BENGALURU SEPT 5
ಕೃಷಿ ಕ್ಷೇತ್ರ ಬೆಳೆದರೂ, ಕೃಷಿ ಬೆಳೆಸಿದ ರೈತ ಇಂದಿಗೂ ಸಂಕಷ್ಟದಲ್ಲಿದ್ದಾನೆ. ರೈತರ ಶ್ರಮಕ್ಕೆ ಸಂಪೂರ್ಣ ಬೆಲೆ ನೀಡುವ ಕಾಲ ಸನ್ನಿಹಿತವಾಗಿದ್ದು, ಇದಕ್ಕಾಗಿ ಸಮಗ್ರ ಕೃಷಿ ನೀತಿಯಡಿ ಕೊಯ್ಲಿನ ನಂತರದ ನಿರ್ವಹಣೆಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.
ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ‘ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕೃಷಿ ಉತ್ಪನ್ನಗಳ ವೈಜ್ಞಾನಿಕ ಸಂಗ್ರಹ, ಸಾಗಾಣಿಕೆ, ಮಾರುಕಟ್ಟೆ ಸೌಲಭ್ಯ ಮತ್ತಿತರ ಸವಲತ್ತುಗಳ ಮೂಲಕ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯಗಳು ತಾವು ಸಂಶೋಧನೆ ಮಾಡಿದ ತಳಿಗಳನ್ನು ರೈತರ ಹೊಲದಲ್ಲಿ ಯಶಸ್ವಿಯಾಗಿ ಬೆಳೆಯಬೇಕು. ವಿಶ್ವವಿದ್ಯಾಲಯಗಳು ತಮ್ಮ ಆವರಣದಿಂದ ಹೊರಬಂದು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ರೈತರ ಬೆವರು, ಕೂಲಿಕಾರನ ಶ್ರಮದಲ್ಲಿ ದೇವರು ಇದ್ದಾನೆ ಎಂದು ನುಡಿದ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಯವರು ಹಿಂದೆ ಯಾವುದೇ ಸರ್ಕಾರ, ಪ್ರಧಾನ ಮಂತ್ರಿಗಳು, ಜನನಾಯಕರು, ಹೋರಾಟಗಾರರು ಯೋಚಿಸದಿರುವ ‘ರೈತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪವನ್ನು ಮಾಡಿದ್ದಾರೆ. ಇದು ಅತ್ಯಂತ ಕಠಿಣ ಸವಾಲಿನ ಹಾದಿಯಾಗಿದ್ದರೂ, ಸವಾಲನ್ನು ಸ್ವೀಕರಿಸಿ ಯೋಜನೆ ರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರ ಬದುಕಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನಿಯವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿ ವರ್ಷಕ್ಕೆ 6 ಸಾವಿರ ರೂ ನೆರವು ನೀಡಿದರು. ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಕೂಡಲೇ ಇದಕ್ಕೆ ಹೆಚ್ಚುವರಿಯಾಗಿ ನಾಲ್ಕು ಸಾವಿರ ರೂ. ನೆರವು ಘೋಷಿಸಿದರು.
