ಗುರುರಾಜ್ ಪಂಘ್ರಿ
ಕಲಿಯುಗದ ಕಲ್ಪವೃಕ್ಷ ಕಾಮಧೇನು ಪರಮ ಕರುಣಾಸಾಗರರಾದ ಶ್ರೀರಾಘವೇಂದ್ರ ತೀರ್ಥರ ನಾಮ ಸ್ಮರಣೆಯೇ ಪರಮ ಮಂಗಳಕರ.
ಶ್ರೀಮನ್ಮಂತ್ರಾಲಯ ಕ್ಷೇತ್ರದ ತುಂಗಾತೀರ ನರಹರಿ ರಾಮಕೃಷ್ಣ ವೇದವ್ಯಾಸ ವಿಶೇಷ ಸನ್ನಿಧಾನ, ಅಲವಬೋಧರ ಸಕಲ ದೇವತೆಗಳ, ರಾಯರ ಪೂರ್ವಿಕ ಗುರುಗಳ ಸನ್ನಿಧಾನವೇ ತುಂಬಿ ಇರುವ ಪರಮ ಸುಂದರ ಮಂಗಳಕರ ಪಾವನ ವೃಂದಾವನದಲ್ಲಿ ವಿರಾಜಮಾನರಾಗಿರುವ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರು, ಶ್ರೀಗುರುರಾಯರು, ರಾಯರು, ರಾಘಪ್ಪನೆಂದೇ ವಿಶ್ವವಿಖ್ಯಾತರು.
ಮೂಲ ರೂಪ
ಮೂಲರೂಪ ಶಂಕುಕರ್ಣ ಆಗಿದ್ದು ಕೃತಯುಗದಲ್ಲಿ ಶ್ರೀ ನರಸಿಂಹದೇವರ ಪರಮ ಕರುಣಾಪಾತ್ರ ಪ್ರಹ್ಲಾದರಾಜರು ನಂತರ ದ್ವಾಪರಯುಗದಲ್ಲಿ ಶ್ರೀ ಕೃಷ್ಣ ಶ್ರೀ ಭೀಮಸೇನದೇವರು ಕೃಪಾಪಾತ್ರ ಬಾಹ್ಲೀಕರಾಜರು.ಕಲಿಯುಗದಲ್ಲಿ ಶ್ರೀವ್ಯಾಸರಾಜ ಗುರುಸಾರ್ವಭೌಮರು ನಂತರದ ಅವತಾರವೇ ಶ್ರೀರಾಘವೇಂದ್ರ ಸ್ವಾಮಿಗಳು.
ಶ್ರೀ ಗುರುಸಾರ್ವಭೌಮರು ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. (ವೆಂಕಣ್ಣಭಟ್ಟ, ವೆಂಕಟಾಚಾರ್ಯ ಎಂದೂ ಕರೆಯುವರು) ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟ. ತಾಯಿಯ ಹೆಸರು ಗೋಪಿಕಾಂಬ. ತಿಮ್ಮಣ್ಣ ಭಟ್ಟರ ತಾತನ ಹೆಸರು ಕೃಷ್ಣ ಭಟ್ಟ. ಕೃಷ್ಣ ಭಟ್ಟರು ವೀಣೆಯಲ್ಲಿ ಪಂಡಿತರು. ವಿಜಯನಗರದ ರಾಜನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿದ ಗುರುಗಳು. ತಿಮ್ಮಣ್ಣ ಭಟ್ಟರಿಗೆ ವೆಂಕಟನಾಥನನ್ನು ಬಿಟ್ಟು ಇನ್ನೂ ಇಬ್ಬರು ಮಕ್ಕಳು. ಗುರುರಾಜ ಮತ್ತು ವೆಂಕಟಾಂಬ ಅವರ ಹೆಸರು. ವೆಂಕಟನಾಥನು ಈಗಿನ ತಮಿಳುನಾಡುವಿನ ಭುವನಗಿರಿ ಎಂಬಲ್ಲಿ ಜನಿಸಿದನು.
