19.5 C
Karnataka
Thursday, November 21, 2024

    ಗಣೇಶ ಚತುರ್ಥಿ: ನಿಮಗಿದು ಗೊತ್ತಿರಲಿ

    Must read

    ಎಂ.ವಿ. ಶಂಕರಾನಂದ

    ಗಣೇಶ ಚತುರ್ಥಿಯನ್ನು ಕುಟುಂಬದಲ್ಲಿ ಯಾರು ಆಚರಿಸಬೇಕು, ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ಗಣೇಶ ಚತುರ್ಥಿಯಂದು ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಂಗವಾದರೆ ಅದರ ಪರಿಹಾರಗಳೇನು ಈ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

    ಕುಟುಂಬದಲ್ಲಿ ಯಾರು ಆಚರಿಸಬೇಕು?

    ಗಣೇಶ ಚತುರ್ಥಿಯಂದು ಆಚರಿಸಲಾಗುವ ವ್ರತವನ್ನು ‘ಸಿದ್ಧಿವಿನಾಯಕ ವ್ರತ’ ಎನ್ನುತ್ತಾರೆ. ವಾಸ್ತವದಲ್ಲಿ ಇದನ್ನು ಎಲ್ಲ ಕುಟುಂಬಗಳೂ ಆಚರಿಸಬೇಕು. ಅಣ್ಣ ತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿ (ಒಲೆ) ಒಟ್ಟಿಗೆ ಇದ್ದರೆ ಎಲ್ಲರೂ ಸೇರಿ ಒಂದೇ ಮೂರ್ತಿಯ ಪೂಜೆಯನ್ನು ಮಾಡಬೇಕು; ಆದರೆ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿಯು ಕಾರಣಾಂತರದಿಂದ ವಿಭಕ್ತವಾಗಿದ್ದರೆ (ಬೇರೆ ಬೇರೆ) ಪ್ರತಿಯೊಬ್ಬರೂ ಅವರವರ ಮನೆಗಳಲ್ಲಿ ಸ್ವತಂತ್ರವಾಗಿ ಗಣೇಶವ್ರತವನ್ನು ಆಚರಿಸಬೇಕು.

    ಗಣೇಶಚತುರ್ಥಿಯ ಮಹತ್ವವೇನು?
    ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ 120 ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಈ ಸಮಯದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ಕಾಲಾವಧಿಯಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.
    (ಈ ಲಹರಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ‘ಹಬ್ಬ,ಧಾರ್ಮಿಕ ಉತ್ಸವ ಮತ್ತು ವ್ರತಗಳು’ ಈ ಗ್ರಂಥದಲ್ಲಿ ಕೊಡಲಾಗಿದೆ.)

