾದಕರ ರಾಖಿಗಳನ್ನು ಉಪಯೋಗಿಸಬೇಕು. ಇಲ್ಲದಿದ್ದರೆ ಆ ರಾಖಿಯ ಸತ್ವ, ರಜ, ತಮೋ ಗುಣಗಳು ಧರಿಸಿದವರ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನೆಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಪ್ರಶಾಂತವಾಗುತ್ತದೆ. ರಾಖಿಯನ್ನು ಕಟ್ಟಿದ ನಂತರ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗುತ್ತಾರೆ. ತುಪ್ಪದ ದೀಪವು ಶಾಂತ ರೀತಿಯಲ್ಲಿ ಉರಿಯುತ್ತದೆ. ಆದ್ದರಿಂದ ಸಹೋದರನಲ್ಲಿ ಶಾಂತರೀತಿಯಿಂದ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುತ್ತದೆ.
ಈ ದಿನವನ್ನು ಉಪಾಕರ್ಮ ಆರಂಭ ಎಂದೂ ಕರೆಯುತ್ತಾರೆ. ಇದೊಂದು ಬ್ರಾಹ್ಮಣ ವರ್ಗವು ಆಚರಿಸುವ ವೈದಿಕ ಕ್ರಿಯಾವಿಧಿ. ಈ ಕ್ರಿಯಾವಿಧಿಯನ್ನು ದೈನಂದಿನ ಸಂಧ್ಯಾವಂದನೆಯನ್ನು ಮಾಡುವ ಆರ್ಯ ವೈಶ್ಯ ಸಮುದಾಯದವರೂ ಆಚರಿಸುತ್ತಾರೆ. ಉಪಾಕರ್ಮವನ್ನು ವರ್ಷಕ್ಕೆ ಒಂದು ಸಾರಿ ಶ್ರವಣ ನಕ್ಷತ್ರ ಅಥವಾ ಧನಿಷ್ಠಾ ನಕ್ಷತ್ರದಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಬ್ರಾಹ್ಮಣರು ಶಾಸ್ತ್ರೋಕ್ತವಾಗಿ ತಮ್ಮ ಜನಿವಾರವನ್ನು ಬದಲಾಯಿಸುತ್ತಾರೆ. ಜೊತೆಗೆ ಸಂಬಂಧಿತ ಶ್ರೌತ ಕ್ರಿಯಾ ವಿಧಿಗಳು ಇರುತ್ತವೆ. ಹಾಗೂ ವೈದಿಕ ಶ್ಲೋಕಗಳನ್ನು ರಚಿಸಿದ ಋಷಿಗಳಿಗೆ ಶ್ರಾದ್ಧ ತರ್ಪಣಗಳನ್ನು ಕೊಡುತ್ತಾರೆ.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.
ರಕ್ಷಾಬಂಧನ ಆಚರಣೆ, ಉದ್ದೇಶಗಳ ಬಗ್ಗೆ ಉತ್ತಮ ಮಾಹಿತಿಗಳನ್ನು ಎ.ವಿ. ಶಂಕರಾನಂದ ಅವರು ಅರ್ಥವತ್ತಾಗಿ ತಿಳುಹಿಸಿ ದ್ದಾರೆ.ಅವರಿಗೂ, ಅದನ್ನು ಎಲ್ಲರಿಗೂ ತಲುಪಿಸಿದ ತಮಗೂ ನಮಸ್ಕಾರ ಪೂರ್ವಕ ಧನ್ಯವಾದಗಳು.
🙏🙏👏👏