ಸೆನ್ಸೆಕ್ಸ್ ಆಗಸ್ಟ್ 18 ರಂದು 56,118 ಪಾಯಿಂಟುಗಳನ್ನು ತಲುಪಿ ಸಾರ್ವಕಾಲೀನ ಗರಿಷ್ಠದ ದಾಖಲೆಯನ್ನು ನಿರ್ಮಿಸಿ ವಿಜೃಂಭಿಸಿತು. ಈ ವಿಜೃಂಭಣೆ ಎಷ್ಟರಮಟ್ಟಿಗೆ ಸಹಜವಾದುದು ಎಂಬುದನ್ನು ಅರಿಯ ಬೇಕಾದರೆ 2020 ರಲ್ಲಿ ಕಂಡಂತಹ ಏರಿಳಿತಗಳತ್ತಲೂ ಗಮನಹರಿಸುವುದು ಅವಶ್ಯ.
2020 ರ ಫೆಬ್ರವರಿಯ ಮೂರನೇ ವಾರದಲ್ಲಿ 41,170 ರಲ್ಲಿದ್ದಂತಹ ಸೆನ್ಸೆಕ್ಸ್ ಕೇವಲ ಒಂದೇ ತಿಂಗಳ ಅಂತರದಲ್ಲಿ ಅಂದರೆ 26 ನೇ ಮಾರ್ಚ್ 29,815 ಪಾಯಿಂಟುಗಳಿಗೆ ಜಾರಿತು. ಈ ರೀತಿಯ ಜಾರುವಿಕೆಗೆ ಕಾರಣವಾದುದು ಕೊರೋನ ಮಹಾಮಾರಿಯ ಪ್ರಭಾವದ ಭಯವಾಗಿತ್ತು. ನಂತರದ ದಿನಗಳಲ್ಲಿ ಚಟುವಟಿಕೆ ಚೇತರಿಕೆಯಿಂದ ಮೇಲೇರತೊಡಗಿತು. ಭಯದ ವಾತಾವರಣವು ಪಕಕ್ಕೆ ಸರಿದು ಕೊನೆಗೆ ಕಡೆಗಣಿಸಲಾಯಿತು. ಇದನ್ನು ಡಿಸ್ಕೌಂಟ್ ಮಾಡಲಾಗಿದೆ ಎನ್ನಲಾಗುವುದು. ಅಲ್ಲಿಂದ ನಿರಂತರವಾಗಿ ಏರಿಕೆಯತ್ತ ಸಾಗಿದ ಸೆನ್ಸೆಕ್ಸ್ ದಾಖಲೆಯನ್ನು ನಿರ್ಮಿಸಿದೆ.
ಎರಡನೇ ಅಲೆ ಬಂದಾಗ ಮೊದಲನೇ ಅಲೆಯ ಸಮಯದಲ್ಲಿದ್ದ ಭಯದ ವಾತಾವರಣವು ದೂರವಾಗಿ, ಅತಿಯಾದ ಧೈರ್ಯವು ಬಿಂಬಿತವಾಯಿತು. ಈ ಧೈರ್ಯದ ಪ್ರಭಾವದ ಕಾರಣ ನಕಾರಾತ್ಮಕ ಬೆಳವಣಿಗೆಗಳೂ ಸಹ ಕಡೆಗಣಿಸಿ ಕೇವಲ ಏಕಮುಖವಾಗಿ ಏರಿಕೆಯು ಪ್ರದರ್ಶಿತವಾಯಿತು. ಇದು ಷೇರುಪೇಟೆಯ ವಿಸ್ಮಯಕಾರಿ ಗುಣ.ಸುತ್ತಲೂ ನಕಾರಾತ್ಮಕವಾದ ವಾತಾವರಣವಿದ್ದರೂ ಷೇರುಪೇಟೆ ಏರಿಕೆ ಕಾಣಲು ಕಾರಣವೇನು ಎಂಬುದು ಚಿಂತಿಸುವುದು ಸಾಮಾನ್ಯ.
ಷೇರುಪೇಟೆಯ ವಿಶೇಷತೆ ಎಂದರೆ ಎಲ್ಲಾ ಸಂಪತ್ತುಗಳಲ್ಲಿ ಷೇರುಗಳ ಹೂಡಿಕೆಯನ್ನು ಸುಲಭವಾಗಿ ನಗದೀಕರಿಸಿಕೊಳ್ಳಬಹುದು ಅಂದರೆ ಮಾರಾಟಮಾಡಿದ ಎರಡುದಿನಗಳಲ್ಲಿ ಕೈಗೆ ಹಣ ದಕ್ಕಿಸಿಕೊಳ್ಳಬಹುದು. ಇಷ್ಠು ಸುಲಭವಾಗಿ ನಗದೀಕರಿಸಿಕೊಳ್ಳಬಹುದಾದ ಸಂಪತ್ತಿನ ವಿಧ ಮತ್ತೊಂದಿಲ್ಲ. ಇದು ಷೇರುಪೇಟೆಯ ಮುಖ್ಯ ಆಕರ್ಷಣೀಯ ಗುಣವಾಗಿದೆ. ಈ ಗುಣವು ಲಾಕ್ ಡೌನ್ ಸಮಯದ ಕಾರಣ ನಿಶ್ಕ್ರಿಯವಾಗಿರುವ ಹೆಚ್ಚುವರಿ ನಗದು ಸುಲಭವಾಗಿ ನಗದೀಕರಿಸಬಹುದಾದ ವಿಶೇಷ ಗುಣವುಳ್ಳ ಷೇರುಪೇಟೆಯತ್ತ ತಿರುಗಿ, ಷೇರುಗಳ ಬೇಡಿಕೆ ಹೆಚ್ಚಿಸಿದ ಕಾರಣ ಷೇರುಗಳ ದರಗಳು ಗಗನದತ್ತ ತಿರುಗಿರುವುದೂ ಕಾರಣವಾಗಿರುತ್ತದೆ. ಇತರೆ ವ್ಯವಹಾರಗಳು ಕ್ಷೀಣಿತಗೊಂಡಿರುವಾಗ ಉತ್ಸಾಹಭರಿತ ವಾತಾವರಣದಲ್ಲಿರುವ ಷೇರುಪೇಟೆ ಆಕರ್ಷಣೀಯವಾಗಿದೆ.
