23 C
Karnataka
Saturday, September 21, 2024

    ವಿದ್ಯೆಗೆ ವಿನಯವೆ ಭೂಷಣ

    Must read

    ಸುಮಾ ವೀಣಾ

    “ಎಲ್ಲಾನು ಬಲ್ಲೆ ಎಂಬುವಿರಲ್ಲಾ ಅವಗುಣ ಬಿಡಲಿಲ್ಲ …” ಇದು ಪುರಂದರದಾಸರ ಕೀರ್ತನೆಯ ಸಾಲು. ಈ ಸಾಲಿನ ಜೊತೆಗೆ ಶ್ವೇತಕೇತು ಎಂಬ ಹೆಸರು ನೆನಪಾಗುತ್ತದೆ. ಈತ ಒಬ್ಬ ಋಷಿ. ಗೌತಮ ವಂಶದ ಉದ್ಧಾಲಕನ ಮಗ ಈತನಿಗೆ ಅರುಣಿಯೆಂಬ ಹೆಸರೂ ಇದೆ.ಗುರುಕುಲದಿಂದ ಶಿಕ್ಷಣ ಮುಗಿಸಿ ಬರುವಾಗ ಅಹಂಭಾವದ ಮೂರ್ತಿಯಾಗಿರುತ್ತಾನೆ. ಸ್ವತಃ ತಂದೆಗೇ  ನಮಸ್ಕರಿಸದೆ ಅವಿನಯ ತೋರಿಸುತ್ತಾನೆ.  ತಂದೆ ಶ್ವೇತಕೇತುನ್ನು ಕುರಿತು “ಎಲ್ಲಾ ವಿದ್ಯೆಗಳನ್ನು ಕಲಿತಿರುವೆಯಾ” ಎಂದರೆ ಅಹಂಕಾರದಿದ  ಹ್ಞೂಂಕರಿಸುತ್ತಾನೆ. 

    ಆದರೂ ತಂದೆ “ತಾಳ್ಮೆಯಿಂದ ಏನನ್ನು ಸಂಪೂರ್ಣವಾಗಿ ತಿಳಿದ ಮೇಲೆ ಇನ್ನೇನನ್ನೂ ತಿಳಿಯುವುದರ ಆವಶ್ಯಕತೆಯಿರುವುದಿಲ”ಇಲ್ಲ ಎಂದಾಗ ಶ್ವೇತಕೇತು ತಬ್ಬಿಬ್ಬಾಗುತ್ತಾನೆ. ಉತ್ತರ ಹೊಳೆಯದೆ ಬೆವರಿ ತಲೆತಗ್ಗಿಸಿ ತಂದೆಯಲ್ಲಿ ಕ್ಷಮೆ ಕೇಳುತ್ತಾನೆ. ತಂದೆ ಬೇಸರಿಸದೆ “ ನಿನ್ನನ್ನು ನೀನು ತಿಳಿದ ನಂತರ ಇನ್ನೇನನ್ನೂ ತಿಳಿಯುವುದರ ಆವಶ್ಯಕತೆಯಿಲ್ಲ” ಎನ್ನುತ್ತಾನೆ. 

    ಎಲ್ಲವೂ ತಿಳಿದಿದೆ ಎಂಬುದು ಕೇವಲ ಭ್ರಮೆ. ಕೆಲವರಲ್ಲಿ  ಇಂತಹದೊಂದು  ಹೆಚ್ಚುಗಾರಿಕೆ  ಆವರಿಸಿ ಗರ್ವಿಗಳಾಗಿ   ಮರೆದಾಡುತ್ತಾರೆ.  ಯಾರೂ ಇಂಥ ಗರ್ವಕ್ಕೆ ಸಿಲುಕಬಾರದು  ಇವರು ಅರ್ಧಂಬರ್ಧ ತುಂಬಿದ ತಂಬಿಗೆಗೆ ಸಮ ಎನ್ನಬಹುದು ಎಲ್ಲಾ ತಿಳಿದು ನಿರಹಂಕಾರಿಗಳಾಗಿ  ಕಲಿಯ ಬೇಕಾಗಿರುವ ಜ್ಞಾನಶಾಖೆಗಳತ್ತ ಮುಖ ಮಾಡುವವರನ್ನು  ತುಮಬಿದ ತಂಬಿಗೆಗೆ ಹೋಲಿಸಬಹುದು.

