19.9 C
Karnataka
Sunday, September 22, 2024

    ವಿಧಾನ ಮಂಡಲ ಅಧಿವೇಶನ;ಜಾತಿ ಗಣತಿ ವರದಿ, ಶಿಕ್ಷಣ ನೀತಿ ಬಗ್ಗೆ ಚಕಮಕಿ ನಿರೀಕ್ಷೆ

    Must read

    BENGALURU SEPT 11

    ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರವ ಮೊದಲ ವಿಧಾನ ಮಂಡಲ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಸರಕಾರವನ್ನು ವಿವಿಧ ವಿಷಯಗಳ ಸುಳಿಗೆ ಸಿಕ್ಕಿಸಲು ಪ್ರತಿಪಕ್ಷಗಳು ರೆಡಿಯಾಗಿವೆ.

    ಮಖ್ಯವಾಗಿ ಕಾಂಗ್ರೆಸ್ ಪಕ್ಷವು ಕಲಾಪದಲ್ಲಿ ಸರಕಾರದ ಚಳಿ ಬಿಡಿಸಲು ನಿರ್ಧರಿಸಿದೆ. ಅಧಿವೇಶನ ಸೆಪ್ಟೆಂಬರ್ 24ರವರೆಗೆ ನಡೆಯಲಿದ್ದು, ಹತ್ತು ಹಲವುಗಳ ಬಗ್ಗೆ ಬಿಸಿಬಿಸಿಯಾಗಿ ಚರ್ಚೆ ನಡೆಯುವುದು ಖಚಿತ.

    ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಬೆಲೆ ಏರಿಕೆ, ಆರ್ಥಿಕತೆಯ ಕುಸಿತ, ಸಚಿವರ ಮೇಲಿನ ಭ್ರಷ್ಟಾಚಾರ ಪ್ರಕರಣ, ಕೋವಿಡ್, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟುಕೊಡಂಡು ಸರಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಈಗಾಗಲೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಿರುವ ಕೈಪಾಳೆಯ ಸದನದಲ್ಲಿ ಪ್ರಸ್ತಾಪ ಮಾಡಬೇಕಿರುವ ವಿಷಯಗಳನ್ನು ಪಟ್ಟಿ ಮಾಡಿಕೊಂಡಿದೆ.

    ಇನ್ನು; ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಗಳ ಫಲಿತಾಂಶ. ಬೊಮ್ಮಾಯಿ ಅಧಿಕಾರಕ್ಕೆ ಬಂದ ಬಳಿಕ ಜಾರಿಯಾದ ಜನಪರ ಕಾರ್ಯಕ್ರಮಗಳು, ಅಮೃತೋತ್ಸವ ಕಾರ್ಯಕ್ರಮಗಳು ಸೇರಿ ಅಂಕಿ ಅಂಶಗಳ ಸಹಿತ ಪ್ರತಿಪಕ್ಷ ನಾಯಕರಿಗೆ ತಿರುಗೇಟು ನೀಡಲು ಆಡಳಿತ ಪಕ್ಷವೂ ಸಿದ್ದತೆ ಮಾಡಿಕೊಂಡಿದೆ.

    ಜಾತಿ ಗಣತಿ ವರದಿ ತಿಕ್ಕಾಟ:

    ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ಮೇಲೆ ವಾಗ್ದಾಳಿ ಮಾಡುವುದು ಖಚಿತ. ಈ ವಿಷಯದಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಜತೆ ನಿಲ್ಲುವುದು ಅನುಮಾನ. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ನಡೆಯುವುದು ಗ್ಯಾರಂಟಿ.

    ಸಮ್ಮಿಶ್ರ ಸರಕಾರ ಇದ್ದಾಗ ಈ ವರದಿಯನ್ನು ಅಂಗೀಕಾರ ಮಾಡಲು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮತಿಸಲಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದರಿಂದ ಕೆಂಡಾಮಡಲರಾಗಿದ್ದ ಎಚ್ಡಿಕೆ, ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಹೆಸರೇಳದೇ ತೀವ್ರ ವಾಗ್ದಾಳಿ ನಡೆಸಿದ್ದರು.

    ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿದ್ದಾಗ ವರದಿಯನ್ನು ಸಲ್ಲಿಸಲಾಗಿತ್ತು. ಆಗ ಅಂಗೀಕಾರ ಮಾಡದೇ ಈಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯೇ ಎಂದು ಪ್ರಶ್ನಿಸಿದ್ದ ಎಚ್ಡಿಕೆ, ‘ಎಲೆಕ್ಷನ್’ ಬಂದಾಗ ಯಾವುದೋ ಒಂದು ವಿಷಯದ ಆಯ್ಕೆ ಮಾಡಿಕೊಂಡು ಪ್ರಚಾರ ಗಿಟ್ಟಿಸುವುದು ಸರಿಯಲ್ಲ. ಅಧಿಕಾರ ಇದ್ದಾಗಲೇ ಸಲ್ಲಿಕೆಯಾಗಿದ್ದ ಈ ವರದಿಯನ್ನು ಬಿಡುಗಡೆ ಮಾಡಲು ನಿರ್ಲಕ್ಷ್ಯ ತೋರಿದ್ದು ಯಾಕೆ? ಕುದುರೆ ಇದ್ದಾಗಲೇ ಏರಲಿಲ್ಲ, ಇನ್ನೊಬ್ಬರು ಕುದುರೆ ಮೇಲಿದ್ದಾಗ ಅವರನ್ನು ಕೆಳಕ್ಕೆ ಕೆಡವಲು ಏಕೀ ಕೆಟ್ಟ ಉತ್ಸಾಹ? ಎಂದು ತರಾಟೆಗೆ ತೆಗೆದುಕೊಂಡಿದ್ದರು.

    ಅಲ್ಲದೆ; ಎಲ್ಲದರಲ್ಲೂ ಸಿದ್ಧಹಸ್ತರಾದರೆ ಉಪಯೋಗವೇನು? ಸತ್ಯ ಹೇಳುವುದಕ್ಕೂ ಗುಂಡಿಗೆ ಬೇಕು. ಇನ್ನೊಬ್ಬರ ಎದೆಗಾರಿಕೆ ಪ್ರಶ್ನಿಸುವ ಮಹಾನುಭಾವರು, ತಮ್ಮ ಅವಧಿಯಲ್ಲಿ ಈ ವರದಿನ್ನೇಕೆ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದರು ಎಂಬುದಕ್ಕೆ ಉತ್ತರ ನೀಡಲಿ. ಸಹಿ ಇಲ್ಲದ ಕಾಗದ ಪತ್ರಕ್ಕೆ ಬೆಲೆ ಇಲ್ಲ. ಅಪ್ಪ ಅಮ್ಮನಿಲ್ಲದ ಕೂಸು ಅನಾಥ. ಹಾಗಾದರೆ, ಸಹಿ ಇಲ್ಲದ ವರದಿ ಸ್ವೀಕಾರ ಮಾಡಿ, ಆಗ ಸುಮ್ಮನಿದ್ದು, ಈಗ ಹಾಹಾಕಾರ ಮಾಡಿದರೇನು ಪ್ರಯೋಜನ? ಊಸರವಳ್ಳಿ ಉಸಾಬರಿ ಎಂದರೆ ಇದೇ ಇರಬೇಕು ಎಂದು ದೂರಿದ್ದರು.

    ಜಾತಿ ಜನಗಣತಿ ವಿಚಾರದಲ್ಲಿ ಒಡೆದ ಮನೆಯಾದ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ. ಡಿಕೆಶಿ ಬಣದಿಂದ ಜನಗಣತಿ ವಿಚಾರ ಪ್ರಸ್ತಾಪಕ್ಕೆ ವಿರೋಧವಿದ್ದು, ಸಿದ್ದರಾಮಯ್ಯ ಇದನ್ನೇ ಮುಂದಿಟ್ಟುಕೊಂಡು ಸರಕಾರಕ್ಕೆ ಬಿಸಿ ಮುಟ್ಟಿಸಲು ಉದ್ದೇಶಿಸಿದ್ದಾರೆ.

