ಬಳಕೂರು ವಿ ಎಸ್ ನಾಯಕ
ಭಾದ್ರಪದ ಮಾಸ ಬಂತೆಂದರೆ ನಮಗೆ ನೆನಪಾಗುವುದು ಗಣಪತಿ ಹಬ್ಬ. ಪ್ರಥಮ ಪೂಜಿತ ಲಂಬೋದರ ಗಜಾನನ ಮೂಶಿಕವಾಹನ ಎಂದು ಕರೆಯಲ್ಪಡುವ ಗಣಪನಿಗೆ ಎಲ್ಲರೂ ಕೂಡ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಸಾಮಾನ್ಯ. ಆದರೆ ಗೌರಿ ಗಣೇಶ ಹಬ್ಬ ಹತ್ತಿರ ಬರುತ್ತಿದ್ದಂತೆ ಗಣಪತಿಗೆ ರೂಪವನ್ನು ನೀಡಲು ಅದರಲ್ಲಿಯೂ ಕಲಾವಿದರು ತಮ್ಮ ಕಲಾ ನೈಪುಣ್ಯತೆ ಇಂದ ಒಂದಲ್ಲ ಒಂದು ರೀತಿಯ ವಿಭಿನ್ನ ಪ್ರಯತ್ನವನ್ನು ಮಾಡುತ್ತಿರುತ್ತಾರೆ.
ನೀವು ಸಾಮಾನ್ಯವಾಗಿ ಮಣ್ಣಿನ ಗಣಪ ಕಲ್ಲಿನಿಂದ ಮಾಡಿದ ಗಣಪ. ಮರದ ಗಣಪ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಬಿನ್ನ ಬಿನ್ನ ಗಣಪನ ವಿಗ್ರಹವನ್ನು ನೋಡಿದ್ದೇವೆ. ಆದರೆ ಇಲ್ಲಿ ಅಚ್ಚರಿಪಡುವಂತೆ ಇವೆಲ್ಲಕ್ಕಿಂತ ವಿಭಿನ್ನವಾದ ಗಣಪನನ್ನು ನಾವು ಕಾಣಬಹುದು. ಹಾಗಾದ್ರೆ ತಾವೆಲ್ಲರೂ ಯಾವರೀತಿಯ ಗಣಪ ಎಂಬ ಆಲೋಚನೆ ತಮ್ಮಲ್ಲಿ ಮೂಡಬಹುದು. ಅಚ್ಚರಿ ಆಗಬಹುದು. ಅದೇನೆಂದರೆ ಇಲ್ಲಿ ನಿರ್ಮಾಣವಾಗುವ ಗಣಪ ಅಕ್ಷರದಲ್ಲಿ. ನೀವು ಯಾವುದೇ ಒಂದು ಪದ ಅಥವಾ ಅಕ್ಷರ ಹೆಸರು ನೀಡಿದರೆ ಸಾಕು ನಮ್ಮ ಕಣ್ಣ ಮುಂದೆ ಒಂದು ನಿಮಿಷದಲ್ಲಿ ಗಣಪತಿ ಸಿದ್ಧವಾಗುತ್ತದೆ. ಈ ರೀತಿಯಾಗಿ ಅಕ್ಷರಗಳ ಮೂಲಕ ಗಣಪನನ್ನು ರಚಿಸಿ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದವರು ಬೆಂಗಳೂರಿನ ಆರ್ ಟಿ ನಗರದ ನಿವಾಸಿ ವೆಂಕಟೇಶ ಎಲ್ಲೂರ್.
ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿರುವ ವೆಂಕಟೇಶ್ ಇವರ ಕೈಯಲ್ಲಿ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ವಿವಿಧ ಭಂಗಿಯ ಅಕ್ಷರ ಗಣಪನನ್ನು ರಚಿಸಿ ಎಲ್ಲರ ಮನ ಸೆಳೆದಿದ್ದಾರೆ. ಇವರು ಒಂದು ಕ್ಷಣ ಚಿತ್ರ ಬಿಡಿಸಲು ಆರಂಭಿಸಿದರೆ ಸಾಕು ಬೇರೆ ಬೇರೆ ರೀತಿಯ ಗಣಪನ ಚಿತ್ರಗಳು ಒಂದರ ಹಿಂದೊಂದರಂತೆ ಸೃಷ್ಟಿಯಾಗುತ್ತವೆ. ಸಾಮಾನ್ಯವಾಗಿ ಇವರು ತಾಮ್ರ ಕಂಚು ಸ್ಟೀಲ್ ಬಂಗಾರ ಕಲ್ಲು ಇವುಗಳಿಂದ ಚಿತ್ರಿಸಿರುವ ಅಕ್ಷರ ಗಣಪ ಒಂದಕ್ಕಿಂತ ಒಂದು ಆಕರ್ಷಣೀಯವಾಗಿವೆ.
ಚಿಕ್ಕವಯಸ್ಸಿನಲ್ಲಿ ಕಲಾಸಕ್ತಿಯನ್ನು ಬೆಳೆಸಿಕೊಂಡಿರುವ ವೆಂಕಟೇಶ್ ನಂತರ 2004 ರಿಂದ ಅಕ್ಷರ ಗಣಪನನ್ನು ಮಾಡಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ನಾಡಿನ ಪ್ರಸಿದ್ಧ ಆಟಗಾರರು. ರಾಜಕಾರಣಿಗಳು ಸಂಗೀತಕಾರರು ಪಂಡಿತರು ಅದರ ಜೊತೆಗೆ ಎಲ್ಲಾ ಕ್ಷೇತ್ರದ ಗಣ್ಯಾತಿಗಣ್ಯರ ಹೆಸರುಗಳಲ್ಲಿ ಹಲವಾರು ಅಕ್ಷರ ಗಣಪನನ್ನು ರಚಿಸಿ ಅವರವರ ಅಭಿಮಾನಿಗಳಿಗೆ ನೀಡಿರುವುದು ವಿಶೇಷ. ಇಂತಹ ಉತ್ತಮ ವಿಶೇಷ ಕಲಾವಿದರ ಕಲಾ ಪ್ರಯತ್ನಕ್ಕೆ ನಮ್ಮದೊಂದು ನಮನ.
ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.