ವೆಂಕಟನಾಥನು ಬಾಲ್ಯದಲ್ಲಿಯೇ ತುಂಬಾ ಬುದ್ಧಿವಂತ ಬಾಲಕನಾಗಿದ್ದನು. ಇವರ ತಂದೆ ಚಿಕ್ಕ ವಯಸ್ಸಿನಲ್ಲೆ ವಿಧಿವಶರಾಗಿದ್ದರಿಂದ ಸಂಸಾರದ ಜವಾಬ್ದಾರಿ ಎಲ್ಲ ಅಣ್ಣ ಗುರುರಾಜನ ಮೇಲೆ ಇತ್ತು. ಇವರ ಪ್ರಾರಂಭಿಕ ವಿದ್ಯಾಭ್ಯಾಸ ಇವರ ಸೋದರಮಾವನಾದ ಮಧುರೈನ ಲಕ್ಷ್ಮಿ ನರಸಿಂಹಾಚಾರ್ಯರಲ್ಲಿ ಆಯಿತು. ಮಧುರೈನಿಂದ ಹಿಂತಿರುಗಿದ ಮೇಲೆ ಇವರ ವಿವಾಹವು ಸರಸ್ವತಿ ಎಂಬ ಕನ್ಯೆಯೊಡನೆ ಆಯಿತು. ವಿವಾಹಾನಂತರ ಇವರು ಕುಂಭಕೋಣಕ್ಕೆ ಬಂದು ಶ್ರೀ ಸುಧೀಂದ್ರ ತೀರ್ಥರಲ್ಲಿ ದ್ವೈತ ವೇದಾಂತ ವ್ಯಾಸಂಗ ಮಾಡತೊಡಗಿದರು. ಅಲ್ಲಿಯೇ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು. ಯಾರಿಂದಲೂ ಫಲಾಪೇಕ್ಷೆ ಇಲ್ಲದೇ ಎಲ್ಲರಿಗೂ ವಿದ್ಯಾದಾನ ಮಾಡುತ್ತಿದ್ದರು.ಅವರ ಆರ್ಥಿಕ ಸ್ಥಿತಿ ಆಗ ಚೆನ್ನಾಗಿರಲಿಲ್ಲ. ಎಷ್ಟೋ ಸಲ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಬೇಕಾದ ಪರಿಸ್ಥಿತಿಯಲ್ಲಿಯೂ ಸಹ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ ಹಾಗೂ ದೇವರ ನಾಮಸ್ಮರಣೆ ಬಿಡಲಿಲ್ಲ.
ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸನ್ಯಾಸಾಶ್ರಮ
ಶ್ರೀ ಸುಧೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ದೇವರೇ ಬಂದು ವೆಂಕಟನಾಥನನ್ನು ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥನಿಗೆ ತಿಳಿಸಿದಾಗ, ವೆಂಕಟನಾಥನು, ಪತ್ನಿ ಮತ್ತು ಮಗನನ್ನು ನೆನಸಿ ನಕಾರತ್ಮಕ ಉತ್ತರ ಕೊಟ್ಟರು. ಅದರೆ ಮನೆಯಲ್ಲಿ, ಸಾಕ್ಷಾತ್ ವಾಗ್ದೇವಿಯೇ ಸ್ವಪ್ನದಲ್ಲಿ ಕಂಡು ಸನ್ಯಾಸಾಶ್ರಮ ಸ್ವೀಕರಿಸಲು ಆಜ್ಞಾ ಇತ್ತಾಗ ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥಾಚಾರ್ಯರು ಫಾಲ್ಗುಣ ಶುದ್ಧ ಬಿದಿಗೆ ಯಂದು ತಂಜಾವೂರಿನಲ್ಲಿ ತನ್ನ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸನ್ಯಾಸಾಶ್ರಮ ವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳೆಂದು ನಾಮಾಂಕಿತರಾದರು.
ಸನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಯು ಭಾವಿಯಲ್ಲಿ ಬಿದ್ದು ಆತ್ಮಹತ್ತೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀ ರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದಳು. ತಮ್ಮ ಪೂರ್ವಾಶ್ರಮದ ಪತ್ನಿಯನ್ನು ಈ ಅವತಾರದಲ್ಲಿ ನೋಡಿ ತೀರ್ಥವನ್ನು ಆಕೆಯ ಮೇಲೆ ಸಂಪ್ರೋಕ್ಷಿಸಿ ಆಕೆಗೆ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.
ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು. ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೆ ವಿದ್ದ್ಯಾರ್ಥಿಯು ಮಹಾ ಪ್ರಸಾದ ವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು.
ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ದುಷ್ಟ ಶಕ್ತಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ದುಷ್ಟಶಕ್ತಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಇದನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಆ ದುಷ್ಟ ಶಕ್ತಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು.
