20.6 C
Karnataka
Sunday, September 22, 2024

    ಸೆಪ್ಟೆಂಬರ್ 20ಕ್ಕೆ ಸಿಇಟಿ ಫಲಿತಾಂಶ ನಿಗದಿಯಂತೆ ಎಲ್ಲ ಪ್ರಕ್ರಿಯೆ ಎಂದ ಸಚಿವ

    Must read

    • ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಖಾಸಗಿ ಪದವಿ ಕಾಲೇಜುಗಳ ವಿರುದ್ಧ ಕ್ರಮ
    • ಅಕ್ಟೋಬರ್ 1ರವರೆಗೂ ಪದವಿಗೆ ಪ್ರವೇಶಾವಕಾಶ
    • ಎನ್ಇಪಿ ಬಗ್ಗೆ ಅಪಪ್ರಚಾರ; ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

    BENGALURU AUG 3

    ಇದೇ ಸೆಪ್ಟೆಂಬರ್ 20ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (CET) ಫಲಿತಾಂಶ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಳೆದ ಅಗಸ್ಟ್ 28-29 ಮತ್ತು 30ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ ಪ್ರಕ್ರಿಯೆಯನ್ನು ಯಾವುದೇ ಗೊಂದಲ-ಸಮಸ್ಯೆ ಇಲ್ಲದೆ ಪೂರ್ಣಗೊಳಿಸಲಾಗುವುದು ಎಂದರು.

    ಸಕಾಲಕ್ಕೆ ಫಲಿತಾಂಶ ನೀಡುವುದೂ ಸೇರಿ ನಿಗದಿತ ವೇಳಾಪಟ್ಟಿಯಂತೆ ಕೌನ್ಸಿಲಿಂಗ್ ಮುಗಿಸಲಾಗುವುದು. ಯಾವುದೇ ಕಾರಣಕ್ಕೂ ಶೈಕ್ಷಣಿಕ ವರ್ಷ ಹಳಿತಪ್ಪಲು ಬಿಡುವುದಿಲ್ಲ ಎಂದರು ಸಚಿವರು.

    ಶುಲ್ಕದ ಬಗ್ಗೆ ಮುಂದಿನ ವಾರ ಸಭೆ:

    ಎಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು; ಈ ಬಗ್ಗೆ ಮುಂದಿನ ವಾರ ಸಭೆ ಇದೆ. ಅದರಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ಅಂಶಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಕ್ರಮ:

    ಖಾಸಗಿ ಪದವಿ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ ಉತ್ತರಿಸಿದ ಸಚಿವರು, “ರಾಷ್ಟ್ರೀಯ ಶಿಕ್ಷಣ ನೀತಿ ನೆಪದಲ್ಲಿ ಶುಲ್ಕ ಹೆಚ್ಚಳಕ್ಕೆ ಅವಕಾಶವೇ ಇಲ್ಲ. ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ವಿಧಿಸಿ ಕಾಲೇಜು ನಡೆಸುವುದು ಸರಿಯಲ್ಲ, ಗುಣಮಟ್ಟದ ಶಿಕ್ಷಣ ಕೊಡುವುದಷ್ಟೇ ಸರಕಾರದ ಉದ್ದೇಶ. ಈ ಬಗ್ಗೆ ದೂರುಗಳು ಬಂದರೆ ಗಮನ ಹರಿಸಿ ಆಯಾ ಕಾಲೇಜುಗಳ ವಿರುದ್ಧ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

    ವಿದ್ಯಾರ್ಥಿಗಳು ಸರಕಾರೀ ಕಾಲೇಜುಗಳಲ್ಲೇ ದಾಖಲಾಗಬೇಕು. ಅಲ್ಲಿ ಕಡಿಮೆ ಶುಲ್ಕದಲ್ಲಿ ಪದವಿ ನೀಡಲಾಗುವುದು. ಅದರಲ್ಲೂ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಸೌಲಭ್ಯವಿದೆ. ಕೆಲ ಖಾಸಗಿ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿವೆ. ಆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

    ಪದವಿ ಕಾಲೇಜುಗಳಿಗೆ ಶುಲ್ಕ ನಿಗದಿ ಮಾಡಲು ಸರಕಾರದ ಮಟ್ಟದಲ್ಲಿ ಸಮಿತಿ ಇಲ್ಲ. ಹೀಗಾಗಿ, ಕೆಲ ಕಾಲೇಜುಗಳು ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿವೆ. ಸಮಿತಿ ಇಲ್ಲ ಎಂದ ಮಾತ್ರಕ್ಕೆ ದುಬಾರಿ ಶುಲ್ಕ ವಿಧಿಸುವ ಹಾಗಿಲ್ಲ ಎಂದ ಸಚಿವರು, ಪದವಿ ಕಾಲೇಜುಗಳಿಗೆ ಅಕ್ಟೋಬರ್ 1 ರವರೆಗೂ ದಾಖಲು ಆಗಬಹುದು. ಅದಕ್ಕೆ ಅವಕಾಶ ನೀಡಲಾಗಿದೆ ಎಂದರು.

