ಸೋದರರೊಳ್ ಸೋದರಂ ಕಾದಿಸುವುದು – ‘ಆದಿಕವಿ’ ಪಂಪನ ‘ಆದಿಪುರಾಣ’ ಕಾವ್ಯದಲ್ಲಿ ಈ ಸಾಲು ಉಲ್ಲೇಖವಾಗಿದೆ. ಪಂಪ ಬಾಹುಬಲಿಯಿಂದ ಈ ಮಾತುಗಳನ್ನಾಡಿಸಿದ್ದಾನೆ.
ಭರತನ ಚಕ್ರವರ್ತಿ ಪ್ರಯೋಗಿಸಿದ ಚಕ್ರರತ್ನವು ಬಾಹುಬಲಿಯನ್ನು ಏನೂ ಮಾಡದೆ ಆತನನ್ನು ಪ್ರದಕ್ಷಿಣೆ ಹಾಕಿ ಆತನ ಬಲಭಾಗದಲ್ಲಿ ಬಂದು ನಿಲ್ಲುತ್ತದೆ. ಆ ಸಂದರ್ಭದಲ್ಲಿ ಭರತನನ್ನು ಸೋಲಿಸಬೇಕೆಂದು ಆತನನ್ನು ಗಿರಗಿರನೆ ತಿರುಗಿಸಿ ಎಸೆಯಬೇಕು ಎನ್ನುವಷ್ಟರಲ್ಲಿ ಬಾಹುಬಲಿಗೆ ಜ್ಷಾನೋದಯವಾಗುತ್ತದೆ.
ಆ ಸಂದರ್ಭದಲ್ಲಿ ಬಾಹುಬಲಿ ಅಣ್ಣನ ಪರಿಸ್ಥಿತಿಯನ್ನು ನೋಡಿ ಛೆ! ನನ್ನಿಂದ ಈ ತಪ್ಪು ಆಗಬಾರದಿತ್ತು ಎಂದು ಭಾವಿಸುತ್ತಾನೆ. ರಾಜ್ಯವ್ಯಾಮೋಹ ಅರ್ಥಾತ್ ಲಕ್ಷ್ಮಿಯ ಮೇಲಿನ ವ್ಯಾಮೋಹ ಏನೆಲ್ಲಾ ಕೆಡುಕುಗಳನ್ನು ಮಾಡಿಸುತ್ತದೆ. ತಂದೆ ಮಕ್ಕಳ ನಡುವೆ ಅಣ್ಣ ತಮ್ಮಂದಿರ ನಡುವೆ ಭಿನ್ನಾಭಿಪ್ರಾಯವನ್ನು ಮೂಡಿಸುತ್ತದೆ. ಈಕೆ ಚಂಚಲೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸದಾ ವಿಭ್ರಮಿಸುತ್ತಿರುತ್ತಾಳೆ ಒಂದು ವೇಳೆ ನಾನು ಸಿಂಹಾಸನವನ್ನು ಸ್ವೀಕರಿಸಿ ಇಂಥ ಚಂಚಲೆಯೊಂದಿಗೆ ಅದು ಹೇಗೆ ರಾಜ್ಯಭಾರ ಮಾಡಲು ಸಾಧ್ಯ ಎಂದು ಲಕ್ಷ್ಮಿಯ ಚಂಚಲತೆಯ ಬಗ್ಗೆಅಸಮಾಧಾನ ವ್ಯಕ್ತಪಡಿಸುತ್ತಾನೆ.
ಹಣ ಪ್ರತಿಯೊಬ್ಬರ ಆವಶ್ಯಕತೆ ಆದರೆ ಮೀತಿ ಮೀರಿ ಲಕ್ಷ್ಮಿಗಾಗಿ ಆಸೆ ಪಡುವುದು ತಪ್ಪು . ಮಿತಿಮೀರಿದ ಸಂಪತ್ತು ನೆಮ್ಮದಿಗೆ ಭಂಗವನ್ನು , ಬಂಧುತ್ತವಕ್ಕೆ ತೊಡಕನ್ನು ಮಿಗಿಲಾಗಿ ನಮ್ಮ ಮನಃಶಾಂತಿಯನ್ನು ಅಪಹರಿಸುತ್ತದೆ. ಹಾಗಾಗಿ ಲಕ್ಷ್ಮಿಯ ಬಗ್ಗೆ ಲಕ್ಷ್ಯ ವಹಿಸುವುದಕ್ಕಿಂತ ಇತರ ಕಾರ್ಯಗಳಲ್ಲಿ ಮಗ್ನವಾಗುವುದು ಉತ್ತಮ. ಲಕ್ಷ್ಮಿ ಸಮಯಕ್ಕೆ ಒದಗಿ ಹೇಗೆ ಬಂಧುವಾಗುತ್ತಾಳೋ ಹಾಗೆ ಆಕೆಯ ಮೇಲಿನ ಅತೀವ್ಯಾಮೋಹ ಮಗ್ಗುಲ ಮುಳ್ಳೂ ಹೌದು. ವಾಸ್ತವ ಲೋಕನೀತಿಯನ್ನು ಪಂಪ ಹತ್ತನೆ ಶತಮಾನದಲ್ಲಿಯೇ “ಸೋದರರೊಳ್ ಸೋದರಂ ಕಾದಿಸುವುದು “ ಎಂಬ ಮಾತಿನ ಮೂಲಕ ಹೇಳಿರುವುದು ಸಾರ್ವಕಾಲಿಕವಾಗಿದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.