ಹೂಡಿಕೆಯ ಶೈಲಿ ಹೇಗಿರಬೇಕೆಂದರೆ ನಾವು ಹೂಡಿಕೆ ಮಾಡಿದ ಕಂಪನಿಯ ಘನತೆ, ಗೌರವ, ಪ್ರತಿಷ್ಠೆಯ ಮಟ್ಟ ಸಂಪೂರ್ಣ ನಂಬಿಕೆಗೆ ಅರ್ಹವಾದ ಮಟ್ಟದಲ್ಲಿರಬೇಕು. ಕಾರ್ಪೊರೇಟ್ ಗಳ ಮೇಲೆ ಸೆಬಿ ನಿಯಂತ್ರಣ ಜಾರಿಯಾಗುವುದಕ್ಕಿಂತ ಮುಂಚಿನ ದಿನಗಳಲ್ಲಿ ಕಾರ್ಪೊರೇಟ್ ಗಳು ಎಂತಹ ರೀತಿಯ ಬದ್ಧತೆ, ಭಾದ್ಯತೆಗಳನ್ನು ಹೊಂದಿದ್ದವು ಎಂಬುದಕ್ಕೆ ಕಾಲ್ಗೇಟ್ ಪಾಲ್ಮೊಲಿವ್, ಹೌಸಿಂಗ್ ಡೆವೆಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಗಳಂತಹ ಕಂಪನಿಗಳು ಉತ್ತಮ ಉದಾಹರಣೆಯಾಗಿವೆ.
ಕಾಲ್ಗೇಟ್ ಪಾಲ್ಮೋಲಿವ್:ಕಾಲ್ಗೇಟ್ ಕಂಪನಿಯ ಇತಿಹಾಸವನ್ನರಿತಾಗ ಸಮಾಧಾನದ ಉತ್ತರ ಸಿಗಬಹುದು. ಈ ಕಂಪನಿಯು ಭಾರತದಲ್ಲಿ 1978 ರಲ್ಲಿ ಅಂದಿನ ಫೆರಾ ನಿಯಮದಡಿ 11.79 ಷೇರುಗಳನ್ನು ಪ್ರತಿ ಷೇರಿಗೆ ರೂ.15 ರಂತೆ ವಿತರಿಸಿತು. ನಂತರದಲ್ಲಿ ಕಂಪನಿಯು 1982 ರಲ್ಲಿ,1985 ರಲ್ಲಿ, 1987 ರಲ್ಲಿ, 1989 ರಲ್ಲಿ, 1994 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿ ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಯಿತು.1991 ರಲ್ಲಿ 3:5 ಅನುಪಾತದ ಬೋನಸ್ ಷೇರು ವಿತರಿಸಿತು. ಅಂದರೆ ಮೊದಲ ವಿತರಣೆಯಲ್ಲಿ, 1978 ರಲ್ಲಿ 100 ಷೇರು ಪಡೆದವರ ಹೂಡಿಕೆ 1994 ರವರೆಗೆ ಐವತ್ತು ಪಟ್ಟು ಬೆಳೆದಿದೆ. ಇದರೊಂದಿಗೆ ಅಧಿಕ ಲಾಭಾಂಶವನ್ನು ನೀಡಿದೆ. ಈ ಕಂಪನಿಯ ಷೇರು ಬಂಡವಾಳವು ಆರಂಭದ ರೂ.2 ಕೋಟಿಯಿಂದ ರೂ.136 ಕೋಟಿಗೆ ಈ ಅವಧಿಯಲ್ಲಿ ತಲುಪಿದ್ದು, ಇದರಲ್ಲಿ ಸಿಂಹ ಪಾಲು ಬೋನಸ್ ಷೇರುಗಳದ್ದಾಗಿದೆ. ಹಾಗಾಗಿ,ಸಣ್ಣ ಹೂಡಿಕೆದಾರರ ಅಭಿಮಾನಿ ಷೇರಾಗಿದೆ.
