17.6 C
Karnataka
Monday, November 25, 2024

    ಐಐಟಿ ಮಾದರಿಯಲ್ಲಿ ಸ್ವಾಯತ್ತ ಕಾಲೇಜ್ ಆಗಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್ ಅಭಿವೃದ್ಧಿ

    Must read

    BENGALURU SEP 4

    ಐಐಟಿ ಮಾದರಿಯಲ್ಲಿ ನಗರದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್ʼಗೆ (ಯುವಿಸಿಇ) ಸ್ವಾಯತ್ತತೆ ನೀಡುವ ಮಸೂದೆಯನ್ನು ಈ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನ ಬ್ರಿಗೇಡ್ ಗೇಟ್‌ವೇ ಕ್ಯಾಂಪಸ್ʼನಲ್ಲಿ ಸ್ಥಾಪಿಸಲಾಗಿರುವ 11.6 ಅಡಿ ಎತ್ತರದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಲೋಹದ ಪ್ರತಿಮೆಯನ್ನು ಶನಿವಾರ ಲೋಕಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.

    ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡುವುದು ಸರಕಾರದ ಮುಖ್ಯ ಉದ್ದೇಶ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಇದಕ್ಕೆ ಹೆಚ್ಚಿನ ಮಹತ್ವ ಇದೆ. ಸರ್ ಎಂ.ವಿಶ್ವೇಶ್ವರಯ್ಯ ಅವರ ಕನಸುಗಳನ್ನು ಸಾಕಾರ ಮಾಡಲು ಸರಕಾರ ಎಲ್ಲ ಕ್ರಮಗಳನ್ನು ವಹಿಸಿದೆ ಎಂದು ಸಚಿವರು ನುಡಿದರು.

    ಯುವಿಸಿಇಗೆ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾಯತ್ತತೆ ನೀಡಲು ಸರಕಾರ ನಿರ್ಧರಿಸಿದೆ. ಈಗಾಗಲೇ ಐಐಐಟಿ-ಬಿ ನಿರ್ದೇಶಕ ಡಾ. ಎಸ್.ಸಡಗೋಪನ್ ಅವರ ನೇತೃತ್ವದ ಸಮಿತಿ ನೀಡಿರುವ ವರದಿ ಮತ್ತು ಶಿಫಾರಸುಗಳನ್ನು ಸರಕಾರ ಅಂಗೀಕರಿಸಿದೆ ಎಂದು ಸಚಿವರು ಹೇಳಿದರು.

    ಸರ್ ಎಂವಿ ಸಮಾಧಿ ಅಭಿವೃದ್ಧಿಗೆ ಟ್ರಸ್ಟ್:

    ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದಲ್ಲಿರುವ ಸರ್ ಎಂವಿ ಅವರ ಸಮಾಧಿ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಅಧ್ಯಕ್ಷತೆಯಲ್ಲಿ ಟ್ರಸ್ಟ್ ರಚನೆ ಮಾಡುವುದಾಗಿ ಇದೇ ಸಂದರ್ಭದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಘೋಷಣೆ ಮಾಡಿದರು.

    ಸರ್ ಎಂವಿ ಅವರು ನಮ್ಮ ದೇಶ ಮಾತ್ರವಲ್ಲದೆ ಜಗತ್ತು ಕಂಡ ಶ್ರೇಷ್ಟ ಎಂಜಿನಿಯರ್. ಆಧುನಿಕ ಭಾರತದ ನಿರ್ಮಾಣಕ್ಕೆ ಅವರ ಕೊಡುಗೆ ಅನನ್ಯ. ಈ ನಿಟ್ಟಿನಲ್ಲಿ ಅವರ ಸಾಧನೆಯನ್ನು ಸ್ಮರಿಸುವುದು ಮಾತ್ರವಲ್ಲದೆ ಅವರ ನೆನಪನ್ನು ಸದಾ ಉಳಿಸುವ ಕುರುಹುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

    ಪ್ರತಿಮೆ ಹೇಗಿದೆ?

    ಬ್ರಿಗೇಡ್ ಸಮೂಹವು ತನ್ನ ಗೇಟ್ ವೇ ಕ್ಯಾಂಪಸ್ʼನಲ್ಲಿ ಸ್ಥಾಪಿಸಿರುವ ಸರ್ ಎಂವಿ ಪ್ರತಿಮೆ 11.6 ಅಡಿ ಎತ್ತರವಿದೆ. 6 ಅಡಿ ಎತ್ತರದ ಕಾಂಕ್ರೀಟ್ ಮತ್ತು ಗ್ರಾನೈಟ್ ಬೇಸ್ ಮೇಲೆ ಪ್ರತಿಮೆಯನ್ನು ನಿಲ್ಲಿಸಲಾಗಿದ್ದು, ಭೂ ಮಟ್ಟದಿಂದ ಪ್ರತಿಮೆ 19 ಅಡಿ ಎತ್ತರದಲ್ಲಿದೆ. ಪ್ರತಿಮೆ ಒಟ್ಟು 1300 ಕೆಜಿ ತೂಕವಿದ್ದು, 1000 ಕೆಜಿ ತಾಮ್ರ, 300 ಕೆಜಿಯಷ್ಟು ಇತರೆ ಮಿಶ್ರಲೋಹಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಖ್ಯಾತ ಶಿಲ್ಪಿ ಮಾಯನ್ ಎನ್.ಬಡಿಗೇರ್ ಮತ್ತವರ ತಂಡ ಪ್ರತಿಮೆಯನ್ನು ತಯಾರಿಸಿದೆ.

    ಬೃಹತ್ ಕೈಗಾರಿಕೆ ಖಾತೆ ಸಚಿವ ಮುರುಗೇಶ್ ನಿರಾಣಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕರಿಸಿದ್ದಪ್ಪ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಸತೀಶ್ ಮೋಕ್ಷಗುಂಡಂ, ಬ್ರಿಗೇಡ್ ಸಮೂಹದ ಅಧ್ಯಕ್ಷ ಎಂ.ಆರ್.ಜೈಶಂಕರ್, ಶಿಲ್ಪಿ ಮಾಯನ್ ಎನ್.ಬಡಿಗೇರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!