ರಾಜ್ಯದಲ್ಲಿಯೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು. ಕೃಷಿ ನೀರಾವರಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಜೊತೆಗೆ ಭೂಚೇತನ, ಸುವರ್ಣ ಭೂಮಿ, ಸಾವಯವಕೃಷಿ ಉತ್ತೇಜನ ಮೊದಲಾದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರು. ರೈತನಾಯಕರಾಗಿ ಯಾವ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಿದರೋ, ಮುಖ್ಯಮಂತ್ರಿಯಾಗಿ ಅವುಗಳನ್ನು ಬಗೆಹರಿಸಲು ಪ್ರಯತ್ನಿಸಿದರು. ಪ್ರಧಾನಿಯವರ ನಾಯಕತ್ವದಲ್ಲಿ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ತಾವೂ ರೈತರ ಹಿತಕ್ಕಾಗಿ ಕಾರ್ಯನಿರ್ವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಈ ವಿದ್ಯಾರ್ಥಿ ವೇತನ ಯೋಜನೆಯ ಹಿನ್ನೆಲೆಯನ್ನು ವಿವರಿಸಿದ ಮುಖ್ಯಮಂತ್ರಿಗಳು ತಾವು ಹಳ್ಳಿಗಳಿಗೆ ಭೇಟಿ ನೀಡಿದಾಗ ರೈತರ ಮಕ್ಕಳು ಹಣಕಾಸಿನ ಕೊರತೆಯ ಕಾರಣ ಎಸ್.ಎಸ್.ಎಲ್.ಸಿ. , ಪಿ.ಯು.ಸಿ.ಗೇ ಓದು ನಿಲ್ಲಿಸಿರುವ ಹಲವಾರು ಪ್ರಕರಣಗಳು ಗಮನಕ್ಕೆ ಬಂದಿತ್ತು. ಈ ಮಕ್ಕಳೂ ವಿದ್ಯಾವಂತರಾದರೆ, ಆ ರೈತರ ಸ್ಥಿತಿಯಲ್ಲೂ ಸುಧಾರಣೆಯಾಗಲು ಸಾಧ್ಯ ಎಂಬ ಚಿಂತನೆಯೊಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಎಸ್ ಎಸ್ ಎಲ್ ಸಿ ನಂತರ ವಿವಿಧ ಕೋರ್ಸ್ ಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಸುಮಾರು 17 ಲಕ್ಷ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಯನ್ನು ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ರೈತರು ಜೊತೆಯಾಗಿ ಸಾಕಾರಗೊಳಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ರೈತರ ಸಬಲೀಕರಣಕ್ಕೆ ರೈತರ ಉತ್ಪಾದಕರ ಸಂಘಗಳ ಸ್ಥಾಪನೆ ಮತ್ತು ಚಟುವಟಿಕೆಗಳಿಗೆ 6850 ಕೋಟಿ ರೂ. ಒದಗಿಸಲಾಗಿದೆ. ಮೂಲಸೌಕರ್ಯ ಕೊರತೆಯಿಂದ ಕೃಷಿ ಉತ್ಪನ್ನಗಳು ಹಾಳಾಗಿ ವ್ಯರ್ಥವಾಗುವುದನ್ನು ತಡೆಗಟ್ಟಲು ಆತ್ಮನಿರ್ಭರ್ ಯೋಜನೆಯಡಿ 1.5 ಲಕ್ಷ ಕೋಟಿ ರೂ. ಒದಗಿಸಲಾಗಿದೆ ಎಂದು ವಿವರಿಸಿದರು.
ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ಕೃಷಿ ವಲಯದಲ್ಲಿಯೂ ಸರ್ಕಾರ ಕೈಗೊಂಡಿರುವ ಹಲವು ಯೋಜನೆಗಳು ಇತರರಿಗೆ ಮಾದರಿಯಾಗಿವೆ. ವಿಶೇಷವಾಗಿ ಡಿಜಿಟಲ್ ಮಾದರಿಗಳನ್ನು ನಾಳೆ, ನಾಡಿದ್ದು ನಡೆಯಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು, ಕರ್ನಾಟಕ ಯಾವುದೇ ಯೋಜನೆಯ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯದಲ್ಲಿ 750 ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸುವ ಮೂಲಕ ಸಣ್ಣ ರೈತರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಂದು ಜಿಲ್ಲೆ, ಒಂದು ಉತ್ಪನ್ನ ಕಾರ್ಯಕ್ರಮ ರೂಪಿಸಿದೆ. ಇದಲ್ಲದೆ, ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಆಯವ್ಯಯದ ಕಾರ್ಯಕ್ರಮಗಳನ್ನು ಹೊರತುಪಡಿಸಿ 1 ಲಕ್ಷ ಕೋಟಿ ರೂ. ಗಳನ್ನು ನಿಗದಿ ಪಡಿಸಿದೆ ಎಂದು ತಿಳಿಸಿದರು.
ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ತೋಟಗಾರಿಕಾ ಸಚಿವ ಎಂ. ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಾವಯವ ಕೃಷಿ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಎ.ಎಸ್. ಆನಂದ್, ಸಂಸದರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.