ಸುಮಾವೀಣಾ
ಕಂಡುದನು ಆಡೆ ಭೂಮಂಡಲವು ಮುನಿವುದು– ಸರ್ವಜ್ಞನ ತ್ರಿಪದಿಗಳಲ್ಲಿ ಉಲ್ಲೇಖವಾಗಿರುವ ಸರ್ವಜ್ಞನ ಈ ಮಾತು ಅಕ್ಷರಷಃ ಸತ್ಯ. ಅಪಾರ ಲೋಕಾನುಭವ,ವಿಡಂಬನೆ, ತನಗನ್ನಿಸಿದ್ದನ್ನು ನೇರ ನಿಷ್ಟುರವಾಗಿ ಹೇಳುವ ಈ ಮಾತು ಲೋಕದ ಜನರ ನಡವಳಿಕೆಗೆ ಕೈಗನ್ನಡಿ ಹಿಡಿದಂತಿದೆ.
ಸತ್ಯ ಯಾವಾಗಲು ಕಟುವಾಗಿಯೇ ಇರುವುದು. ಇರುವ ವಾಸ್ತವನ್ನು ಯಾರೂ ಒಪ್ಪಿಕೊಳ್ಳಲು ತಯಾರಿರುವುದಿಲ್ಲ “ಕಂಡದ್ದನ್ನು ಕಂಡಂತೆ ಹೇಳಿದರೆ ಬೆಟ್ಟದಷ್ಟು ಕೋಪ” ಎಂಬ ಗಾದೆಯನ್ನೂ ಇಲ್ಲಿ ಸಂವಾದಿಯಾಗಿ ಹೇಳಬಹುದು. ಜನರು ಇಲ್ಲಿ ತಮ್ಮನ್ನು ತಾವು ತಿದ್ದಿಕೊಳ್ಳಲು ಇಚ್ಛಿಸಲಾರರು ಎಂಬ ವಿಚಾರವೂ ಇಲ್ಲಿ ವಿದಿಧವಾಗುತ್ತದೆ.
ನಾವು ಕಣ್ಣಿಂದ ಕಂಡ ಸತ್ಯವನ್ನು ಆಡಿದರೆ ಅದು ಯಾರಿಗೂ ಇಷ್ಟವಾಗುವುದಿಲ್ಲ. ಹಾಗೆ ಸತ್ಯ ತೋರಿಸಿಕೊಡುವವರನ್ನು ಜನರು ಕೆಂಗಣ್ಣಿನಿಂದಲೇ ನೋಡುತ್ತಾರೆ. ಸತ್ಯವನ್ನು ಸಿಹಿಲೇಪಿತ ಗುಳಿಗೆಗೂ ಸುಳ್ಳನ್ನು ಸಿಹಿಯಾದ ನಿಧಾನ ವಿಷಕ್ಕೂ ಹೋಲಿಸುವುದಿದೆ.
ಪುಣ್ಯಕೋಟಿಯ ಕತೆಯಲ್ಲಿ ಬರುವ ಸತ್ಯವೇ “ನಮ ತಂದೆ-ತಾಯಿ ಸತ್ಯವೇ ನಮ ಬಂಧು ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು” ಎಂದು ಪುಣ್ಯಕೋಟಿ ಗೋವು ಆಡುವ ಮಾತಿನಲ್ಲಿ ಎಷ್ಟು ಅರ್ಥವಿದೆ ? ಅದೆಷ್ಟುನೈತಿಕತೆಯ ಎಚ್ಚರ ಇದೆ? ಆದರೆ ಆ ಮಾತು ಪಠ್ಯದಲ್ಲಿ ಅಕ್ಷರರೂಪಿಯಾಗಿದೆಯೇ ಹೊರತು ಅನುಷ್ಟಾನದಲ್ಲಿ ಇಲ್ಲ! ಅದನ್ನು ಅನುಸರಿಸುವವರು ಎಲ್ಲಿದ್ದಾರೆ?
‘ಸತ್ಯವೇ ಸರ್ವಸ್ವ’ ಎಂಬ ಮಾತು ‘ಅಸತ್ಯವೇ ಸರ್ವಸ್ವ’ ಎಂದು ಹೀನಾರ್ಥವನ್ನು ಪಡೆದುಕೊಂಡಿದೆ. “ಕಂಡುದನು ಆಡೆ ಭೂಮಂಡಲವು ಮುನಿವುದು” ಈ ಮಾತು ಭ್ರಷ್ಟಾಚಾರ ತುಂಬಿದ ಜನರ ಮುಖವಾಣಿ ಎನ್ನಬಹುದು. ಸತ್ಯದ ದಾರಿ ದೂರದ್ದು ಸುಳ್ಳಿನ ದಾರಿ ಹತ್ತಿರದ್ದು ಎನ್ನುವಂತೆ ಸುಭಗತೆಯನ್ನು ಬಯಸುವ ಮಾನವ ಸಮಾಜ ನಿಜದ ಹಾದಿಯನ್ನು ಮರೆತಿದ್ದಾರೆಯೇ ಅನ್ನಿಸುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.