23 C
Karnataka
Saturday, September 21, 2024

    ಎಲ್ಲರೂ ತೇಜಸ್ವಿಯಾಗಲು ಸಾಧ್ಯವಿಲ್ಲ

    Must read


    ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾತುಗಳು.


    ಸಿದ್ದರಾಮಯ್ಯ

    ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯ ನನಗಿರಲಿಲ್ಲ. ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು, ಮೈಸೂರಿನಲ್ಲಿ ಕೆ. ರಾಮದಾಸ್ ಎನ್ನುವವರು ತೇಜಸ್ವಿಯವರ ಆಪ್ತ ಸ್ನೇಹಿತರಾಗಿದ್ದರು. ಇವರು ಕೂಡ ಶಿವಮೊಗ್ಗ ಜಿಲ್ಲೆಯವರು. ತೇಜಸ್ವಿಯವರಿಗೆ ಶ್ರೀ ರಾಮ್ ಎನ್ನುವ ಇನ್ನೊಬ್ಬ ಸ್ನೇಹಿತರಿದ್ದರು. ನಾನು ಹಲವು ಬಾರಿ ರಾಮದಾಸ್ ಮನೆಗೆ ಹೋಗಿದ್ದೆ, ಅಲ್ಲಿ ನನಗೆ ತೇಜಸ್ವಿಯವರು ಪರಿಚಯವಾಗಿ ನಮ್ಮ‌ ನಡುವೆ ಆತ್ಮೀಯತೆ ಬೆಳೆಯಿತು.

    ತೇಜಸ್ವಿಯವರು ಹಲವು ಬಾರಿ ತಮ್ಮ ಫಾರ್ಮ್ ಹೌಸ್ ಗೆ ಬರುವಂತೆ ನನಗೆ ಆಹ್ವಾನ ನೀಡಿದ್ದರು. ಆದರೆ ಒಮ್ಮೆ ಮಾತ್ರ ಹೋಗಲು ಸಾಧ್ಯವಾಯಿತು. ಒಂದು ಇಡೀ ದಿನ ಅವರ ತೋಟದ ಮನೆಯಲ್ಲಿ ಇದ್ದೆ.

    ತೇಜಸ್ವಿಯವರು ಒಬ್ಬ ಸಾಹಿತಿಯಷ್ಟೇ ಅಲ್ಲ, ಮಹಾನ್ ಪರಿಸರ ಪ್ರೇಮಿ ಜೊತೆಗೆ ಉತ್ತಮ ಛಾಯಾಗ್ರಾಹಕರಾಗಿದ್ದರು. ಅವರಿಗೆ ಮೀನು ಹಿಡಿಯುವ ಹವ್ಯಾಸವಿತ್ತು. ಮೀನು ಸಿಕ್ಕಲಿ, ಸಿಗದಿರಲಿ ಗಂಟೆಗಟ್ಟಲೆ ಕೂತಲ್ಲೇ ಕೂತಿರುತ್ತಿದ್ದರು. ಅವರ ಜೊತೆ ಒಂದೆರಡು ಬಾರಿ ನಾನೂ ಮೀನು ಹಿಡಿಯಲು ಹೋಗಿದ್ದೆ.

    ಪ್ರಕೃತಿಯನ್ನು ತೇಜಸ್ವಿಯವರಷ್ಟು ಪ್ರೀತಿಸಿದವರನ್ನು ನಾನು ನೋಡಿಯೇ ಇಲ್ಲ. ನಾನೂ ಒಬ್ಬ ಸಸ್ಯಶಾಸ್ತ್ರದ ವಿದ್ಯಾರ್ಥಿ. ಬಾಟನಿ ಎಂ.ಎಸ್ಸಿ ಸೀಟ್ ಸಿಗದ ಕಾರಣ ಮುಂದೆ ನಾನು ಕಾನೂನು ಪದವಿ ಓದಿ, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ.

    ನನಗೆ ಪ್ರ್ರೊ. ನಂಜುಂಡಸ್ವಾಮಿ ಅವರ ಪರಿಚಯವಾಗದೆ ಇದ್ದಿದ್ದರೆ ಬಹುಶಃ ನಾನು ರಾಜಕಾರಣಕ್ಕೂ ಬರುತ್ತಾ ಇರಲಿಲ್ಲ. ತೇಜಸ್ವಿಯವರು ಕನ್ನಡ ಎಂ.ಎ ಓದಿ ಬರವಣಿಗೆ, ಛಾಯಾಗ್ರಹಣ, ಪರಿಸರದ ಬಗ್ಗೆ ಅರಿಯುವ ಕೆಲಸ ಮಾಡಿದರು. ಅವರ ವಿಭಿನ್ನ ಯೋಚನಾಶೈಲಿಯೇ ಅವರ ಹೆಗ್ಗುರುತು.