    ಗಣೇಶ ಚತುರ್ಥಿಯಂದು ನೂತನ ಶ್ರೀ ಗಣೇಶ ಮೂರ್ತಿಯನ್ನು ತರುವ ಹಿಂದಿನ ಉದ್ದೇಶವೇನು?
    ಮನೆಯಲ್ಲಿ ಪೂಜೆಗಾಗಿ ಗಣಪತಿಯನ್ನು ಇಟ್ಟಿರುವಾಗಲೂ ನೂತನ ಮೂರ್ತಿಯನ್ನು ತರುವ ಉದ್ದೇಶವು ಮುಂದಿನಂತಿದೆ. ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ನಿತ್ಯದ ಪೂಜೆಯಲ್ಲಿರುವ ಮೂರ್ತಿಯಲ್ಲಿ ಅವುಗಳ ಆವಾಹನೆ ಮಾಡಿದರೆ ಅದರಲ್ಲಿ ಬಹಳಷ್ಟು ಶಕ್ತಿ ಬರಬಹುದು. ಇಂತಹ ಹೆಚ್ಚು ಶಕ್ತಿ ಇರುವ ಮೂರ್ತಿಯ ಎಲ್ಲ ಬಗೆಯ ಪೂಜೆ-ಅರ್ಚನೆಗಳನ್ನು ವರ್ಷಪೂರ್ತಿ ಸರಿಯಾಗಿ ಮಾಡುವುದು ಕಠಿಣವಾಗಿರುತ್ತದೆ; ಏಕೆಂದರೆ ಅದಕ್ಕೆ ಕರ್ಮಕಾಂಡದ ಬಹಳಷ್ಟು ಬಂಧನಗಳನ್ನು ಪಾಲಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಗಣೇಶ ಲಹರಿಗಳನ್ನು ಆವಾಹನೆ ಮಾಡಲು ನೂತನ ಮೂರ್ತಿಯನ್ನು ಉಪಯೋಗಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆ. ಗಣೇಶ ಲಹರಿಗಳಲ್ಲಿನ ಸತ್ತ್ವ, ರಜ ಮತ್ತು ತಮದ ಪ್ರಮಾಣವು ೫:೫:೫ ಹೀಗಿದ್ದರೆ ಸರ್ವಸಾಧಾರಣ ವ್ಯಕ್ತಿಯಲ್ಲಿ ಅದರ ಪ್ರಮಾಣವು ೧:೩:೫ ಹೀಗೆ ಇರುತ್ತದೆ; ಆದ್ದರಿಂದ ಸರ್ವಸಾಧಾರಣ ವ್ಯಕ್ತಿಯು ಗಣೇಶ ಲಹರಿಗಳನ್ನು ಹೆಚ್ಚು ಸಮಯದ ವರೆಗೆ ಗ್ರಹಣ ಮಾಡಲಾರನು.

    (ಗಣಪತಿಯ ಮೂರ್ತಿಯನ್ನು ಅಧ್ಯಾತ್ಮಶಾಸ್ತ್ರಕ್ಕನುಸಾರವಾಗಿ ತಯಾರಿಸಿದರೆ ಅದರಲ್ಲಿ ಗಣೇಶತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲ್ಪಡುತ್ತದೆ. ಗಣೇಶ ಚತುರ್ಥಿಯಂದು ಪೂಜಿಸಬೇಕಾದ ಗಣಪತಿಯ ಮೂರ್ತಿಯನ್ನು ಅಧ್ಯಾತ್ಮಶಾಸ್ತ್ರದಂತೆ ಹೇಗೆ ತಯಾರಿಸಬೇಕು ಎಂಬುದರ ಮಾಹಿತಿಯನ್ನು ಇಲ್ಲಿ ಓದಿ.)