ಕಿರೀಟಗಿರಿಯಲ್ಲಿ ಸಂಚಾರತ್ವೇನ ಬಂದಾಗ ಸೀಕರಣೆಯಲ್ಲಿ ಬಿದ್ದು ಮೃತನಾದ ಬಾಲಕನ ಅಪಮೃತ್ಯುವನ್ನು ಶ್ರೀರಾಮಚಂದ್ರ ದೇವರ ಅನುಗ್ರಹದಿಂದ ಪರಿಹರಿಸಿದರು.
ಅಗಮ್ಯ ಮಹಿಮರಾದ ಶ್ರೀರಾಘವೇಂದ್ರ ತೀರ್ಥರ ಮಹಿಮೆಗಳು ಅನಂತಾನಂತ. ಇಷ್ಟೇ ಅಂತ ಹೇಳಲಾಗದು. ಅವರ ಅಂತರ್ಗತ ಶ್ರೀಹನುಮ ಭೀಮ ಮಧ್ವಾತ್ಮಕ ಮುಖ್ಯ ಪ್ರಾಣ ಅಂತರ್ಗತ ಶ್ರೀ ರಾಮಚಂದ್ರ ದೇವರ ಶ್ರೀ ವೇಣುಗೋಪಾಲ ನ ಅನುಗ್ರಹ. ತಾನು ಮಾಡಿ ಇವರಿಗೆ ಕೀರ್ತಿಯ ತರುವ.
ರಾಯರ ಕೃತಿಗಳು ಕೆಳಕಂಡಂತಿವೆ :
ಶ್ರುತಿ ಪ್ರಸ್ಥಾನ
೧)ಋಗ್ವೇದವಿವೃತಿಃ
೨)ಯಜುರ್ವೇದವಿವೃತಿಃ ೩) ಸಾಮವೇದವಿವೃತಿಃ
೪) ಮಂತ್ರಾರ್ಥಮಂಜರೀ
೫) ಪುರುಷಸೂಕ್ತಮಂತ್ರಾರ್ಥಃ
೬) ಶ್ರೀಸೂಕ್ತಮಂತ್ರಾರ್ಥಃ
೭) ಮನ್ಯುಸೂಕ್ತಮಂತ್ರಾರ್ಥಃ ೮)ಅಂಭೃಣೀಸೂಕ್ತಮಂತ್ರಾರ್ಥಃ *
೯) ಬಳಿತ್ಥಾಸೂಕ್ತಮಂತ್ರಾರ್ಥಃ
೧೦) ಹಿರಣ್ಯಗರ್ಭಸೂಕ್ತ ವ್ಯಾಖ್ಯಾನಮ್
ಉಪನಿಷತ್ ಪ್ರಸ್ಥಾನ
೧೧) ಈಶಾವಾಸ್ಯೋಪನಿಷತ್ ಖಂಡಾರ್ಥಃ
೧೨) ತಲವಕಾರೋಪನಿಷತ್ ಖಂಡಾರ್ಥಃ
೧೩) ಕಾಠಕೋಪನಿಷತ್ ಖಂಡಾರ್ಥಃ
೧೪) ಷಟ್ಪ್ರಶ್ನೋಪನಿಷತ್ ಖಂಡಾರ್ಥಃ
೧೫) ತೈತ್ತಿರಿಯೋಪನಿಷತ್ ಖಂಡಾರ್ಥಃ
೧೬) ಆಥರ್ವಣೋಪನಿಷತ್ ಖಂಡಾರ್ಥಃ
೧೭) ಮಾಂಡೋಕ್ಯೋಪನಿಷತ್ ಖಂಡಾರ್ಥಃ
೧೮) ಶ್ರೀಮನ್ಮಹೈತರೇಯೋಪನಿಷನ್ಮಂತ್ರಾರ್ಥಃ
೧೯) ಛಾಂದೋಗ್ಯೋಪನಿಷತ್ ಖಂಡಾರ್ಥಃ
೨೦) ಬೃಹದಾರಣ್ಯಕೋಪನಿಷತ್ ಖಂಡಾರ್ಥಃ
ಸೂತ್ರಪ್ರಸ್ಥಾನ
೨೧. ಶ್ರೀಮನ್ನ್ಯಾಯಸುಧಾಪರಿಮಳಃ ಇದು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಅನುವ್ಯಾಖ್ಯಾನ ಗ್ರಂಥಕ್ಕೆ ಶ್ರೀಜಯತೀರ್ಥರ ಶ್ರೀಮನ್ನ್ಯಾಯ ಸುಧಾ ಗ್ರಂಥಕ್ಕೆ ರಚಿಸಿದ ವ್ಯಾಖ್ಯಾನ. ಈ ಗ್ರಂಥದ ವಿಶಿಷ್ಟತೆಯಿಂದಲೇ ಪರಿಮಳಾಚಾರ್ಯರು ಅಂತ ಪ್ರಸಿದ್ಧರು.
