BENGALURU SEPT 2
ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪದವೀಧರ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರ ಜತೆ ಗುರುವಾರ ಸಮಲೋಚನೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಆ ಬಗ್ಗೆ ಅವರಲ್ಲಿದ್ದ ಸಂಶಯ, ಗೊಂದಲಗಳನ್ನು ನಿವಾರಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪರಿಷತ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಚಿವರು, ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡಿದರಲ್ಲದೆ, ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಪ್ರತಿ ಅಂಶವನ್ನೂ ಬಿಡಿಸಿಟ್ಟರು.
ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವುದರ ಜತೆಗೆ, ಬಹು ಶಿಸ್ತೀಯ ಕಲಿಕೆ ಹಾಗೂ ಕಲಿಕೆಯ ಆಯ್ಕೆಯ ಬಗ್ಗೆ ಇರುವ ಮುಕ್ತ ಸ್ವಾತಂತ್ರ್ಯವನ್ನು ಪರಿಷತ್ ಸದಸ್ಯರಿಗೆ ಎಳೆಎಳೆಯಾಗಿ ವಿವರಿಸಿದ ಸಚಿವರು, ಸವಾಲುಗಳಿವೆ ಅಥವಾ ಕಷ್ಟವಿದೆ ಎಂದು ಈಗ ಹಿಂದೆಜ್ಜೆ ಇಟ್ಟರೆ ಮುಂದೆಂದೂ ಜಾರಿ ಮಾಡುವುದು ಕಷ್ಟವಾಗುತ್ತದೆ. ಜ್ಞಾನ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ ನೀತಿಯನ್ನು ಜಾರಿ ಮಾಡುವುದು ರಾಜ್ಯದ ಪಾಲಿಗೆ ನಿರ್ಣಾಯಕ ಅಂಶವಾಗಿದೆ ಎಂದು ಹೇಳಿದರು.
ಶಿಕ್ಷಣ ನೀತಿ ಹೇಗೆ ರೂಪಿತವಾಯಿತು? ಅದರ ಹಿಂದೆ ಇರುವ ಎಷ್ಟು ಶ್ರಮದ ಬಗ್ಗೆ, ಪಠ್ಯ ರಚನೆ, ಕಲಿಕೆ, ಬೋಧನೆ, ತರಬೇತಿ ಇತ್ಯಾದಿ ಅಂಶಗಳ ಬಗ್ಗೆ ಸಚಿವರು ನೀಡಿದ ಸಮಗ್ರ ಮಾಹಿತಿ ಬಗ್ಗೆ ಪರಿಷತ್ ಸದಸ್ಯರು ತೃಪ್ತಿ ವ್ಯಕ್ತಪಡಿಸಿದರು.
ಸಿಬ್ಬಂದಿ, ಬೋಧಕ ಸಿಬ್ಬಂದಿ ನೇಮಕ, ತರಬೇತಿ ಇತ್ಯಾದಿಗಳ ಬಗ್ಗೆ ಕ್ರಮ ವಹಿಸಲಾಗುವುದು. ಮೂಲಸೌಕರ್ಯಗಳನ್ನು ಹೆಚ್ಚಿಸುವ ಸಂಬಂಧ ಹಂತ ಹಂತವಾಗಿ ಕೆಲಸ ಮಾಡಲಾಗುವುದು ಎಂದ ಸಚಿವರು, ಆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗವುದು ಎಂದರು.
ಬೋಧಕರಿಗೆ ತರಬೇತಿ:ಈಗಿನ ಅಧ್ಯಾಪಕ ವರ್ಗ ಶಿಕ್ಷಣ ನೀತಿ ಪ್ರಕಾರವೇ ಬೋಧನೆ ಮಾಡುತ್ತಾರಾ? ಕೆಲವರಿಗೆ ಕಂಪೂಟರ್ ಜ್ಞಾನವೇ ಇರುವುದಿಲ್ಲ. ಅವರನ್ನು ಸಜ್ಜುಗೊಳಿಸುವುದು ಹೇಗೆ? ತರಬೇತಿ ಕೊಡುವುದು ಹೇಗೆ? ಎಂದು ಹಿರಿಯ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿ ಹಂತದಲ್ಲಿ ಬೋಧಕರಿಗೆ ವ್ಯವಸ್ಥಿತವಾಗಿ ತರಬೇತಿ ಕೊಡಲಾಗುವುದು. ತಾಂತ್ರಿಕ ನೆರವು, ಅಧ್ಯಯನ ಸಾಮಗ್ರಿ ಸೇರಿ ಪ್ರತಿ ಅಂಶದಲ್ಲೂ ಅವರಿಗೆ ಸಹಕಾರ ನೀಡಲಾಗುವುದು ಎಂದರು.