    ಸಿದ್ದರಾಮಯ್ಯ ಅವರಿಗೆ ಅಧಿವೇಶನದಲ್ಲಿ ಉತ್ತರ:

    ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮಾಧ್ಯಮಗಳ ಮೂಲಕ, ವಿವಿಧ ವೇದಿಕೆಗಳಲ್ಲಿ ಉತ್ತರ ನೀಡಲಾಗಿದೆ. ಇದರ ಜತೆಗೆ ಅವರಿಗೆ ವಿಧಾನಮಂಡಲ ಅಧಿವೇಶನದಲ್ಲೂ ಸಮಗ್ರವಾಗಿ ಉತ್ತರ ಕೊಡಲಾಗುವುದು ಎಂದು ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.

    ಕೇವಲ ರಾಜಕೀಯದ ಉದ್ದೇಶ ಇಟ್ಟುಕೊಂಡು ವಿರೋಧ ಮಾಡುವವರಿಗೆ ಏನೂ ಮಾಡಲಾಗದು. ನೀತಿಯ ಬಗ್ಗೆ ಸಮಾಜದಲ್ಲಿ ಅಪನಂಬಿಕೆ ಮೂಡಿಸಲು ವಿರೋಧ ಪಕ್ಷಗಳು ಹೀಗೆ ಆರೋಪ ಮಾಡುತ್ತಿವೆ. ಇದು ಕೇವಲ ಒಂದು ಒಳ್ಳೆಯ ಕಾರ್ಯಕ್ರಮದ ವಿರುದ್ಧ ಅಪಪ್ರಚಾರ ಮಾಡುವ ಹುನ್ನಾರವಷ್ಟೇ ಎಂದು ದೂರಿದರು.

    ಹೊಸ ಶಿಕ್ಷಣ ನೀತಿಯ ಪ್ರಕ್ರಿಯೆಗಳು ಪ್ರಾರಂಭವಾಗಿ 7 ವರ್ಷಗಳೇ ಆಗಿದ್ದು, ಪ್ರಸಕ್ತ ವರ್ಷದಿಂದ ಜಾರಿ ಮಾಡಲಾಗುತ್ತಿದೆ. ಶಿಕ್ಷಣದ ವ್ಯವಸ್ಥೆಯಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲು ಇದನ್ನು ತರಲಾಗಿದೆ. ಸಾಕಷ್ಟು ಪೂರ್ವಸಿದ್ಧತೆ, ಚರ್ಚೆ, ತಯಾರಿ ಮಾಡಿಕೊಂಡೇ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುತ್ತಿದೆಯೇ ಹೊರತು ಆತುರಾತುರವಾಗಿ ತರುತ್ತಿರುವುದಲ್ಲ ಎಂದು ಡಾ.ಅಶ್ವತ್ಥನಾರಾಯಣ ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

    ಸಿದ್ದರಾಮಯ್ಯ ಅವರು ಓರ್ವ ಹಿರಿಯ ರಾಜಕಾರಣಿ. ಇಂಥ ಪ್ರಕ್ರಿಯೆಗಳೆಲ್ಲ ಹೇಗೆ ನಡೆಯುತ್ತವೆ ಎನ್ನುವುದು ಅವರಿಗೆ ಗೊತ್ತಿಲ್ಲದೆ ಇಲ್ಲ. ಕೇವಲ ಅವರು ರಾಜಕಾರಣ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ಅನುಷ್ಠಾನ ಮಾಡಲಾಗುತ್ತಿದೆ. ಸಂಪುಟದಲ್ಲೂ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣವಾಗಿ ವಿದ್ಯಾರ್ಥಿ ಕೇಂದ್ರಿತ. ಮಕ್ಕಳ ಅಭಿವೃದ್ಧಿಗೆ ಪೂರಕವಾಗಿದೆ. ಈ ಬಗ್ಗೆ ಎಲ್ಲಿ ಬೇಕಾದರೂ ಚರ್ಚೆ ಮಾಡಲು ನಾವು ತಯಾರಿದ್ದೇವೆ ಎಂದು ಸಚಿವರು ತಿಳಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!