ಗೌರಿ ಗಣೇಶನ ಹಬ್ಬವೆಂದರೆ ಮನೆಯವರೆಲ್ಲ ಸಡಗರದಿಂದ ಸಂಭ್ರಮಿಸುವುದು ಸಾಮಾನ್ಯ. ಹಬ್ಬದ ಹಿಂದಿನ ದಿನ ಸಂಜೆ ಆರತಿ ಮಾಡಿ ಗೌರಿ-ಗಣೇಶ ರನ್ನು ಬರ ಮಾಡಿಕೊಳ್ಳುವುದು ಸಂಪ್ರದಾಯ.ಆಮೇಲೆ ದೇವರ ಮನೆಗೆ ತಂದು ಅಕ್ಕಿ ತುಂಬಿದ ತಟ್ಟೆಯಲ್ಲಿ ಭಕ್ತಿ ಇಂದ ದೇವರನ್ನು ಕೂಡಿಸಿ ಪೂಜೆಯನ್ನು ನಿರಾತಂಕವಾಗಿ ನೆರವೇರಿಸು ಎಂದು ಬೇಡುವುದು. ಮಂಟಪಕ್ಕೆ ಹೂವಿನ ಅಲಂಕಾರ ಎಲ್ಇಡಿ ದೀಪಗಳ ರಂಗುರಂಗಿನ ಬಣ್ಣದ ಸರಮಾಲೆ.ಆಕಡೆ ಈ ಕಡೆ ಬಾಳೆ ಕಂಬಗಳನ್ನು ಕಟ್ಟಿ ಅದಕ್ಕೆ ಅಲ್ಲಲ್ಲಿ ಚಿಕ್ಕ ಶೇವಂತಿ ಹೂಗಳನ್ನು ಸಿಕ್ಕಿಸಿ ಹಿಂದೆ ಸರಿದು ಸರಿಯಾಗಿ ಕಾಣುತ್ತಿದೆ ಇಲ್ಲವೋ ಎಂದು ನೋಡುವುದು, ಮಕ್ಕಳು ಸರಿಯಾಗಿದೆ ಎಂದರೆ ಮುಂದಿನ ಕೆಲಸ.
ಗಣಪನಿಗೆ ಮಲ್ಲಿಗೆಯ ಹಾರ ಕನಕಾಂಬರ ಹಾರ ಹಾಕಿ ಚಿಣಿ ಮಣಿ ಬಣ್ಣದ ವಸ್ತ್ರಗಳು ಒಂದೇ ಎರಡೇ ಸರ್ವಾಲಂಕಾರ ನಡೆಯುತ್ತದೆ. ಮನೆತುಂಬಾ ಮಲ್ಲಿಗೆ ಸುಗಂಧರಾಜ ಹೂಗಳ ಸುವಾಸನೆ. ಒಬ್ಬಟ್ಟು ಹಿಂದಿನ ದಿನವೇ ಮಾಡಿ ಯಾರೂ ಮುಟ್ಟದಂತೆ ಜೋಪಾನವಾಗಿ ಮಾಡುವುದು,ಹಬ್ಬ-ಹರಿದಿನಗಳಲ್ಲಿ ಹುಮ್ಮಸ್ಸು ಶಕ್ತಿ ಆವಾಹನೆಯಾಗಿ ಎಲ್ಲ ಕೆಲಸಗಳು ಸುಗಮವಾಗಿ ನಡೆದುಹೋಗುತ್ತೆ. ಮನೆಯವರೆಲ್ಲರೂ ಒಟ್ಟಿಗೆ ಕೂತು ನಗುನಗುತ ಮಾಡುತ್ತಿದ್ದರೆ ಬಹಳ ಸಂತೋಷವಾಗುತ್ತದೆ.
ಇಷ್ಟೆಲ್ಲಾ ಸಂಭ್ರಮದಲ್ಲಿ ಒಂದು ವಿಷಯ ನನ್ನ ಮನಸ್ಸಿನಲ್ಲಿ ಪ್ರತಿ ಗಣಪತಿಯ ಹಬ್ಬದಂದು ನೋವುಂಟಾಗುತ್ತದೆ.ಕಾರಣ ಕೇಳಿದರೆ ನೀವು ನಗುತ್ತೀರೊಏನು!