    ‘ಜ್ಞಾನ’ ಎಂಬ ಸಾಗರದ ಅಂತರಾಳವನ್ನು ಹೊಕ್ಕವರಿಲ್ಲ ಅದು ಎಲ್ಲರಿಗೂ ಧಕ್ಕುವುದೂ ಇಲ್ಲ.ಹೊಳೆಗೆ ನೀರು ತರಹೋದವರು ತೆಗೆದುಕೊಂಡು ಹೋದ ಬಿಂದಿಗೆಯಲ್ಲಿ ಮಾತ್ರ ನೀರು ತರಲು ಸಾಧ್ಯ.ಸಂಪೂರ್ಣ ಹೊಳೆ ನೀರನ್ನು ತರಲು ಸಾಧ್ಯವಿಲ್ಲ.  ಹೊಟ್ಟೆ ಹಸಿದಿದೆ ಎಂದು ಮಾಡಿಟ್ಟ ಅಡುಗೆಯೆಲ್ಲವನ್ನು ಊಟ ಮಾಡಲು ಸಾಧ್ಯವೇ? ಇಲ್ಲ. ಹಾಗೆ ಕಲಿಕೆಯೂ.  ಸಾಗರ ಹಿರಿದು ಬೊಗಸೆ ಕಿರಿದು ಎಂಬಂತೆ ಜ್ಞಾನ ಸಾಗರದಲ್ಲಿ ನಮ್ಮ   ಬೊಗಸೆಗೆ ಸಿಗುವುದು  ಅಲ್ಪವೇ ಅಲ್ವ!

    ಅಲ್ಪ ವಿದ್ಯೆ ಕಲಿತು ಎಲ್ಲವೂ  ತಿಳಿದಿದೆ ಎಂದರೆ ‘ಅಲ್ಪವಿದ್ಯೆ ಮಹಾಗರ್ವಿ’ ಎನ್ನಿಸಿಕೊಳ್ಳಬೇಕಾಗುತ್ತದೆ. ಜೀವನ  ಎಂದರೆ ಕಲಿಕೆ, ಜೀವನ ಪಯಣ ಅರ್ಥಾತ್  ಕಲಿಕಾ ಪಯಣ.  ಕಲಿಕೆ ಅಕ್ಷಯವಾದದ್ದು  ಇದಿಷ್ಟೇ ಎನ್ನಲಾಗದು.ಕಲಿಕೆಯಲ್ಲಿ ವಿನಯ ಇರಬೇಕಾಗುತ್ತದೆ.  “ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ ಎಂಬ ಸರ್ವಜ್ಞನ ಮಾತು ಅಕ್ಷರಶಃ ಸತ್ಯ. “ಎಲ್ಲಾ ಗೊತ್ತು” ಎಂಬ ಸ್ವಹಂ ಬಿಟ್ಟು ಗೊತ್ತಿರುವುದರಲ್ಲಿ ಇನ್ನಷ್ಟು ಪರಿಪಕ್ವವಾಗುವುದು ಜಾಣತನ.  ದಡ್ಡತನವಿದ್ದರೂ ನಮ್ಮಲ್ಲಿ ಕ್ಷಮೆಯಿದೆ ಆದರೆ ಉದ್ಧಟತನವಿದ್ದರೆ ನಮ್ಮಲ್ಲಿ ಕ್ಷಮೆ ಇಲ್ಲ  ಅದೂ  ಅರೆಬರೆ ಜ್ಞಾನದಿಂದ  ಸಮಾಜದಲ್ಲಿ  ಬೀಗುತ್ತಾ ಹೋದರೆ ಅದುವೆ ಅವನ ಘನತೆಗೆ   ಚ್ಯುತಿ ತರಬಹುದು .

     ‘ಅಲ್ಪ ವಿದ್ಯೆಯ ಅಹಂ ‘  ಎಂದಿಗೂ ಸಲ್ಲದು. ಇನ್ನೂ ಇನ್ನೂ ಕಲಿಯಬೇಕೆಂಬ ಜ್ಞಾನದಾಹದಲ್ಲಿ  ನಮ್ಮ ಮಹತ್ ಅಡಗಿದೆ. ಈ ಜ್ಞಾನ ಸುಲಭಕ್ಕೆ ಸಿಗುವುದಲ್ಲ ಅದಕ್ಕಾಗಿ ಪರಿಶ್ರಮ ಪಡಬೇಕಾಗುತ್ತದೆ.ಜ್ಞಾನ ಎನ್ನುವುದು ಭೌತಿಕ ಸ್ವತ್ತಲ್ಲ   ಯಾರೂ ಅಪಹರಿಸಲಾರದ  ಮಾನಸಿಕ ಸ್ವತ್ತು.  ಪಡೆದುಕೊಂಡ ಜ್ಞಾನ ಪರ್ದರ್ಶನಕ್ಕೆ ಇಡುವಂಥದಲ್ಲ ಬದಲಾಗಿ ಅದು  ಮುಂದಿನ ಜ್ಞಾನವಿಸ್ತಾರಕ್ಕೆ ನಾಂದಿಯಾಗಬೇಕು. ವಿದ್ಯೆಗೆ ವಿನಯವೇ ಭೂಷಣ  ಎನ್ನುವಂತೆ   ನಿರಹಂಕಾರಿಗಳಾಗಿ  ಇದ್ದುಬಿಡಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!