18.8 C
Karnataka
Friday, November 22, 2024

    ಮತ್ತೆ ಶಾಲೆಯಲ್ಲಿ ಕೇಳುತಿದೆ ಮಕ್ಕಳ ಕಲರವ; 9ರಿಂದ 12 ನೇ ತರಗತಿ ಆರಂಭ

    Must read

    BENGALURU AUG 23

    ಎರಡನೆಯ ಅಲೆಯ ನಂತರ ಮತ್ತೆ 9ರಿಂದ 12ನೇ ತರಗತಿಗಳ ನೇರ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಲವಲವಿಕೆಯಿಂದ ಶಾಲಾ-ಕಾಲೇಜುಗಳಿಗೆ ಹಾಜರಾದರು.

    ಕೋವಿಡ್ ಪಾಸಿಟಿವಿಟಿ ಶೇ.2ಕ್ಕಿಂತ ದರ ಹೆಚ್ಚಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ 26 ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯಿಂದಲೇ ಭೌತಿಕ ತರಗತಿಗಳು ಶುರುವಾದವು.

    ಎಲ್ಲ ಕಡೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ, ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ತರಗತಿಗಳೊಳಕ್ಕೆ ಬಿಡಲಾಯಿತು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಅಕ್ಕರೆಯಿಂದ ಬರ ಮಾಡಿಕೊಂಡರು. ಶಾಲೆ-ಕಾಲೇಜುಗಳು ರಂಗೋಲಿ, ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದವು.

    ದಾವಣಗೆರೆ ಜಿಲ್ಲೆ ಸಂತೇಬೆನ್ನೂರು ವಿಜಯ ಪ್ರೌಢಶಾಲೆಯಲ್ಲಿ ಶಾಲೆ ಆರಂಭಕ್ಕೆ ಮುನ್ನ ಪ್ರಾರ್ಥನೆ

    ಬಹುತೇಕ ಕಡೆ ನೇರ ತರಗತಿಗಳ ಆರಂಭಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಸರಕಾರ ಮಾತ್ರ ಶೈಕ್ಷಣಿಕ ಚಟುವಟಿಕೆಗಳು ಹಳಿ ತಪ್ಪಬಾರದು ಎಂದು ಹೇಳಿದೆ.

    ಲಭ್ಯ ಮಾಹಿತಿಯಂತೆ; ರಾಜ್ಯದ 26 ಜಿಲ್ಲೆಗಳಲ್ಲಿ 16,000ಕ್ಕೂ ಹೆಚ್ಚು ಪ್ರೌಢಶಾಲೆಗಳು ಹಾಗೂ 5,000ಕ್ಕೂ ಹೆಚ್ಚು ಪಿಯುಸಿ ಕಾಲೇಜುಗಳಿವೆ. ಈ ಸಂಸ್ಥೆಗಳಲ್ಲಿ 9ರಿಂದ 12ನೇ ತರಗತಿಗಳಲ್ಲಿ 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಇವರೆಲ್ಲರೂ ನೇರ ತರಗತಿಗಳಿಗೆ ಹಾಜರಾಗಿದ್ದು, ಮೊದಲನೇ ದಿನ ಎಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ.

    ಬರೋಬ್ಬರಿ ಒಂದೂವರೆ ವರ್ಷದ ಬಳಿಕ ರಾಜ್ಯಾದ್ಯಂತ ಇಂದಿನಿಂದ ಶಾಲಾ ಕಾಲೇಜು ಆರಂಭವಾಗಿದ್ದು, ಮೊದಲ ದಿನ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ. ಕೋವಿಡ್ ಪಾಸಿಟಿವಿಟಿ ದರ ಹೆಚ್ಚಳವಿರುವ ಜಿಲ್ಲೆಗಳಲ್ಲಿ ತರಗತಿಗಳನ್ನು ಆರಂಭ ಮಾಡಿಲ್ಲ. ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಯಾದರೆ ಅಲ್ಲೂ ಶಾಲೆ ಕಾಲೇಜುಗಳನ್ನು ಆರಂಭ ಮಾಡುತ್ತೇವೆ. ಮಕ್ಕಳ ಶೈಕ್ಷಣಿಕ ಉನ್ನತಿ, ಭವಿಷ್ಯಕ್ಕಾಗಿ, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ ಶಾಲೆ ಆರಂಭಿಸುತ್ತಿದ್ದೇವೆ. ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

    ಇದೇ ವೇಳೆ ಕೋವಿಡ್ ಮಾರ್ಗಸೂಚಿ ಪಾಲನೆಗೆ ಆದ್ಯತೆ ನೀಡಲಾಗಿದ್ದು, ತರಗತಿಗಳಿಗೆ ಹಾಜರಾಗಲು ಪೋಷಕರ ಅನುಮತಿ ಪತ್ರ ಕಡ್ಡಾಯ ಮಾಡಲಾಗಿದೆ. ಇದೇ ವೇಳೆ ಆನ್ಲೈನ್ ತರಗತಿಗಳು ಮುಂದುವರೆಯಲಿದ್ದು, ನೇರ ತರಗತಿಗಳಿಗೆ ಹಾಜರಾಗಲಿಚ್ಛಿಸದ ವಿದ್ಯಾರ್ಥಿಗಳು ಆನ್ಲೈನ್ ಪಾಠ ಕೇಳಬಹುದು ಎಂದು ಅವರು ತಿಳಿಸಿದ್ದಾರೆ.