ಇನ್ನು, ಪ್ರತಿ ವಿವಿ ವ್ಯಾಪ್ತಿಯಲ್ಲಿ ಶಿಕ್ಷಣ ನೀತಿಯ ಬಗ್ಗೆ ವಿಶಾಲವಾಗಿ ಸಮಾಲೋಚನೆ ನಡೆಸಲಾಗಿದೆ. ವಿವಿ ವ್ಯಾಪ್ತಿಯಲ್ಲಿ ಇನ್ನೂ ಕೆಳ ಹಂತಕ್ಕೂ ಈ ಚರ್ಚೆ ವಿಸ್ತರಣೆಯಾಗಲಿದೆ. ಪ್ರತಿ ಕಾಲೇಜು ಮಟ್ಟದಲ್ಲೂ ಚರ್ಚೆ ನಡೆಯುತ್ತದೆ ಎಂದು ಸಚಿವರು ವಿವರಿಸಿದರು.
ಇದೇ ವೇಳೆ, ಭಾಷೆ ವಿಷಯದಲ್ಲಿ ಕನ್ನಡವನ್ನು ಕಡ್ಡಾಯ ಮಾಡಿದ್ದಕ್ಕೆ ಸ್ವಾಗತ ಎಂದ ಶ್ರೀಕಂಠೇಗೌಡರು, ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಸಬೇಕು. ವಿದೇಶಗಳಲ್ಲಿ ಬಹಳ ಜನ ಉದ್ಯೋಗ ಸಿಕ್ಕಿರುವುದು ಇಂಗ್ಲಿಷ್ ಕಲಿತ ಕಾರಣಕ್ಕೆ. ಹೀಗಾಗಿ ಆ ಭಾಷೆಗೂ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು, ಕನ್ನಡವನ್ನು ಎರಡು ವರ್ಷ ಕಡ್ಡಾಯವಾಗಿ ಕಲಿಯಲೇಬೇಕು. ಅದರ ಜತೆಗೆ ಇಷ್ಟದ ಇತರ ಭಾಷೆಗಳನ್ನು ಕಲಿಯಲು ಅಕಾಶವಿದೆ ಎಂದರು.
14 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಏನಾದರೊಂದು ಪರಿಹಾರ ಕಂಡು ಕೊಳ್ಳಲೇಬೇಕೆಂದು ಮರಿತಿಬ್ಬೇಗೌಡ ಅವರು ಸಲಹೆ ನೀಡಿದರೆ, ಏನೇ ಬದಲಾವಣೆಗಳನ್ನು ತಂದರೂ ಆ ಮಾಹಿತಿಯನ್ನು ನೇಮಕಾತಿ ಸಂಸ್ಥೆಗಳಿಗೆ ತಿಳಿಸಬೇಕು. ಎಲ್ಲ ಹಂತದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಪಠ್ಯ ಕ್ರಮ ಬದಲಾಗಬೇಕು ಎಂದು ಸುಶೀಲ ನಮೋಶಿ ಅವರು ಹೇಳಿದರು.
ಉಳಿದಂತೆ, ಸಭೆಯಲ್ಲಿ ಪಾಲ್ಗೊಂಡಿದ್ದ ಅರುಣ್ ಶಹಾಪುರ, ಚಿದಾನಂದ, ನಾರಾಯಣಸ್ವಾಮಿ ಅವರೂ ಎತ್ತಿದ ಪ್ರಶ್ನೆಗಳಿಗೆ ಡಾ.ಅಶ್ವತ್ಥನಾರಾಯಣ ಉತ್ತರ ನೀಡಿದರಲ್ಲದೆ, ಶಿಕ್ಷಣ ನೀತಿಯ ಜಾರಿಗೆ ಎಲ್ಲರ ಸಹಕಾರ ಕೋರಿದರು.
ಅರುಣ್ ಶಹಾಪುರ ಅವರು ರಾಜ್ಯ ಸರ್ಕಾರದ ಪ್ರಯತ್ನದ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು.
ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಅವರು ಎನ್ ಇ ಪಿ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಜೋಶಿ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.