26.6 C
Karnataka
Friday, November 22, 2024

    ಯಡಿಯೂರಪ್ಪ ಪ್ರವಾಸ:ಬಿಜೆಪಿಯಲ್ಲಿ ಅಪಸ್ವರ ‘ರಾಜ್ಯಪಾಲರಾಗಲಿ’ಎಂಬ ಒತ್ತಡ ಸಾಧ್ಯತೆ

    Must read

     

    ಸಿ.ರುದ್ರಪ್ಪ 

    ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ರಾಜ್ಯ ಪ್ರವಾಸಕ್ಕೆ ಬಿಜೆಪಿ ಯಲ್ಲಿ ವಿರೋಧ ವ್ಯಕ್ತವಾಗಿದೆ.

    ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿಯೇ ತಾವು ಪಕ್ಷವನ್ನು ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಪ್ರಕಟಿಸಿದ್ದರು.ನಂತರ ಸ್ವಲ್ಪ ಕಾಲ ಮೌನಕ್ಕೆ ಶರಣಾಗಿದ್ದ ಅವರು ಇತ್ತೀಚೆಗೆ ಮಾಲ್ಡೀವ್ಸ್ ಗೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದರು.ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಮರಳುತ್ತಿದ್ದಂತೆ ರಾಜ್ಯ ಪ್ರವಾಸದ ಕಾರ್ಯಕ್ರಮವನ್ನು ಮತ್ತೊಮ್ಮೆ ಪ್ರಕಟಿಸಿದ್ದರು.ಅವರ ಪ್ರವಾಸಕ್ಕಾಗಿ ವಿಶೇಷವಾಗಿ ಸಜ್ಜುಗೊಂಡಿರುವ ಐಷಾರಾಮಿ ಕಾರಿನಲ್ಲಿಯೇ ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ನಿವಾಸ ಕಾವೇರಿಗೆ ಆಗಮಿಸಿದ್ದರು.

     ಅವರ ಪ್ರವಾಸಕ್ಕೆ ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿ ಗುಂಪು ಅಪಸ್ವರ ಎತ್ತಿದೆ.”ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಸುಸೂತ್ರವಾಗಿ ನಡೆಯುತ್ತಿದೆ.ಪಕ್ಷದ ವರ್ಚಸ್ಸು ಕೂಡ ನಿಧಾನವಾಗಿ ವೃದ್ಧಿಯಾಗುತ್ತಿದೆ.ಇಂತಹ ಸಂದರ್ಭದಲ್ಲಿ ಯಡಿಯೂರಪ್ಪನವರು  ಜಿಲ್ಲಾ ಪ್ರವಾಸ ಆರಂಭಿಸಿದರೆ ರಾಜಕೀಯವಾಗಿ ಅನಾವಶ್ಯಕ ಗೊಂದಲ ನಿರ್ಮಾಣವಾಗುತ್ತದೆ.ಯಡಿಯೂರಪ್ಪನವರು ಏಕಾಏಕಿ ಪ್ರವಾಸ ಕಾರ್ಯಕ್ರಮವನ್ನು ಪ್ರಕಟಿಸಿದ್ದಾರೆ.ಅವರಿಗೆ ಹೈ ಕಮಾಂಡ್ ಅನುಮತಿ ನೀಡಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.ಇನ್ನೊಮ್ಮೆ ವರಿಷ್ಠರ ಸ್ಪಷ್ಟ ಸೂಚನೆಯ ಅಗತ್ಯವಿದೆ.ಜೊತೆಗೆ ಪಕ್ಷದ ರಾಜ್ಯ ಘಟಕವೇ ಅವರ ಪ್ರವಾಸ ಕಾರ್ಯಕ್ರಮದ ವಿವರಗಳನ್ನು ಅಧಿಕೃತವಾಗಿ ಸಿದ್ಧಪಡಿಸಬೇಕು”ಎಂದು ಅವರು ಪಟ್ಟು ಹಿಡಿದಿದ್ದಾರೆ.