    ಮಕ್ಕಳ ಜತೆ ಸಂವಾದ ನಡೆಸಿದ ಸಿಎಂ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಲ್ಲೇಶ್ವರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ಭೌತಿಕ ತರಗತಿಗಳ ಪ್ರಾರಂಭಕ್ಕೆ ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು.

    ತರಗತಿಗೇ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಚೆನ್ನಾಗಿ ವ್ಯಾಸಂಗ ಮಾಡುವಂತೆ ಹುರಿದುಂಬಿಸಿದರು. ವಿವಿಧ ವಿಷಯಗಳ ಬಗ್ಗೆ ಮಕ್ಕಳ ಜತೆ ಸಂವಾದ ನಡೆಸಿದರಲ್ಲದೆ ತರಗತಿಗಳಲ್ಲಿ ಸ್ವಚ್ಛತೆ, ಕೋವಿಡ್ ನಿಯಮಗಳ ಪಾಲನೆಯನ್ನು ಪರಿಶೀಲಿಸಿದರು.

    ಇಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು; ರಾಜ್ಯಾದ್ಯಂತ ಇಂದಿನಿಂದ 9ರಿಂದ 12ನೇ ತರಗತಿಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಸಂತೋಷದಿಂದ ಶಾಲೆಗೆ ಹಾಜರಾಗಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ತರಗತಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹಲವಾರು ವಿದ್ಯಾರ್ಥಿಗಳು ಮುಕ್ತ ಸಂವಾದ ನಡೆಸಿ ಶಾಲೆಗೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಕೋವಿಡ್ ನಿಂದ ಸ್ವತಂ ತ್ರ ಸಿಕ್ಕಿದೆ. ಸರಕಾರ ಈ ಬಗ್ಗೆ ನಿಗಾ ವಹಿಸಲಿದೆ. ಗಡಿ ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣ ಬಂದ ಕೂಡಲೇ ಹಂತ ಹಂತವಾಗಿ ಶಾಲೆ ಆರಂಭಿಸಲಾಗುವುದು ಎಂದು ಹೇಳಿದರು.

    ಹಾಗೆಯೇ, 1ರಿಂದ 8ನೇ ತರಗತಿ ಪ್ರಾರಂಭದ ಸಂಬಂಧ ತಜ್ಞರ ಸಮಿತಿ ಈ ತಿಂಗಳಾಂತ್ಯಕ್ಕೆ ವರದಿ ನೀಡಲಿದ್ದು, ಅದರ ಪ್ರಕಾರ ಮುಂದಿನ ತೀರ್ಮಾನ ಮಾಡಲಾಗುವುದು ಎಂದ ಅವರು, ಯಾವುದೇ ಶಾಲೆಯಲ್ಲಿ ಕೇವಲ ಒಂದೇ ಒಂದು ಪಾಸಿಟಿವ್ ಪ್ರಕರಣ ಕಂಡು ಬಂದರೂ ಆ ಶಾಲೆಯನ್ನು ಒಂದು ವಾರ ಕಡ್ಡಾಯವಾಗಿ ಮುಚ್ಚುತ್ತೇವೆ ಎಂದರು.

    ಉಳಿದಂತೆ ಪಾಸಿಟಿವಿಟಿ ದರ ಶೇ.2ಕ್ಕೂ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಸೋಮಕಿನ ಪ್ರಮಾಣ ಕಡಿಮೆಯಾದರೆ ಅಲ್ಲಿಯೂ ನೇರ ತರಗಗತಿಗಳನ್ನು ಆರಂಭ ಮಾಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

    ಮಕ್ಕಳು ಇಂದು ಮಹಾಮಾರಿ ಕೊರೊನಾದಿಂದ ಸ್ವತಂತ್ರಗೊಂಡು ಶಾಲೆ, ಕಾಲೇಜಿಗೆ ಬಂದಿದ್ದಾರೆ. ಮಕ್ಕಳನ್ನು ಕಂಡು ತುಂಬಾ ಸಂತೋಷವಾಯಿತು. ನನಗಷ್ಟೇ ಅಲ್ಲದೆ, ನನ್ನ ಜತೆ ಬಂದಿರುವ ಸಚಿವರಾದ ಡಾ.ಅಶ್ವತ್ಥನಾರಾಯಣ, ಬಿಸಿ ನಾಗೇಶ್ ಅವರಿಗೂ ಆನಂದವಾಗಿದೆ. ಈ ಸಂತೋಷವನ್ನು ಕೋವಿಡ್ ನಿಯಮ ಸರಿಯಾಗಿ ಪಾಲಿಸಿಕೊಂಡು ಹೋಗುವ ಮೂಲಕ ಕಾಪಾಡಿಕೊಳ್ಳೊಣ ಎಂದು ಬೊಮ್ಮಾಯಿ ಅವರು ಹೇಳಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!