ಒಂದು ಚಿಕ್ಕ ಬೆಕ್ಕಿನ ಮರಿ ಮಿಯಾವ್ ಮಿಯಾವ್ ಎಂದು ಆರ್ತನಾದ ಮಾಡುತ್ತಿತ್ತು. ಶ್ರಾವಣದ ಮಳೆ ಬೇರೆ ನೋಡಲು ಬಹಳ ಮುದ್ದಾಗಿದೆ. ಬಿಳಿ ಮೈಯಲ್ಲಿ ಅಲ್ಲೊಂದು-ಇಲ್ಲೊಂದು ಎಳೆದಂತೆ ಬ್ರೌನ್ ಕಲರ್ ಸ್ಟ್ರಿಪ್ಸ್ ಇದೆ.ಪಿಂಕ್ ಬಣ್ಣದ ತುಟಿ ಬೇರೆ ಮುದ್ದಾದ ಮೀಸೆಗಳು.ಒಳಗೆ ತಂದು ಬೆಚ್ಚನೆಯ ಶಾಲಿನಲ್ಲಿ ಸುತ್ತಿ ಹಾಲು ಕುಡಿಸಿ ಮಲಗು ಮುದ್ದು ಚಿನ್ನು ಎಂದು ಹೇಳಿ ಉಯ್ಯಾಲೆಯಲ್ಲಿ ಕೂಡಿಸಿ ಮಲಗಿಸಿದೆವು.ನನ್ನ ಮಕ್ಕಳಿಗೆ ಖುಷಿಯೋ ಖುಷಿ. ಆದರೆ ರಾತ್ರಿಪೂರ್ತಿ ಮಿಯಾವ್ ಮಿಯಾವ್ ಎಂದು ಅರಚುತ್ತಲೇ ಇತ್ತು.ಯಾರಿಗೂ ರಾತ್ರಿ ನಿದ್ರೆ ಇಲ್ಲ!
ಬೆಳಗಾದೊಡನೆ ಆಪ್ಷನ್ ಬಿ ಪ್ಲಾನನ್ನು ಮಕ್ಕಳು ಹೇಳಿದರು.ಇದರ ಅಮ್ಮನನ್ನು ಹುಡುಕಿ ಹೇಗಾದರೂ ಮಾಡಿ ಅಮ್ಮನಿಗೇ ಕೊಟ್ಟುಬಿಡೋಣ ಎಂದರು !!
ಸರಿ ಅಮ್ಮನ ಹುಡುಕಾಟ ಶುರುವಾಯಿತು. ಸ್ವಲ್ಪ ಹೊತ್ತು ಮನೆ ಮುಂಭಾಗದಲ್ಲಿ ಹಿಂಭಾಗದಲ್ಲಿ ತಾರಸಿಯ ಮೇಲಿಟ್ಟು ಸ್ವಲ್ಪ ಕಾದು ನೋಡಿದೆವು.ಕಂಡ ಕಂಡ ಬಿಳಿ ಬೆಕ್ಕಿನ ಹಿಂದೆ ಮರಿಯನ್ನು ತೋರಿಸಿದೆವು.ಆದರೆ ಯಾವ ಅಮ್ಮನು ಬರಲಿಲ್ಲ!!
ದಿನ ಕಳೆಯುತ್ತ ಬೆಕ್ಕಿನ ಹೆಸರು ಚಿನ್ನು ವಾಗಿ ಮನೆಮಂದಿಗೂ ಪ್ರಿಯವಾಯಿತು. ಎಲ್ಲರಿಗೂ ಚಿನ್ನು ಭಾಷೆ ಅರ್ಥವಾಗುತ್ತಾ ಬಂತು. ಕಾಲುಗಳ ಬಳಿ ಸುತ್ತುತ್ತ ಮಿಯಾವ್ ಅಂದರೆ ಸಾಕು ಎಲ್ಲರೂ ಎತ್ತಿಕೊಂಡು ಮುದ್ದಾಡುತ್ತಿದ್ದರು.
