ಸುಮಾವೀಣಾ
ಕನ್ನಡದ ಆದಿಕವಿ ವಿರಚಿತ ‘ವಿಕ್ರಮಾರ್ಜುನ ವಿಜಯ’ದ ಹನ್ನರಡನೆ ಆಶ್ವಾಸದಲ್ಲಿ ‘ಸೆಟ್ಟಿಯ ಬಳ್ಳಂ ಕಿರಿದು’ ಎಂಬ ಮಾತು ಉಕ್ತವಾಗಿದೆ. ಮಹಾಭಾರತ ಯುದ್ಧ ಭೂಮಿಯಲ್ಲಿ ಕರ್ಣಾರ್ಜುನರು ಎದುರಾದಾಗಿ ಇನ್ನೇನು ಯುದ್ಧ ಆರಂಭಿಸಬೇಕು ಅನ್ನುವ ಸಂದರ್ಭದಲ್ಲಿ ಅರ್ಜುನ ತನ್ನ ಎದುರಾಳಿಯಾಗಿ ನಿಂತಿದ್ದ ಶಸ್ತ್ರಸಜ್ಜಿತ ಕರ್ಣನಿಗೆ ಹೇಳುತ್ತಾನೆ. ಹಳಗನ್ನಡದಲ್ಲಿ ಇದೇ ಮಾತನ್ನು “ಸೆಟ್ಟಿಯ ಬಾಯ್ ಒಳ್ಳಿತು, ಬಳ್ಳಂ ಕಿರಿದು” ಎಂದು ಪ್ರಯೋಗವಾಗಿದೆ. “ಹುಸಿಯದ ಬೇಹಾರಿ ಇಲ್ಲ” ಎಂಬ ಮಾತೂ ದುರ್ಗಸಿಂಹನ ಪಂಚತಂತ್ರದಲ್ಲಿಯೂ ಬರುತ್ತದೆ.
ಅರ್ಜುನ ಹೇಗೂ ಬಿಲ್ವಿದ್ಯೆ ಪ್ರವೀಣ ಲೋಹದ ಬಾಣಗಳನ್ನು ಪ್ರಯೋಗಿಸುವ ಮೊದಲು ಮಾತಿನ ಬಾಣವನ್ನು ಪ್ರಯೋಗಿಸುತ್ತಾನೆ. ಅರ್ತಾಥ್ ಅವನನ್ನು ವ್ಯಂಗ್ಯ ಮಾಡುವಾಗ ಸೆಟ್ಟಿಯ ಮಾತು ಯಾವಾಗಲೂ ಆಕರ್ಷಣೀಯವಾಗಿರುತ್ತವೆ. ಆದರೆ ಒಬ್ಬ ವ್ಯಾಪಾರಿಯಾಗಿ ಯಾವಾಗಲೂ ಆತ ಲಾಭವನ್ನೇ ಅಪೇಕ್ಷಿಸುತ್ತಾನೆ. ಹಾಗೆ ನೀನು ಈ ಹಿಂದೆ ಪರಾಕ್ರಮಿಯಾಗಿ ದೊಡ್ಡ ದೊಡ್ಡ ಮಾತುಗಳನ್ನಾಡಿದೆ ಆದರೆ ಯುದ್ಧ ಮಾಡುವ ಸಂದರ್ಭದಲ್ಲಿ ಹಿಂಜರಿಕೆಯಾಗುತ್ತದೆಯೇ? ಕೈನಡುಗುತ್ತವೆಯೇ ? ಮಾತು ಬೇರೆ ಕೃತಿ ಬೇರೆ ಎಂದು ಛೇಡಿಸುತ್ತಾನೆ.
‘ಸೆಟ್ಟಿ’ ಎಂಬುದು ಇಲ್ಲಿ ‘ಯುಧ್ಧವೀರ’ರಿಗೆ ಅನ್ವಯವಾದರೆ ‘ಬಳ್ಳ’ ಅವರ ‘ಸಾಮರ್ಥ್ಯ’ಕ್ಕೆ ಅನ್ವಯವಾಗುತ್ತದೆ. ‘ಲೋಕದಲ್ಲಿ ವ್ಯಾಪಾರ’ ಅನ್ನುವ ಪರಿಭಾಷೆಗೆ ‘ಸೆಟ್ಟಿಯ ಬಳ್ಳ ಕಿರಿದು’ ಎಂಬ ಮಾತನ್ನು ಅನ್ವಯಿಸಿ ನೋಡಿದರೆ ಇಲ್ಲಿ ಮೋಸದ ಸುಳುಹು ಸಿಗುತ್ತದೆ. ಇದನ್ನು ತಡೆಯಲು ಮಾಪನ ಇಲಾಖೆಯವರು ಇರುವುದನ್ನು ಇಲ್ಲಿ ಗಮನಿಸಬಹುದು. ಲೋಕದ ವ್ಯಾಪಾರವೋ? ಇಲ್ಲ ಮಾತಿನ ವ್ಯಾಪಾರವೋ? ಇಲ್ಲಿ ಪಾರದರ್ಶಕವಾಗಿರಬೇಕು ಹಾಗಿಲ್ಲವಾದರೆ ಆತನು ಮೋಸಗಾರನೆ ಸರಿ ಎಂಬ ಜಿಜ್ಞಾಸೆ ಇಲ್ಲಿದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.