ಕಾರ್ಪೊರೇಟ್ ಗಳಲ್ಲಿ ಸಧ್ಯ ನಡೆಯುತ್ತಿರುವುದೆಂದರೆ ಬಲಿಷ್ಠ ಕಂಪನಿಗಳು, ಬಲಿಷ್ಠ ಕಂಪನಿಗಳು ಎಂದರೆ ಆರ್ಥಿಕತೆಯ ದೃಷ್ಟಿ ಯಿಂದಲೂ ಗುಣಮಟ್ಟದ ನೋಟದಲ್ಲೂ, ಸಬಲತೆಯುಳ್ಳವು, ತಮ್ಮಲ್ಲಿರುವ ಸಂಪನ್ಮೂಲವನ್ನು ಬಳಸಿಕೊಂಡು ಸಣ್ಣ ಸಣ್ಣ ಆದರೂ, ಜನಬೆಂಬಲದೊಂದಿಗೆ ಮೆರೆಯುತ್ತಿರುವ ಕಂಪನಿಗಳನ್ನ ಖರೀದಿಸುವ, ಸ್ವಾಧೀನಪಡಿಸಿಕೊಳ್ಳುವ ಮೂಲಕ ತಮ್ಮ ಗ್ರಾಹಕ ಜಾಲವನ್ನು ಬೆಳೆಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಜೊತೆಗೆ ಹಲವಾರು ಸಂಸ್ಥೆಗಳು ತಮ್ಮಲ್ಲಿರುವ ಸಂಪನ್ಮೂಲವನ್ನು ಬಳಸಿಕೊಳ್ಳಲು ಅನ್ಯ ಮಾರ್ಗವಿಲ್ಲದೆ, ಪೇಟೆಗಳು ಉತ್ಕೃಷ್ಠ ಮಟ್ಟದಲ್ಲಿರುವಾಗ ಎ ಎಂ ಸಿ ಗಳನ್ನು ಸ್ಥಾಪಿಸಿ ಮ್ಯುಚುಯಲ್ ಫಂಡ್ ವಲಯಕ್ಕೆ ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿವೆ. ಈ ಪ್ರಯೋಗವು ಎಷ್ಟರಮಟ್ಟಿಗೆ ಯಶಸ್ಸು ಕಾಣಬಹುದೆಂಬುದನ್ನು ಕಾದು ನೋಡಬೇಕಾಗಿದೆ.
ಇಂದಿನ ದಿನಗಳಲ್ಲಿ ಹೂಡಿಕೆಯ ಚಿಂತನೆ ಹೇಗೆ ಸಾಗಿದೆ ಎಂದರೆ ಊದಿನ ಕಡ್ಡಿಗಿಂತ ಬೆಂಕಿ ಕಡ್ಡಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ವಾತಾವರಣ ನಿರ್ಮಾಣವಾಗಿದೆ. ಹೇಗೆಂದರೆ ಇಂಡಿಯನ್ ಹೋಟೆಲ್ಸ್ ಷೇರಿನ ಮುಖಬೆಲೆ ರೂ.1 ಆಗಿದ್ದು ಟಾಟಾ ಸಮೂಹದ ಕಂಪನಿಯಲ್ಲದೆ ತನ್ನ ಸಾಧನೆಯ ಚರಿತ್ರೆಯನ್ನು ಹೊಂದಿದೆ. ಸಧ್ಯ ರೂ.146 ರ ಸಮೀಪ ವಹಿವಾಟಾಗುತಿದೆ. ಇ ಐ ಹೆಚ್ ಲಿಮಿಟೆಡ್ ಕಂಪನಿಯ (ಹಿಂದಿನ ಹೆಸರು ಈಸ್ಟ್ ಇಂಡಿಯಾ ಹೋಟೆಲ್ಸ್) ಓಬೆರಾಯ್ ಸಮೂಹದ ಕಂಪನಿ, ಈ ಷೇರಿನ ಮುಖಬೆಲೆ ರೂ.2 ಆಗಿದ್ದು ಸಧ್ಯ ರೂ.106 ರ ಸಮೀಪ ವಹಿವಾಟಾಗುತ್ತಿದೆ. ಈ ಕಂಪನಿಯೂ ಸಹ ತನ್ನದೇ ಆದ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದೆ.
