19.9 C
Karnataka
Sunday, September 22, 2024

    ಶಿಕ್ಷಣ ಕ್ಷೇತ್ರಕ್ಕೆ ರಾಷ್ಟ್ರೋತ್ಥಾನ ಪರಿಷತ್ ಮಹತ್ತರ ಕೊಡುಗೆ

    Must read

    MYSURU SEPT 8

    ಶಿಕ್ಷಣ ಕ್ಷೇತ್ರಕ್ಕೆ ರಾಷ್ಟ್ರೋತ್ಥಾನ ಪರಿಷತ್ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ. ಸಂಘದ ಸೇವೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹರಡಿದೆ ಎಂದು ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬಣ್ಣಿಸಿದರು.

    ವಿಜಯನಗರ 4ನೇ ಹಂತದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲಾ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸಮಾಜದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡುತ್ತಿರುವ ರಾಷ್ಟ್ರೋತ್ಥಾನದ ಕಾರ್ಯವನ್ನು ಎಷ್ಟು ಬಣ್ಣಿಸಿದರು ಸಾಲದು. ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಕೂಡ ಸಂಘ ತೊಡಗಿಕೊಂಡಿದೆ ಎಂದು ಹೇಳಿದರು.

    ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವ ಇಂದಿನ ಪೀಳಿಗೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿತ್ತುವ ಕೆಲಸವನ್ನು ರಾಷ್ಟ್ರೋತ್ಥಾನ ಪರಿಷತ್ ತಮ್ಮ ವಿದ್ಯಾಕೇಂದ್ರಗಳ ಮೂಲಕ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

    ಇಂದಿನ ದಿನಗಳಲ್ಲಿ ಶಿಕ್ಷಣ ಎಂದರೆ ಕೇವಲ ಸರ್ಟಿಫಿಕೇಟ್ ಕೋರ್ಸ್ ಎಂಬಂತಾಗಿದೆ. ‌ಮಾರ್ಕ್ಸ್ ಗಷ್ಟೇ ಸೀಮಿತವಾಗುತ್ತಿರುವ ಇಂದಿನ ಶೈಕ್ಷಣಿಕ ಪದ್ಧತಿಯಲ್ಲಿ ಭಾರತೀಯ ಪರಂಪರೆ ಮಾಯವಾಗುತ್ತಿದ್ದು ವಿದೇಶಿ ಸಂಸ್ಕೃತಿ ಮೈಗೂಡುತ್ತಿದೆ. ಇಂತಹ ಸಂಧರ್ಭದಲ್ಲಿ ನಮ್ಮ ಮಕ್ಕಳಲ್ಲಿ ಭಾರತೀಯ ಸಂಸ್ಕಾರ ಬೆಳೆಸುವ ಕಾಯಕದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳು ಮುಂದಾಗುತ್ತಿದ್ದು ಈ ರೀತಿಯ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಲಿ ಎಂದು ನಾನು ಈ ಸಂದರ್ಭದಲ್ಲಿ ಆಶಿಸುತ್ತೇನೆ.