    ಶಾಸ್ತ್ರೋಕ್ತ ವಿಧಿ ಮತ್ತು ರೂಢಿ ಇವುಗಳ ಅವಧಿ

    ‘ಭಾದ್ರಪದ ಶುಕ್ಲ ಚತುರ್ಥಿಯ ದಿನ ಮಣ್ಣಿನ ಗಣಪತಿಯನ್ನು ತಯಾರಿಸಿ, ಅದನ್ನು ಎಡಗೈ ಮೇಲಿಟ್ಟು ಅಲ್ಲಿಯೇ ಸಿದ್ಧಿವಿನಾಯಕ ಹೆಸರಿನಿಂದ ಪ್ರಾಣಪ್ರತಿಷ್ಠೆ ಮತ್ತು ಪೂಜೆಯನ್ನು ಮಾಡಿ ಕೂಡಲೇ ವಿಸರ್ಜನೆ ಮಾಡಬೇಕು ಎಂಬ ಶಾಸ್ತ್ರವಿದೆ. ಆದರೆ ಮಾನವರು ಉತ್ಸವಪ್ರಿಯರಾಗಿರುವುದರಿಂದ ಇಷ್ಟರಿಂದಲೇ ಅವರಿಗೆ ಸಮಾಧಾನವಾಗಲಿಲ್ಲ. ಆದುದರಿಂದ ಒಂದೂವರೆ, ಐದು, ಏಳು ಅಥವಾ ಹತ್ತು ದಿನ ಗಣಪತಿಯ ಮೂರ್ತಿಯನ್ನು ಇಟ್ಟು ಉತ್ಸವ ಮಾಡತೊಡಗಿದರು. ಕೆಲವರು ಗಣಪತಿಯ ವಿಸರ್ಜನೆಯನ್ನು ಗೌರಿಯ ಜೊತೆಗೆ ಮಾಡುತ್ತಾರೆ. ಯಾರಾದರೊಬ್ಬರ ಕುಲದಲ್ಲಿ ಗಣಪತಿಯನ್ನು ಐದು ದಿನ ಇಡುವ ಪದ್ಧತಿ ಇದ್ದು ಅವರು ಅದನ್ನು ಒಂದೂವರೆ ಅಥವಾ ಏಳು ದಿನ ಇಡಬೇಕಾಗಿದ್ದರೆ ಅವರು ಹಾಗೆ ಮಾಡಬಹುದು. ಇದಕ್ಕೆ ಯಾವುದೇ ಅಧಿಕಾರಯುತ ವ್ಯಕ್ತಿಯನ್ನು ಕೇಳುವ ಆವಶ್ಯಕತೆಯಿಲ್ಲ. ತಮ್ಮ ತಮ್ಮ ರೂಢಿಗನುಸಾರ ಮೊದಲನೆಯ, ಎರಡನೆಯ, ಮೂರನೆಯ, ಆರನೆಯ, ಏಳನೆಯ ಅಥವಾ ಹತ್ತನೆಯ ದಿನ ಗಣೇಶಮೂರ್ತಿಯ ವಿಸರ್ಜನೆಯನ್ನು ಮಾಡಬೇಕು.

    ಮೂರ್ತಿಯು ಭಗ್ನವಾದರೆ ಏನು ಮಾಡಬೇಕು?
    ಮೂರ್ತಿಯ ಪ್ರಾಣಪ್ರತಿಷ್ಠೆಯನ್ನು ಮಾಡುವುದಕ್ಕಿಂತ ಮೊದಲು ಯಾವುದಾದರೊಂದು ಅವಯವಕ್ಕೆ ಏಟಾದರೆ ಅಥವಾ ಭಿನ್ನವಾದರೆ ಚಿಂತಿಸುವ ಕಾರಣವಿಲ್ಲ, ಅದರ ಬದಲು ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ವಿಸರ್ಜನೆಗಾಗಿ ಅಕ್ಷತೆ ಹಾಕಿದ ನಂತರ (ದೈವತ್ತ್ವವು ಹೋದ ನಂತರ) ಅವಯವಗಳಿಗೆ ಏಟಾದರೆ ಅಥವಾ ಭಿನ್ನವಾದರೆ ಆ ಮೂರ್ತಿಯನ್ನು ನಿತ್ಯದಂತೆ ವಿಸರ್ಜನೆ ಮಾಡಬೇಕು. ಪ್ರಾಣ ಪ್ರತಿಷ್ಠೆಯಾದ ನಂತರ ಅವಯವಕ್ಕೆ ಏಟಾದರೆ ಅಥವಾ ಮುರಿದರೆ ಆ ಮೂರ್ತಿಗೆ ಅಕ್ಷತೆಯನ್ನು ಅರ್ಪಿಸಿ ವಿಸರ್ಜಿಸಬೇಕು. ಈ ಘಟನೆಯು ಗಣೇಶ ಚತುರ್ಥಿಯ ದಿನವೇ ನಡೆದರೆ ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ಎರಡನೆಯ ಅಥವಾ ಮೂರನೆಯ ದಿನ ನಡೆದರೆ ಹೊಸ ಮೂರ್ತಿಯನ್ನು ತಂದು ಪೂಜಿಸಬೇಕಾಗಿಲ್ಲ. ಮೂರ್ತಿಯು ಸಂಪೂರ್ಣ ಭಗ್ನವಾದರೆ ಕುಲಪುರೋಹಿತರ ಸಲಹೆಯಂತೆ ಯಥಾವಕಾಶ ‘ಅದ್ಭುತ ದರ್ಶನ ಶಾಂತಿ’ಯನ್ನು ಮಾಡಿಸಬೇಕು. ಗಣೇಶ ಚತುರ್ಥಿಯಂದು ದೀಪಪತನ (ದೀಪ ಆರಿ ಹೋಗುವುದು), ಅರೆಯುವ ಕಲ್ಲು, ಬೀಸುವ ಕಲ್ಲು ಅಥವಾ ಸಾಣೆಕಲ್ಲು ಒಡೆದು ಹೋಗುವುದು, ಕೆಸುವಿನ ಎಲೆಗೆ ಹೂವು ಬರುವುದು, ಮೂರ್ತಿಭಗ್ನ ಇತ್ಯಾದಿ ಘಟನೆಗಳಾದರೆ ಆ ಕುಟುಂಬದಲ್ಲಿ ದ್ರವ್ಯ ಹಾನಿ, ಗಂಭೀರ ರೋಗ ಅಥವಾ ಅಪಮೃತ್ಯು ಆಗುವ ಸಾಧ್ಯತೆಯಿರುತ್ತದೆ; ಅದಕ್ಕಾಗಿ ಮೇಲೆ ಕೊಟ್ಟಿರುವ ಪರಿಹಾರಗಳನ್ನು ಶ್ರದ್ಧೆಯಿಂದ ಮಾಡಬೇಕು.

