BENGALURU AUG 26
ಕಾರಾಗೃಹಗಳಲ್ಲಿ ಯಾವುದೇ ತರಹದ ಅಕ್ರಮ ಚಟುವಟಿಕೆಗಳು ಹಾಗೂ ಭ್ರಷ್ಟಾಚಾರ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಕಾರಾಗೃಹ ಕಚೇರಿಗೆ ಭೇಟಿ ನೀಡಿ ಕಾರಾಗೃಹಗಳ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರಾಗೃಹ ಗಳಲ್ಲಿ ಅನಧಿಕೃತವಾಗಿ ಹಾಗೂ ಕಾನೂನುಬಾಹಿರವಾಗಿ ಕೈದಿಗಳು ಮಾದಕ ವಸ್ತುಗಳನ್ನು ಪಡೆದುಕೊಳ್ಳುತ್ತಿರುವ ಹಾಗೂ ಹೊರ ಜಗತ್ತಿನೊಂದಿಗೆ ವ್ಯವಹರಿಸಲು ಫೋನ್ ಸೌಲಭ್ಯ ಮೂಲಕ ಸಂಪರ್ಕ ಸಾಧಿಸಿ ಹಣ ಸುಲಿಗೆ ನಡೆಸುತ್ತಿರುವ ಘಟನೆಗಳನ್ನು ಉದಾಹರಿಸಿ, ಅಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ನಡೆಸುವುದು ಕಂಡು ಬಂದರೆ ಇಬ್ಬರ ಮೇಲೂ ಕಠಿಣ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆಯನ್ನು ಸಚಿವರು ನೀಡಿದರು.
ಕಾರಾಗೃಹಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ವೈಖರಿಯನ್ನು ಸ್ವತಃ ಕಣ್ಣಾರೆ ಕಂಡಿದ್ದೇನೆ, ಇದರಿಂದ ಕೈದಿಗಳ ದೃಷ್ಟಿಯಲ್ಲಿ ಚಿಕ್ಕವರಾಗಬೇಡಿ ಎಂದು ತಿಳಿಸಿದರು.ಜೈಲಿನಿಂದ ಹೊರ ಬರುವಾಗ ಕೈದಿ ಪರಿವರ್ತನೆಗೊಂಡು ಸಮಾಜಕ್ಕೆಉತ್ತಮ ಕೊಡುಗೆ ನೀಡುವಂತಾಗೇಕು ಎಂದರು.
ಕರ್ನಾಟಕ ಕಾರಾಗೃಹ ಇಲಾಖೆ ಮುಖ್ಯಸ್ಥ ಅಲೋಕ್ ಮೋಹನ್ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಭಾಗಹಿಸಿದ್ದರು.