ಸ್ವಲ್ಪ ದೊಡ್ಡದಾದ ಮೇಲೆ,ಸ್ವಲ್ಪಹೊತ್ತು ಹೊರಗಡೆ ಸ್ವತಂತ್ರವಾಗಿ ಓಡಾಡಿಕೊಂಡು ಬರುತ್ತಿತ್ತು.ಬೇಕಾದರೆ ಹಾಲು ಕುಡಿಯುತ್ತಿತ್ತು. ಇಲ್ಲದಿದ್ದರೆ ಜಂಭ ದಿಂದ ಮುಖವನ್ನ ಕಾಲುಗಳ ಮೇಲೆ ಇಟ್ಟು ಆಗಾಗ ಸ್ವಲ್ಪ ಕಣ್ಣುತೆಗೆಯವುದು ಸುತ್ತ ಇರುವವರನ್ನು ನೋಡುವುದು,
ಕಿವಿಯನ್ನು ಆಂಟನ ತರಹ ನೇರಮಾಡಿ ನಮ್ಮ ಮಾತುಗಳನ್ನು ಆಲಿಸುತಿತ್ತು.ನಮ್ಮ ಮನೆಯ ಸಮಾಚಾರ ಗಳನ್ನು ಇದೇನಾದರು ಬ್ರಾಡ್ ಕಾಸ್ಟ್ ಮಾಡುತ್ತಿದೆಯೋಎಂದು ಅನುಮಾನ ಬರುತ್ತಿತ್ತು! ಮುಖದಲ್ಲಿ ಏನೋ ಒಂದು ತರಹ ಜಂಭ.ಯೌವನದ ಮದ ಬೇರೆ. ನಾನು ಈಗ ಮಗು ಅಲ್ಲ ಎಂದು ತೋರಿಸುತ್ತಿತ್ತು. ನಮ್ಮಎಲ್ಲರಿಗೂ ಚಿನ್ನುವಿನ ಭಾಷೆ ಅರ್ಥವಾಗುತ್ತಿತ್ತು.
ಗಣೇಶನ ನೇವೇದ್ಯ ಎಂದು ಮಡಿಯಲ್ಲಿ ಕಡುಬು ಮಾಡುತ್ತಿದ್ದೆ.ನಮ್ಮ ಚಿನ್ನು ಮೆಲ್ಲಗೆ ಬಂದು ಇಲಿಯನ್ನು ಕಚ್ಚಿಕೊಂಡು ತನ್ನ ರಕ್ತಸಿಕ್ತ ಮುಖವನ್ನು ತೋರಿಸಿತು.ನನಗೆ ಭಯಂಕರ ಕೋಪ ಬಂತು.ಗೆಟಾವ್ಟ ಟ್ ಎಂದು ಜೋರಾಗಿ ಬೈದು ಬಿಟ್ಟೆ.ಚಿನ್ನು ಇಲಿಯನ್ನು ಅಲ್ಲೇ ಬಿಟ್ಟು ಕೋಪದಿಂದ ಹೊರಟುಹೋಯಿತು.ಆಮೇಲೆ ಮತ್ತೆ ಮನೆಗೆ ಬರಲೇಇಲ್ಲ.ಬಿಳಿ ಬೆಕ್ಕುಗಳನ್ನು ಬಹಳ ದಿನ ಹುಡುಕುತ್ತಲೇ ಇದ್ದೆ.ನನ್ನ ಚಿನ್ನು ಸಿಗಬಹುದೆಂದು ಈಗಲೂ ಹುಡುಕುತ್ತಿದ್ದೇನೆ.
ಎಷ್ಟು ವರ್ಷಗಳು ಕಳೆದೆವು.ಆದರೆ ನಾನು ಚಿನ್ನವನ್ನು ಅಷ್ಟೊಂದು ಜೋರಾಗಿ ಬೈ ಬಾರದಿತ್ತು.
ಪ್ರತಿವರ್ಷ ನನ್ನ ಪಾಪ ಪ್ರಜ್ಞೆ ಕಾಡುತ್ತಲೇ ಇದೆ.
ಬೆಕ್ಕಿನ ಕಥೆ ಚೆನ್ನಾಗಿದೆ ಧನ್ಯವಾದಗಳು