೨೨) ಅಣುಭಾಷ್ಯ ವಾಖ್ಯಾ ತತ್ವಮಂಜರೀ
೨೩) ತತ್ತ್ವಪ್ರಕಾಶಿಕಾ ಭಾವದೀಪಃ
೨೪) ತಾತ್ಪರ್ಯಚಂದ್ರಿಕಾಪ್ರಕಾಶಃ
೨೫) ತಂತ್ರದೀಪಿಕಾ
೨೬) ನ್ಯಾಯಮುಕ್ತಾವಳಿಃ
ಮೀಮಾಂಸಾಶಾಸ್ತ್ರ ಗ್ರಂಥ
೨೭. ಭಾಟ್ಟಸಂಗ್ರಹಃ
ಪುರಾಣಪ್ರಸ್ಥಾನ
೨೮. ಶ್ರೀಕೃಷ್ಣಚಾರಿತ್ರ್ಯ ಮಂಜರೀ
ಗೀತಾ ಪ್ರಸ್ಥಾನ
೨೯) ಶ್ರೀಮದ್ಭಗವದ್ಗೀತಾಭಾಷ್ಯ ಪ್ರಮೇಯದೀಪಿಕಾ ಭಾವದೀಪಃ
೩೦) ಗೀತಾತಾತ್ಪರ್ಯನ್ಯಾಯದೀಪಿಕಾ ಭಾವದೀಪಃ
೩೧. ಗೀತಾರ್ಥಸಂಗ್ರಹಃ (ಗೀತಾವಿವೃತಿಃ)
ಪ್ರಕರಣ ಗ್ರಂಥಗಳು
೩೨. ಮಾಯಾವಾದ ಖಂಡನ ಟೀಕಾಟಿಪ್ಪಣೀ *
೩೩. ಮಿಥ್ಯಾತ್ವಾನುಮಾನ ಖಂಡನ ಟೀಕಾಟಿಪ್ಪಣೀ *
೩೪. ಉಪಾಖಂಡನ ಟೀಕಾ ಟಿಪ್ಪಣೀ *
೩೫. ಶ್ರೀವಿಷ್ಣುತತ್ತ್ವವಿನಿರ್ಣಯ ಟೀಕಾ ಭಾವದೀಪಃ
೩೬. ತತ್ವೋದ್ಯೋತ ಟೀಕಾಟಿಪ್ಪಣೀ *
೩೭. ತತ್ತ್ವಸಂಖ್ಯಾನಂ ಟೀಕಾ ಭಾವದೀಪಃ *
೩೮. ತತ್ತ್ವವಿವೇಕ ಟೀಕಾ ಭಾವದೀಪಃ
೩೯. ಕಥಾಲಕ್ಷಣ ಟೀಕಾ ಭಾವದೀಪಃ
೪೦. ಕರ್ಮನಿರ್ಣಯ ಟೀಕಾ ಭಾವದೀಪಃ
೪೧. ಪ್ರಮಾಣಲಕ್ಷಣ ಟೀಕಾ ಭಾವದೀಪಃ
ಇತರ ಗ್ರಂಥಗಳ ಟಿಪ್ಪಣಿಗಳು
೪೨. ಪ್ರಮಾಣ ಪದ್ಧತಿ ಟಿಪ್ಪಣಿ ಭಾವದೀಪಃ
೪೩. ತರ್ಕತಾಂಡವ ಟೀಕಾ ನ್ಯಾಯದೀಪಃ
೪೪. ವಾದಾವಳೀ ಟಿಪ್ಪಣೀ
೪೫. ಪ್ರಮೇಯ ಸಂಗ್ರಹಃ
ಇತಿಹಾಸ ಪ್ರಸ್ಥಾನ
೪೬. ಶ್ರೀರಾಮಚಾರಿತ್ರ್ಯ ಮಂಜರೀ
೪೭. ಶ್ರೀಮನ್ಮಹಾಭಾರತತಾತ್ಪರ್ಯ ನಿರ್ಣಯ ಭಾವಸಂಗ್ರಹಃ
೪೮. ಪ್ರಮೇಯನವಮಾಲಿಕೆಯ ಗೂಢಭಾವಪ್ರಕಾಶಿಕಾ (ಅಣುಮಧ್ವವಿಜಯಃ)
ಸದಾಚಾರ ಪ್ರಸ್ಥಾನ
೪೯. ಪ್ರಾತಃ ಸಂಕಲ್ಪಗದ್ಯಮ್
೫೦. ಸರ್ವಸಮರ್ಪಣಗದ್ಯಮ್
೫೧. ಭಗವದ್ಧ್ಯಾನಮ್
೫೨. ತಿಥಿನಿರ್ಣಯಃ
೫೩. ತಂತ್ರಸಾರ ಮಂತ್ರೋದ್ಧಾರಃ
