18.6 C
Karnataka
Friday, November 22, 2024

    ಕೃಷ್ಣನೆಂದರೆ ‘ಪ್ರೀತಿ’ ರಾಧೆಗಷ್ಟೇ ಅಲ್ಲ

    Must read

    ಭಗವಾನ್ ವಿಷ್ಣುವಿನ ಎಂಟನೇ ಅವತಾರ ಶ್ರೀಕೃಷ್ಣ ಪರಮಾತ್ಮ. ಧರ್ಮ ಸಂಸ್ಥಾಪನೆಗಾಗಿ ಜನ್ಮವೆತ್ತಿದ್ದು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು. ಶ್ರೀಕೃಷ್ಣ ಜನ್ಮಾಷ್ಟಮಿ ಹಿಂದೂ ಹಬ್ಬಗಳಲ್ಲಿ ಅತ್ಯಂತ ವಿಶಿಷ್ಟವಾದ ಹಬ್ಬ. ಕೃಷ್ಣನ ಜನ್ಮದಿನವನ್ನು ದೇಶಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಮಥುರಾ ಶ್ರೀಕೃಷ್ಣನ ಜನ್ಮಭೂಮಿ. ಇಲ್ಲಿ ಬಹಳ ಸಂಭ್ರಮದಿಂದ ಅಷ್ಟಮಿಯನ್ನು ಆಚರಿಸುತ್ತಾರೆ. ತನ್ನ ಬಾಲಲೀಲೆಗಳನ್ನು ತೋರಿದ ಬೃಂದಾವನದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಇರುತ್ತದೆ.

    ಆಡಿಸಿದಳೆಶೋಧೆ…

    ಮುದ್ದು ಕೃಷ್ಣ, ಬಾಲಕೃಷ್ಣ, ಗೋಪಕೃಷ್ಣ ಎಂದೆಲ್ಲಾ ಕರೆಸಿಕೊಳ್ಳುವ ದೇವಕಿ ನಂದ ಶ್ರೀಕೃಷ್ಣ ಎಂದರೆ ಎಲ್ಲರಿಗೂ ಪ್ರೀತಿಯ ಭಾವ. ಹಾಗೆಯೇ ಶ್ರೀಕೃಷ್ಣನ ಬಾಲಲೀಲೆಗಳು ಇಂದಿಗೂ ಪ್ರಸ್ತುತ. ಜನ್ಮಾಷ್ಟಮಿಯಂದು ಮಕ್ಕಳು ಶ್ರೀಕೃಷ್ಣನ ವೇಷ ಹಾಕಿ ಸಂಭ್ರಮಿಸುವ ಪರಿ ಇದಕ್ಕೆ ಸಾಕ್ಷಿ. ಮನೆಯಲ್ಲಿ ತೊಟ್ಟಿಲಲ್ಲಿ ತೂಗುವ, ಇನ್ನೂ ಅಂಬೆಗಾಲಿಡುವ ಮುದ್ದುಮೊಗದ ಮಗುವಿಗೂ ನಂದಕಿಶೋರನ ವೇಷ ಹಾಕಿ, ತಾನೇ ಯಶೋಧೆಯಾಗಿ ತನ್ನ ಕಂದನನ್ನು ಮುದ್ದುಕೃಷ್ಣನನ್ನಾಗಿ ಕಾಣುವ ಸಂಭ್ರಮ ಎಲ್ಲ ಅಮ್ಮಂದಿರಿಗೆ. ಮಗುವಿದ್ದಾಗ ಒಮ್ಮೆಯಾದರೂ ತನ್ನ ಕಂದನಿಗೆ ಶ್ರೀಕೃಷ್ಣನ ವೇಷ ಹಾಕಿ ಸಂಭ್ರಮಿಸದೇ ಇರುವವರು ಸಿಗುವುದು ವಿರಳ.