ಈ ರೀತಿಯ ಹಿನ್ನೆಲೆಯ ಕಂಪನಿಗಳು ಒಂದೆಡೆಯಾದರೆ ಮತ್ತೊಂದೆಡೆ ಇತ್ತೀಚೆಗೆ ಪೇಟೆ ಪ್ರವೇಶಿಸಿದ ಈ ಹೋಟೆಲ್ ಗಳು ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸುವ ಕಂಪನಿಯ ಷೇರಿನ ಬೆಲೆ ರೂ.149 ರ ಸಮೀಪ ವಹಿವಾಟಾಗುತ್ತಿದೆ. ಈ ಕಂಪನಿಯು ಇತ್ತೀಚೆಗೆ ಸುಮಾರು ರೂ.9 ಸಾವಿರಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪನ್ಮೂಲ ಸಂಗ್ರಹಣೆಯನ್ನು ಆರಂಭಿಕ ಷೇರು ವಿತರಣೆ ಮಾಡುವ ಮೂಲಕ ಸಂಗ್ರಹಿಸಿದೆ.
ಷೇರುಪೇಟೆಯು ಅತ್ಯಂತ ಗರಿಷ್ಠದಲ್ಲಿದೆ ಎಂಬುದು ನಿರ್ವಿವಾದ ಅಂಶವಾದರೂ ಅವಕಾಶಗಳು ಅಲ್ಪಕಾಲೀನವಾಗಿ ಸೃಷ್ಠಿಯಾಗಿ ಮಾಯವಾಗುತ್ತಿರುತ್ತದೆ. ಷೇರುಗಳ ಬೆಲೆಗಳು ಹೆಚ್ಚಾದಾಗ ಈ ಅಸ್ಥಿರತೆಗಳು ಸಹಾ ಹೆಚ್ಚಾಗುತ್ತದೆ. ಅಲ್ಲದೆ ಪೇಟೆಯಲ್ಲಿ ಭಾಗಿಯಾಗುವ ವಹಿವಾಟುದಾರರ ಗಾತ್ರ, ಅವರಿಂದಾಗುವ ನಗದಿನ ಒಳಹರಿವು ಸಹ ಅತಿ ಹೆಚ್ಚಾಗುತ್ತದೆ. ಇದರಿಂದ ಬೇಡಿಕೆ- ಪೂರೈಕೆಗಳಲ್ಲುಂಟಾಗುವ ಏರಿಳಿತಗಳೂ ಸಹ ಹೆಚ್ಚಾಗುವುದರಿಂದ ರಭಸದ ಏರಿಳಿತಗಳೂ ಸಹ ಹೆಚ್ಚಾಗುವುದು.
ಈ ಸಂದರ್ಭದಲ್ಲಿ ಎಲ್ ಐ ಸಿ ಆಫ್ ಇಂಡಿಯಾದ ಒಂದು ಜಾಹಿರಾತಿನ ತರಹ, ಅಂದರೆ ಜಿಂದಗಿ ಕೆ ಸಾಥ್ ಭಿ- ಜಿಂದಗಿ ಕೆ ಬಾದ್ ಭಿ ಎಂಬಂತೆ ಕಂಪನಿಗಳು ಘೋಷಿಸುವ ಕಾರ್ಪೊರೇಟ್ ಫಲಗಳಾದ ಬೋನಸ್ ಷೇರು, ಲಾಭಾಂಶ ಗಳೂ ಸಹ ಷೇರಿನ ಬೆಲೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು, ಅವಕಾಶಗಳನ್ನು ಸೃಷ್ಠಿಸಬಹುದು ಎಂಬುದನ್ನು ಅರಿತು ಚಟುವಟಿಕೆ ನಡೆಸಿದಲ್ಲಿ ಅಲ್ಪಕಾಲೀನ ಲಾಭಕ್ಕೆ ಅವಕಾಶವಾಗಿರುತ್ತದೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ:
ಈ ಕಂಪನಿಯು ಪ್ರತಿ ಷೇರಿಗೆ ರೂ.58 ( ವಿಶೇಷ ಲಾಭಾಂಶವೂ ಸೇರಿ) ರಂತೆ ಲಾಭಾಂಶವನ್ನು ಘೋಷಿಸಿತು. ಈ ಘೋಷಣೆಯ ನಂತರ ಷೇರಿನ ಬೆಲೆ ರೂ.490 ರ ಸಮೀಪವಿತ್ತು. ನಂತರದಲ್ಲಿ ಷೇರಿನ ಬೆಲೆಯು ಇಳಿಯುತ್ತಾ ಸುಮಾರು ರೂ.448 ರ ಸಮೀಪಕ್ಕೆ ತಲುಪಿ ನಂತರದ ಹತ್ತು ದಿನಗಳಲ್ಲಿ ರೂ.494 ಕ್ಕೆ ಹಿಂದಿರುಗಿ ವಾರ್ಷಿಕ ಗರಿಷ್ಠತಲುಪಿ ವಿಜೃಂಭಿಸಿದೆ. ಇದರ ಹಿಂದೆ ಅಡಕವಾಗಿರುವ ಅಂಶ ಎಂದರೆ ಲಾಭಾಂಶ ವಿತರಣೆಗೆ ಈ ತಿಂಗಳ 15 ರವರೆಗೂ ಸಮಯವಿರುವುದರಿಂದ ರೂ.58 ರ ಆದಾಯವೇ ಆಕರ್ಷಣೆಯಾಗಿದೆ. ಒಂದು ವೇಳೆ 15 ರೊಳಗೆ ಷೇರಿನ ಬೆಲೆ ಕುಸಿತ ಕಂಡಲ್ಲಿ ಹೂಡಿಕೆಗೆ ಆಕರ್ಷಣೀಯವಾಗಲೂಬಹುದು. ಕಾರಣ ಈ ಕಂಪನಿಯಿಂದ ಕೇಂದ್ರ ಸರ್ಕಾರ ಹೊರಬರಲಿಚ್ಚಿಸಿರುವುದೂ ಆಗಿದೆ. ಇದು ಲಾಭಾಂಶದ ಸಾತ್ ಗೆ ಉದಾಹರಣೆಯಾಗಿದೆ.
ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ:
ಜುಲೈ ತಿಂಗಳಲ್ಲಿ ಈ ಕಂಪನಿಯ ಷೇರು ಪ್ರತಿ ಷೇರಿಗೆ ರೂ.22.75 ರಂತೆ ಲಾಭಾಂಶವನ್ನು ವಿತರಿಸಲು ನಿಗದಿತ ದಿನವನ್ನಾಗಿಸಿದೆ. ಜುಲೈ ತಿಂಗಳಲ್ಲಿ ರೂ.300 ರಲ್ಲಿದ್ದ ಷೇರಿನ ಬೆಲೆ ಆಗಷ್ಟ್ ತಿಂಗಳಲ್ಲಿ ರೂ.245 ರ ಸಮೀಪಕ್ಕೆ ಕುಸಿಯಿತು. ಕಂಪನಿ ವಿತರಿಸಲಿರುವ ಲಾಭಾಂಶದ ಪ್ರಮಾಣಕ್ಕಿಂತ ಹೆಚ್ಚಿನ ಕುಸಿತ ಕಂಡಿತು. ಆದರೆ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯು ಈ ತಿಂಗಳಲ್ಲಿರುವ ಕಾರಣ ನಂತರ ಅದನ್ನು ವಿತರಿಸಲಾಗುವುದು. ಆದರೆ ಲಾಭಾಂಶ ವಿತರಣೆಯ ದಿನ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಷೇರಿನ ಬೆಲೆ ಮತ್ತೊಮ್ಮೆ ಜಿಗಿತ ಕಂಡು ರೂ.276 ರ ಸಮೀಪದಲ್ಲಿದೆ. ಇದನ್ನು ಲಾಭಾಂಶದ ಬಾದ್ ಭಿ ಅವಕಾಶ ಕಲ್ಪಿಸಿದ ರೀತಿಗೆ ಉದಾಹರಣೆಯಾಗಿದೆ.
ಹೀಗೆ ಪೇಟೆಗಳು, ಸೂಚ್ಯಂಕಗಳು ಉತ್ತುಂಗದಲ್ಲಿ, ಸರ್ವಕಾಲೀನ ಗರಿಷ್ಠದಲ್ಲಿರುವಾಗಲೂ ಲಾಭಗಳಿಕೆಗೆ ಮಧ್ಯಂತರ, ಅಲ್ಪಕಾಲೀನ ಅವಕಾಶಗಳನ್ನು ಸೃಷ್ಠಿಸಿಕೊಡುತ್ತಿವೆ. ಆದರೆ ಬದಲಾವಣೆಗಳು ಮುನ್ಸೂಚನೆಯಿಲ್ಲದ ರೀತಿಯಲ್ಲಿ ದಿಶೆಬದಲಿಸುವ ಪೇಟೆಗಳಲ್ಲಿ ಚಟುವಟಿಕೆಗೆ ಮುಂಚೆ ಅತ್ಯಂತ ತುಲನಾತ್ಮಕ ನಿರ್ಧಾರಗಳು ಅಗತ್ಯ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
Thanks for well articulated article