    “ಯಡಿಯೂರಪ್ಪನವರು ಪ್ರವಾಸದ ವೇಳೆ ಯಾವ ವಿಚಾರವನ್ನು ಪ್ರಸ್ತಾಪಿಸುತ್ತಾರೆ?ಬೊಮ್ಮಾಯಿ ಆಡಳಿತದ ಬಗ್ಗೆ ಮಾತನಾಡಲು ಇನ್ನೂ ಕಾಲ ಕೂಡಿ ಬಂದಿಲ್ಲ.ಯಡಿಯೂರಪ್ಪನವರು ಒಂದು ವೇಳೆ ತಮ್ಮ ಅವಧಿಯ ಆಡಳಿತದ ಸಾಧನೆಗಳನ್ನು ಹೇಳಲು ಹೊರಟರೆ ಪಕ್ಷಕ್ಕೆ ಮುಜುಗರವಾಗುತ್ತದೆ.”ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

    ಪಕ್ಷದೊಳಗಿನ ಈ ಬೆಳವಣಿಗೆಗೆ ಯಡಿಯೂರಪ್ಪ ಆಪ್ತರು ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.”ಇದೆಲ್ಲಾ ರಾಷ್ಟ್ರೀಯ ಬಿಜೆಪಿಯಲ್ಲಿ ಪ್ರಭಾವಿ ಹುದ್ದೆಯಲ್ಲಿರುವ ರಾಜ್ಯದ ನಾಯಕರೊಬ್ಬರ ಚಿತಾವಣೆ.ರಾಜ್ಯ ಉಪಾಧ್ಯಕ್ಷರೊಬ್ಬರ ಮೂಲಕ ಕರ್ನಾಟಕದಲ್ಲಿ ಅವರು ಬಿಜೆಪಿಯನ್ನು ನಿಯಂತ್ರಿಸುತ್ತಿದ್ದಾರೆ.ಅವರಿಗೆ ಪಕ್ಷವನ್ನು ಬಲಪಡಿಸಲು ಯಡಿಯೂರಪ್ಪನವರ ಹೆಸರು ಬೇಕು.ಆದರೆ ಯಡಿಯೂರಪ್ಪನವರ ನಾಯಕತ್ವ ಬೇಡ”ಎಂದು ಅವರು ಟೀಕಿಸಿದ್ದಾರೆ.

    “ಯಡಿಯೂರಪ್ಪನವರಿಗೆ,ಜಿಲ್ಲಾ ಪ್ರವಾಸ ಮತ್ತಿತರ ಸಕ್ರಿಯ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಲು ಮುಂದಿನ ವಿಧಾನ ಸಭೆ ಚುನಾವಣೆವರೆಗೆ ಅವಕಾಶ ನೀಡಿದರೆ ಅವರು ತಮ್ಮ  ಪುತ್ರ ವಿಜಯೇಂದ್ರ ಅಥವಾ ಬೇರೆ ಯಾರಾದರೂ ತಮ್ಮ ನಿಷ್ಠಾವಂತರೇ ಮುಖ್ಯಮಂತ್ರಿಯಾಗಲೀ ಎಂದು ಪಟ್ಟು ಹಿಡಿಯಬಹುದು.ಹೀಗಾಗಿ ಯಡಿಯೂರಪ್ಪ factor ಮುನ್ನೆಲೆಗೆ ಬರಲೇಬಾರದು ಎಂದು ಅವರ ವಿರೋಧಿ ಬಣ ಪ್ರಯತ್ನಿಸುತ್ತಿದೆ.ಈ ಷಡ್ಯಂತ್ರದಲ್ಲಿ ರಾಷ್ಟ್ರೀಯ ಪದಾಧಿಕಾರಿಯಾಗಿರುವ ರಾಜ್ಯದ ಯುವ ನಾಯಕರೊಬ್ಬರು ಭಾಗಿಯಾಗಿದ್ದಾರೆ”ಎಂದು ಮೂಲಗಳು ತಿಳಿಸಿವೆ.

    “ಯಡಿಯೂರಪ್ಪ ಒಬ್ಬ ಸರ್ವೋಚ್ಛ ನಾಯಕ.ಅವರಿಗೆ ಯಾರ ಅಪ್ಪಣೆಯೂ ಅಗತ್ಯವಿಲ್ಲ.ತಮಗೆ ಅಡ್ಡಗಾಲು ಹಾಕುವ ಇಂತಹ ಷಡ್ಯಂತ್ರಗಳಿಗೆ ಅವರು ಕೇರ್ ಮಾಡುವುದೂ ಇಲ್ಲ.ಅವರಿಗೆ ಅಡ್ಡಿಪಡಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆಯೇ ವಿನಃ ಯಡಿಯೂರಪ್ಪನವರು ಕಳೆದುಕೊಳ್ಳುವುದು ಏನೂ ಇಲ್ಲ”ಎಂದು ಮುಖಂಡರೊಬ್ಬರು ತಿಳಿಸಿದರು.

    ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ ಸುಮಾರು 17 ವರ್ಷಗಳ ಹಿಂದೆ ರಾಜ್ಯದಲ್ಲಿ ಇಂತಹದೇ ಒಂದು ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿತ್ತು.2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು.ಮುಖ್ಯಮಂತ್ರಿ ಧರ್ಮ ಸಿಂಗ್ ಮತ್ತು ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಜಬರ್ದಸ್ತ್ ನಿಂದಲೇ ಆಡಳಿತ ಆರಂಭಿಸಿದ್ದರು.ಸಮಾಧಾನ ಪ್ರವೃತ್ತಿಯ ಧರ್ಮ ಸಿಂಗ್ ಅವರಿಗಿಂತ ಖಡಕ್ ವ್ಯಕ್ತಿತ್ವದ ಸಿದ್ದರಾಮಯ್ಯ ಅವರಿಂದಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು.ಉದಾಹರಣೆಗೆ,ವಿಧಾನ ಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಗಳ ಪ್ರಗತಿ ಪರಿಶೀಲನೆ ಸಭೆ ನಡೆದಿತ್ತು .ಜಿಲ್ಲಾ ಪಂಚಾಯತ್ ಸಿಇಒ ಒಬ್ಬರು”ನಮ್ಮ ಜಿಲ್ಲೆಯಲ್ಲಿ ಜಿಡಿಪಿ ವೃದ್ಧಿಯಾಗಿದೆ.”ಎಂದರು.ಆಗ ಸಿದ್ದರಾಮಯ್ಯನವರ ಸಿಟ್ಟು ನೆತ್ತಿಗೇರಿತು.”ಏಯ್..ನಿಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರು,ಆಹಾರ ಧಾನ್ಯ ಪೂರೈಕೆ,ಗೊಬ್ಬರ,ಬೀಜ ವಿತರಣೆ,ಮಳೆ-ಬೆಳೆ,ಜನ ಜೀವನ ಹೇಗಿದೆ ಹೇಳಪ್ಪಾ..ದೊಡ್ಡ ಎಕಾನಾಮಿಸ್ಟ್ ಥರ ಜಿಡಿಪಿ-ಜಿಡಿಪಿ ಅಂತ ಯಾಕಯ್ಯಾ ಮಾತಾಡ್ತೀಯಾ”ಎಂದು ಗದರಿಸಿದ್ದರು.ಒಟ್ಟಿನಲ್ಲಿ ಸರ್ಕಾರದ ಆಡಳಿತ ಬಿಗಿಯಾಗಿ ನಡೆಯುತ್ತಿತ್ತು.ಆದರೆ ಈ ನಡುವೆ ಒಂದು ದಿನ,ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಮೌನಕ್ಕೆ ಶರಣಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಏಕಾಏಕಿ ತಾವು ರಾಜ್ಯ ಪ್ರವಾಸ ಮಾಡುವುದಾಗಿ ಪ್ರಕಟಿಸಿಬಿಟ್ಟರು.ಇದಾಗಿ ಸುಮಾರು ಒಂದು ವಾರದಲ್ಲಿ ಕೃಷ್ಣ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಆದೇಶ ದೆಹಲಿಯಿಂದ ಹೊರ ಬಿದ್ದಿತು.

    “ಸರ್ಕಾರ ಚೆನ್ನಾಗಿ ನಡೆಯುತ್ತಿರುವಾಗ ಕೃಷ್ಣ ಅವರು ರಾಜ್ಯ ಪ್ರವಾಸ ಕೈಗೊಂಡರೆ ರಾಜಕೀಯವಾಗಿ ಗೊಂದಲವಾಗುತ್ತದೆ”ಎಂಬ ಸಂಗತಿಯನ್ನು ಜೆಡಿಎಸ್ ಸರ್ವೋಚ್ಛ ನಾಯಕ ಎಚ್ ಡಿ ದೇವೇಗೌಡರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದರಂತೆ.ಆದ್ದರಿಂದ ಕೃಷ್ಣ ಅವರನ್ನು ಕೂಡಲೇ ರಾಜ್ಯದಿಂದ ಹೊರಗೆ ಕಳುಹಿಸಲಾಗಿತ್ತು.

    ಈಗ ಯಡಿಯೂರಪ್ಪನವರನ್ನು ಕೂಡ ರಾಜ್ಯಪಾಲರನ್ನಾಗಿ ಮಾಡುವಂತೆ ಹೈ ಕಮಾಂಡ್ ಮೇಲೆ ರಾಜ್ಯದ ಕೆಲವು ನಾಯಕರು ಒತ್ತಡ ಹೇರಿದರೂ ಆಶ್ಚರ್ಯಪಡಬೇಕಿಲ್ಲ.


    ಸಿ ರುದ್ರಪ್ಪ ನಾಡಿನ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!