    ಪ್ರೀತಿಯ ಕಣ್ಣುಭಗವಾನ್ ಶ್ರೀಕೃಷ್ಣ ಪ್ರೀತಿಯ ದ್ಯೋತಕವಾಗಿ ಕಾಣಿಸುತ್ತಾನೆ.  ಕೃಷ್ಣನಿಲ್ಲದೆ ರಾಧೆ ಅಪೂರ್ಣ, ರಾಧೆಯಿಲ್ಲದೆ ಕೃಷ್ಣ ಪೂರ್ಣವಾಗುವುದೆಂಟೇನೋ? ಎರಡು ದೇಹ ಒಂದೇ ಉಸಿರಿನಂತಿದ್ದವರು ಅವರು. ನಿಷ್ಕಲ್ಮಶ ಪ್ರೀತಿಯದು.ರುಕ್ಮಿಣಿ, ರಾಧೆ ಎಲ್ಲರೂ ಶ್ರೀಕೃಷ್ಣನ ಲೀಲೆಗೆ ಒಳಗಾದವರೇ. ಅವನೇ ನನ್ನ ಸರ್ವಸ್ವ ಎಂದು ಭಾವಿಸಿ ತನ್ನೊಳಗೊಬ್ಬ ಸಖನನ್ನು ಕಂಡವರೂ ಇದ್ದಾರೆ.

    ಶ್ರೀಕೃಷ್ಣನನ್ನೇ ಧ್ಯಾನಿಸಿ ಅಮರಳಾದ ರಾಜಕುವರಿ ಮೀರಾ ಇದಕ್ಕೊಂದು ನಿದರ್ಶನ.  ಆಕೆ ಕೃಷ್ಣನೆಡೆಗೆ ತೋರಿದ ಭಕ್ತಿಯ ಪ್ರೀತಿಯದು. ಅದು ದೇವಪ್ರೀತಿ. ಶ್ರೀಕೃಷ್ಣನಿಗೆ ಹದಿನಾರು ಸಾವಿರ ಮಡದಿಯರು ಎಂಬುದಾಗಿಯೂ ಪುರಾಣ ಕಥೆಗಳಿಂದ ತಿಳಿದು ಬರುತ್ತದೆ. ಶ್ರೀಕೃಷ್ಣನ ಕುರಿತಾದ ಕಥೆಗಳನ್ನು ಕೇಳಿದರೆ ಜಗದೋದ್ಧಾರ ಇಡೀ ಜಗತ್ತಿಗೇ ಪ್ರೀತಿಯ ದ್ಯೋತಕ ಎಂಬುದು ಅರಿವಾಗುತ್ತದೆ. ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು ಬರೆದ ಈ ಹಾಡು ಪ್ರಸಿದ್ಧಿ. “ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು, ನನಗೂ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು’.

    ಜಗತ್ತಿಗೆ ಸಾರಿದ ಸಂದೇಶ

    ಭಗವಾನ್ ಶ್ರೀಕೃಷ್ಣ ಹುಟ್ಟಿದ್ದು ದೇವಕಿ ಹಾಗೂ ವಾಸುದೇವನ ಕಂದನಾಗಿ, ಬೆಳೆದದ್ದು ಯಶೋಧೆಯ ಮಡಿಲಲ್ಲಿ. ಹೆತ್ತವರು, ಪೋಷಕರು, ಸ್ನೇಹಿತ, ಎಲ್ಲರೆಡೆಗೂ ವಿಶೇಷ ಗೌರವ ಆದರಗಳನ್ನು ಹೊಂದಿದ್ದ ಶ್ರೀಕೃಷ್ಣ ದೈವತ್ವಕ್ಕೇರಿದ್ದು ತನ್ನ ಗುಣಗಳಿಂದಲೇ. ತನ್ನ ಹೆತ್ತವರು, ಪೋಷಕರೆಡೆಗೂ ತನ್ನ ಕರ್ತವ್ಯಗಳನ್ನು ಮಾಡುವ ಮೂಲಕ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ. ಎಂದಿಗೂ ಫಲದ ನಿರೀಕ್ಷೆ ಹೊಂದಿರಲಿಲ್ಲ. ಭಗವದ್ಗೀತೆಯಲ್ಲಿ ಹೇಳಿದಂತೆ “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ, ಮಾ ಕರ್ಮಫಲ ಹೇತುರ್ಭೂಮಾ ತೇ ಸಂಗೋಸ್ತ್ವ ಕರ್ಮಣಿ// ಫಲದ ಚಿಂತೆ ಬಿಟ್ಟು ನಿನ್ನ ಕರ್ತವ್ಯವನ್ನು ಮನಸ್ಸಿಟ್ಟು ಮಾಡು. ಕರ್ತವ್ಯವನ್ನು ಮಾಡದೆ ತಪ್ಪಿಸಿಕೊಳ್ಳುವ ವಿಚಾರ ನಿನ್ನಲ್ಲಿ ಮೂಡದಿರಲಿ ಎಂದು.