    ಚಂದ್ರ, ಮನಸ್ಸು ಮತ್ತು ಗಣೇಶ ಚತುರ್ಥಿ ಇವುಗಳ ಸಂಬಂಧ
    1. ಸೌರಮಂಡಲದಲ್ಲಿನ ಎಲ್ಲ ಗ್ರಹಗಳಲ್ಲಿ ಚಂದ್ರಗ್ರಹವು ಅತ್ಯಂತ ಚಂಚಲವಾಗಿದೆ. ಆದುದರಿಂದ ಚಂಚಲ ಸ್ವಭಾವವಿರುವವರ ಮನಸ್ಸಿನ ಮೇಲೆ ಚಂದ್ರನ ಸ್ಪಂದನಗಳು ಹೆಚ್ಚು ಕಾರ್ಯ ಮಾಡುತ್ತವೆ.


    3. ಪೃಥ್ವಿಯಿಂದ ಚಂದ್ರಗ್ರಹದ ದರ್ಶನವನ್ನು ನಾವು ಸಹಜವಾಗಿ ಪಡೆದುಕೊಳ್ಳಬಹುದು ಮತ್ತು ಅದನ್ನು ನಾವು ಮನಸ್ಸಿನಲ್ಲಿ ಅತ್ಯಂತ ಸಹಜವಾಗಿ ಯಾವಾಗ ಬೇಕಾದರೂ ನೋಡಬಹುದು.


    3. ಪರಿಣಾಮ: ಗಣೇಶ ಚತುರ್ಥಿಯ ದಿನ ಬ್ರಹ್ಮಾಂಡದಲ್ಲಿ ನಿರ್ಮಾಣವಾಗುವ ರಜೋಗುಣದ ಸ್ಪಂದನಗಳು ಚಂದ್ರನ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗಿ ಚಂಚಲ ಮನಸ್ಸಿರುವ ಮನುಷ್ಯರ ಕಡೆಗೆ ಆಕರ್ಷಿಸಲ್ಪಡುತ್ತವೆ.