ಸುಮಾರು ಒಂದು ವರ್ಷದ ಹಿಂದೆ ಅಂದರೆ 21 ನೇ ಆಗಷ್ಟ್ 2020 ರಂದು 5.32 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದರು. ಈ ವರ್ಷದ ಆಗಷ್ಟ್ 20 ರಂದು ನೋಂದಾಯಿಸಿಕೊಂಡಿರುವ ಗ್ರಾಹಕರ ಸಂಖ್ಯೆಯು 7.72 ಕೋಟಿಗೆ ಏರಿಕೆಯಾಗಿದ್ದು ಸುಮಾರು ಅರ್ಧದಷ್ಟು ಸಂಖ್ಯೆ ಹೆಚ್ಚಾಗಿದ್ದು ಈ ಹೂಡಿಕೆದಾರರ ಹೂಡಿಕೆ ಹಣವು ಪೇಟೆಯೊಳಗೆ ಹರಿದುಬಂದಿರುವ ಕಾರಣ ಬೇಡಿಕೆಯು ಹೆಚ್ಚಾಗಿದೆ. ಈ ಬೇಡಿಕೆ ಯಾವ ರೀತಿ ಪ್ರಭಾವ ಬೀರಿದೆ ಎಂದರೆ ಕಳೆದ ಕೆಲವು ದಿನಗಳಿಂದ ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟದ ಹಾದಿಯಲ್ಲಿದ್ದರೂ ಸಹ ಪೇಟೆ ಸ್ಥಿರತೆಯನ್ನು ಕಂಡುಕೊಂಡಿದೆ. ಇದೇ ನಮ್ಮ ಆಂತರಿಕ ಶಕ್ತಿಯಾದ ಜನಸಂಖ್ಯೆಯ ಪ್ರಭಾವ. ಕೇವಲ ಶೇ.5 ರಷ್ಟು ಪೇಟೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗಲೇ ಈ ಪರಿಸ್ಥಿತಿ ಇದ್ದಾಗ ಈ ಗ್ರಾಹಕರ ಸಂಖ್ಯೆ ಶೇ.10. 15, 20 ಕ್ಕೆ ಏರಿಕೆಯಾದಲ್ಲಿ ದೇಶದ ಷೇರುವಿನಿಮಯ ಕೇಂದ್ರಗಳಲ್ಲಿ ಲೀಸ್ಟಿಂಗ್ ಆಗಿರುವ ಕಂಪನಿಗಳು ತೀರಾ ಕಡಿಮೆಯಾಗಿವೆ ಎನಿಸುತ್ತದೆಯಲ್ಲವೇ?
ಲಾಕ್ ಡೌನ್ ಸಮಯದಲ್ಲಿ ಎಲ್ಲಾ ವ್ಯವಹಾರಗಳು ನಿಶ್ಕ್ರಿಯಯಾಗಿದ್ದರೂ ಷೇರುಪೇಟೆ ಮಾತ್ರ ಚುರುಕಾಗಿ ನಡೆಯುತ್ತಿತ್ತು, ಕಾರಣ ಈ ವಲಯವನ್ನು ಅವಶ್ಯಕ ವಲಯದ ಚಟುವಟಿಕೆ ಎಂದು ವಿಂಗಡಿಸಲಾಗಿತ್ತು. ಈ ಚಟುವಟಿಕೆಯಿಂದ ದೇಶದ ಖಜಾನೆಗೆ ಜಿ ಎಸ್ ಟಿ ಸಂಗ್ರಹಣೆಗೆ ಉತ್ತಮ ಕೊಡುಗೆಯಾಗಿದೆ. ಲಾಕ್ ಡೌನ್ ತೆರವುಗೊಳಿಸಿದ ನಂತರ ನಿಧಾನವಾಗಿ ವ್ಯವಹಾರಗಳು ಸಹಜತೆಗೆ ಮರಳುತ್ತಿರುವ ಕಾರಣ ಪೇಟೆಯಲ್ಲಿ ಹಿಂದಿನ ದಿನಗಳಲ್ಲಿ, ತಿಂಗಳುಗಳಲ್ಲಿ ಪೇಟೆಗೆ ಹರಿದುಬಂದ ಹೆಚ್ಚುವರಿ ಹಣವು ಪೇಟೆಯಿಂದ ನಿರ್ಗಮಿಸುತ್ತಿರುವುದು ಸಹ ಪೇಟೆಯಲ್ಲಿ ಇಳಿಕೆಗೆ ಕಾರಣವಾಗಬಹುದು. ಅದ್ದರಿಂದ ಎಚ್ಚರಿಕೆಯ ವಹಿವಾಟು ಅಗತ್ಯ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.