ಷೇರಿನ ಹಣವನ್ನು ಷೇರುದಾರರಿಗೆ ಹಿಂದಿರುಗಿಸಿದ ಪ್ರಪ್ರಥಮ ಕಂಪನಿ:
ಕಂಪನಿಯ ಷೇರು ಬಂಡವಾಳವು ಗಜಗಾತ್ರಕ್ಕೆ ಬೆಳೆದ ಕಾರಣ ಮತ್ತೊಮ್ಮೆ ಬೋನಸ್ ಷೇರು ವಿತರಿಸಿದರೆ ಹೆಚ್ಚಾಗುವ ಬಂಡವಾಳದ ಅಗತ್ಯತೆ ಇಲ್ಲದ ಕಾರಣ ಮತ್ತು ಕಂಪನಿಯು ಹೊಂದಿರುವ ಮೀಸಲು ನಿಧಿಯನ್ನು ಸದುಪಯೋಗ ಪಡಿಸಲು ಈ ಕಂಪನಿಯು 2007 ರಲ್ಲಿ ತನ್ನ ಷೇರುದಾರರ ಹೂಡಿಕೆಯಾದ ಪ್ರತಿ ಷೇರಿನ ರೂ.10 ರಲ್ಲಿ ರೂ.9ನ್ನು ಹಿಂದಿರುಗಿಸಿತು. ಈ ಮೂಲಕ ರೂ.122 ಕೋಟಿ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಿದೆ ಇಂತಕ ಕ್ರಮ ಕೈಗೊಂಡ ಪ್ರಥಮ ಕಂಪನಿಯಾಯಿತು. ಸೆಪ್ಟೆಂಬರ್ 2015 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಇದರಿಂದ ಕಂಪನಿಯ ಷೇರುಬಂಡವಾಳವು ರೂ.27.20 ಕೋಟಿಗೆ ತಲುಪಿದೆ. ಇಷ್ಟೆಲ್ಲಾ ಬೋನಸ್ ವಿತರಣೆಗಳ ಜೊತೆಗೆ ಆಕರ್ಷಕವಾದ ಲಾಭಾಂಶಗಳನ್ನೂ ಸಹ ವಿತರಿಸಿದೆ. ಆದಾಗ್ಯೂ ಸಹ ರೂ.1 ರ ಮುಖಬೆಲೆಯ ಷೇರಿನ ಬೆಲೆ ರೂ.1,650 ರ ಸಮೀಪವಿದೆ.
ಎಚ್ ಡಿ ಎಫ್ ಸಿ ಲಿಮಿಟೆಡ್:ಕಾರ್ಪೊರೇಟ್ ನೀತಿಪಾಲನೆಗೆ ಹೆಚ್ಚು ಆದ್ಯತೆಯು ಈಗಿನ ದಿನಗಳಲ್ಲಿ ನೀಡಲಾಗುತ್ತಿದ್ದು ಇದಕ್ಕೆ ಶಾಸನಬದ್ಧ ನಿಯಮಗಳನ್ನೂ ಸಹ ರೂಪಿಸಲಾಗಿದೆ. ಈ ನಿಯಮಗಳು ಜಾರಿಯಾಗುವ ಮುಂಚಿನ ವರ್ಷಗಳಲ್ಲಿ ಅಳವಡಿಸಿಕೊಂಡು ಬಂದಿರುವ ಕಂಪನಿ ಎಂದರೆ ಹೆಚ್ ಡಿ ಎಫ್ ಸಿ ಲಿಮಿಟೆಡ್. ಕಂಪನಿಯ ಚಟುವಟಿಕೆ, ಆಡಳಿತ ಮಂಡಳಿಯ ಹೂಡಿಕೆದಾರರ ಸ್ನೇಹಮಯಿ ಮನೋಧರ್ಮಗಳೊಂದಿಗೆ ಉತ್ತಮ ನೀತಿಪಾಲನಾ ಗುಣವು ಈ ಕಂಪನಿಯ ಘನತೆಗೆ ಕಳಸಪ್ರಯಾವಾಗಿವೆ.
ಇವೆಲ್ಲಾ ಸಕಾರಾತ್ಮಕಗಳನ್ನು ಮೈಗೂಡಿಸಿಕೊಂಡಿರುವ ಎಚ್ ಡಿಎಫ್ ಸಿ ಆರಂಭವಾದುದು 1977ರಲ್ಲಿ. ಈ ಕಂಪೆನಿ 1981-82ರಲ್ಲಿ ರು.100ರ ಮುಖಬೆಲೆ ಷೇರಿಗೆ ಶೇ.5 ರಷ್ಟು ಆರಂಭಿಕ ಲಾಭಾಂಶ ನೀಡಿ, ತದನಂತರ ಶೇ.7.5, ಶೇ.10 ಹೀಗೆ ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸಿಕೊಂಡು ಹೋಯಿತು. ರು.100ರ ಮುಖಬೆಲೆಯ ಷೇರು ಸುಮಾರು 2000ನೇ ಇಸವಿಯವರೆಗೂ ಪೇಟೆಯಲ್ಲಿ ನೂರರ ಒಳಗಿತ್ತು. ಉತ್ತಮ ಲಾಭಾಂಶದ ಕಾರಣ ಒಂದು ರೀತಿಯ ಫಿಕ್ಸೆಡ್ ಡೆಪಾಸಿಟ್ ತರಹ ಈ ಷೇರು ಕೊಂಡವರು ಮುಂದೆ ಉತ್ತಮ ಲಾಭವನ್ನು ಪಡೆದುಕೊಂಡರು.
ಷೇರುಪೇಟೆಯಲ್ಲಿ ಹಣ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಸಾಮಾನ್ಯವಾಗಿ ವಿಶ್ಲೇಷಕರು ಇನ್ಫೋಸಿಸ್ ನ ಉದಾಹರಣೆ ನೀಡುವರು. ಆದರೆ ವಸತಿ ವಲಯದ ಎಚ್ ಡಿಎಫ್ ಸಿ ಕಂಪೆನಿ 1986 ರಲ್ಲಿ 1:2ರ ಅನುಪಾತದ ಹಕ್ಕಿನ ಷೇರನ್ನು ಮುಖಬೆಲೆಯಲ್ಲೇ ವಿತರಿಸಿತು. ಮತ್ತೊಮ್ಮೆ 1:2ರ ಅನುಪಾತದ ಹಕ್ಕಿನ ಷೇರು ವಿತರಿಸಿತು. 1992ರಲ್ಲಿ ರೂ.400ರ ಮುಖಬೆಲೆಯ ಪೂರ್ಣವಾಗಿ ಇಕ್ವಿಟಿಯಾಗಿ ಪರಿವರ್ತನೆಯಾಗುವ ಡಿಬೆಂಚರ್ ವಿತರಿಸಿತು. 1:1ರ ಅನುಪಾತದ ಬೋನಸ್ ಷೇರನ್ನು ಸಹ ವಿತರಿಸಿದೆ. 2002 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲಾಯಿತು.
ಹೆಚ್ಚಿನ ಕಂಪನಿಗಳು ಜನಾನುರಾಗಿಯಾಗಿ ಷೇರುದಾರರ ಬಂಡವಾಳವನ್ನು ಬಹುಪಟ್ಟು ಹೆಚ್ಚಿಸಿ ಹರ್ಷಿತಗೊಳಿಸಿದ ಕೀರ್ತಿ ಪಡೆದಿವೆ. ಈ ರೀತಿಯ ಸಾಮಾನ್ಯ ಹೂಡಿಕೆದಾರರ ಅಭಿಮಾನಕ್ಕೆ ಪ್ರೀತಿಪಾತ್ರರಾಗುವುದಕ್ಕೆ ಆ ಕಾರ್ಪೊರೇಟ್ ಆಡಳಿತಮಂಡಳಿಗಳ ಹೂಡಿಕೆದಾರ ಸ್ನೇಹಿ ಗುಣವಾಗಿದೆ. ಈ ಕಂಪನಿಗಳು ನಿರಂತರವಾಗಿ ಷೇರುದಾರರಿಗೆ ವಿತರಿಸಿದ ಬೋನಸ್ ಷೇರುಗಳು ಬಂಡವಾಳ ಅಭಿವೃದ್ಧಿಗೆ ಕಾರಣವಾದರೆ, ಆ ಕಂಪನಿಗಳು ವಿತರಿಸಿದ ಲಾಭಾಂಶಗಳು ನೇರವಾಗಿ ಷೇರುದಾರರಿಗೆ ತಲುಪಿ ಅವರ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೆಂಬಲವಾಗಿ ಅವರಲ್ಲಿ ಭಾವನಾತ್ಮಕ, ಸಕಾರತ್ಮಕ ಬಾಂಧವ್ಯದ ನಂ ಟನ್ನು ಬೆಳೆಸಿದೆ. ಇಂತಹ ಗುಣಗಳನ್ನು ಈಗಿನ ಕಾರ್ಪೊರೇಟ್ ಗಳು ಹೊಂದಿವೆಯೇ?
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.