20.6 C
Karnataka
Sunday, September 22, 2024

    ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣದಲ್ಲಿ ಯಾವುದೇ ರಾಜಿ ಇಲ್ಲ-ಮುಖ್ಯಮಂತ್ರಿ

    Must read

    BENGALURU SEP 6

    ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ರಾಜ್ಯದ ಪೊಲೀಸ್ ಇಲಾಖೆ ಅತ್ಯಂತ ದಕ್ಷ, ನಿಷ್ಪಕ್ಷಪಾತ ಹಾಗೂ ನಿಷ್ಠುರವಾಗಿದ್ದು, ಈ ಪರಂಪರೆಯನ್ನು ಮುಂದುವರೆಸಬೇಕು. ಆಗ ಮಾತ್ರ ಜನಸಾಮಾನ್ಯರಿಗೆ ಸುರಕ್ಷತೆ ಹಾಗೂ ಆತ್ಮಸ್ಥೈರ್ಯ ನೀಡಲು ಸಾಧ್ಯ. ಕಾನೂನು ಸುವ್ಯವಸ್ಥೆಯ ಜೊತೆಗೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಜನರ ಸೇವೆ ಮಾಡಲು ಪೊಲೀಸರಿಗೆ ಅಧಿಕಾರವನ್ನು ನೀಡಲಾಗಿದೆ. ಈ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಸಿದರು.

    ಬಹಳ ವರ್ಷಗಳ ನಂತರ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ವಿಧಿವಿಜ್ಞಾನ ಪ್ರಯೋಗಾಲಯಗಳು, ನೇಮಕಾತಿ ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

    ಅಪರಾಧಿಗಳೊಂದಿಗೆ ಪೊಲೀಸರು ಶಾಮೀಲಾಗಬಾರದು, ನಗರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ಪೊಲೀಸರು ಕೈಜೋಡಿಸದೇ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಜನಸಾಮಾನ್ಯರೊಂದಿಗೆ ಹಾಗೂ ತಮ್ಮ ಅಧೀನದಲ್ಲಿ ಕೆಲಸ ಮಾಡುವ ಪೇದೆಗಳನ್ನೂ ಸಹ ಗೌರವದಿಂದ ನಡೆಸಿಕೊಳ್ಳಬೇಕು. ಅವರೊಂದಿಗೆ ವ್ಯವಹರಿಸುವಾಗ ಭಾಷೆ ನಿಯಂತ್ರಣದಲ್ಲಿರಲಿ ಎಂದು ಸಲಹೆ ನೀಡಿದರು.

    ಇಲಾಖೆಯ ಎಲ್ಲ ಹಂತಗಳಲ್ಲಿಯೂ ವರದಿ ಮಾಡುವ ವ್ಯವಸ್ಥೆ ಉತ್ತಮವಾಗಿರಬೇಕು. ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಹಿರಿಯ ಅಧಿಕಾರಿಗಳು ಸುದೀರ್ಘವಾಗಿ ಪರಿಶೀಲಿಸಬೇಕು. ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿ ಅಪರಾಧಿಗಳಲ್ಲಿ ಭಯವುಂಟು ಮಾಡಬೇಕು. ಇಲಾಖೆಯ ಆಂತರಿಕ ಭದ್ರತಾ ವಿಭಾಗವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ತನ್ನ ಬಾಹುಗಳನ್ನು ಇನ್ನಷ್ಟು ವಿಸ್ತರಿಸಬೇಕಿದೆ ಎಂದರು.

    ಡ್ಯಾಶ್ ಬೋರ್ಡ್ :ಪೊಲೀಸ್ ಮಹಾ ನಿರ್ದೇಶಕರಿಂದ ಹಿಡಿದು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮದೇ ಡ್ಯಾಶ್ ಬೋರ್ಡ್ ಗಳನ್ನು ಹೊಂದಿರಬೇಕು. ಎಲ್ಲ ಮಾದರಿಯ ಅಪರಾಧಗಳ ಪಟ್ಟಿ ಪತ್ತೆಯಾಗಿರುವ ಪ್ರಕರಣಗಳು, ದಸ್ತಗಿರಿ ಆಗಿರುವ ಸಂಖ್ಯೆ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವ ವ್ಯವಸ್ಥೆಯನ್ನು ಡ್ಯಾಶ್ ಬೋರ್ಡ್ ಮೂಲಕ ಮಾಹಿತಿ ಲಭ್ಯವಿರಬೇಕು.