ಸ್ತೋತ್ರ ಪ್ರಸ್ಥಾನ
೫೪. ರಾಜಗೋಪಾಲಸ್ತುತಿಃ
೫೫. ನದೀತಾರತಮ್ಯ ಸ್ತೋತ್ರಮ್
೫೬. ದಶಾವತಾರಸ್ತುತಿಃ
ಸುಳಾದಿ ಮತ್ತು ಗೀತೆಗಳು
೫೭. ಇಂದು ಎನಗೆ ಗೋವಿಂದ
೫೮. ಮರುತ ನಿನ್ನಯ ಮಹಿಮೆ – ಸುಳಾದಿ
ಹರಿದಾಸರು ಕಂಡ ಗುರುರಾಯರು
ರಾಘವೇಂದ್ರತೀರ್ಥರ ಈ ಮೂರು ಅವತಾರಗಳ ಹಿರಿಮೆಯನ್ನು ಹರಿದಾಸರು ಮನಸಾರ ಹಾಡಿ ಹೊಗಳಿದ್ದಾರೆ.
ವಿಜಯದಾಸರು ತಮ್ಮ ಒಂದು ಕೃತಿಯಲ್ಲಿ;
“ನಮೋ ನಮೋ ಯತಿರಾಜ
ಮಮತೆ ರಚಿತ ಅನುಪಮ ಚರಿತ ಚಾರುಹಾಸನೆನಿಪ ನಿನ್ನ |
ಹೆಮ್ಮೆಯಿಂದಲಿಪ್ಪ ಪರಬೊಮ್ಮ ವಿಜಯವಿಠಲನಾ
ತುಮದೊಳರ್ಚಿಪ ಜ್ಞಾನೋತ್ತಮ ತುಂಗಭದ್ರವಾಸ.
ಎಂದು ಹೇಳಿದರೆ,
ಗೋಪಾಲದಾಸರು
“ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿರಾಘವೇಂದ್ರ
ಪತಿತರನುದ ರಿಪ ಪಾವನಕಾರಿಯೆ ಕೈಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ನೆನೆಯುತ ವರ
ಮಂತ್ರಾಲಯದೊಳು ಶುಭವೀಯುತ”
ಎಂದು ಹಾಡಿದ್ದಾರೆ.
ಗುರುಜಗನ್ನಾಥದಾಸರು ಸಹ;
“ನೋಡಿದೆ ಗುರುರಾಯರನ್ನು ಈ
ರೂಢಿಯೊಳಗೆ ಮೆರೆವೋ ಸಾರ್ವಭೌಮನ್ನ
ದಿನನಾಥ ದೀಪ್ತಿ ಭಾಸಕನ ಭವ
ನನಧಿ ಸಂತರಣ ಸುಪೋತ ಕೋಪಮನ
ಮುನಿಜನ ಕುಲದಿ ಶೋಭಿರನ ಸ್ವೀಯ
ಜನರ ಪಾಲಕ ಮಹರಾಯನೆನಿಪನ”
ಎಂದು ವರ್ಣಿಸಿ ಗುರುರಾಯರ ಅವತಾರಗಳ ಜೀವನದ ನಿಜತತ್ತ್ವನ್ನು ತಿಳಿಯ ಹೇಳಿರುವರು.
ಮೂಲತ ಬೆಳಗಾವಿಯವರಾದ ಗುರುರಾಜ್ ಪಂಘ್ರಿ ವೃತ್ತಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರ್. ಆಧ್ಯಾತ್ಮ ಸಂಗತಿಗಳ ಬಗ್ಗೆ ತೀವ್ರ ಆಸಕ್ತಿ ಹಾಗೂ ಅವುಗಳನ್ನು ಬರಹ ರೂಪದಲ್ಲಿ ತರಬೇಕೆಂಬ ಅದಮ್ಯ ಬಯಕೆ ಹೊಂದಿದ್ದಾರೆ.