    ಗಣೇಶ ಚತುರ್ಥಿಯ ವೈಶಿಷ್ಟ್ಯಗಳು
    ಈ ದಿನ ರಜೋಗುಣದಿಂದಾಗಿ ಚಂದ್ರನ ಸುತ್ತಲಿರುವ ಪ್ರಭಾವಲಯವು ಬಹಳ ತೇಜಸ್ವಿಯಾಗಿ ಕಾಣಿಸುತ್ತದೆ ಮತ್ತು ಅದು ಚಂಚಲ ಮನಸ್ಸನ್ನು ಸಹಜವಾಗಿ ಆಕರ್ಷಿಸಿಕೊಳ್ಳುತ್ತದೆ. ಈ ದಿನ ಚಂದ್ರದರ್ಶನವನ್ನು ಪಡೆದುಕೊಂಡರೆ, ಚಂದ್ರನು ತನ್ನ ಪ್ರಚಂಡ ರಜೋಗುಣದೊಂದಿಗೆ ಮನಸ್ಸಿನಲ್ಲಿ ಬೇರೂರುತ್ತಾನೆ. ಮನಸ್ಸಿನ ಮೇಲೆ ಮೂಡುವ ಅವನ ಚಿತ್ರವೂ ಅಷ್ಟೇ ಚಂಚಲವಾಗಿರುತ್ತದೆ. ಆದುದರಿಂದ ಅದು ಯಾವ ಕಾರಣಗಳು ಇಲ್ಲದಿರುವಾಗಲೂ ಮತ್ತು ಯಾವುದೇ ಸಮಯದಲ್ಲಿ ಮನಸ್ಸಿನ ಮೇಲೆ ಮೂಡುತ್ತದೆ. ಚಂದ್ರನನ್ನು ನೋಡಿದ ಸಮಯದಲ್ಲಿನ ದೃಶ್ಯವನ್ನು ನೆನಪಿಸಿಕೊಂಡರೂ ಮನಸ್ಸು ಚಂಚಲವಾಗುತ್ತದೆ.

    ಗಣೇಶ ಚತುರ್ಥಿಯ ದಿನ ಚಂದ್ರನ ದರ್ಶನವನ್ನು ಪಡೆದುಕೊಳ್ಳದಿರುವುದು

    ಮನಸ್ಸಿನ ಚಂಚಲತೆಯು ಸುಮಾರು ಒಂದು ವರ್ಷದವರೆಗೆ ಉಳಿಯುತ್ತದೆ. ಮನಸ್ಸಿನ ಚಂಚಲತೆಯ ಪ್ರಚಂಡ ಪ್ರಭಾವದಿಂದಾಗಿ ಯಾವುದಾದರೊಂದು ಘಟನೆಯು ಘಟಿಸುವ ಮೊದಲೇ ಅದು ಘಟಿಸಿ ಹೋಗಿದೆ ಎಂಬ ತಪ್ಪುತಿಳುವಳಿಕೆ ಅಥವಾ ಗಾಳಿ ಸುದ್ದಿ ಹರಡುವ ಸಾಧ್ಯತೆ ಇರುತ್ತದೆ. ಇದನ್ನೇ ಯಾವುದಾದರೊಂದು ಅಡಚಣೆಯನ್ನು ಮೈಮೇಲೆ ಎಳೆದುಕೊಳ್ಳುವುದು ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡುವುದು ಅಶುಭವೆಂದು ತಿಳಿದುಕೊಳ್ಳುತ್ತಾರೆ.

    ಶ್ರೀ ಗಣೇಶ ಚತುರ್ಥಿಯಂದು ಬಿಡಿಸಬೇಕಾದ ಗಣೇಶತತ್ತ್ವವನ್ನು ಆಕರ್ಷಿಸುವ ರಂಗೋಲಿಗಳು

    ಗಣೇಶೋತ್ಸವದ ಸಮಯದಲ್ಲಿ ಮಾಡಬೇಕಾದ ಪ್ರಾರ್ಥನೆ
    ಹೇ ಶ್ರೀ ಗಣೇಶಾ, ಗಣೇಶೋತ್ಸವದ ಸಮಯದಲ್ಲಿ ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದ ಲಾಭವು ನನಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವಂತಾಗಲಿ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!