    ಇಲಾಖೆಯ ಆಧುನೀಕರಣ :ಆರ್ಥಿಕ ಮತ್ತು ಸೈಬರ್ ಕ್ರೈಂ ನಿಯಂತ್ರಣಕ್ಕೆ ಪ್ರತ್ಯೇಕ ತಾಂತ್ರಿಕ ವಿಭಾಗವನ್ನು ರಚಿಸುವಂತೆ ಸೂಚಿಸಿದರು. ಐಎಸ್ ಡಿಯ ಬಲವರ್ಧನೆ, ಕರಾವಳಿಯಲ್ಲಿ ನಿಗಾ ವಹಿಸಲು ಹೈಸ್ಪೀಡ್ ಬೋಟುಗಳ ಖರೀದಿ, ಮಧ್ಯಮ ಮಟ್ಟದ ಅಧಿಕಾರಿಗಳಿಗೆ ಎನ್ ಡಿ ಎ ಮಟ್ಟದ ತರಬೇತಿ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಬಂಧೀಖಾನೆ, ಅಗ್ನಿಶಾಮಕ ದಳದ ಸುಧಾರಣೆಯಾಗಬೇಕಲ್ಲದೆ ಗುಪ್ತಚರ ವಿಭಾಗ ಮತ್ತು ಸಿಓಡಿ ವಿಭಾಗದ ಪುನರ್ ರಚನೆ ಹಾಗೂ ತಾಂತ್ರಿಕವಾಗಿ ಮೇಲ್ದರ್ಜೆಗೇರಿಸುವುದು ಅಗತ್ಯವಿದೆ ಎಂದರು.

    ಡ್ರಗ್ಸ್ ಮಾಫಿಯಾ :ಕಳೆದ ಎರಡು ವರ್ಷಗಳಲ್ಲಿ ಮಾದಕ ವಸ್ತು ಮಾಫಿಯಾವನ್ನು ನಿಯಂತ್ರಣಕ್ಕೆ ತರಲಾಗಿದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆಂದೂ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಇದನ್ನು ಮುಂದುವರೆಸಬೇಕು. ಕ್ಲಬ್ ಗಳಲ್ಲಿ ಜೂಜಾಟ, ಜಿಲ್ಲೆಗಳಲ್ಲಿ ಮರಳು ಮಾಫಿಯಾವನ್ನು ಪೊಲೀಸರು ನಿಗ್ರಹಿಸಬೇಕು. ಈ ಬಗ್ಗೆ ಸರ್ಕಾರ ಝೀರೋ ಟಾಲರೆನ್ಸ್ ಇರುವುದಾಗಿ ಈ ಹಿಂದೆಯೇ ಸ್ಪಷ್ಟಪಡಿಸಲಾಗಿದೆ.

    ಅಪರಾಧ ನಿಯಂತ್ರಣ ಮತ್ತು ಸಾಮಾಜಿಕ – ಕಾನೂನು ವ್ಯವಸ್ಥೆಗೆ ನೇರ ಸಂಪರ್ಕವಿದ್ದು , ಅಪರಾಧಗಳನ್ನು ನಿಯಂತ್ರಿಸಿದಾಗ ಮಾತ್ರ ಕಾನೂನು ವ್ಯವಸ್ಥೆ ಸುಸ್ಥಿತಿಗೆ ಬರುತ್ತದೆ. ಪೊಲೀಸ್ ಇಲಾಖೆಯಲ್ಲಿ ವ್ಯವಸ್ಥೆಯ ಸುಧಾರಣೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ.

    ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ದೇಶ ವಿದ್ರೋಹಿ ಚಟುವಟಿಕೆಗಳ ನಿಗ್ರಹ, ಜಿಲ್ಲಾ ಮಟ್ಟದಲ್ಲಿ ಅಪರಾಧಗಳ ಕುರಿತ ಸಭೆ ನಡೆಸಬೇಕು, ಪೊಲೀಸ್ ಇಲಾಖೆ ಸರ್ಕಾರಕ್ಕೆ ಗೌರವ ತರುವಂತೆ ನಡೆದುಕೊಳ್ಳಬೇಕು ಎಂದರು.

    ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಕಾಫಿ ಟೇಬಲ್ ಬುಕ್, ಸೇವೆಯಲ್ಲಿದ್ದಾಗ ಮರಣ ಹೊಂದಿದ ಇಲಾಖೆಯ ನೌಕರರಿಗೆ ಒದಗಿಸಿರುವ ಪರಿಹಾರದ ಕುರಿತ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದರು ಹಾಗೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮುಖ ಗುರುತಿಸುವ ವ್ಯವಸ್ಥೆಗೆ (ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್) ಚಾಲನೆ ನೀಡಿದರು.

    ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!