    ಶ್ರೀಕೃಷ್ಣ ಎಂದಿಗೂ ಪ್ರೀತಿ ಮತ್ತು ನ್ಯಾಯದ ಪರವಾಗಿದ್ದ. ಹಾಗಾಗಿಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರ ವಹಿಸುತ್ತಾನೆ. ಧರ್ಮ ಸಂಸ್ಥಾಪನೆಗಾಗಿ ತನ್ನವರ ವಿರುದ್ಧವೇ ಹೋರಾಟ ನಡೆಸುತ್ತಾನೆ. ಇದರರ್ಥ ಮನುಷ್ಯ ತನ್ನವರೆಂಬ ಬಂಧಗಳನ್ನು ಕಳಚಿಕೊಂಡು ಕಾಲದೊಂದಿಗೆ ಹೆಜ್ಜೆಹಾಕಬೇಕು.ಈ ಕ್ಷಣದಲ್ಲಿ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಸಾರಿದ್ದಾನೆ. ಈ ಕ್ಷಣ ಅನ್ನುವುದು ನಿನ್ನದು, ಹಿಂದೆ ಕಳೆದ ಹೋದ ಸಮಯ ಮತ್ತೆಂದೂ ಬಾರದು. ಕಳೆದುಹೋದುದರ ಬಗ್ಗೆ ಚಿಂತಿಸುವುದು ಅನಗತ್ಯ. ನಿನ್ನೆ ಎಂಬುದು ಇಂದು ಇಲ್ಲ, ನಾಳೆ ಏನಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ, ಹಾಗಾಗಿ ಈ ಕ್ಷಣಕ್ಕೆ ಮಹತ್ವ ನೀಡಬೇಕು ಎಂದು.

    ಭಗವಾನ್ ಶ್ರೀಕೃಷ್ಣನ ಪ್ರಸಿದ್ಧ ಸಂದೇಶಗಳಲ್ಲಿ ಒಂದು  ‘ಬದಲಾವಣೆ ಜಗದ ನಿಯಮ’. ಆದುದೆಲ್ಲಾ ಒಳ್ಳೆಯದಕ್ಕಾಗಿ, ಆಗುವುದೆಲ್ಲವೂ ಒಳ್ಳೆಯದಕ್ಕಾಗಿ. ಕಳೆದುಕೊಂಡುದುದರ ಬಗ್ಗೆ ದುಃಖಿಸಲು ನೀನು ಪಡೆದುಕೊಂಡು ಬಂದುದಾದರೂ ಏನನ್ನು. ಏನೇ ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ, ಇಂದು ನಿನ್ನಲ್ಲಿರುವುದು ನಿನ್ನೆ ಮತ್ಯಾರದೋ ಆಗಿತ್ತು, ನಾಳೆ ಇನ್ಯಾರದ್ದೋ ಆಗಲಿದೆ. ಹೀಗೆ ಭಗವಾನ್ ಶ್ರೀಕೃಷ್ಣ ಮನುಕುಲಕ್ಕೆ ಸಾರಿದ ಸಂದೇಶಗಳು ಅನೇಕ. ಅದರಂತೆ ನಡೆದರೆ ಬಾಳು ಬಹುತೇಕ ಸುಂದರ.ಭಗವಾನ್ ಶ್ರೀಕೃಷ್ಣ ಇಡೀ ವಿಶ್ವಕ್ಕೆ ಸಾರಿದ ಸಂದೇಶ ನಂಬಿಕೆ ಇರುವವರಿಗೆ ದಾರಿದೀಪದಂತೆ ತೋರುತ್ತಿದೆ, ಕಾಲಕಾಲಕ್ಕೆ ಮನುಕುಲಕ್ಕೆ ಎಚ್ಚರಿಕೆಯನ್ನೂ ನೀಡುತ್ತಿದೆ.

    ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ. ಪದವಿ ಪಡೆದಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಕಾಲೇಜಿನಲ್ಲಿ. ಪತ್ರಿಕೋದ್ಯಮ ಪದವಿ ಮಂಗಳೂರು ವಿವಿ. ಆಸಕ್ತಿದಾಯಕ ಓದು ಇವರ ಬರವಣಿಗೆಯ ವಿಶೇಷ.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!