    ಮನುಷ್ಯನಿಗೆ ಕೊಡುವಂತಹ ಸಂಸ್ಕಾರಗಳಲ್ಲಿ ಅಕ್ಷರಾಭ್ಯಾಸ ಕೂಡ ಒಂದು ಸಂಸ್ಕಾರ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರೆ ಅದಕ್ಕೆ ಅಕ್ಷರಾಭ್ಯಾಸವೇ ಮೊದಲ ಮೆಟ್ಟಿಲು. ಹಿಂದೆ ಗುರುಕುಲದಲ್ಲಿ ಅಕ್ಷರಾಭ್ಯಾಸ ಮಾಡಿಸಲಾಗುತ್ತಿತ್ತು.‌ ಆದರೆ ‌ಬದಲಾದ ಶೈಕ್ಷಣಿಕ ಜಗತ್ತಿನಲ್ಲಿ ಗುರುಕುಲ ಹೋಗಿ ಕಾನ್ವೆಂಟ್ ಗಳು ಕಾಲಿಟ್ಟಿವೆ. ಸ್ಕೂಲ್ ಗೆ ಮಕ್ಕಳನ್ನು ಸೇರಿಸುತ್ತಿದ್ದಂತೆ ಅವರಿಗೆ ಟೈ, ಬೆಲ್ಟ್ ಹಾಕಿಸಿ, ಬ್ಯಾಗ್ ತಗಲಾಕಿಸಿ ಶಾಲೆಗೆ ಕಳುಹಿಸಲಾಗುತ್ತದೆ. ಕ್ಲಾಸ್ ನಲ್ಲಿ ಟೀಚರ್ ಸಹ ಎಬಿಸಿಡಿಯಿಂದ ಅಕ್ಷರ ಶುರು ಮಾಡುತ್ತಾರೆ.‌ ಆದರೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಸೇರುವ ಮಕ್ಕಳಿಗೆ ಕನ್ನಡದಲ್ಲಿ ಅಕ್ಷರಾಭ್ಯಾಸ ಮಾಡುವ ಮೂಲಕ ಶಿಕ್ಷಣದ ಜೊತೆಗೆ ಈ ನೆಲದ ಸಂಸ್ಕಾರವನ್ನು ಎಳೆಯ ಮನಸಿನಲ್ಲಿ ಬಿತ್ತುವ ಕೆಲಸವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳು ಮಾಡುತ್ತಿವೆ.

    ಜನಜಾಗೃತಿ, ಜನಶಿಕ್ಷಣ, ಜನಸೇವೆ ಉದ್ದೇಶದಿಂದ ಆರಂಭಗೊಂಡ ರಾಷ್ಟ್ರೋತ್ಥಾನ ಪರಿಷತ್, ಇಂದಿನ ಯುವಪೀಳಿಗೆಯಲ್ಲಿ ರಾಷ್ಟ್ರೀಯ ವಿಚಾರಧಾರೆಗಳನ್ನು ತುಂಬುವ ಕೆಲಸ ಮಾಡುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಶಿಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಂಡು ಬರುತ್ತಿದೆ.

    ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ. ಆದರೆ ಅವರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಒಂದು ವೇಳೆ ಅವಕಾಶ ಸಿಕ್ಕರೂ ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಆದರೆ ರಾಷ್ಟ್ರೋತ್ಥಾನ ಪರಿಷತ್ ಅಂತಹವರಿಗೆ ಮಾರ್ಗದರ್ಶನ ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೆಲಸವನ್ನು ಈ ಸಂಘಸಂಸ್ಥೆ ಮಾಡುತ್ತಿದೆ.

    ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದುಕೊಳ್ಳುವುದು ಬಡ ಮಕ್ಕಳಿಗೆ ಅಸಾಧ್ಯ ಎಂಬುದನ್ನು ರಾಷ್ಟ್ರೋತ್ಥಾನ ಪರಿಷತ್ ಹೋಗಲಾಡಿಸಿದೆ. ಆರ್ಥಿಕವಾಗಿ ಹಿಂದುಳಿದ ಅದರಲ್ಲೂ ಗ್ರಾಮೀಣ ಮಕ್ಕಳಿಗೆ ಐಐಟಿ, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಮೂಲಕ ಗ್ರಾಮೀಣ ಪ್ರತಿಭೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತಿರುವ ಈ ಪುಣ್ಯದ ಕಾರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು.‌

    ಈಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೂತನ ವಿದ್ಯಾಕೇಂದ್ರ ಆರಂಭಿಸುವ ಮೂಲಕ ಇಲ್ಲಿನ ಮಕ್ಕಳಿಗೂ ಭಾರತೀಯ ಸಂಸ್ಕಾರವನ್ನು ಧಾರೆಯೆರುವ ಈ ಪವಿತ್ರ ಕಾರ್ಯ ಯಶಸ್ವಿಯಾಗಿ ಈ ಸೇವೆ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ನಾನು ಈ ಸುಸಂದರ್ಭದಲ್ಲಿ ಆಶಿಸುತ್ತೇನೆ ಎಂದು ಹೇಳಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!