    ಜಾತಿ ಜನಗಣತಿ ಪ್ರಸ್ತಾಪ ಮಾಡಿದರೆ ಜೆಡಿಎಸ್, ಕಾಂಗ್ರೆಸ್ ನಾಯಕರ ವಿರುದ್ದ ವಾಗ್ಯುದ್ದ ನಡೆಯುವುದು ಖಚಿತ. ಹೀಗಾಗಿ ಈ ಬಗ್ಗೆ ಪ್ರಸ್ತಾಪ ಮಾಡುವುದೇ ಬೇಡ ಎಂಬ ಅಭಿಪ್ರಾಯಕ್ಕೆ ಬಂದಿರುವ ಕಾಂಗ್ರೆಸ್ ನ ಕೆಲ ನಾಯಕರು, ಸುಮ್ಮನಿರಿ ಎಂದು ಸಿದ್ದರಾಮಯ್ಯ ಅವರಿಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

    ಮಸೂದೆಗಳ ಮಂಡನೆ:

    ಇದೇ ಅಧಿವೇಶನದಲ್ಲಿ ಕೊಳಚೆ ಪ್ರದೇಶ ಕಬಳಿಕೆ ವಿರುದ್ದ ಕ್ರಮಕ್ಕೆ ತಿದ್ದುಪಡಿ ವಿಧೇಯಕ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ತಿದ್ದುಪಡಿ, ಪೌರಸಭೆ, ಶಿಕ್ಷಕರ ವರ್ಗಾವಣೆ ನಿಯಮ ವಿಧೇಯಕ ಹಾಗೂ ನಾಲ್ಕು ಸುಗ್ರೀವಾಜ್ಞೆ ಸೇರಿ ೧೮ ವಿಧೇಯಕಗಳನ್ನು ಮಂಡನೆ ಮಾಡಲು ಸರಕಾರ ಸಿದ್ಧತೆ ಮಾಡಿಕೊಂಡಿದೆ.

    ಬೊಮ್ಮಾಯಿ ಸಂಪುಟದಲ್ಲಿ ಜೆ.ಸಿ.ಮಾಧುಸ್ವಾಮಿ ಅವರ ಮತ್ತೆ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಮಂತ್ರಿ ಆಗುರುವ ಹಿನ್ನೆಲೆಯಲ್ಲಿ ಮಸೂದೆಗಳ ಬಗ್ಗೆ ಭರ್ಜರಿ ಚರ್ಚೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

    ಲೋಕಸಭೆ ಸ್ಪೀಕರ್ ಭಾಷಣ:

    ಸೆಪ್ಟೆಂಬರ್ ೨೪ರಂದು ಮಧ್ಯಾಹ್ನ ಜಂಟಿ ಅಧಿವೇಶನ ನಡೆಯಲಿದೆ. ಅಂದು ಜಂಟಿ ಕಲಾಪವನ್ನು ಉದ್ದೇಶಿಸಿ ಲೋಕಸಭಾಧ್ಯಕ್ಷ ಓಂಬಿರ್ಲಾ ಭಾಷಣ ಮಾಡಲಿದ್ದಾರೆ.

    ಇದೇ ಮೊದಲ ಬಾರಿಗೆ ಸದನದ ಕಲಾಪದಲ್ಲಿ ಸಕ್ರಿಯ ಭಾಗಿಯಾಗಿ ಉತ್ತಮ ನಡವಳಿಕೆ ತೋರುವ ಶಾಸಕರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿದೆ. ಅಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಬಹುಮುಖ್ಯವಾಗಿ ಅಧಿವೇಶನದ ಕೊನೆಯ ಭಾಗದಲ್ಲಿ ಪ್ರಶಸ್ತಿ ಕೊಡುವ ಬಗ್ಗೆ ಮಾತನಾಡಿದ್ದು, ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಗಾಗಲೇ ತಿಳಿಸಿದ್ದಾರೆ.

    ಚನ್ನಕೃಷ್ಣ ಪಿ ಕೆ
    ಚನ್ನಕೃಷ್ಣ ಪಿ ಕೆhttps://cknewsnow.com/
    ಸಿಕೆ ನ್ಯೂಸ್ ನೌ.ಕಾಮ್ ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!