    ತೇಜಸ್ವಿಯವರು ಎಂದಿಗೂ ತಾನು ಕುವೆಂಪು ಮಗ ಎಂದು ಹೇಳಿ ಅದರಿಂದ ಲಾಭ ಪಡೆಯುವ ಪ್ರಯತ್ನ ಮಾಡಲೇ ಇಲ್ಲ. ಪ್ರಕೃತಿ, ಪರಿಸರದ ಬಗ್ಗೆ ಹಲವು ಲೇಖನ ಬರೆದಿದ್ದಾರೆ. ಪರಿಸರ ಪ್ರೇಮಿಗಳಿಗೆ ಇಂದಿಗೂ ತೇಜಸ್ವಿಯವರು ಸ್ಪೂರ್ತಿಯಾಗಿದ್ದಾರೆ.

    ರಾಜಕಾರಣದ ಬಗ್ಗೆ ಅವರು ಹೆಚ್ಚು ಚರ್ಚೆ ಮಾಡುತ್ತಿರಲಿಲ್ಲ. ರಾಜಕಾರಣಿಗಳ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ ಆದರೆ ಅವರಿಗೆ ನನ್ನ ಬಗ್ಗೆ ವೈಯಕ್ತಿಕವಾಗಿ ಪ್ರೀತಿ, ಅಭಿಮಾನವಿತ್ತು. ಇಂಥವರ ಸಂಪರ್ಕದಿಂದ ನಾನು ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸಹಾಯವಾಯಿತು.

    ತೇಜಸ್ವಿಯವರಿಂದ ನಾನು ಹಲವು ವಿಚಾರಗಳನ್ನು ಕಲಿತಿದ್ದೇನೆ. ನನ್ನ ಬದುಕು ರೂಪುಗೊಳ್ಳಲು ಅವರ ಒಡನಾಟ ಸಾಕಷ್ಟು ಸಹಕಾರಿಯಾಗಿದೆ. ಹಾಗಾಗಿ ಅವರನ್ನು ಈ ಒಂದು ದಿನ ಮಾತ್ರವಲ್ಲ ನಿತ್ಯವೂ ನೆನೆಯುತ್ತೇನೆ.

    ಪ್ರತೀ ಸೋಮವಾರ ಸಂಜೆ 5 ರಿಂದ 8 ಗಂಟೆ ವರೆಗೆ ತೇಜಸ್ವಿಯವರು, ರಾಮದಾಸ್ ಸೇರಿದಂತೆ ನಾವೆಲ್ಲ ಮೈಸೂರಿನ ಹೊಟೇಲ್ ಒಂದರಲ್ಲಿ ಸೇರುತ್ತಿದ್ದೆವು. ಆಗ ಬರೀ ರಾಜಕೀಯ ವಿಚಾರಗಳಷ್ಟೇ ಅಲ್ಲ ಬದುಕಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು.

    ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಕುರಿಂಜಿ ಎಂಬ ವಿಶಿಷ್ಟ ಪ್ರಭೇಧದ ಹೂವುಗಳ ರಕ್ಷಣೆ ಇಂದು ಅಗತ್ಯವಾಗಿ ಆಗಬೇಕಿದೆ. ಬೆಂಕಿಯ ಜ್ವಾಲೆಗಿಂತ ಮನುಷ್ಯ ಪರಿಸರಕ್ಕೆ ಮಾರಕ. ಮನುಷ್ಯರಿಂದ ಇವುಗಳ ರಕ್ಷಣೆ ಆಗಬೇಕು.

    ಎಲ್ಲರೂ ತೇಜಸ್ವಿಯಾಗಲು ಸಾಧ್ಯವಿಲ್ಲ, ಆದರೆ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ಪರಿಸರ ರಕ್ಷಣೆಗೆ ತೇಜಸ್ವಿಯವರ ಬದುಕು, ಬರಹ, ಜೀವನ ನಮಗೆ ಪ್ರೇರಣೆ.

    ತೇಜಸ್ವಿಯವರ ಜನ್ಮದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಣವಾದ ನಂತರ ಅತಿಥಿಗಳ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂಬ ವಿಚಾರ ನನಗೆ ಗೊತ್ತಾಗಿದ್ದು. ತೇಜಸ್ವಿಯವರನ್ನು ನೆನಪು ಮಾಡಿಕೊಳ್ಳುವ ಇಂಥದ್ದೊಂದು ಸುವರ್ಣಾವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ಬಿ.ಎಲ್ ಶಂಕರ್ ಅವರಿಗೆ ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಧನ್ಯವಾದ

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!